ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ

*ಶ್ರೀಪಾದರಾಜರ ಕೃತಿ*
ಪರಮಾತ್ಮನ
*ಮೋಹಿನಿ ರೂಪ* ವರ್ಣನಾ

 

ಪರಮಾತ್ಮ ಸಮುದ್ರಮಥನ ಕಾಲದಲ್ಲಿ ತನ್ನ ಮೋಹಿನಿ ರೂಪದಿಂದ ದೈತ್ಯರ ವಂಚಿಸಿ ದೇವತೆಗಳಿಗೆ ಅಮೃತವನ್ನು ಉಣಿಸಿದ್ದು ಪ್ರಸಿದ್ಧ ಭಾಗವತ ಕಥೆಯಲ್ಲಿದೆ. ಆದರೆ ಆ ಸಮಯದಲ್ಲಿ ರುದ್ರದೇವರು ವಿಷವನ್ನು ಪಾನಮಾಡಿ ಹೋದಮೇಲೆ ಪರಮಾತ್ಮನ ಆ ಮೋಹಿನಿ ರೂಪದ ಬಗ್ಗೆ ತಿಳಿದು, ಕುತೂಹಲದಿಂದ ತಾನೂ ಆ ರೂಪವನ್ನು ನೋಡಲೇಬೇಕೆಂದು ಯೋಚಿಸಿ ಪರಮಾತ್ಮನಲ್ಲಿ ಪ್ರಾರ್ಥಿಸುತ್ತಾನೆ. ಇದೂ ಕೂಡ ಭಾಗವತ ಕಥೆಯಲ್ಲೇ ಬಂದಿದೆ.

ರುದ್ರದೇವರು ಕೈಲಾಸದಿಂದ ವೈಕುಂಠಕ್ಕೆ ಬಂದು ಪರಮಾತ್ಮನ ತರುಣೀ ರೂಪವನ್ನು ಅಂದರೆ ಮೋಹಿನೀ ರೂಪವನ್ನು ನೋಡಬಯಸುತ್ತಾನೆ. ಆಗ ಪರಮಾತ್ಮ ನಸುನಕ್ಕು ನಿನಗೆ ಅದನ್ನು ನೋಡಲು ಆಗುವುದಿಲ್ಲ ಬೇಡವೆಂದಾಗ ಶಿವನು ಹಠ ಮಾಡಲು ಮಾರನೇ ದಿನ ಅರುಣೋದಯಕ್ಕೆ ಬಾ ಎನ್ನುತ್ತಾನೆ. ಅದರಂತೆ ಮಾರನೇ ದಿನ ಅರುಣೋದಯಕ್ಕೆ ಶಿವ ಬರಲು ಹದಿನಾರು ವರುಷದ ತರುಣೀ ರೂಪದಿಂದ ಹರಿ ಪ್ರಕಟನಾಗುತ್ತಾನೆ. ಮತ್ತು ಕಾಲಿನ ಉಗುರಿನಿಂದ ಭೂಮಿಯಲ್ಲಿ ಬರೆಯುವಂತೆ ಮೋಹಕ ವೈಯ್ಯಾರದ ನೋಟ ಬೀರುತ್ತಾನೆ ಆಗ ರುದ್ರ,ದೇವರು ಪಕ್ಕದಲ್ಲಿದ್ದ ಪಾರ್ವತಿಯನ್ನೂ ಬಿಟ್ಟು ಆ ಯುವತಿಯ ಸೆರಗ ಪಿಡಿಯಹೊರಟಾಗ ಪರಮಾತ್ಮ ತನ್ನ ಶಂಖ ಚಕ್ರ ಗದೆಯನ್ನು ತೋರಿಸಿದಾಗ, ರುದ್ರ ದೇವರು ತಲೆತಗ್ಗಿಸಿ ನಿಲ್ಲುತ್ತಾರೆ. ಸಾಕ್ಷಾತ್ ಲಕ್ಷ್ಮೀ ದೇವಿಯೇ ಪರಮಾತ್ಮನ ವಿವಿಧ ರೂಪಗಳನ್ನು ನೋಡಿರುವುದಿಲ್ಲ. ನಿತ್ಯನೂತನ ಪರಮಾತ್ಮನ ಪೂರ್ಣ ತಿಳಿಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನು ತಿಳಿಸಲು ಶ್ರೀಪಾದರಾಜರು ಈ ದೇವರನಾಮವನ್ನು ರಚಿಸಿದ್ದಾರೆ.

ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ ! ಪ !
ಹಸುಳೆ ಪಾರ್ವತಿಯ ತಪಸಿಗೆ ಮೆಚ್ಚಿದ                    ಜಟಾಮಂಡಲಧಾರಿ ಕಾಣಮ್ಮ !ಅ.ಪ.!

ಕೈಲಾಸಗಿರಿಯ ದೊರೆಯಿವನಮ್ಮ- ಅದು ಅಲ್ಲದೆ ಕೇಳೆ
ಬೈಲು ಸ್ಮಶಾನದಿ ಮನೆಯಿವಗಮ್ಮ ಸಂಕರ್ಷಣನೆಂದು
ಕೇಳೆ ಮಹಿಯೊಳು ಜನ ಪೊಗಳುವರಮ್ಮ- ಇದು ನಿಜವಮ್ಮ ನಾಲಿಗೆ ಸಾಸಿರ ಫಣಿಭೂಷಣ ನಮ್ಮ ರಮೆಯರಸಗೆ ಇವ ಮೊಮ್ಮಗನಮ್ಮ! 1 !

ಬಾಲೆ ದಾಕ್ಷಾಯಿಣಿ ಪತಿ ಇವನಮ್ಮ ‌ಮಾವನ ಯಾಗದಲಿ
ಬ್ಹಾಳ ಕೃತ್ಯಗಳನು ನಡೆಸಿದನಮ್ಮ ಸಾಗರದಲಿ ಹುಟ್ಟಿದ
ಕಾಳಕೂಟವ ಭಕ್ಷಿಸಿದನಮ್ಮ-
ರಾಮನ ದಯವಮ್ಮ
ಮೇಲೆ ಉಳಿಯಲು ಶೇಷಗರಳವು ನೀಲಕಂಠನೆಂದೆನಿಸಿದನಮ್ಮ ! 2 !

ಹರನೊಂದಿನ ವೈಕುಂಠಕೆ ಬರಲು ತಾತಗೆ ವಂದಿಸುತ
ತರುಣೀ ರೂಪವ ನೋಡ್ವೆನೆನಲು-
ಹರಿ ತಾ ನಸುನಗುತ
ಕರೆದು ಸೈರಿಸಲಾರೆ ನೀ ಎನಲು ಹಠದಿ ಕುಳ್ಳಿರಲು
ಕರುಣೆಗಳರಸನು ಹರನ ಮೊಗವ ನೋಡಿ
ಅರುಣೋದಯಕೆ ಬಾರೆಂದು ಕಳುಹಿದ ! 3 !

ಅರುಣೋದಯಕೆ ಗಂಗಾಧರ ಬರಲು ಹದಿನಾರು ವರುಷದ
ತರುಣೀರೂಪದಿ ಹರಿ ವನದೊಳಗಿರಲು
ಚರಣನಖಾಗ್ರದಿ
ಧರಣೀ ಬರೆಯುತ್ತ ನಿಂತಿರಲು
ಸೆರಗ ಪಿಡಿಯೆ ಬರಲು ಕರದಿ ಶಂಖ ಗದೆ ಚಕ್ರವ ತೋರಲು
ಹರನು ನಾಚಿ ತಲೆತಗ್ಗಿಸಿ ನಿಂತ ! 4 !

ಮಂಗಳಾಂಗನೆ ಮಾರಜನಕ‌ನೇ‌ ನಾ ಮಾಡಿದ ತಪ್ಪ
ಹಿಂಗದೆ ಕ್ಷಮಿಸೊ ಯದುಕುಲ ತಿಲಕ ವಕ್ಷದಲೊಪ್ಪುವ ನಿ-
ನ್ನಂಗನೆ ಅರಿಯಳು ನಖಮಹಿಮಾಂಕ ಹೀಗೆನುತಲಿ ತವಕ
ರಂಗವಿಠಲನ ಪದಂಗಳ ಪಿಡಿದು ಸಾ-
ಷ್ಟಾಂಗವೆರಗಿ ಕೈಲಾಸಕೆ ನಡೆದ ! 5 !

 

 

 

Sumadhwa Seva © 2022