Koormavatara

Koormavatara – click for PDF File

*ಶ್ರೀ ಕೂರ್ಮಾವತಾರ*

*ಕೂರ್ಮಾವತಾರ* :.
ಪರಮಾತ್ಮನ ಎರಡನೇ ಅವತಾರ. ಲೋಕೋದ್ಧಾರಕ್ಕಾದ ಅವತಾರ.

ಶ್ರೀ ಜಗನ್ನಾಥದಾಸರು ತಮ್ಮ “ತತ್ವಸುವ್ವಾಲಿ”ಯಲ್ಲಿ
ಕೂರ್ಮಾವತಾರವನ್ನು ಕುರಿತು ಹೇಳಿದ್ದು ಹೀಗೆ :

ಮಂದರಾದ್ರಿಯ ಧರಿಸಿ ಸಿಂಧುಮಥನವ ಮಾಡಿ
ವೃಂದಾರಕರಿಗೆ ಅಮೃತವ | ಅಮೃತವನುಣಿಸಿದ
ಇಂದಿರಾರಾಧ್ಯ ದಯವಾಗೋ ||

– ದೇವದಾನವರು ಮಂದರಪರ್ವತವನ್ನು ಬಳಸಿ ಸಮುದ್ರ ಮಥನವನ್ನು ಮಾಡುವಾಗ ಮಂದರ ಪರ್ವತವನ್ನು ಕೂರ್ಮರೂಪದಿಂದ ಧರಿಸಿ, ಸಮುದ್ರ ಮಥನವನ್ನು ಮಾಡಿ, ವೃಂದಾರಕರಿಗೆ ಅಂದರೆ ದೇವತೆಗಳಿಗೆ ಅಮೃತವನ್ನು ಉಣಿಸಿದ ಇಂದಿರಾರಾಧ್ಯನಾದ ನಾರಾಯಣನೇ ದಯವಾಗೋ ಎಂದು ಸ್ತುತಿಸಿದ್ದಾರೆ. ಕೂರ್ಮಾವತಾರದ ವರ್ಣನೆಯಲ್ಲಿ ದಾಸರಾಯರು ಭಗವಂತನ ಮೂರು ಅವತಾರಗಳಾದ ಮಂದರ ಪರ್ವತವನ್ನು ಧರಿಸಿದ ಕೂರ್ಮರೂಪ, ದೇವತೆಗಳೊಂದಿಗೆ ಸಮುದ್ರಮಥನ ಮಾಡಿದ ಅಜಿತ ರೂಪ ಮತ್ತು ಅಮೃತವನ್ನು ದೇವತೆಗಳಿಗೆ ಉಣಬಡಿಸಿದ ಮೋಹಿನಿ ರೂಪಗಳನ್ನೂ ಸ್ಮರಿಸಿದ್ದಾರೆ.

ಆಚಾರ್ಯ ಮಧ್ವರು ತಮ್ಮ ದ್ವಾದಶ ಸ್ತೋತ್ರದಲ್ಲಿ ಭಗವಂತನ ಕೂರ್ಮಾವತಾರವನ್ನು “ಕೂರ್ಮ ಸ್ವರೂಪಕ ಮಂದರಧಾರಿನ್ ಲೋಕವಿಧಾರಕ ದೇವವರೇಣ್ಯ” ಎಂದಿದ್ದಾರೆ. – ಮಂದರ ಪರ್ವತವನ್ನು ಧರಿಸಿರುವ, ಲೋಕ ಸಂರಕ್ಷಕನಾದ, ದೇವ ಶ್ರೇಷ್ಠನಾದ, ಕೂರ್ಮರೂಪಿಯೇ ನಿನ್ನನ್ನು ನಮಸ್ಕರಿಸುತ್ತೇನೆ ಎಂದೂ ಮತ್ತು ನವಮೋಧ್ಯಾಯದಲ್ಲಿ:

ಸುರದಿತಿಜಸುಬಲವಿಲುಲಿತ ಮಂದರಧರ ವರಕೂರ್ಮ ಹೇ ಭವಮಮ ಶರಣಂ |
ಶುಭತಮ ಕಥಾಶಯ ಪರಮಸದೋದಿತ
ಜಗದೇಕ ಕಾರಣ ರಾಮರಮಾರಮಣ || – ಸುರಾಸುರರು ಅಮೃತವನ್ನು ಪಡೆಯುವುದಕ್ಕಾಗಿ ಕ್ಷೀರಸಮುದ್ರವನ್ನು ಮಥಿಸಿದಾಗ ಮುಳುಗುತ್ತಿದ್ದ ಮಂದರ ಪರ್ವತವನ್ನು ಬೆನ್ನಲ್ಲಿ ಧರಿಸಿದ ಮತ್ತು ಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನಾದ, ಪುರುಷೋತ್ತಮನಾದ, ಸದಾ ಪ್ರಕಾಶಮಾನನಾದ, ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನಾದ, ಆತ್ಮಾರಾಮನಾದ ಲಕ್ಷ್ಮೀಪತಿಯೇ ನಿನಗೆ ಶರಣು ಹೊಂದುತ್ತೇನೆ ಎಂದು ಪ್ರಾರ್ಥಿಸಿದ್ದಾರೆ.

“ಬೆಟ್ಟ ಬೆನ್ನಲಿ ಹೊರಿಸಿದವರನು ಸಿಟ್ಟು ಮಾಡಿದನೇನೋ ಹರಿ” – ಹರಿಕಥಾಮೃತಸಾರ
(ಕರುಣಾಸಂಧಿ ೨೮)
– ಸಮುದ್ರಮಥನ ಕಾಲದಲ್ಲಿ ಇಡೀ ಮಂಧರಪರ್ವತವನ್ನೇ ತನ್ನ ಮೇಲೆ ಹೊರಿಸಿದರೂ ಶ್ರೀಹರಿ ಸಿಟ್ಟಿಗಲಿಲ್ಲ. ಕೂರ್ಮದ ಬೆನ್ನು ಬಹಳ ಕಠಿಣ. ಇಡೀ ಭೂಮಂಡಲವನ್ನೇ ಹೊತ್ತಿರುವ ಕೂರ್ಮ ರೂಪಕ್ಕೆ ಮಂಧರಪರ್ವತ ಭಾರವೇ.

*ವಾದಿರಾಜರ ದಶಾವತಾರ ಸ್ತೋತ್ರದ ಕೂರ್ಮ ಸ್ತುತಿ* :

ಕೂರ್ಮಾಕೃತೇ ತ್ವವತು ನರ್ಮಾತ್ಮ ಪೃಷ್ಠದೃತ
ಭರ್ಮಾತ್ಮ ಮಂದರ ಗಿರೇ |
ಧರ್ಮಾವಲಂಬನ ಸುಧರ್ಮಾ ಸದಾಕಲಿತ
ಶರ್ಮಾ ಸುಧಾವಿತರಣಾತ್|
ದುರ್ಮಾನ ರಾಹುಮುಖ ದುರ್ಮಾಯಿ
ದಾನವಸುಮರ್ಮಾ ಭಿಭೇದನ ಪಟೋ|
ಧರ್ಮಾರ್ಕ ಕಾಂತಿ ವರ ವರ್ಮಾ ಭವಾನ್
ಭುವನ ನಿರ್ಮಾಣ ಧೂತ ವಿಕೃತಿಃ || ೩ ||

ನರಸಿಂಹಾವತಾರದಂತೆ ಇಲ್ಲೂ ಕೂಡ ಪರಮಾತ್ಮನು ತಂದೆತಾಯಿ ರಹಿತವಾಗಿ ಪ್ರಾಧುರ್ಭಾವಿತ ರೂಪ. ಜಲಚರವಾದ ಆಮೆಯ ರೂಪದಲ್ಲಿ ಅವತರಿಸಿದ ಶ್ರೀಹರಿ. ಈ ಅವತಾರವಾಗಿದ್ದು ದೇವದಾನವರು ಅಮೃತಕ್ಕಾಗಿ ಸಮುದ್ರಮಥನ ಸಂದರ್ಭದಲ್ಲಿ.

 

ವಾಸುಕಿಯನ್ನು ಹಗ್ಗಮಾಡಿ ಮಂಧರಪರ್ವತವನ್ನು ಕಡುಗೋಲಾಗಿಸಿ ದೈತ್ಯ ಚಕ್ರವರ್ತಿ ಬಲಿಯ ನೇತೃತ್ವದಲ್ಲಿ ದಾನವರೂ ಮತ್ತು ಇಂದ್ರನ ನೇತೃತ್ವದಲ್ಲಿ ದೇವತೆಗಳೂ ಸಮುದ್ರ ಕಡೆಯುತ್ತಾರೆ. ಆದರೆ, ಮಂದರ ಪರ್ವತವು ಬಹಳ ಭಾರವಿದುದ್ದರಿಂದ ಸಮುದ್ರದಲ್ಲಿ ಕುಸಿಯಲು ಆರಂಭಿಸುತ್ತದೆ. ಆಗ ಶ್ರೀಮಾನ್ ಮಹಾವಿಷ್ಣುವು ಆಮೆಯ ರೂಪದಲ್ಲಿ ಅವತರಿಸಿ, ಮಂದಾರ ಪರ್ವತವನ್ನು ತನ್ನ ಬೆನ್ನ ಮೇಲೆ ಇಟ್ಟುಕೊಂಡು ಅದು ಕುಸಿಯದಂತೆ ನೋಡಿ ಕೊಳ್ಳುತ್ತಾನೆ. ಈ ರೀತಿಯಾಗಿ ಪರಮಾತ್ಮನು ಕೂರ್ಮಾವತಾರದಲ್ಲಿ ದೇವತೆಗಳಿಗೆ ಹಾಗೂ ರಾಕ್ಷಸರಿಗೆ ಸಹಾಯ ಮಾಡುತ್ತಾನೆ.

*ಯುಗ ಧರ್ಮ ಕೂರ್ಮ ಪುರಾಣ*

ಸಮುದ್ರ ಮಥನದ ಕಥೆ ಗೊತ್ತೇ ಇದೆ. ಮಂದರ ಪರ್ವತವನ್ನು ಕಡಗೋಲನ್ನಾಗಿಯೂ, ವಾಸುಕಿಯನ್ನು ಹಗ್ಗವನ್ನಾಗಿಯೂ ಮಾಡಿಕೊಂಡು ದೇವದಾನವರು ಕ್ಷೀರ ಸಾಗರವನ್ನು ಕಡೆಯುವ ಸಂದರ್ಭದಲ್ಲಿ ಮಂದರ ಪರ್ವತವು ಸಾಗರದ ತಳಕ್ಕೆ ಕುಸಿಯಲಾರಂಭಿಸುತ್ತದೆ.

ಆಗ ಮಹಾವಿಷ್ಣುವು ಬೃಹತ್ ಕೂರ್ಮದ (ಆಮೆ) ರೂಪ ತಳೆದು ಮುಳುಗುತ್ತಿದ್ದ ಪರ್ವತವನ್ನು ಬೆನ್ನ ಮೇಲೆ ಹೊರುತ್ತಾನೆ.

ಕೂರ್ಮಾವತಾರದಲ್ಲಿ ಆವಿರ್ಭವಿಸಿದ ಮಹಾವಿಷ್ಣುವು ತನ್ನ ಈ ಅವತಾರದಲ್ಲಿ ಉದ್ಘೋಶಿಸಿದ ಮಹಾಮಂತ್ರಗಳೇ ‘ಕೂರ್ಮ ಪುರಾಣ’. ಇದನ್ನು ಪ್ರಪ್ರಥಮವಾಗಿ ಕೂರ್ಮವಾತಾರಿ ಮಹಾವಿಷ್ಣುವು ನಾರದರಿಗೆ ಬೋಧಿಸಿದನು. ನಂತರ ನಾರದರು ಇದನ್ನು ನೈಮಿಷಾರಣ್ಯ ವಾಸಿಗಳಿಗೆ ಬೋಧಿಸಿದರು.

*ಕೂರ್ಮ ಪುರಾಣದಲ್ಲೇನಿದೆ* ?

ಕೂರ್ಮ ಪುರಾಣ ನಾಲ್ಕು ಕಾಂಡಗಳನ್ನು ಹೊಂದಿದೆ. ಅವು ಕ್ರಮವಾಗಿ ಬ್ರಹ್ಮಸಂಹಿತ, ಭಗತ್ಸಂಹಿತ, ಗೌರಿ ಸಂಹಿತ ಮತ್ತು ವೈಷ್ಣವಿ ಸಂಹಿತಗಳೆಂಬುದು. ಪ್ರಸ್ತುತ ಬ್ರಹ್ಮಸೂತ್ರ ಒಂದೇ ಲಭ್ಯವಿದ್ದು, ಇತರೆ ಸಂಹಿತೆಗಳು ನಷ್ಟವಾಗಿ ಹೋಗಿದೆ.

*ಧರ್ಮ ಎಂದರೇನು* ?

ಮನುಷ್ಯನಾಗಿ ಹುಟ್ಟಿದವನು ಅದನ್ನು ಹೇಗೆ ಆಚರಿಸಬೇಕು ಎಂಬ ಸವಿಸ್ತಾರವಾದ ವಿವರಣೆ ಇದೆ. ಇದರಲ್ಲಿ ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗಗಳ ಯುಗಧರ್ಮಗಳೇನು, ಅವುಗಳ ಅತಿಶಯಗಳು ಏನು ಎಂಬ ಬಗ್ಗೆಯೂ, ಈ ಯುಗಗಳ ಮಹತ್ವದ ಬಗ್ಗೆಯೂ ಉಲ್ಲೇಖವಿದೆ.

ಯಾಗ, ಯಜ್ಞ ಆಚರಿಸಲು ಯಾರು ಅರ್ಹರು, ಹೇಗೆ ಆಚರಿಸಬೇಕು ಎಂಬ ಬಗ್ಗೆ ಉಲ್ಲೇಖವಿದೆ. ಮನುಷ್ಯ ಮಾತ್ರನಾದವನು ತ್ರಿಗುಣಗಳಲ್ಲಿ ಶ್ರೇಷ್ಠವಾದ ಸಾತ್ವಿಕ ಮಾರ್ಗದಲ್ಲಿ ಜೀವಿಸಿ, ಸನ್ಮಾರ್ಗ, ಧರ್ಮ ಮಾರ್ಗ ಗಳಲ್ಲಿ ಸಾಗಿ ಅಧ್ಯಾತ್ಮಿಕ ಉನ್ನತಿ ಪಡೆದು ಭಗವಂತನ ಸಾಕ್ಷಾತ್ಕಾರವನ್ನು ಹೇಗೆ ಸಾಧಿಸಬೇಕು ಎಂಬುದರ ಬಗ್ಗೆ ಸುದೀರ್ಘ ವಿವರಣೆ ಇದೆ.

ಕೂರ್ಮಾವತಾರ ದೇವಾಲಯಗಳು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕೂರ್ಮಾಯಿ ಮತ್ತು ಶ್ರೀಕೂರ್ಮಂನಲ್ಲಿದೆ ಹಾಗೂ ಕರ್ನಾಟಕದ ಗವಿರಂಗಾಪುರದಲ್ಲಿದೆ ( ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕು)

Leave a Reply

Your email address will not be published.

Sumadhwa Seva © 2022