ತತ್ವಪ್ರಕಾಶಿಕಾ ಟೀಕಾ

Brahmasutra Bhashya

ನಾರಾಯಣಂ ಗುಣೈಸ್ಸರ್ವೈರುದೀರ್ಣಂ ದೋಷವರ್ಜಿತಂ |
ಜ್ಞೇಯಂ ಗಮ್ಯಂ ಗುರೂಂಶ್ಚಾಪಿ ನತ್ವಾ ಸೂತ್ರಾರ್ಥ ಉಚ್ಯತೇ ||

नारायणं गुणै: सर्वैरुदीर्णं दोषवर्जितं ।
ज्ञेयं गम्यं गुरूंश्चापि नत्वा सूत्रार्थ उच्यते ।

ಸರ್ವೈ: ಗುಣೈ ಉದೀರ್ಣಂ ದೋಷವರ್ಜಿತಂ ಜ್ಞೇಯಂ ಗಮ್ಯಂ ನಾರಾಯಣಂ ನತ್ವಾ ಅಪಿ ಗುರೂಂಶ್ಚ ನತ್ವಾ ಸೂತ್ರಾರ್ಥ ಉಚ್ಯತೇ

ಸಕಲ ವಿಧವಾದ ಕಲ್ಯಾಣಗುಣಗಳಿಂದ ಉತ್ಕೃಷ್ಟನಾದ, ಯಾವುದೇ ರೀತಿಯ ದೋಷಗಳಿಂದ ರಹಿತನಾದ, ಜ್ಞಾನಿಗಳಿಂದ ಹೊಂದಲು ಯೋಗ್ಯನಾದ ನಾರಾಯಣನನ್ನು ನಮಿಸಿ ಮತ್ತು ಗುರುಗಳನ್ನೂ {ಅಂದರೆ ವೇದವ್ಯಾಸದೇವರು) ನಮಿಸಿ ಬ್ರಹ್ಮ ಸೂರ್ತಾರ್ಥವು ಆಚಾರ್ಯ ಮಧ್ವರಿಂದ ಹೇಳಲ್ಪಡುತ್ತದೆ.

ನಾರಾಯಣನನ್ನು ಆಚಾರ್ಯ ಮಧ್ವರು ನಾಲ್ಕು ವಿಶೇಷಣಗಳಿಂದ ಪರಿಚಯಿಸಿದ್ದಾರೆ.
೧. ಗುಣಪರಿಪೂರ್ಣ  – ೧ನೇ ಅಧ್ಯಾಯ
೨. ದೋಷವರ್ಜಿತ   – ೨ನೇ ಅಧ್ಯಾಯ
೩. ಜ್ಞೇಯ             – ೩ನೇ ಅಧ್ಯಾಯ
೪, ಗಮ್ಯ              – ೪ನೇ ಅಧ್ಯಾಯ

ತತ್ವಪ್ರಕಾಶಿಕ
ಶುದ್ಧಾನಂದೋರುಸಂವಿದ್ದ್ಯುತಿಬಲಬಹುಲೌದಾರ್ಯವೀರ್ಯಾದಿದೇಹಂ
ಚಿಂತಾಸಂತಾಪಲೇಪೋಧ್ಭವಮೃತಿಮುಖರಾಶೇಷದೋಷಾತಿದೂರಂ |
ಸದ್ಭಿರ್ವೈರಾಗ್ಯಭಕ್ತಿಶ್ರುತಿಮತಿನಿಯತಧ್ಯಾನಜಜ್ಞಾನಯೋಗಾದ್
ಗಮ್ಯಂ ವಂದೇ ಮುಕುಂದಾಭಿಧಮಮಲಮಲಂ ಬ್ರಹ್ಮ ವೇದಾಂತವೇದ್ಯಂ ||

शुद्धानंदोरुसंविद्ध्युतिबलबहुलौदार्यवीर्यादिदेहं ।
चिंतासंतापलेपोद्भवमृतिमुखराशेषदोषातिदूरं ।
सद्भिर्वैराग्यभक्ति श्रुति मतिनियतध्यानजज्ञानयोगात् ।
गम्यंवंदे मुकुंदाभिधमलमलं ब्रह्म वेदांतवेद्यं । 1 |

ಶ್ರೀಮನ್ನಾರಾಯಣನ ದೇಹವು, ಅಪ್ರಾಕೃತವೂ, ಪರಿಪೂರ್ಣವೂ, ಸುಖ, ಜ್ಞಾನ, ಕಾಂತಿ, ಬಲ, ಔದಾರ್ಯ, ವೀರ್ಯ ಮುಂತಾದ ಗುಣಗಳಿಂದ ತುಂಬಿವೆ. ನಾರಾಯಣನು ಚಿಂತಾ, ಸಂತಾಪಗಳ ರಹಿತನಾಗಿದ್ದಾನೆ. ಪಾಪ – ಪುಣ್ಯಗಳ ಸಂಬಂಧವಿಲ್ಲ. ಜನನ, ಮರಣಾದಿ ದೋಷಗಳಿಲ್ಲ. ಸಜ್ಜನರು, ವೈರಾಗ್ಯ, ಭಕ್ತಿ, ಶ್ರವಣ, ಮನನ, ಧ್ಯಾನಾದಿಗಳಿಂದ ಅವನ ಸಾಕ್ಷಾತ್ಕಾರ ಪಡೆದು ಅವನನ್ನು ಹೊಂದುತ್ತಾರೆ. ಬ್ರಹ್ಮಸೂತ್ರ, ಉಪನಿಷತ್ತುಗಳಿಂದ ಇವನು ಪ್ರತಿಪಾದ್ಯ. ಮೋಕ್ಷದಾತೃವಾಗಿದ್ದಾನೆ. ಮಾಯಾರಹಿತನಾದ ಪರಬ್ರಹ್ಮನನ್ನು ಭಕ್ತಿಯಿಂದ ನಮಿಸುತ್ತೇನೆ

ಗುಣಪರಿಪೂರ್ಣ  – 

ಶುದ್ಧಾನಂದ ಉರು ಸಂವಿದ್ ದ್ಯುತಿಬಲ ಬಹುಲೌದಾರ್ಯ ವೀರ್ಯಾದಿ ದೇಹಂ

ಪರಮಾತ್ಮನು ನಿತ್ಯನಿರಂತರವಾದ, ಪರಿಪೂಣವಾದ ಆನಂದಸ್ವರೂಪನಾದ್ದರಿಂದ, ಮಿತಿಯಿಲ್ಲದ ಆನಂದವಿರುವುದರಿಂದ, “ಶುದ್ಧಾನಂದ” ಎಂದಿದ್ದಾರೆ.

“ಉರುದ್ಯುತಿ” ಎಂಬ ಪದ ಪ್ರಯೋಗದಿಂದ ಸೂರ್ಯಚಂದ್ರಾದಿಗಳ ಪ್ರಕಾಶ ಶಕ್ತಿ ನಾರಾಯಣನಿಂದ ಕೊಡಲ್ಪಟ್ಟದ್ದು ಮತ್ತು ಅವನ ಅಧೀನ ಎಂದು ಸಂಗ್ರಹಿಸಿದ್ದಾರೆ.

“ಉರುಬಲ” ಎಂಬ ಪದ ಪ್ರಯೋಗದಿಂದ ಪರಮಾತ್ಮನ ಬಲ ಅಪರಿಮಿತವಾಗಿದೆ ಎಂದಿದ್ದಾರೆ

“ಬಹುಲೌದಾರ್ಯ” ಪದದಿಂದ ಶ್ರೀಹರಿಯ ಕಾರುಣ್ಯವನ್ನು ಅವನ ದೇಹಸ್ವರೂಪವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ವೀರ್ಯಾದಿದೇಹಂ – ಪರಮಾತ್ಮನಿಗೆ ದೇಹವನ್ನು ಒಪ್ಪುತ್ತೇವೆ. ಸಾಮಾನ್ಯ ದೇಹವಾದರೆ ಉತ್ಪತ್ತಿ, ವಿನಾಶವಿರಬೇಕಾಗತ್ತೆ. ಆದರೆ ಪರಮಾತ್ಮನದು ಅಪ್ರಾಕೃತವಾದ್ದರಿಂದ ಉತ್ಪತ್ತಿ, ವಿನಾಶ ಮೊದಲಾದ ವಿಕಾರವಿರುವುದಿಲ್ಲ. ಅವನ ಸರ್ವಜ್ಞತ್ವ, ಸರ್ವತ್ರ ವ್ಯಾಪ್ತತ್ವ ಇವೆಲ್ಲವೂ ಉಪಪನ್ನವಾಗಿದೆ.

ತಾರ್ಕಿಕರು ದು:ಖ, ದ್ವೇಷಾದಿಗಳನ್ನೂ “ಗುಣ” ಎಂದಿದ್ದಾರೆ. ಅಂದರೆ ಅವನಲ್ಲಿ ದು:ಖ, ದೋಷಾದಿಗಳಿವೆಯಾ?. ಆದರೆ ಶೃತಿಯಲ್ಲಿ “ನಿರನಿಷ್ಟೋ ನಿರವದ್ಯ:” – ದು:ಖ, ದೋಷಾದಿಗಳು ಇಲ್ಲದವನೆಂದಿದೆ. ಹಾಗಾದರೆ ಶೃತಿ ವಿರೋಧ ಬರುತ್ತದೆ.
ಗುಣಗಳಿಂದ ಪೂರ್ಣ ಎಂದರೆ ಗುಣಗಳು ಬೇರೆ ಮತ್ತು ಅವನು ಬೇರೆ ಎಂದಾಗುತ್ತದೆ. “ಗುಣಕ್ರಿಯಾದಯೋ ವಿಷ್ಣೋ: ಸ್ವರೂಪಂ ನನ್ಯದ್ ಇಹ್ಯತೇ” ಎಂದಿರುವುದರಿಂದ ಗುಣಗಳು ಭಗವಂತನ ಸ್ವರೂಪ, ಪರಮಾತ್ಮನ ಗುಣಗಳಿಗೂ, ಅವನಿಗೂ ಅಭೇದ.
ಭಗವಂತನಿಗೆ ದೇಹವಿಲ್ಲ, ಅಪ್ರಾಕೃತವಾದ ಶರೀರ. ಪ್ರಾಕೃತ ದೇಹವಾದರೆ ಜನನ, ಮರಣಗಳನ್ನೂ ಒಪ್ಪಬೇಕಾಗತ್ತೆ. ಭಗವತ್ಸ್ವರೂಪ.

ಭಗವಂತನಿಗೆ ದೇಹವೇ ಇಲ್ಲವೆಂದರೆ “ವಿವೃಣುತೇ ತನೂಂ ಸ್ವಾಂ” (ಭಕ್ತನಿಗೆ ತನ್ನ ಶರೀರವನ್ನು ತೋರುವನು” ಎಂದು ಶ್ರುತಿ ಹೇಳುತ್ತದೆ.

ದೋಷವರ್ಜಿತಂ

ಚಿಂತಾಸಂತಾಪಲೇಪೋಧ್ಭವಮೃತಿಮುಖರಾಶೇಷದೋಷಾತಿದೂರಂ :

ಶ್ರೀಹರಿಯು ಚಿಂತೆ, ಸಂತಾಪ ಮೊದಲಾದ ಪ್ರಧಾನ ದೋಷಗಳ ಲೇಪವಿಲ್ಲದೆ, ಪುಣ್ಯಪಾಪಗಳ ಸಂಬಂಧ, ಜನನ ಮರಣ ಮೊದಲಾದ ದೋಷಗಳಿಂದ ದೂರನಾಗಿದ್ದಾನೆ.

ಜ್ಞೇಯ – 

ಸದ್ಭಿರ್ವೈರಾಗ್ಯಭಕ್ತಿಶ್ರುತಿಮತಿನಿಯತಧ್ಯಾನಜಜ್ಞಾನಯೋಗಾದ್ 

ಮೂರನೇ ಅಧ್ಯಾಯದಲ್ಲಿ ಆಚಾರ್ಯರು “ಜ್ಞೇಯಂ” ಎಂದು ಸಂಗ್ರಹಿಸಿದ್ದಾರೆ. ಅದನ್ನೇ ಟೀಕಾರಾಯರು “ಸದ್ಭಿರ್ವೈರಾಗ್ಯ…” ಇತ್ಯಾದಿ ವ್ಯಾಖ್ಯಾನಿಸಿದ್ದಾರೆ.

ಸದ್ಭಿ: – ಪರಮಾತ್ಮನ ಜ್ಞಾನ ಪಡೆಯಲು ಅಪೇಕ್ಷೆ ಪಟ್ಟವರೆಲ್ಲರಿಗೂ ದೊರೆಯಲ್ಲ, ಜ್ಞಾನಯೋಗ್ಯರಿಗೆ ಮಾತ್ರ ಸಾಧ್ಯ , ಅಯೋಗ್ಯರಿಗೆ ಅಸಾಧ್ಯ ಎಂದಿದ್ದಾರೆ.
ವೈರಾಗ್ಯ – ಜೀವನ ಗತಿ, ಅಗತಿ, ಸ್ವರ್ಗ, ನರಕ, ಗರ್ಭವಾಸ ಮೊದಲಾದವನ್ನು ಹೇಳಿ ವೈರಾಗ್ಯ ಹುಟ್ಟಲು ಅಗತ್ಯವಿರುವ ಪ್ರಮೇಯವನ್ನು ನಿರೂಪಿಸಲಾಗಿದೆ.
ಭಕ್ತಿ ಪದದಿಂದ ಭಗವಂತನ ಮಹಿಮೆಯನ್ನು ಹೇಳುವ ಮೂಲಕ ಭಕ್ತಿಯ ಭಕ್ತಿಪಾದದಲ್ಲಿ ನಿರೂಪಿಸಲಾಗಿದೆ.
ಶೃತಿ ಮತೀ – ಜ್ಞಾನದ ಮೂಲಕ ಶ್ರವಣ, ಮನನಾದಿಗಳೇ ಕರ್ತವ್ಯ. ಕರ್ಮಾದಿಗಳಲ್ಲ
ನಿಯತ ಧ್ಯಾನಂ – ಯೋಗ್ಯರೀತಿಯ ಉಪಾಸನೆ ಮೂಲಕ ಸಾಕ್ಷಾತ್ಕಾರವನ್ನು ಹೊಂದಲು ಸಾಧನವೆಂದಿದ್ದಾರೆ.

ಗಮ್ಯ  – 

ಗಮ್ಯಂ ವಂದೇ ಮುಕುಂದಾಭಿಧಮಮಲಮಲಂ ಬ್ರಹ್ಮ ವೇದಾಂತವೇದ್ಯಂ

ವೇದಾಂತವೇದ್ಯಂ – ಯಾವ ಶಾಸ್ತ್ರದಿಂದ ವೇದಗಳ ತಾತ್ಪರ್ಯವು ನಿರ್ಣಯ ವಾಗುವುದೋ ಅಂತಹ ಬ್ರಹ್ಮಮೀಮಾಂಸಶಾಸ್ತ್ರವೇ “ವೇದಾಂತ” ಎನಿಸುತ್ತದೆ. ಪರಮಾತ್ಮನು ಬ್ರಹ್ಮಮೀಮಾಸ ಶಾಸ್ತ್ರದಿಂದ ಪ್ರತಿಪಾದ್ಯನು.

ಮುಕುಂದಾಭಿಧಂ – ನಾರಾಯಣ ಪದವು ಬ್ರಹ್ಮ ಪದದ ವ್ಯಾಖ್ಯಾನವಾಗಿದೆ. ನಾರಾಯಣ ಮತ್ತು ಮುಕುಂದ ಶಬ್ಧಗಳು ಪರ್ಯಾಯ ಶಬ್ದಗಳು.
ಅಮಲಂ – ಅಮಲ ಶಬ್ದಕ್ಕೆ ಎರಡು ಅರ್ಥ –

೧. ಸಂಸಾರವೆಂಬ ಮಲವು ಯಾವ ಬ್ರಹ್ಮನಿಂದ ಪರಿಹಾರವಾಗುತ್ತದೋ ಆಂತಹ ಬ್ರಹ್ಮ ಎಂದರ್ಥ.  ಇಂತಹ ಸಂಸಾರ ನಿರ್ವರ್ತಕನಾದ ಪರಬ್ರಹ್ಮನು ಮುಮುಕ್ಷುಗಳಿಂದ ಉಪಾಸ್ಯನಾಗಿದ್ದಾನೆ, ಮಂದರಿಂದಲ್ಲ.

೨. ಮಾಯಾ ಎಂಬ ಮಲದಿಂದ ರಹಿತನು ಎಂದರ್ಥ. ಭಾಷ್ಯದಲ್ಲಿರುವ ನಾರಾಯಣ ಪದಕ್ಕೆ ಮುಕ್ತಾಶ್ರಯತ್ವ ಅರ್ಥವನ್ನು ವಿವಕ್ಷಿಸಿ ವ್ಯಾಖ್ಯಾನಿಸಲಾಗಿದೆ.

ಯಾಂಚಾಮಂದರಲೋಲಿತಾದ್ ಯತ ಉದೈದ್ವಿದ್ಯೇಂದಿರಾ ನಿರ್ಜರೈ: |
ಜಾತೋ ಭಾರತ ಪಾರಿಜಾತಸುತರು: ಸದ್ಬ್ರಹ್ಮಸೂತ್ರಾಮೃತಂ |
ಆಸೀತ್ತಂತ್ರಪುರಾಣಸನ್ಮಣಿಗಣೋ ಜಾತ: ಶುಕೇಂದು: ಸದಾ |
ಸೋಽಯಂ ವ್ಯಾಸಸುಧಾನಿಧಿರ್ಭವತು ಮೇ ಭೂತ್ಯೈಸತಾಂ ಭೂತಿದ:|೨ |

यांचामंदरलोलिताद् यत उदैद्विद्येंदिरा निर्जरै: ।
जातो भारत पारिजातसुतरु: सद्ब्रह्मसूत्रामृतं ।
आसीत्तंत्रपुराणसन्मणिगणो जात: शुकेंदु: सदा ।
सोऽयं व्याससुधानिधिर्भवतु मे भूत्यै सतां भूतिद: ॥ २ ॥

 

ವೇದವ್ಯಾಸರೆಂಬ ಕ್ಷೀರಸಮುದ್ರವನ್ನು ಎಲ್ಲಾ ದೇವತೆಗಳ “ಪ್ರಾರ್ಥನೆ”  ಎಂಬ ಮಂದರಪರ್ವತದಿಂದ “ವ್ಯಾಸ” ಎಂಬ ಕ್ಷೀರಸಮುದ್ರವನ್ನು ಕಡೆದಾಗ “ವೇದವಿದ್ಯೆ” ಎಂಬ ಲಕ್ಷ್ಮೀದೇವಿಯೂ, “ಮಹಾಭಾರತ” ವೆಂಬ ಪಾರಿಜಾತ ವೃಕ್ಷವೂ, “ಬ್ರಹ್ಮ ಸೂತ್ರ”ವೆಂಬ ಅಮೃತವೂ,  ಪುರಾಣ ಗಳೆಂಬ  ಶುಭ್ರಮಣಿಗಳೂ, ಶುಕಾಚಾರ್ಯರೆಂಬ ಚಂದ್ರನೂ ಜನಿಸಿದರು.  ಹೇಗೆ ಕ್ಷೀರಸಮುದ್ರವು  ಸಜ್ಜನರಿಗೆ ಬೇಡಿದ ಐಶ್ವರ್ಯ ನೀಡಿತೋ ಹಾಗೆ ವೇದವ್ಯಾಸರೆಂಬ ಕ್ಷೀರಸಮುದ್ರವು ನಮಗೆ ಸಕಲ ಸಂಪದಗಳನ್ನೂ ಕರುಣಿಸಲಿ.

 

ಸ್ವಾಂತಧ್ವಾಂತನಿಕೃಂತನೇ ಜಿತಮಹಾವೈಕರ್ತನಾಂ ಶುವ್ರಜಂ

ನಿರ್ದೋಷಂ ಜಿತಚಂದ್ರಚಂದ್ರಿಕಮಲಂ ತಾಪತ್ರಯೋನ್ಮೂಲನೇ !

ಗಾಂಭೀರ್ಯೇ ಜಿತಸಿಂಧುರಾಜಮಮಿತಂ ಭಾಷ್ಯಂ ಯದಾಸ್ಯಾಂಬುಜಾತ್

ಆವಿರ್ಭೂತಮಮಂದಭೋಧಭಗವತ್ಪಾದಾನ್ ಪ್ರಪದ್ಯೇsಥ ತಾನ್!! 3 !!

Leave a Reply

Your email address will not be published.

Sumadhwa Seva © 2022