ನರಸಿಂಹ ಸುಳಾದಿ

ವಿಜಯದಾಸರ ರಚನೆ
ನರಸಿಂಹ ಸುಳಾದಿ
ಗಾಯಕಿ : ಚಿ ಧೃತಿ ಆತ್ರೇಯಸ್

*ಕ್ಲಿಕ್ ಮಾಡಿರಿ :
Click to listen to Narasimha Suladi by Vijaya Dasaru :*
👇🏾
*https://youtu.be/U-DqTfgQIWc*

ನರಸಿಂಹ ಸುಳಾದಿ

“ನರಸಿಂಹ ಸುಳಾದಿ”ಯನ್ನು ದಾಸರು ನರಸಿಂಹಾವತಾರದ ಧಾಟಿಯಲ್ಲೇ ರಚಿಸಿದ್ದಾರೆ. ಇಲ್ಲಿನ ಪದಪ್ರಯೋಗ, ಆರ್ಭಟ, ಎಲ್ಲವೂ ಅತಿ ಮನೋಹರವಾಗಿದೆ. ನರಸಿಂಹಾವತಾರದ ಸಂಪೂರ್ಣ ಚಿತ್ರಣವನ್ನು ನೀಡಿದ್ದಾರೆ.

ಈ ಸುಳಾದಿ ಪಠಣದಿಂದ ಆಗುವ ಫಲಗಳು – ವೈರಿನಾಶ, ಭಯ ಪರಿಹಾರ, ಅಪಮೃತ್ಯು ಪರಿಹಾರ, ರೋಗ ಪರಿಹಾರ .

ರಾಗ – ನಾಟಿ

ತಾಳ – ಧ್ರುವ
ವೀರ ಸಿಂಹನೆ ನಾರಸಿಂಹನೆ ದಯ ಪಾರಾ
ವಾರನೆ ಭಯ ನಿವಾರಣ ನಿರ್ಗುಣ
ಸಾರಿದವರ ಸಂಸಾರ ವೃಕ್ಷದ ಮೂಲ
ಬೇರರಿಸಿ ಕೀಳುವ ಬಿರಿದು ಭಯಂಕರ
ಘೋರವತಾರ ಕರಾಳವದನ ಅ-
ಘೋರ ದುರಿತ ಸಂಹಾರ ಮಾಯಾಕಾರ
ಕ್ರೂರದೈತ್ಯರ ಶೋಕ ಕಾರಣ ಉದುಭವ
ಈರೇಳು ಭುವನ ಸಾಗರದೊಡೆಯ
ಅರೌದ್ರನಾಮಕ ವಿಜಯ ವಿಠ್ಠಲ ನರಸಿಂಗ
ವೀರರ ಸಾತುಂಗ ಕಾರುಣ್ಯಪಾಂಗ || ೧ ||

ತಾಳ – ಮಟ್ಟ
ಮಗುವನು ರಕ್ಕಸನು ಹಗಲಿರುಳು ಬಿಡದೆ
ಹಗೆಯಿಂದಲಿ ಹೊಯ್ದು ನಗಪನ್ನಗ ವನಧಿ
ಗಗನ ಮಿಗಿಲಾದ ಅಗಣಿತ ಬಾಧಿಯಲಿ
ನೆಗೆದು ಒಗದು ಸಾವು ಬಗೆದು ಕೊಲ್ಲುತಿರಲು ಹೇ
ಜಗದ ವಲ್ಲಭನೇ ಸುಗುಣಾನಾದಿಗನೆ
ನಿಗಮಾ ವಂದಿದತೆ ಪೊಗಳಿದ ಭಕುತರ
ತಗಲಿ ತೊಲಗನೆಂದೂ ಮಿಗೆ ಕೂಗುತಲಿರಲು
ಯುಗ ಯುಗದೊಳು ದಯಾಳುಗಳ ದೇವರದೇವ
ಯುಗಾದಿ ಕೃತನಾಮಾ ವಿಜಯ ವಿಠ್ಠಲ ಹೋ ಹೋ
ಯುಗಳ ಕರವ ಮುಗಿದು ಮಗುವು ಮೊರೆ ಇಡಲು || ೨ ||

ತಾಳ – ರೂಪಕ
ಕೇಳಿದಾಕ್ಷಣದಲಿ ಲಾಲಿಸಿ ಭಕ್ತನ್ನ ಮೌಳಿ ವೇಗದಲಿ ಪಾಲಿಸುವೆನೆಂದು
ತಾಳಿಸಂತೋಷವ ತೂಳಿ ತುಂಬಿದಂತೆ
ಮೂಲೋಕದಪತಿವಾಲಯದಿಂದ ಸು
ಸ್ತೀಲ ದುರ್ಲಭ ನಾಮ ವಿಜಯ ವಿಠ್ಠಲ ಪಂಚ
ಮೌಳಿ ಮಾನವ ಕಂಭ ಸೀಳಿ ಮೂಡಿದ ದೇವ || ೩ ||

ತಾಳ – ಝಂಪೆ
ಲಟಲಟಾ ಲಟಲಟಾ ಲಟಕಟಿಸಿ ವನಜಾಂಡ
ಕಟಹ ಪಟ ಪಟ ಪುಟುತ್ಕಟದಿ ಬಿಚ್ಚುತಲಿರಲು
ಪುಟ ಪುಟ ಪುಟನೆಗೆದು ಚೀರಿಹಾರುತ್ತ ಪ-
ಲ್ಕಟಾಕಟಾ ಕಟ ಕಡಿದು ರೋಷದಿಂದ
ಮಿಟಿ ಮಿಟಿ ಮಿಟನೆ ರಕ್ತಾಕ್ಷಿಯಲ್ಲಿ ನೋಡಿ
ತಟಿತ್ಕೋಟಿ ಊರ್ಭಟಗೆ ಅರ್ಭಟವಾಗಿರಲು
ಕುಟಿಲ ರಹಿತ ವ್ಯಕ್ತ ವಿಜಯ ವಿಠ್ಠಲ ಶಕ್ತ
ದಿಟಿ ನಿಟಿಲ ನೇತ್ರ ಸುರಕಟಕ ಪರಿಪಾಲಾ || ೪ ||

ತಾಳ – ತ್ರಿವಿಡಿ
ಬೊಬ್ಬಿರಿಯೇ ವೀರ ಧ್ವನಿಯಿಂದ ತನಿಗಿಡಿ
ಹಬ್ಬಿ ಮುಂಚೋಣಿ ಉರಿ ಹೊರಗೆದ್ದು ಸುತ್ತೆ
ಉಬ್ಬಸ ರವಿಗಾಗೆ ಅಬ್ಜ ನಡುಗುತಿರೆ
ಅಬ್ಧಿಸಪುತ ಉಕ್ಕಿ ಹೊರಚೆಲ್ಲಿ ಬರುತಿರೆ
ಅಬುಜ ಭವಾದಿಗಳು ತಬ್ಬಬ್ಬಿ ಗೊಂಡಾರಿ
ಅಬ್ಬರವೇನೆನುತ ನಭದ ಗೂಳೆಯು ತಗೆಯೆ
ಶಬ್ದ ತುಂಬಿತು ಅವ್ಯಾಕೃತಾಕಾಶ ಪರಿಯಂತ
ನಿಬ್ಬರ ತರುಗಿರಿ ಝರಿ ಝರಿಸಲು
ಒಬ್ಬರಿಗೊಶವಲ್ಲದ ನಮ್ಮಾ ವಿಜಯ ವಿಠ್ಠಲ
ಇಬ್ಬಗೆಯಾಗಿ ಕಂಭದಿಂದ ಪೊರಮಟ್ಟಾ || ೫ ||

ತಾಳ – ಅಟ್ಟ
ಘಡಿಘಡಿಸುತ ಕೋಟಿ ಸಿಡಿಲು ಗಿರಿಗೆ ಬಂದು
ಹೊಡೆದಂತೆ ಚೀರಿ ಬೊಬ್ಬಿಡುತಲಿ ಲಂಘಿಸಿ
ಹಿಡಿದು ರಕ್ಕಸನ್ನ ಕೆಡಹಿ ಮಡುಹಿ ತುಡುಕಿ
ತೊಡೆಯ ಮೇಲಿರಿಸಿ ಹೇರೊಡಲ ಕೂರುಗುರದಿಂದ
ಪಡುವಲ ಗಡಲ ತಡಿಯ ತರಣಿಯ ನೋಡಿ
ಕಡುಕೋಪದಲ್ಲಿ ಸದಬಡಿದು ರಕ್ಕಸನ ಕೆಡಹಿ
ನಿಡಿಗರಳನು ಕೊರಳೆಡಿಯಲ್ಲಿ ಧರಿಸಿದ ಸಡಗರದ ದೈವ
ಕಡುಗಲಿ ಭೂರ್ಭೂವ ವಿಜಯ ವಿಠ್ಠಲ
ಪಾಲ್ಗಡಲೊಡೆಯಾ ಶರಣರ ವಡೆವೆ ವಡನೊಡನೆ || ೬ ||

ತಾಳ – ಆದಿ
ಉರಿಮಸೆಗೆ ಚತುರ್ದಶ ಧರಣಿ ತಲ್ಲಣಿಸಲು
ಪರಮೇಷ್ಟಿ ಹರಸುರರು ಸಿರಿದೇವಿಗೆ ಮೊರೆಯಿಡಲು
ಕರುಣದಿಂದಲಿ ತನ್ನ ಶರಣನ್ನ ಸಹಿತ ನಿನ್ನ
ಚರಣಕ್ಕೆ ಎರಗಲು ಪರಮ ಶಾಂತನಾಗಿ
ಹರಹಿದೆ ದಯವನ್ನು ಸುರರು ಕುಸುಮ ವರುಷ
ಗರಿಯಲು ಭೇರಿ ವಾದ್ಯ ಮೊರೆ ಉತ್ತರರೆ ಎನುತ
ಪರಿಪರಿ ವಾಲಗ ವಿಸ್ತಾರದಿಂದ ಕೈಕೊಳ್ಳುತ್ತ
ಮೆರೆದು ಸುರರುಪದ್ರ ಹರಿಸಿ ಬಾಲಕನ ಕಾಯ್ದೆ
ಪರದೈವೆ ಗಂಭೀರಾತ್ಮ ವಿಜಯವಿಠ್ಠಲ ನಿಮ್ಮ
ಚರಿತೆ ದುಷ್ಟರಿಗೆ ಭೀಕರವೋ ಸಜ್ಜನ ಪಾಲ || ೭ ||

ಜತೆ
ಪ್ರಹ್ಲಾದವರದ ಪ್ರಸನ್ನ ಕ್ಲೇಶಭಂಜನ್ನ
ಮಹಹವಿಷೆ ವಿಜಯವಿಠ್ಠಲ ನರಮೃಗವೇಷಾ || ೮ ||

 

Sumadhwa Seva © 2022