ಕನಕದಾಸರ ಪದಗಳು

ಅಹುದಾದರಹುದೆನ್ನಿ
ಅಲ್ಲವಾದರಲ್ಲವೆನ್ನಿ

ದೇವರಿಲ್ಲದ ಗುಡಿ, ಹಾಳುಬಿದ್ದಂಗಡಿ, ಕುಹಕ ಭಕ್ತಿ, ಧರ್ಮವಿಹೀನ ದೊರೆ, ನೈರ್ಮಲ್ಯರಹಿತ ಮನಸ್ಸು, ಸುಖ ನೀಡದ ಭೋಜನ, ಸಹಾಯ ಮಾಡದ ನೆಂಟ, ಕಾಲಿಲ್ಲದ ಮಂಚ, ನಾಚಿಕೆಯಿಲ್ಲದ ಹೆಣ್ಣು, ಒಕ್ಕಳಿಲ್ಲದೂರು, ಪೊರೆತುಂಬಿದ ಕಣ್ಣು, ಇವೆಲ್ಲ ತ್ಯಾಜ್ಯರು/ ಉಪಯೋಗವಿಲ್ಲ. ಅರ್ಥಾತ್ ದಾಸರು ನಮ್ಮನ್ನು ತಿದ್ದಲು ಈ ಕೃತಿಯನ್ನು ರಚಿಸಿದ್ದಾರೆ. ಪರಮಾತ್ಮನ ಭಜಿಸದವ ಕೊಳೆತ ಮರದಂತೆ ಎಂದಿದ್ದಾರೆ

ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ
ಬಹುಜನರು ನೆರೆ ತಿಳಿದು ಪೇಳಿ ಮತ್ತಿದನು

ದೇವರಿಲ್ಲದ ಗುಡಿಯು ಪಾಳು ಬಿದ್ದಂಗಡಿಯು ಭಾವವಿಲ್ಲದ ಭಕುತಿ ಅದು ಕುಹಕ ಯುಕುತಿ ಹೇವವಿಲ್ಲದ ಹೆಣ್ಣು ಗಜುಗ ಬೆಳೆದ ಕಣ್ಣು ಸೇವೆಯರಿಯದ ದಣಿಯು ಕಲ್ಲಿನಾ ಖಣಿಯು ||1||

ಧರ್ಮವಿಲ್ಲದ ಅರಸು ಮುರಿದ ಕಾಲಿನ ಹೊರಸು ನಿರ್ಮಲಿಲ್ಲದ ಮನಸು ಅದು ಕಜ್ಜಿ ತಿನಿಸು. ಶರ್ಮವಿಲ್ಲದ ಗಂಡು ಕರಿಯ ಒನಕೆಯ ತುಂಡು ಮರ್ಮವಿಲ್ಲದ ಮಾತು ಒಡಕು ಮಡಕೆ ತೂತು ||2||

ಮಕ್ಕಳಿಲ್ಲದ ಸಿರಿಯು ಕೊಳೆತ ತೆಂಗಿನ ತುರಿಯು ಸೌಖ್ಯವಿಲ್ಲದ ಊಟ ಅದು ಕಾಳಕೂಟ ಒಕ್ಕಲಿಲ್ಲದ ಊರು ಕೊಳೆತು ನಾರುವ ನೀರು ಸೊಕ್ಕಿ ನಡೆಯುವ ಭೃತ್ಯ ಅವ ಕ್ರೂರ ಕೃತ್ಯ ||3||

ಕಂಡು ಕರೆಯದ ನೆಂಟ ಮೊನೆಯು ಕೆಟ್ಟಿಹ ಕಂಟ. ಉಂಡು ನಗದಿಹ ಮೋರೆ ಅದು ಕಹಿಯ ಸೋರೆ ದಂಡಿಗಂಜುವ ಬಂಟ ಒಡಕು ಹರವಿಯ ಕಂಠ ಗಂಡಗಂಜದ ನಾರಿ ಅವಳೆ ಹೆಮ್ಮಾರಿ|| 4||

ಬಿಟ್ಟು ನಡೆಯುವ ಗೆಣೆಯು ಹರಕು ತೊಗಲಿನ ಮಿಣಿಯು ಕೊಟ್ಟು ಪೇಳುವ ದಾತ ಅವ ಹೀನ ಜಾತ ಸೃಷ್ಟಿಯೊಳು ಕಾಗಿನೆಲೆಯಾದಿ ಕೇಶವನಂಘ್ರಿ ಮುಟ್ಟಿ ಭಜಿಸದ ನರನು ಅವ ಹುಳುಕಮರನು ||5||

#########

 

ಕನಕದಾಸರ ಕೃತಿ :
ತಲ್ಲಣಿಸದಿರು ಕಂಡ್ಯ ತಾಳು ಮನವೇ

ಪರಮಾತ್ಮನ ಬಗ್ಗೆ ನಂಬಿಕೆಯಿರಲಿ, ಕಷ್ಟ ಬಂದಾಗ ನಿರಾಶರಾಗಬೇಡಿ, ಯಾರನ್ನೂ ಅವನು ಕಾಪಾಡದೇ ಇರುವುದಿಲ್ಲ.

ಎಲ್ಲೋ ಬೆಟ್ಟದ ಮೂಲೆಯಲ್ಲಿ ಹೇಗೋ ನೀರು ಒದಗಿಸುವ ಶ್ರೀಹರಿ. ಕಾಡಿನಲ್ಲಿರುವ ಪಶುಪಕ್ಷಿಗಳಿಗೆ ಅಲ್ಲೇ ಆಹಾರ ಒದಗಿಸುತ್ತಾನೆ. ಕಪ್ಪೆಗೆ ಕಲ್ಲು ಬಂಡೆಯ ಸಂಧಿಯಲ್ಲೇ ಆಹಾರ ಒದಗಿಸುತ್ತಾನೆ,

ಈ ಕೃತಿ ಬೇರೆ ಬೇರೆ ಕಾರಣಗಳಿಂದ ತಮಗೆ ತಾವೇ ನಿರಾಶರಾದವರಿಗೂ ಹೇಳಿ ನಮ್ಮ ಸಾಧನೆಯನ್ನು ಮಾಡಲು ಪ್ರೇರೇಪಿಸುವ ಕೀರ್ತನ – ತಲ್ಲಣಿಸದಿರು ಕಂಡ್ಯ

ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯ ಬೇಡ          ।।ಪ॥

ಬೆಟ್ಟದ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರು
ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು
ಗಟ್ಯಾಗಿ ಸಲಹುವನು ಇದಕೆ ಸಂಶಯವಿಲ್ಲ              ।।೧।।

ಅಡವಿಯೊಳಗೆ ಮೃಗ ಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರವಿತ್ತವರು ಯಾರೊ
ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನು ಇದಕೆ ಸಂಶಯವಿಲ್ಲ. । ೨।

ನವಿಲಿಗೆ ಚಿತ್ರ ಬರೆದವರು ಯಾರು
ಪವಳದ ಲತೆಗೆ ಕೆಂಪಿಟ್ಟವರು ಯಾರು
ಸವಿಮಾತಿನರಗಿಳಿಗೆ ಹಸುರು ಬರೆದವರು ಯಾರು.
ಅವನೇ ಸಲಹುವನು ಇದಕೆ ಸಂಶಯವಿಲ್ಲ         ।।೩।।

ಕಲ್ಲಿನಲ್ಲಿ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲ
ಅಲ್ಲಲ್ಲಿಗಾಹಾರವನ್ನು ತಂದಿತ್ತವರು ಯಾರು
ಬಲ್ಲಿದನು ಕಾಗಿನೆಲೆಯಾದಿಕೇಶವರಾಯ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ।।೪।।

 

@@@@@@@@@@@@

 

ಕನಕದಾಸರ ಕೃತಿ – ತೊರೆದು ಜೀವಿಸಬಹುದೇ
ಹೆತ್ತವರು, ಮಕ್ಕಳು, ಬಂಧುಗಳು, ಯಜಮಾನ, ರಾಜ, ಅನ್ನ, ರಾಜ್ಯ, ಇವೆಲ್ಲವನ್ನೂ ಬಿಟ್ಟರೂ ಶ್ರೀಹರಿಯ ಪಾದವನ್ನು ಮಾತ್ರ ಎಂದೆಂದೂ ಬಿಡಲಾಗದು, ದೃಡವಾದ ಭಕ್ತಿಯೇ ಮುಕ್ತಿಗೆ ಸೋಪಾನ ಎಂದಿದ್ದಾರೆ ಕನಕದಾಸರು.

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ || ಪ ||.

ತಾಯಿ ತಂದೆಯ ಬಿಟ್ಟು ತಪವ ಮಾಡಲುಬಹುದು
ದಾಯಾದಿ ಬಂಧುಗಳ ಬಿಡಲುಬಹುದು
ರಾಯ ತಾ ಮುನಿದರೆ ರಾಜ್ಯವನೆ ಬಿಡಬಹುದು
ಕಾಯಜನ ಪಿತ ನಿನ್ನಡಿಯ ಬಿಡಲಾಗದು || 1 ||

ಒಡಲು ಹಸಿಯಲು ಅನ್ನವಿಲ್ಲದೆಲೆ ಇರಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು
ಮಡದಿ ಮಕ್ಕಳ ಕಡೆಗೆ ತೊಲಗಿಸಿಯೇ ಬಿಡಬಹುದು
ಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು || 2 ||

ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು
ಮಾನದಲಿ ಮಾನವ ತಗ್ಗಿಸಲುಬಹುದು
ಪ್ರಾಣದಾಯಕನಾದ ಆದಿ ಕೇಶವರಾಯ
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು || 3 ||

 

@@@@@@@@@@

 

 

ಏನೂ ಇಲ್ಲವು ಎರಡು ದಿನದ ಸಂಸಾರ

ಕನಕದಾಸರ ಕೃತಿ

ಏನು ಇಲ್ಲವು ಎರಡು ದಿನದ ಸಂಸಾರ ಇದನರಿತು ದಾನಧರ್ಮವ ಮಾಡೋ ಮನುಜ ! ಪ !

ಹಸಿದು ಬಂದವರಿಗೆ ಅಶನವೀಯಲು ಬೇಕು
ಶಿಶುವಿಗೆಪಾಲ್ಬೆಣ್ಣೆಯನುಣಿಸಬೇಕು ಹಸನಾದ ಭೂಮಿಯನು ಧಾರೆಯೆರೆಯಲು ಬೇಕು ಭಾಷೆಕೊಟ್ಟರೆ ಮಾತು ನಿಜವಿರಲು ಬೇಕು. ! 1 !

ಕಳ್ಳತನವನು ಮಾಡಿ ಒಡಲು ಹೊರೆಯಲು ಬೇಡ
ತಳ್ಳಿಕಾರನು ಆಗಿ ತಿರುಗಬ್ಯಾಡ
ಕುಳ್ಳಿರ್ದ ಸಭೆಯೊಳಗೆ ಕುತ್ಸಿತವು ಬೇಡ ಒಳ್ಳೆಯವನೆಂದರೆ ಉಬ್ಬಬ್ಯಾಡ ! 2 !

ದೊರೆತನವು ಬಂದಾಗ ಕೆಡು ನುಡಿಯಲು ಬ್ಯಾಡ ಸಿರಿ ಬಂದ ಕಾಲಕ್ಕೆ ಬಲು ಮೆರೆಯಬ್ಯಾಡ ಸಿರಿವರ ಕಾಗಿನೆಲೆಯಾದಿ ಕೇಶವನ ಚರಣವನು. ನೆರೆನಂಬಿ ಸುಖಿಯಾಗು ಮನುಜ ! 3 !

ಹಸಿದ ಜೀವಕ್ಕೆ ಅನ್ನ, ಶಿಶುವಿಗೆ ಹಾಲು ಬೆಣ್ಣೆ, ಕೊಟ್ಟ ದಾನ ಫಲವತ್ತಾದ ಭೂಮಿ, ಕಳ್ಳತನ ಮಾಡದಿರುವುದು, ಸಭೆಯಲ್ಲಿ ಕುತ್ಸಿತವಾಡಬಾರದು, ಹೀಗಿದ್ದಾಗ ಮಾತ್ರ ಸಂಸಾರ ಸಾರ್ಥಕವಾಗುವುದು ಎಂದಿದ್ದಾರೆ ಕನಕದಾಸರು

 

&&&&&&&&&&&&&&&

 

ಕನಕದಾಸರ ಕೃತಿ

ದಾಸನಾಗು ವಿಶೇಷನಾಗು

84 ಲಕ್ಷ ಯೋನಿಗಳಲ್ಲಿ ಈ ಜೀವ ದಾಟಿ ಬಂದರೂ ಈ ಶರೀರ ತನ್ನದಲ್ಲ , ದೇಹ ನಿತ್ಯವಲ್ಲ, ಎಷ್ಟೇ ನದಿಗಳಲ್ಲಿ ಯಾಂತ್ರಿಕವಾಗಿ ಮಿಂದರೂ ಉಪಯೋಗವಿಲ್ಲ. ಈ ದೇಹವು ಪಿಂಡಾಂಡ ಇದಕ್ಕೆ ಮುಕ್ತಿಗೆ ಶ್ರೀಹರಿಯ ಧ್ಯಾನದಿಂದ ಮಾತ್ರ ಸಾಧ್ಯ.
ನಾರಾಯಣ ಅಚ್ಯುತ ಅನಂತ ಕೇಶವ ಸ್ಮರಣೆಯೊಂದೇ ನಮ್ಮ ಸಾಧನೆಗೆ ಹಾದಿ ಎಂದಿದ್ದಾರೆ

ದಾಸನಾಗು ವಿಶೇಷನಾಗು ದಾಸನಾಗು ಭವಪಾಶ ನೀಗು ||ಪ ||

ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವ  ರಾಶಿಯನ್ನು ದಾಟಿ ಬಂದ ಈ ಶರೀರ ತಾನಲ್ಲ ತನ್ನದಲ್ಲ
ಆಶೆ ತರವಲ್ಲ ಸ್ಥಿರವಲ್ಲ ಮುಂದೆ ಬಾಹೋದಲ್ಲ
ಆಶಾಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನ
ಪಾಶಕ್ಕೊಳಗಾಗದೆ ನಿರ್ದೋಷಿಯಾಗು ಸಂತೋಷಿಯಾಗು | ಅ.ಪ !

 

ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರ
ಏಸು ದೇಶ ತಿರುಗಿದರೆ ಬಾಹೋದೇನೋ ಅಲ್ಲಿ ಅಹೋದೇನೋ |
ದೋಷ ನಾಶಿ ಕೃಷ್ಣವೇಣಿ ಗಂಗೆ ಗೋದಾವರಿ ಭವ            ನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ |
ಮೀಸಲಾಗಿ ಮಿಂದು ಜಪತಪ ಹೋಮ ನೇಮಗಳ
ಏಸು ಬಾರಿ ಮಾಡಿದರು ಫಲವೇನು ಅದು ಛಲವೇನು
ವಾಸುದೇವನೆಂಬ ಒಳಗಿದ್ದ ಹಂಸನ ಸೇರಿ
ಲೇಸನುಂಡು ಮೋಸಗೊಳದೆ ಮುಕ್ತನಾಗೊ – ನೀ ಶಕ್ತನಾಗೊ || 1 ||

 

ಅತ್ತಲೋ ಇತ್ತಲೋ ಎತ್ತಲೋ ಈ ಸಂಸಾರ ಬತ್ತಲೆಗೆ ಬತ್ತಲೆ ನಿತ್ಯವಲ್ಲ ಪರಿಮಿತಿ ಇಲ್ಲ ಕತ್ತಲೆ ಕಾವಳದೊಳು ಕಾಣಲಾರದೆ ನೀನು                                                              ಸತ್ಯವೆಂಬ ದಾರಿಯನು ಸೇರಲಿಲ್ಲ – ಲೇಸು ತೋರಲಿಲ್ಲ
ಉತ್ತಮ ಅ ಉ ಮ ಎಂಬ ಓಂಕಾರ ಬೀಜಾಕ್ಷರ          ಚಿತ್ತದಲ್ಲಿ ಗ್ರಹಿಸು ನೀ ಬಿಡಬೇಡ ಬಿಟ್ಟು ಕೆಡಬೇಡ ಹೊತ್ತಾರೆಯೊ ಬೈಗಿನೊಳೊ ಆಗಲೊ ಈಗಲೊ ಕಾಯ
ನಿತ್ಯವೆಂದು ಸ್ಥಿರವೆಂದು ನಂಬಬೇಡ ನಿನಗೆ ಡಂಬ ಬೇಡ ! 2 !

 

ಆಯಿತೊ ಹೋಯಿತೋ ಏನಾಯಿತೊ ಈ ದೇಹಕ್ಕೆ ತಾಯಿ ಯಾರೊ ಇನ್ನು ತಂದೆ ಯಾರೊ.
ಮಾಯದೊಳು ಸಿಲುಕಿ ಬಲು ಕಾಲದಿಂದ ಶ್ರೀರಘು- ರಾಯನೆಂಬ ವಸ್ತುವಿನ ಸ್ಮರಣೆ ಬಿಟ್ಟು ಭವದಿ ಮಮತೆಯಿಟ್ಟು
ನಾಯಬಾಯ ಅರಿವೆಯಂತೆ ನಾನಾ ಕೋಟಲೆಯಲಿ ಬಿದ್ದು
ಬಾಯಿ ಬಾಯಿ ಬಿಡುತಲಿ ಸಾವುದೇನೋ ನೀ ನೋವುದೇನೊ
ತ್ರಾಹಿ ತ್ರಾಹಿ ತ್ರಾಹಿಯೆಂದು ತ್ರೈಲೋಕ್ಯದೊಡೆಯ ಪುಣ್ಯ-
ದಾಯಕನ ಹೊಂದಿ ನೀ ಧನ್ಯನಾಗೋ ಮುಕ್ತ ಮಾನ್ಯನಾಗೋ ! 3 !

 

ಅಂದಿಗೋ ಇಂದಿಗೋ ಒಮ್ಮೆ ಸಿರಿ ಕಮಲೇಶನನ್ನು
ಒಂದು ಬಾರಿಯಾರೂ ಹಿಂದ ನೆನೆಯಲಿಲ್ಲ ಮನ ದಣಿಯಲಿಲ್ಲ |
ಬಂದು ಬಂದು ಭ್ರಮೆಗೊಂಡು ಮಾಯಾಮೋಹಕ್ಕೆ ಸಿಕ್ಕಿ ನೊಂದುಬೆಂದು ಒಂದರಿಂದ ಉಳಿಯಲಿಲ್ಲ ಬಂಧ ಕಳೆಯಲಿಲ್ಲ |
ಸಂದೇಹವ ಮಾಡದಿರು ಅರಿವು ಎಂಬ ದೀಪವಿಟ್ಟು
ಇಂದು ಕಂಡ್ಯ ದೇಹದಲಿ ಪಿಂಡಾಂಡ ಹಾಗೆ ಬ್ರಹ್ಮಾಂಡ
ಹೊಂದಿ ಹರಿಯ ಧ್ಯಾನವನ್ನು ಮಾಡಿ ವಿವೇಕದಿ ಮು-
ಕುಂದನಿಂದ ಮುಕ್ತಿ ಬೇಡು ಕಂಡ್ಯ ನೀ ನೋಡು ಕಂಡ್ಯ || 4 ||

 

ನೂರು ಬಾರಿ ಶರಣು ಮಾಡಿ ನೀರ ಮುಳುಗಲೇಕೆ ಪರ
ನಾರಿಯರ ನೋಟಕೆ ಗುರಿಯ ಮಾಡಿದಿ ಮನ ಸೆರೆಯ ಮಾಡಿದಿ |
ಸೂರೆಯೊಳು ಸುರೆ ತುಂಬಿ ಮೇಲೆ ಹೂವಿನ ಹಾರ ಹಾಕಿ
ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮೆರೆಸಿದಂತೆ
ಗಾರುಢಿಯ ಮತ ಬಿಟ್ಟು ನಾದಬ್ರಹ್ಮನ ಪಿಡಿದು
ಸಾರಿ ಸೂರಿ ಮುಕ್ತಿಯನ್ನು ಶಮನದಿಂದ ಮತ್ತೆ ಸುಮನದಿಂದ
ನಾರಾಯಣ ಅಚ್ಯುತ ಅನಂತಾದಿ ಕೇಶವನ
ಸಾರಾಮೃತವನ್ನುಂಡು ಸುಖಿಸೋ ಲಂಡ ಜೀವವೇ ಎಲವೋ ಭಂಡ ಜೀವವೇ || 5 ||

ದಾಸನಾಗು ವಿಶೇಷನಾಗು ದಾಸನಾಗು ಭವಪಾಶ ನೀಗು

@@@@@@@@#@

 

*ಕನಕದಾಸರ ಈ ಕೃತಿಯಲ್ಲಿ*
ಶ್ರೀ ಕೃಷ್ಣನ ಬಾಲ ಲೀಲೆಗಳನ್ನು ಅವನ ಹುಡುಗಾಟವನ್ನು ಗೋಪಿ ಮೂಲಕ ವರ್ಣಿಸುತ್ತಾರೆ. ಕೃಷ್ಣ ಹಣ ಕೊಡುವೆ, ಕಪ್ಪ ಕೊಡುವೆ, ಮುಂತಾಗಿ ಆಸೆ ಹುಟ್ಟಿಸಿ ಅವಳೊಂದಿಗೆ ಸರಸವಾಡಿ ಹೇಳಿದ್ದನ್ನೂ ಕೊಡದೆ ಗೋಪಿಯರ ನಿರಾಸೆ ಮಾಡಿದ ಪರಿಯನ್ನು ಚಿತ್ರಿಸಿದ್ದಾರೆ

ಎಂಥ ಟವಳಿಗಾರನಮ್ಮ. ! ಪ !

ನಂದ ಗೋಪ್ಯಮ್ಮ ಕೇಳೆ – ನಿನ್ನ ಮಗ. ಎಂಥ ಟವಳಿಗಾರನಮ್ಮ ! ಅ ಪ !

ಹಣವ ಕೊಟ್ಟೇನೆಂದು ಗುಣದಿಂದ ಎನ್ನ ತಂದ              ಹಣವ ಕೇಳಿದರೆಲ್ಲಿ – ಹಣವೆ ? ತಡೆಯಲಾರದ ತಲ್ಲಣವೆ ? ಕುದುರೆ ಮೇಲಿನ ಪಲ್ಲಣವೆ ? ಇಲ್ಲ, ಬಾಯಿಗಿಟ್ಟ ಬೊಕ್ಕಣವೆ ? ‌‌ – ಹೋಗೆನುತಾನೆ ||1||

ಕೊಪ್ಪಾನೆ ಕೊಟ್ಟೇನೆಂದು ಒಪ್ಪಿಸಿ ಎನ್ನ ತಂದ             ಕೊಪ್ಪಾನ ಕೇಳಿದರೆಲ್ಲಿ – ಕೊಪ್ಪ ? ಊರ ಮುಂದಿನ          ತಿಪ್ಪ ? ಕೇರಿಯೊಳಗಿನ ಕೆಪ್ಪ ? ‌ಕೆರೆಯೊಳಗಿನ ಹುಳಿಸೊಪ್ಪ ?
– ಹೋಗೆನುತಾನೆ ||2||

 

ಬಳೆಯ ಕೊಟ್ಟೇನೆಂದು ಬಲು ಮಾತಿನಲಿ ತಂದ            ಬಳೆಯ ಕೇಳಿದರಲ್ಲಿ – ಬಳೆಯೆ ? ಊರ ಮುಂದಿನ      ಗಳೆಯೆ ? ಗದ್ದೆಯೊಳಗಿನ ಕಳೆಯೆ ? ಕೈಕಾಲ ಹಿಡಿದು ಸೆಳೆಯೆ ? ‌ – ಹೋಗೆನುತಾನೆ ||3||

ವಾಲೆಯ ಕೊಟ್ಟೇನೆಂದು ಒಲವಿನಿಂದ ತಂದ              ವಾಲೆಯ ಕೇಳಿದರೆಲ್ಲಿ – ವಾಲೆ ? ಕನ್ನಡಿಯ ಕಪೋಲೆ ?  ಹೇಳು ಸುವ್ವಿ ಸುವ್ವಾಲೆ ? ನಿನ್ನ ಕಾಲಿಗೆ ಸಂಕೋಲೆ ? ‌ – ಹೋಗೆನುತಾನೆ ||4||

 

ಕಡಗವ ಕೊಟ್ಟೇನೆಂದು ಸಡಗರದಿಂದ ತಂದ ಕಡಗ ಕೇಳಿದರೆಲ್ಲಿ – ಕಡಗ ? ಅಂಬರದ ಗುಡುಗ ? ಮುಂಗೈ ಮೇಲಿನ ಗಿಡುಗ ? ಎತ್ತಿನ ಮ್ಯಾಲಿನ ಧಡಗ ? ‌ ‌ – ಹೋಗೆನುತಾನೆ ||5||

ಬುಗುಡಿಯ ಕೊಟ್ಟೇನೆಂದು ರಗಡು ಕಿವಿಹಿಂಡಿ ತಂದ ಬುಗುಡಿ ಕೇಳಿದರೆಲ್ಲಿ – ಬುಗುಡಿ ? ಪಾಂಡವರಾಡಿದ ಪಗಡಿ ? ಮೂಗಿಂದ ಸುರಿವ ನೆಗಡಿ ? ಛಿ ! ನೀನೆಂಥ ಧಗಡಿ ? – ಹೋಗೆನುತಾನೆ ||6||

ಆದಿಕೇಶವನ ಮೇಲೆ ಆಣೆಯಿಟ್ಟು ಕರೆತಂದ ಆಣಿ ಎಲ್ಲಹುದೆಂದು ತೋರ್ದ ಆನಂದದಿಂದಲಿ ಬೆರೆದ ಬೀದಿಗೆ ಬಂದು ಕರೆದ ಹೀಂಗೆ ಧರೆಯೊಳು ಮೆರೆದ – ಶ್ರೀ ಕೃಷ್ಣರಾಯ ||7||

ಬಾಲ ಕೃಷ್ಣನ ಚೇಷ್ಟೆಗಳನ್ನು ಗೋಪಿಯೊಬ್ಬಳು ವರ್ಣಿಸುವುದನ್ನು ಕನಕದಾಸರು ಕೃತಿಯಲ್ಲಿ ಚಿತ್ರಿಸಿದ್ದಾರೆ.

 

******************

 

ಮುಟ್ಟದಿರೋ ಎನ್ನನು
– ಕನಕದಾಸರ ಕೃತಿ

ಮುಟ್ಟದಿರೊ ಎನ್ನನು – ರಂಗಯ್ಯ
ಮುಟ್ಟದಿರೊ ಎನ್ನನು ||ಪ||

ಮುಟ್ಟದಿರೊ ಎನ್ನ ಮುಂಗೈಯ ಸೆಳವಿಗೆ
ಮುತ್ತೆಲ್ಲ ಸಡಲ್ಯಾವೊ ಹೇ ಮುದ್ದುರಂಗ ||ಅ ಪ|

ಅತ್ತೆಯೊಬ್ಬಳ ಕೂಡ ಆಡಿ ಬರುವುದ ಕಂಡೆ
ಸತ್ಯವ ಮಾಡದಿರೊ – ಹೇ ಸರಿನಂಟ
ನೂರೆಂಟ ಬಣ್ಣದ ಬಂಟ ಬಿಡು ಎನ್ನ ಗಂಟ ||1||

ಹಡೆದವರ ತಲೆಗೆ ಮರಳು ಚೆಲ್ಲಿದಂತೆ
ಮಡದೇರ ಕೂಡ್ಯಾಡಿ ಕಲಿತ್ಯೆಲ್ಲೊ ಮಿರುಗ ದಿಮ್ಮದಿರುಗ ಸೊಕ್ಕಿಮುರುಗ ಬಿಡು ಎನ್ನ ಸೆರಗ ||2||

ಅಂಗೈಯ ನೊರೆಹಾಲು ಮುಂಗೈಯ ಮೇಲುಗಡೆ
ಸಿಂಗಾರವಾದುದ ಕಂಡೆ ಕಲೆಯ ಕಾಗಿನೆಲೆಯ |
ಬಟ್ಟಮೊಲೆಯ ಕನಕಯ್ಯನಿಗೊಲೆಯ ||3||
****

*ಕನಕದಾಸರ ದಶಾವತಾರ ಚಿಂತನ ಕೃತಿ*

ನಿನ್ನ ನಾನೇನೆಂದೆನೊ – ರಂಗಯ್ಯ ರಂಗ ನಿನ್ನ ನಾನೇಂದೆನೊ ! ಪ !

ನಿನ್ನ ನಾನೇನೆಂದೆ ನಿಗಮಗೋಚರ ಸ್ವಾಮಿ. ಪನ್ನಗಶಯನ ಪಾಲ್ಗಡಲೊಡೆಯನೆ ರಂಗ ! ಅ ಪ !

ಧೀರ ಸೋಮಕ ವೇದಚೋರ ಖಳನನು ಸೀಳಿ ವಾರಿಧಿಗಿಳಿದು ಪರ್ವತವನೆತ್ತಿ ಧಾರಿಣಿಯನು ಕದ್ದ ದನುಜದಲ್ಲಣನಾದ ನಾರಸಿಂಹ ನಿನಗೆ ನಮೊ ಎಂದೆನಲ್ಲದೆ ನೀರ ಪೊಕ್ಕವನೆಂದೆನೆ – ಬೆನ್ನಲಿ ಘನ್ನ ಭಾರ ಪೊತ್ತವನೆಂದೆನೆ – ಮಣ್ಣನಗೆದು ಬೇರ ಮೆದ್ದವನೆಂದೆನೆ – ರಕ್ಕಸನೊಳು ‌ ಹೋರಿ ಹೊಯ್ದನೆಂದು ಹೊಗಳಿದೆನಲ್ಲದೆ ||1||

ಧರೆಯ ದಾನವ ಬೇಡಿ ನೆಲನ ಈರಡಿ ಮಾಡಿ ಪರಶು ಪಿಡಿದು ಕ್ಷತ್ರಿಯರ ಸವರಿ ಚರಣದಿ ಪಾಷಾಣ ಪೆಣ್ಣು ಮಾಡಿದ ಪುಣ್ಯ ಚರಿತ ಯಾದವ ಪತಿ ಶರಣೆಂದೆನಲ್ಲದೆ ತಿರುಕ ಹಾರುವನೆಂದೆನೆ – ಹೆತ್ತ ತಾಯ ‌ ಶಿರವ ತರಿದನೆಂದೆನೆ – ವನವಾಸಕೆ ಭರದಿ ಚರಿಸಿದನೆಂದೆನೆ – ಪೂತನಿಯನು ಸರಕು ಮಾಡದೆ ಕೊಂದ ಹರಿಯೆಂದೆನಲ್ಲದೆ ||2||

ಚಿತ್ತಜಕೋಟಿ ಲಾವಣ್ಯ ಮುಪ್ಪುರದ ಉತ್ತಮ ಸ್ತ್ರೀಯರ ವ್ರತವಳಿದು ಮತ್ತೆ ಕಲ್ಕಿಯಾಗಿ ಮಧುಪರ ಮಡುಹಿದ ‌ ಹತ್ತವತಾರದ ಹರಿಯೆಂದೆನಲ್ಲದೆ ‌ ‌ ಬತ್ತಲೆ ನಿಂತವನೆಂದೆನೆ – ತೇಜಿಯನೇರಿ ಒತ್ತಿ ನಡೆದವನೆಂದೆನೆ – ಬಾರಿಬಾರಿಗೆ ‌ ಸತ್ತು ಹುಟ್ಟುವನೆಂದೆನೆ – ಆದಿಕೇಶವ ‌ ಭಕ್ತವತ್ಸಲನೆಂದು ಪೊಗಳಿದೆನಲ್ಲದೆ ||3||

###########₹#######

 

ಪರಮ ಪುರುಷ ಹರಿ ಗೋವಿಂದ – ಸಿರಿ ವರ ನಾರಾಯಣ ಗೋವಿಂದ. ! ಪ !

ನಿಶೆವೆಸರಸುರನ ಉಸಿರ ತೊಲಗಿಸಿದೆ ‌ಕುಸುಮ ಶರನ ಪಿತ ಗೋವಿಂದ ವಸು ಪೂರಿತ ಶ್ರುತಿ ಮಸುಳಿಸದೆ ತಂದೆ ಬಿಸಜ ಸಂಭವನಯ್ಯ ಗೋವಿಂದ ||1||

ಜತನದಿ ಮಧುಮಥನದಿ ಮಂದರ ಪರು- ವತ ಉದ್ಧರಿಸಿದೆ ಗೋವಿಂದ ‌ ಶತ ಕ್ರತುವಿನ ಸಿರಿ ಗತವಾಗದ ಮುನ್ನ ಕ್ಷಿತಿ ಪೆತ್ತನಯ್ಯ ಗೋವಿಂದ ||2||

ಭೂತಳವೆರಸಿ ರಸಾತಳಕಿಳಿದಿಹ ಪಾತಕನ ಕಂಡೆ ಗೋವಿಂದ ಆತನೊಡನೆ ಕಾದಾತನ ಗೆಲಿದು ಮ- ಹೀತಳವನು ತಂದೆ ಗೋವಿಂದ ||3||

ದುರುಳಾಸುರನ ನಡುಗರುಳ ಮಾಲೆ ಮುಂ ಗೊರಳೊಳು ಧರಿಸಿದೆ ಗೋವಿಂದ ಗರಳ ಕೊರಳನು ಬೆರಳೆತ್ತಿ ಪೊಗಳಲು ತರಳಗೊಲಿದೆ ನೀ ಗೋವಿಂದ||4||

ವಾಮನನಾಗಿ ನಿಸ್ಸೀಮ ಬಲಿಯ ಕೈಯ ಭೂಮಿಯನಳೆಕೊಂಡೆ ಗೋವಿಂದ ತಾಮರಸ ಪದದಿ ಕನಕ ಗರ್ಭಯೋಗ ವ್ಯೋಮ ಗಂಗೆಯ ತಂದೆ ಗೋವಿಂದ ||5||

ಸುರ ಪಶುವಿಗೆ ಋಷಿಯನು ಕೊಂದನ ಬಹು- ಕರ ಬಲ ಮುರಿದೆಯೊ ಗೋವಿಂದ ತರ ಹರಿಸದೆ ವಸುಧೆಯ ಒಡೆತನ ಭೂ- ಸುರರಿಗೆ ನೀಡಿದೆ ಗೋವಿಂದ ||6||

ತ್ರಿಣಯನ ತಾತ್ಪರ್ಯ ರಾವಣನ ಶಿರ. ‌‌ ರಣದೊಳುರುಳಿಸಿದೆ ಗೋವಿಂದ ಕ್ಷಣವೆಣಿಸದೆ ಸದ್ಗುಣವಂತ ವಿಭೀ- ಷಣಗಭಯವಿತ್ತೆ ಗೋವಿಂದ ||7||

ಮಾರಣ ಕ್ರತು ಸಂಪೂರಣ ಕಂಸ ಸಂ- ಹಾರಣ ಭುಜಬಲ ಗೋವಿಂದ ವಾರಣಪುರಪತಿ ಸಿರಿ ಭೂಭಾರೋ ತ್ತಾರಣ ಬಲಯುತ ಗೋವಿಂದ ||8||

ಕಥೆಯನು ನಿರ್ಮಿಸಿ ಪತಿವ್ರತೆಯರ ಘನ ವ್ರತಗಳ ಕೆಡಿಸಿದೆ ಗೋವಿಂದ ಜತೆಯಗಲದ ಪುರ ತ್ರಿತಯ ಗೆಲಿದು ದೇ- ವತೆಗಳ ಸಲಹಿದೆ ಗೋವಿಂದ ||9||

ಜಾಜಿಯ ಮರಕತ ತೇಜಿಯನೇರಿ ವಿ- ರಾಜಿಪ ರಾವುತ ಗೋವಿಂದ ಸೂಜಿಯ ಬೆನ್ನೊಳು ರಾಜಿಪ ತೆರದಿ ಸ- ಹಜರೊಳಡಗಿರ್ಪ ಗೋವಿಂದ ||10||

ಮೇದಿನಿಗೋಸುಗ ಕಾದಿ ಕಲಹದಿ ವಿ- ರೋಧಿಗಳ ಕೊಂದೆ ಗೋವಿಂದ ಸಾಧುಗಳಿಗೆ ಸುಖವೀಯುವ ಬಾಡದ ಶ್ರೀಧರ ಕೇಶವ ಗೋವಿಂದ ||11||

&&&&&&&&&&&&&&&&&

 

ಕನಕದಾಸರ ಕೃತಿ

ಇಂದು ನೀ ಕರೆದು ತಾರೆ

ಇಂದು ನೀ ಕರೆದು ತಾರೆ
ಇಂದು ನೀ ಕರೆದು ತಾರೆ | ಬಾರದೆ ಶ್ರೀ ಗೋ
ವಿಂದ ತಾ ಮುನಿದಿಹರೆ | ವಿರಹ ಬೇಗೆಯಲಿ
ಬೆಂದು ಸೈರಿಸಲಾರೆ || ಸಖಿಯೆ ನೀನು
ತಂದು ತೋರೆ |||| ಪ ||

ನೊಂದರೂ ಮನದಂದ ಕೊಡುವನು. ‌‌ ನಂದನಂದನನೆಂದು ಸೈರಿಸಿ
ಎಂದಿಗಗಲಿರಲಾರೆ ಕರೆತಂ. ‌ ದೊಂದುಗೂಡಿಸೆ ಮಂದಗಮನೆ ||ಅ.ಪ|

ಕಾಲಿಲ್ಲದೆಲೆ ಆಡುತ್ತ | ವೇದ ತಂದಿತ್ತ
ಕಾಲಿಲ್ಲದವನ ಪೊತ್ತ | ಅಮೃತ ತಂದಿತ್ತ
ಕಾಲತೂಗಿ ನೋಡುತ್ತ | ಗಜ ಉನ್ಮತ್ತ ||
ಕಾಲಿನಿಂದಲಿ ಕೊಲುವ ರೂಪದಿ
ಕಾಲಿನಲಿ ರಿಪುವನ್ನು ಸೀಳಿದ
ಕಾಲಿನಲಿ ತಾನಳೆದ ಮೇದಿನಿ
ಕಾಲಿನಲಿ ತಾ ನಡೆದ ಭಾರ್ಗವ
ಕಾಲಿನಲಿ ವನವಾಸ ಪೋದನ
ಕಾಲಿನಲಿ ಕಾಳಿಯನ ತುಳಿದನ
ಕಾಲಿನಲಿ ತ್ರಿಪುರರನು ಗೆಲಿದನ
ಕಾಲಿಗೆರಗುವೆ ತೇಜಿ ರೂಢನ || 1 ||

ಎವೆಯಿಕ್ಕದೆ ನೋಡಿದ | ತಲೆಯ ತಗ್ಗಿಸಿ
ಕವಲು ಕೋರೆದಾಡೆಯೊಳಾಡಿದ | ಕಂಬದಿ ಮೂಡಿ ತವಕದಿಂದಲಿ ಬೇಡಿದ | ಭೂಭುಜರ ಕಾಡಿದ |               ಶಿವನ ಬಿಲ್ಲನು ಮುರಿದ ದೇವಕಿ ಕುವರ ನಗ್ನದಿ ಹಯವನೇರಿದ ‌ವಿವಿಧಾಬ್ಧಿಯೊಳಾಡಿ ಗಿರಿಧರ ಸವಿದು ಬೇರನು ಬಾಲಗೊಲಿದನ !                                                    ಅವನಿ ಬೇಡುತ ಕೊಡಲಿ ಪಿಡಿದನ                              ಸವರಿ ದಶಶಿರ ಬೆಣ್ಣೆ ಕದ್ದನ                              ಯುವತಿಯರ ವ್ರತಗೆಡಿಸಿ ಕುದುರೆಯ.            ಹವಣುಗತಿಯಲಿ ಏರಿದಾತನ || 2 ||

ವರ ಮತ್ಸ್ಯನಗಧರನ | ಸೂಕರ ಸಿಂಹನ ತಿರುಕ ತಾಯ್ತರಿದವ | ವರವಿತ್ತು ಶಬರಿಗೆ ತುರುಗಾಯ್ದ ನಿರ್ವಾಣನ | ಅಶ್ವಾರೂಢನ || ಊರಿಲ್ಲದೆ ಹೊರೆ ಹೊತ್ತನ ಮುರುಡಕ್ರೂರನ |            ಉರವ ಸೀಳಿದ ವಿಪ್ರ ನೃಪರರಿ ಧರಣಿಜೆಯ                ವರಕೃಷ್ಣ ಗಗನದಿಪುರವ ದಹಿಸಿದ ತೇಜಿರೂಢನ |          ಮೆರೆವ ಜಲಜ ಕೂರ್ಮ ವರಹ ನರಹರಿ ದ್ವಿಜ              ಕೊರಳ ಕೊಯ್ದನ ನೆಲಮಗಳ ವರ ಶೌರಿ ಬುದ್ಧನ ತುರಗವೇರಿದ ಆದಿಕೇಶವ || 3 ||

ಇಂದು ನೀ ಕರೆದು ತಾರೆ …..

…@@##@#@#@#@#

 

*ಅಂಗಳದೊಳು ರಾಮನಾಡಿದ*
Click here
👇🏾
*https://youtu.be/BC4e3b2J8mc*

ಕನಕದಾಸರ ಕೃತಿ – ರಾಮಚಂದ್ರನ ಬಾಲಲೀಲೆಯನ್ನು ಹೇಳುವ ಕೃತಿ

“ಅಂಗಳದೊಳು ರಾಮನಾಡಿದ”

ಒಮ್ಮೆ ರಾಮಚಂದ್ರ ಆಟವಾಡುತ ಬಾನಲಿ ಚಂದ್ರನ ಕಂಡು ಲೋಕರೀತ್ಯ ತನಗೆ ತಾಯಿ ಕೊಟ್ಟ ಎಲ್ಲಾ ಆಟಿಕೆಗಳನ್ನು ಒಲ್ಲೆನೆಂದು ಚಂದ್ರ ಬೇಕೆಂದು ಹಠ ಹಿಡಿಯಲು, ದಿಕ್ಕು ತೋಚದೇ, ಕೌಸಲ್ಯೆಯು ಚಿಂತಿತಳಾಗಲು, ಮಂತ್ರಿ ಸುಮಂತ್ರನು ರಾಮನ ಕೈಗೆ ಕನ್ನಡಿಯನ್ನಿತ್ತಾಗ ಅಲ್ಲಿ ಚಂದ್ರನ ಬಿಂಬವನ್ನು ನೋಡಿ ತೃಪ್ತನಾದನಂತೆ.

ಇದೊಂದು ಅಪೂರ್ವ ಕೃತಿ. ಕೌಸಲ್ಯೆಯ ಮುಗ್ಧತೆ, ರಾಮನ ಮುಗ್ಧತೆಯ ಮೋಡಿ, ಮಂತ್ರಿ ಸುಮಂತ್ರ ರಾಮನ ಮೋಹಕ್ಕೆ ಮೋಡಿಗೊಳಗಾಗುವಿಕೆ, ಸಾಮಾನ್ಯವಾಗಿ ಕನಕದಾಸರು ಉಪಯೋಗಿಸುವ ಪದಗಳು ಕ್ಲಿಷ್ಟ, ಆದರೆ ಇಲ್ಲಿ ಎಲ್ಲವನ್ನೂ ಅತಿ ಸುಲಭ ಪದಗಳಲ್ಲಿ ವರ್ಣಿಸಿದ್ದಾರೆ ಕನಕದಾಸರು.

ಅಂಗಳದೊಳು ರಾಮನಾಡಿದ ಚಂದ್ರ
ಬೇಕೆಂದು ತಾ ಹಠ ಮಾಡಿದ ॥ಪ॥

ತಾಯಿಯ ಕರೆದು ಕೈ ಮಾಡಿ ತೋರಿದ
ಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ
ಚಿನ್ನಿಕೊಳು ಚಂಡು ಬುಗುರಿ ಎಲ್ಲವ
ಬೇಡ ಬೇಡ ಎಂದು ತಾ ಬಿಸಾಡಿದ ॥೨॥

ಕಂದ ಬಾ ಎಂದು ತಾಯಿ ಕರೆದಳು ಮಮ್ಮುಉಣ್ಣೆಂದು ಬಣ್ಣಿಸಿದಳು
ತಾಯಿ ಕೌಸಲ್ಯ ಕಳವಳಗೊಂಡಳು ಕಂದ ಅಂಜಿದ ಎನ್ನುತಿದ್ದಳು ॥೩॥

ಅಳುವ ಧ್ವನಿ ಕೇಳಿ ರಾಜನು ಮಂತ್ರಿ ಸಹಿತಾಗಿ ಧಾವಿಸಿ ಬಂದನು
ನಿಲುವ ಕನ್ನಡಿ ತಂದಿರಿಸಿದ
ಶ್ರೀರಾಮನ ಎತ್ತಿ ಮುದ್ದಾಡಿದ ॥೪॥

ಕನ್ನಡಿಯೊಳು ಬಿಂಬ ನೋಡಿದ. ಚಂದ್ರ ಸಿಕ್ಕಿದನೆಂದು ಕುಣಿದಾಡಿದ
ಈ ಸಂಭ್ರಮ ನೋಡಿ ಆದಿಕೇಶವ
ರಘುವಂಶವನ್ನೇ ಕೊಂಡಾಡಿದ ॥೫॥

 

@@@@@@@@@@@@@

 

Sumadhwa Seva © 2022