Anantha Padmanabha

 

“ಅನಂತ ಪದ್ಮನಾಭ”

ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ!

ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಂ!

ಲಕ್ಷ್ಮೀಕಾಂತಂ ಕಮಲನಯನಂ ಯೋಗಿಭಿರ್ಧ್ಯಾನಗಮ್ಯಂ !

ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ!

शान्ताकारं भुजगशयनं पद्मनाभं सुरेशं
विश्वाधारं गगनसदृशं मेघवर्ण शुभाङ्गम् ।
लक्ष्मीकान्तं कमलनयनं योगिभिर्ध्यानगम्यम्
वन्दे विष्णुं भवभयहरं सर्वलोकैकनाथम् ॥

ಅನಂತಪದ್ಮನಾಭ ದೇವರ ಚಿಂತನ :

ಪದ್ಮನಾಭ – ಪದ್ಮಂ ಚತುರ್ದಶಂ ಭವನ ಆಧಾರಕಮಲಂ
                ನಾಭೋ ಯಸ್ಯ ಸ: ಪದ್ಮನಾಭ |
ಶ್ರೀಹರಿಯು ಚತುರ್ದಶ ಲೋಕದ ಒಡೆಯನಾಗಿದ್ದಾನೆ.  ಪದ್ಮನಾಭನು ತನ್ನಲ್ಲಿ ಎಲ್ಲ ಲೋಕಗಳನ್ನೂಹೊಂದಿದ್ದಾನೆ.
ಅನಂತ ಪದ್ಮನಾಭನು ಸಾಕ್ಷಾತ್ ಶ್ರೀಹರಿಯೇ.    ಕಾಲನಿಯಾಮಕನಾದ ಭಗವಂತನೇ ಅನಂತ.  ಶ್ರೀಹರಿಯು ದೇಶತ:, ಕಾಲತ;, ಗುಣತ: ಅನಂತನಾಗಿರುವುದರಿಂದ ಅನಂತನೆಂದು ಪ್ರಸಿದ್ಧನಾಗಿದ್ದಾನೆ.
ಅನಂತವ್ರತವು ಭಾದ್ರಪದ ಚತುರ್ದಶಿಯಂದು ಪ್ರಾರಂಭವಾಗುತ್ತದೆ.  ಹದಿನಾಲ್ಕು ಸಂಖ್ಯೆ ಪ್ರಧಾನವಾಗಿದೆ.  ಅನಂತವ್ರತವನ್ನು ಹದಿನಾಲ್ಕು ವರ್ಷಗಳು ನಿರಂತರ ಆಚರಿಸಿ ಉದ್ಯಾಪನೆ ಮಾಡಬೇಕು.  ಹದಿನಾಲ್ಕು ಬಗೆಯ ಹೂವು, ಹದಿನಾಲ್ಕು ಬಗೆಯ ಪತ್ರಗಳು, ಹದಿನಾಲ್ಕು ಭಕ್ಷ್ಯ, ಹದಿನಾಲ್ಕು ಆರತಿ, ಮುಂತಾದ ನಿಯಮಗಳಿವೆ.   ಇದರಿಂದ ಐಹಿಕ ಪಾರತ್ರಿಕ ಭೋಗಗಳು ಲಭಿಸುವುವು.
ಅನಂತ ದೋರ – ಅನಂತನ ದಾರವನ್ನು ಕುಂಕುಮ ಹರಿದ್ರಾದಿಂದ ಪೂಜಿಸಿ ನಂತರ ಹದಿನಾಲ್ಕು ಗ್ರಂಥಿಗಳಲ್ಲಿ ಪರಮಾತ್ಮನ ವಿವಿಧ ರೂಪಗಳನ್ನು ಆಹ್ವಾನಿಸಬೇಕು.
ಅನಂತಂ ನಾರಸಿಂಹಂ ಚ ವಿಷ್ಣುಂ ಹರಿಂ ಶಿವಂ |
ಬ್ರಹ್ಮಾಣಂ ಭಾಸ್ಕರಂ ಶೇಷಂ ಸರ್ವವ್ಯಾಪಿನಮೀಶ್ವರಂ |
ವಿಶ್ವರೂಪ ಮಹಾಕಾಯಂ ಸೃಷ್ಟಿಸ್ಥಿತ್ಯಂತಕಾರಕಂ |
ಏಭಿರ್ನಾಮಪದೈರ್ದಿವ್ಯೈ: ಚತರ್ದಶಗ್ರಂಥಿಷು | 

ಹದಿನಾಲ್ಕು ಮತ್ತು ಅನಂತ ವ್ರತ –

ಈ ವ್ರತವನ್ನು ಆಚರಿಸುವುದು ಹದಿನಾಲ್ಕನೇ ದಿನ (ಭಾದ್ರಪದ ಶುದ್ಧ ಚತುರ್ದಶಿ)
ಶ್ರೀ ಯಾದವಾರ್ಯರು ತಮ್ಮ ವೇದವ್ಯಾಸ ಕರಾವಲಂಭನ ಸ್ತೋತ್ರದಲ್ಲಿ
जीवस्वरूप विनियामक बिंबरूप
मूलॆशनामक सुसार भुगंध् रूप ।
प्रादॆशरूपक विराट् अथ पद्मनाभ
वासिष्ट कृष्ण मम दॆहि करावलंभं ।
ಜೀವಸ್ವರೂಪ ವಿನಿಯಾಮಕ ಬಿಂಬರೂಪ
ಮೂಲೇಶನಾಮಕ ಸುಸಾರ ಭುಗಂಧರೂಪ |
ಪ್ರಾದೇಶರೂಪಕ ವಿರಾಟ್ ಅಥ ಪದ್ಮನಾಭ
ವಾಸಿಷ್ಟ ಕೃಷ್ನ ಮಮ ದೇಹಿ ಕರಾವಲಂಬಂ | ಎಂದಿದ್ದಾರೆ.

 

ಅನಂತಶಯನದ ಬಗ್ಯೆ ವಾದಿರಾಜರು-
ಸುರಗಣಪರಿವಾರ: ಶೋಭಮಾನೋರುಹಾರ:
ಕರಿಕರಸಮಹಸ್ತ:ಕಾಂಚನೋದ್ದೀಪ್ತಪ್ರವಸ್ತ್ರ: |
ಶುಭಜನಕೃತಗಾನ: ಶೇಷಬೋಗೇ ಶಯಾನ:
ಪ್ರಭುರಯಮವಿನಾಶ: ಪ್ರೀಯನಾಮಿಂದಿರೇಶ 😐
ಸಾಮಾನ್ಯವಾಗಿ ಅನಂತಪದ್ಮನಾಭಸ್ವಾಮಿಗೆ ನೈವೇದ್ಯಕ್ಕೆ ಮೆತ್ತಗಿರುವ ಪದಾರ್ಥಗಳನ್ನೇ ಮಾಡುವ ವಾಡಿಕೆ. ಸಿಹಿದೋಸೆ, ಹೋಳಿಗೆ, ಬೋಂಡ, ಕೇಸರಿಬಾತ್, ಮುಂತಾದವನ್ನು ಮಾಡುತ್ತಾರೆ.   ಕೆಲವರು ಅನಂತಪದ್ಮನಾಭನು ವಯಸ್ಸಾದ ರೂಪವುಳ್ಳವನು ಎಂದು ಇದಕ್ಕೆ ಅರ್ಥವನ್ನು ಕಟ್ಟಿದ್ದಾರೆ.   ಅನಂತ ಪದ್ಮನಾಭನಿಗೆ ಯಾವುದೇ ವಯಸ್ಸಿನ ಉಪಟಳವಿಲ್ಲ. ಅವನಿಗೆ ಜನನ, ಮರಣ, ಮೃತ್ಯವೇ ಇಲ್ಲವೆಂದಾಗ ವಯಸ್ಸಿನ ಮಾತೆಲ್ಲಿ ಬಂತು.  ಆದರೆ  ಶ್ರೀಹರಿಯು ಕೌಂಡಿನ್ಯನೆಂಬ ಮುನಿಗೆ ವೃದ್ಧ ಬ್ರಾಹ್ಮಣ ರೂಪದಲ್ಲಿ ಕಂಡು ಬಂದು ಈ ವ್ರತದ ಬಗ್ಯೆ ವಿವರಿಸಿದ್ದರಿಂದ, ಲೋಕರೀತಿಯಿಂದ ವೃದ್ಧರಿಗೆ ಅವಶ್ಯವಾದ ಮೆತ್ತನೆಯ ಪದಾರ್ಥಗಳನ್ನು ಮಾಡುವ ವಾಡಿಕೆ.

***************************”

*ಶ್ರೀ ವಿಜಯದಾಸಾರ್ಯ ವಿರಚಿತ*

*ಶ್ರೀಮದನಂತದೇವರ ವ್ರತಕಥೆ ಸುಳಾದಿ*

*ರಾಗ ಕಾಪಿ*

*ಧ್ರುವತಾಳ*

ವ್ರತವೆ ಉತ್ತಮ ವ್ರತವು ಕ್ಷಿತಿಯೊಳಗೆ ನೋಡಲು
ಮತಿವಂತರಿಗೆ ಮುಕ್ತಿ ಪಥಕೆ ಮೊದಲೂ
ಲತೆ ಪಲ್ಲವಿಸಿದಂತೆ ಸತತದಲ್ಲಿ ಭಕ್ತಿ
ಪ್ರತಿದಿನ ಹೆಚ್ಚುವದು ಅತಿಶಯದಲ್ಲಿ
ಖತಿಗೊಳದಿರಿ ಶಾಶ್ವತವೆನ್ನಿರೊ ಜನರೂ
ಪತಿತರಾಗದೆ ಸಮ್ಮತ ಬಡುವದೂ
ಶತಕೋಟಿ ಅನ್ಯದೇವತಿಗಳ ವ್ರತಮಾಡೆ
ಹತವಾಗುವದು ಸುಕೃತವಿದ್ದದ್ದೂ
ಚತುರಮೂರುತಿ ನಮ್ಮ *ವಿಜಯವಿಟ್ಠಲನಂತಾ*
ವ್ರತಕಾವದು ಎಲ್ಲಿ ಪ್ರತಿಗಾಣೆ ಶ್ರುತಿಯೊಳು ॥ 1 ॥

*ಮಟ್ಟತಾಳ*

ಸುಮಂತ ಭೂಸುರನಾ ಕುಮಾರಿ ಸುಶೀಲೆ
ವಿಮಲಾ ಗುಣವಂತೆ ಶಮೆದಮೆಯಲ್ಲಿರಲು
ಸುಮಂತ ವಿಪ್ರಾ ಉತ್ತುಮ ಕೌಂಡಿಣ್ಯಗೆ
ಸುಮತಿಯಳನಿತ್ತಾ ಸುಮನಸರು ಮೆಚ್ಚೆ
ರಮೆಯರಸ ನಮ್ಮ *ವಿಜಯವಿಟ್ಠಲನ್ನಾ* –
ತುಮದೊಳಗೆ ನೆನೆದು ಯಮುನಾ ತೀರಕೆ ಬರಲೂ ॥ 2 ॥

*ರೂಪಕತಾಳ*

ಮೌನಿ ಕೌಂಡಿನ್ಯನು ಮಧ್ಯಾಹ್ನದಾ ಆನ್ಹಿಕೆಯನು
ಪ್ರಣವ ಪೂರ್ವಕದಿಂದಾರ್ಚನೆ ಮಾಡಪೋದಾ ಯ –
ಮುನಾ ನದಿ ಸಲಿಲಕೆ ಘನತೀವರದಿಂದ
ವನಿತೆ ಸುಶೀಲಿ ತಾ ವನಜಾಕ್ಷಿಯರು ವೃತ –
ವನು ಮಾಡುತಿರೆ ಆ ಕ್ಷಣದಿಂದ ಗಮನಿಸೀ
ಎನಗೆ ಪೇಳೆಂದವರನನುಸರಿಸಿ ಕೇಳಲೂ
ಸನುಮತ ಅನಂತನ ವ್ರತವೆಂದೆನಲೂ
ವಿನಯದಿಂದ ನಮಿಸಿ ಮನದಿಚ್ಛೆಲಿ ನೋಡಿ
ಏನನೂ ತಾಳಂದಾನಂತನ ಸೂತ್ರ ತೋಳಿಲಿ
ದಿನ ಭಾದ್ರಪದ ಶೋಭನ ಶುಕ್ಲ ಚತುರ್ದಶಿ
ದಿನದಲ್ಲಿ ವಾಮಲೋಚನೆ ಕಟ್ಟಿದೊಳೊಲಿದೂ
ಪ್ರಣತಾರ್ಥಿಹರ ನಮ್ಮ *ವಿಜಯವಿಟ್ಠಲನ್ನ*
ನೆನದು ಪತಿಯಾ ಕೂಡಿ ಮನೆಗೆ ಬರುತಿರೆ ॥ 3 ॥

*ಝಂಪೆತಾಳ*

ದಾರಿಯೊಳಗೆ ಮದವಾರುಣಾ ಶ್ಯಂದನಾ
ವಾರುಗಂಗಳು ಪರಿವಾರಾ ವೊಪ್ಪುತಲಿರೇ
ಸಾರ ರತುನಾ ಬಂಗಾರಮಯದಾ ಶೃಂ –
ಗಾರದಾ ಮಂದಿರಾ ತೋರುತಿರಲು ಮನಕೆ
ಕಾರುಣಿಕವು ಮುಂದೆ ನಾರಿಯೊಡನೆ ಮುನಿ –
ವರೇಣ್ಯ ತನ್ನಯಾ ಕುಟೀರಕ್ಕೆ ಬರಲಾಗಿ
ಕಾರಣ ಪುರುಷ ಶಿರಿ *ವಿಜಯವಿಠಲನ್ನಾ*
ದೋರದಾ ಮಹಿಮೇಲಿ ಪೂರೈಸಿತು ಭಾಗ್ಯಾ ॥ 4 ॥

*ತ್ರಿವಿಡಿತಾಳ*

ಎತ್ತ ನೋಡಿದರತ್ತ ತುಳುಕಲು ಭಾಗ್ಯ
ನಿತ್ಯ ಸಂದಣಿಯಿಂದ ಇತ್ತಮುನಿ ಇರುತಿರೆ
ಚಿತ್ತದೊಲ್ಲಭ ಕರದಿ ಸೂತ್ರವಿರಲೂ ಮುನಿ –
ಪೋತ್ತುಮ ನುಡಿಸಿ ಅದರುತ್ತರವ ತಿಳಿದು
ಎತ್ತಣ ವೃತವೆಂದು ಮಿತ್ರಿಯ ಜರೆದು ದೋರಾ
ಕಿತ್ತು ಬಿಸುಟನಾಗಾ ಪಿತ್ತದೊಳಗೆ ತೆಗೆದು
ಉತ್ತಮ ಗುಣವಂತೆ ಎತ್ತಿ ಮನದಿ ಹಾ, ಯೆ –
ನುತ್ತ ಪಾಲಿನೊಳದ್ದಿ ತುತಿಸಿ ಗತಿ ಹರಿಯೆ –
ನುತ್ತ ಜತನ ಮಾಡಿ ಚಿತ್ತಜಾಪಿತ
ನಂತ *ವಿಜಯವಿಟ್ಠಲರೇಯಗೆ*
ಹತ್ತದವನಾಗಿ ಮುನಿ ಮತ್ತಾ ಕ್ಲೇಶದೊಳಾದ ॥ 5 ॥

*ಅಟ್ಟತಾಳ*

ಬಡತನ ಬಂದು ಬೆಂಬಿಡದಲೆ ಕಾಡಲು
ಒಡನೆ ಬಿದ್ದವರೆಲ್ಲಾ ಬಡದರು ಪಗೆಯಾಗಿ
ಪಡೆದ ಪರಿಚಾರಾ ಕಿಡಿಗೆಡಿಗೆ ಮುನಿ
ದಡಿಗಡಿಗೆ ಬೈದೊಡಂಬಡದಿಪ್ಪಾರು
ಕಡುನೊಂದು ಯತಿ ತನ್ನ ಮಡದಿ ವಿನಯದಿಂದಾ
ನುಡಿವ ಮಾತನು ತನ್ನೊಡಲೊಳು ಚಿಂತಿಸಿ
ಸುಡು ಎನ್ನ ಶರೀರ ಬಿಡುವೆ ರಂಗನ ದಿವ್ಯಾ
ಅಡಿಗಳ ಬಳಿಯಲ್ಲಿ ತಡಿಯದಲೆ ಪೋಗಿ
ಕೊಡವೆನೆನುತ ನೀರು ಕುಡಿಯದೆ ಪೊರಮಟ್ಟಾ
ಅಡವಿ ಗಿಡಗಳು ಪಿಡಿದು ಕ್ಲೇಶದಿಂದ
ಮಿಡಕುತಾಳಲ್ಲಿ ಕಾಲೊಡದು ನೆತ್ತರಧಾರೆ
ಇಡುತಲಿ ಬಲುದೂರಾ ಹುಡುಕುತಾ ಮಹೇಂದ್ರ
ದಡಿಗೆ ಬಂದನು ಋಷಿ
ಕಡು ಕೃಪಾಸಾಗರಾ ನಮ್ಮ *ವಿಜಯವಿಟ್ಠಲನಂತಾ*
ತಡಿಯೆ ಕೌಂಡಿಣ್ಯನು ನಡುಗಿ ಬಾಯಾರಿ ॥ 6 ॥

*ಆದಿತಾಳ*

ಬರುತಾ ಚೂತಾ ತರುವು ಸರೋ –
ವರಾವೆರಡು ಗೋ ವೃಷಭಾ
ಖರ ಮದಕುಂಜರಗಳನು ನಿರೀಕ್ಷಿಸಿ ಅನಂತನಾ
ಕುರುಹವಾ ನೀವು ತೋರಿರಿ ಎಂದು ಬೆಸಗೊಳಲು
ಅರಿಯಲಿಲ್ಲೆಂದು ಉತ್ತರ ನೆರದಾವು ಕೊಡಲು
ಪರಮ ಮೂರ್ಛಿತನಾಗಿ ವರಗಿದ ಧರಿಗೆ ಮುನಿ
ಹರಿ ಅರಿದು ವೃದ್ಧ ಭೂಸುರನಾಗಿ ಬಂದು ವಿ –
ವರಿಸಿ ತಿಳಿದು ತಡವರಿಸಿ ಕಿಂ –
ಕರ ನೋಡಿರದೆ ಬೆಂಬಲವಾಗಿ
ಕರತಂದು ತನ್ನ ನಿಜ ಸ್ವರೂಪವಾ ತೋರಿ ಮುನಿಯಾ
ಪರಿಶ್ರಮ ಪರಿಹರಿಸಿ ಕರುಣವ ಮಾಡಿದನು
ಸುರರಿಗಸಾಧ್ಯವು ಮರಿಯದೆ ಪದಿನಾಲ್ಕೋ –
ತ್ಸರಾನಂತನಾ ವೃತಚರಿಸಿ ಸುಖದಿ ಬಂದು
ವರ ಪುನರ್ವಸು ಸ್ಥಾನಾ ಇರ ಹೇಳಿ ಹಿಂದೆ ಕಂಡಾ
ದರ ಶಂಕೆಯನು ಪೇಳಿ ಹರಿ ಅಂತರ್ಧಾನನಾದಾ
ತಿರುಗಿ ಕೌಂಡಿಣ್ಯ ಮುನೀಶ್ವರಾ ಅಕ್ಲೇಶದಲ್ಲಿ
ತರುಣಿ ಜ್ಞಾನವಾ ನೆನೆದು ಹರಿಯಾ ಕೊಂಡಾಡುತ್ತಾ
ಭರದಿಂದ ತನ್ನ ಮಂದಿರ ಕೈತಂದು ವೃತವ
ಚರಿಸಿದ ಮನಃ ಪೂರ್ವದರ ಭಕುತಿ ತಪ್ಪದಲೇ
ಸರಿ ಇಲ್ಲಾದೈಶ್ವರ್ಯ ಪರಿಪೂರ್ಣವಾಗಿ ಬಾಳಿ
ಮರಳೆ ಸೇರಿದ ತನ್ನವರ ಸ್ಥಾನದಲಿ ಪೋಗಿ
ಶಿರಿ ಶ್ರೀಮದನಂತ *ವಿಜಯವಿಟ್ಠಲರೇಯಾ*
ಸ್ಥಿರವಾದಾನಂದು ಮೊದಲು ಶರಧಿ ದಕ್ಷಿಣಾದಲ್ಲಿ ॥ 7 ॥

*ಜತೆ*

ಯಮ ಸುತನು ನೋತು ಬಲು ಶ್ರಮದಿಂದ ದೂರಾದ
ತಮರಿಗೆ ಸಲ್ಲಾದಿದು *ವಿಜಯವಿಟ್ಠಲ* ಬಲ್ಲಾ ॥

*********************”””

ಅನಂತಪದ್ಮನಾಭ ಸ್ವಾಮಿಯ ಕೆಲವು ದೇವಸ್ಥಾನಗಳು

೧. ಅನಂತಶಯನ – ತಿರುವನಂತಪುರ – ಇದನ್ನು ಕಲಿಯುಗದ ಮೊದಲ ದಿನ ಸ್ಥಾಪನೆ ಎಂದು ಸ್ಥಳ ಪುರಾಣ.
೨. ಉಡುಪಿಯ ಅನಂತೇಶ್ವರ – ಈ ವಿಗ್ರಹವು ಶಿವಲಿಂಗದಂತೆ ಕಂಡರೂ, ಪರಶುರಾಮದೇವರು ಅನಂತಾಸನ ಕ್ಷೇತ್ರದಲ್ಲಿ ರಾಮಭೋಜ ರಾಜನಿಗೆ ವರವಿತ್ತಂತೆ    ಪದ್ಮನಾಭ ನಾರಾಯಣ ಸ್ವರೂಪದಲ್ಲಿ ಉದ್ಭವಿಸಿದ್ದಾರೆ ಎಂದು ಪ್ರತೀತಿಯಿದೆ.      ಮಧ್ಯಗೇಹ ಭಟ್ಟ ದಂಪತಿಗಳು ಪುತ್ರಪ್ರಾಪ್ತಿಗಾಗಿ  ೧೨ ವರ್ಷ ಕಠಿಣ ವ್ರತವನ್ನು ಮಾಡಿ ಆಚಾರ್ಯ ಮಧ್ವರನ್ನು ಪಡೆದರೆಂದು ನಂಬಿಕೆ.
೩. ಅನಂತಪದ್ಮನಾಭ , ಪಾಜಕ –  ಮಧ್ಯಗೇಹಭಟ್ಟ ದಂಪತಿಗಳು ಅನಂತೇಶ್ವರನನ್ನು ಪೂಜಿಸಿ ದಾಗ, ಆ ದಂಪತಿಗಳಿಗೆ ಸ್ವಪ್ನಲಬ್ಧವಾದ ಮೂರ್ತಿ.
೪. ಶ್ರೀ ಅನಂತಪದ್ಮನಾಭ, ಪಣಿಯಾಡಿ –  ಒಬ್ಬ ಭಕ್ತರಿಗೆ ಸ್ವಪ್ನದಲ್ಲಿ ಶ್ರೀಹರಿಯು ದರ್ಶನವಿತ್ತು, ಇಲ್ಲೇ ಸಮೀಪದಲ್ಲಿ ನನ್ನ ವಿಗ್ರಹವಿರುವುದಾಗಿಯೂ ಅದನ್ನು ಹೊರತೆಗೆದು, ಪ್ರತಿಷ್ಟಾಪಿಸಲು ಸೂಚಿಸಿದಂತೆ ಪ್ರತಿಷ್ಟಿತ ಮೂರ್ತಿ  (ಉಡುಪಿಯ ಸಮೀಪ)
೫. ಅನಂತಗಿರಿ, ತೆಲಂಗಾಣ –    ಇಂದಿನ ತೆಲಂಗಾಣ ರಾಜ್ಯದ ಆಲಂಪಲ್ಲಿ ಎಂಬಲ್ಲಿ ಮಾರ್ಕಂಡೇಯ ಋಷಿಗಳು ತಪಸ್ಸನ್ನಾಚರಿಸಿದ ಧರ್ಮಭೂಮಿಯಲ್ಲಿ, ಮುಚುಕುಂದಾ ನದಿಯ ದಂಡೆಯಲ್ಲಿ ಇರುವ ಕ್ಷೇತ್ರ
೬. ಶ್ರೀಪೆರ್ಡೂರು ಅನಂತಪದ್ಮನಾಭ – ಉಡುಪಿಯಿಂದ ಆಗುಂಬೆ ಮಾಗದಲ್ಲಿ – ಒಮ್ಮೆ ಹೆಬ್ರಿಯಲ್ಲಿ ಕಾಣದಾಗಿದ್ದ ಹಸುವನ್ನು ಹುಡುಕುತ್ತ ಬಂದ ಯುವಕ, ಆ ಹಸು ಹುತ್ತಕ್ಕೆ ಹಾಲು ಸುರಿಸುತ್ತಾ ನಿಂತಿತ್ತು.  ಅದನ್ನು ಕಂಡು ಸಂತಸದಿಂದ ಪೇರ್ ಉಂಡು ಪೇರ್ ಉಂಡು (ಹಾಲು ಇದೆ) ಎಂದು ಕೂಗಿದ.   ಆ ಜಾಗದಲ್ಲಿ ಹುತ್ತವಿತ್ತು.  ಅಲ್ಲೇ ಅನಂತಪದ್ಮನಾಭನನ್ನು ಪ್ರತಿಷ್ಟಾಪಿಸಲಾಯಿತೆಂದು ಪ್ರತೀತಿ.
೭. ಉಡುಪಿ ಅನಂತಪದ್ಮನಾಭ – ಶ್ರೀವಾದಿರಾಜತೀರ್ಥರ ಪರಂಪರೆಯ ಶ್ರೀ ವೇದನಿಧಿತೀರ್ಥರು ಒಮ್ಮೆ ಕೃಷ್ಣನ ಪಾದ ಮೂಲದಲ್ಲಿ ವಾಸುಕಿಯನ್ನು ಕಂಡು ಹರ್ಷಿತರಾಗಿ, ಅಲ್ಲಿಯ ಸಮೀಪದ ಲಕ್ಷ್ಮೀಕೊಪ್ಪಲು ಕ್ಷೇತ್ರದಲ್ಲಿ ಪ್ರತಿಷ್ಟಾಪಿಸಿ ಶಾಸ್ತ್ರೋಕ್ತ ರೀತಿಯಿಂದ ಪೂಜೆ ನಡೆಸಿದರು.

Leave a Reply

Your email address will not be published.

Sumadhwa Seva © 2022