purandara mundige

ಮುಂಡಿಗೆ :

ವಹವ್ವಾರೆ ಮೆಣಸಿನಕಾಯಿ
ಒಣರೊಟ್ಟಿಗೆ ತಂದೆನೊ ತಾಯಿ | ಪ |
ಹುಟ್ಟುತಲಿ ಹಸಿರಾಗುತ ಕಂಡೆ
ನಟ್ಟನಡುವೆ ಕೆಂಪಾಗುತ ಕಂಟೆ
ಕಟ್ಟೆರಾಯನ ಬಹುರುಚಿಯೆಂಬೆ | ೧ |
ಒಂದೆರಡೆರದರೆ ಬಹುರುಚಿಯೆಂಬೆ
ಮೇಲೆರಡೆರೆದರೆ ಬಹು ಖಾರೆಂಬೆ ಅದೂ
ಎರಡೆರೆದರೆ ಅತಿ ಖಾರೆಂಬೆ | ೨ |
ಬಡವರಿಗೆಲ್ಲ ನಿನ್ನಾಧಾರ
ಅಡಿಗೆ ಊಟಕೆ ನಿನ್ನಾಸಾರ
ಬಾಯಲಿ ಕಡಿದರೆ ಬೆಂಕಿಯ ಖಾರ
ಪುರಂದರ ವಿಠಲನನೆನೆಯೋದುಭಾರ | ೩ |

ವಹವ್ವಾರೆ ಮೆಣಸಿನಕಾಯಿ
ಪ್ರತಿಯೊಬ್ಬ ಜೀವಿಗಳು ವಿಚಿತ್ರ ಸ್ವಭಾವವುಳ್ಳವರಾಗಿರುತ್ತಾರೆ.  – ವಹವ್ವಾರೆ. ” ಬಹುಚಿತ್ರಜಗದ್ಬಹುದಾಕರಣಾತ್ ಪರಶಕ್ತಿರನಂತ ಗುಣ: ಪರಮ:”.   ಭೇದದಿಂದ ಕೂಡಿರುವ ಈ ಚಿತ್ರ ವಿಚಿತ್ರ ಜಗತ್ತನ್ನು ನೋಡಿಯಾದರೂ ಭಗವಂತನನ್ನು ಅರಿಯಬೇಕು.  ದಪ್ಪ ಮೆಣಸಿನಕಾಯಿ, ಖಾರ ಮೆಣಸಿನಕಾಯಿ, ಚಿಕ್ಕ ಮೆಣಸಿನಕಾಯಿ, ಬೋಂಡ ಮೆಣಸಿನಕಾಯಿ, ಬ್ಯಾಡಗಿ ಮೆಣಸಿನಕಾಯಿ, ಗುಂಟೂರು ಮೆಣಸಿನಕಾಯಿ ವಿಚಿತ್ರ ಆಕಾರ – ರುಚಿ ಹೇಗೆ ಚಿತ್ರ ವಿಚಿತ್ರವಾಗಿರತ್ತೋ ಅದೇ ರೀತಿ ಜೀವಿಗಳೆಲ್ಲ ಸಾತ್ವಿಕ ರಾಜಸ ತಾಮಸವೆಂದು ಭಿನ್ನರಾಗಿರುತ್ತಾರೆ.

ಒಣರೊಟ್ಟಿಗೆ ತಂದೆನೋ ತಾಯಿ : ಒಣರೊಟ್ಟಿ – ಸಾರರಹಿತ ಸಂಸಾರ; ತಾಯಿ – ಪ್ರಕೃತಿ ಮಾತೆ ಲಕ್ಷ್ಮೀದೇವಿ.

ಹುಟ್ಟುತಲೀ ಹಸಿರಾಗುತ ಕಂಡೆ : –  ಮೆಣಸಿನಕಾಯಿ ಹುಟ್ಟಿದಾಗ ಹಸಿರಾಗಿರುತ್ತೆ. ಹುಟ್ಟುವಾಗ (ಬಾಲ್ಯದಲಿ) ಸಂಸಾರದ ಹೊರೆ, ಮುಂದಿನ ಭಯ, ಯಾವುದೂ: ತಿಳಿಯದೆ ಜಗತ್ತು ಹಸಿರಾಗಿಯೇ ಕಂಡಿತು.

ನಟ್ಟನಡುವೆ ಕೆಂಪಾಗುತ ಕಂಡೆ : – ನಟ್ಟನಡುವೆ ಅಂದರೆ ತಾರುಣ್ಯದಲ್ಲಿ – ಬಿಸಿರಕ್ತವಿರುತ್ತದೆ. ಮೆಣಸಿನಕಾಯಿ ಕೆಂಪಾಗಿರುತ್ತೆ.  ಯೌವನ – ಕೋಪತಾಪಗಳ ಸಂಗಮ – ಲೌಕಿಕಾವಸ್ಥೆಯಲ್ಲಿ ಮುಳುಗಿ ಭಗವಂತನನ್ನೇ ಮರೆತಿರುತ್ತೇವೆ.

ಕಟ್ಟೆರಾಯನ ಬಲುರುಚಿಯೆಂಬೆ – ಕಟ್ಟೆರಾಯ ಅಂದರೆ ಭವಂತನಿರುವವರೆಗೂ ಯೌವ್ವನದ ಹಾರಾಟ ನಡೆಯುತ್ತಿರುತ್ತೆ.  ತಟ್ಟೇರಾಯನಂತೆ ತಾನು ಅಸ್ವತಂತ್ರನಾದರೂ ಸ್ವತಂತ್ರನಾದ ಕಟ್ಟೆಯ (ಸಿಂಹಾಸನ) ಮೇಲೆ ಕುಳಿತಿರುವನಂತೆ ತಿಳಿದು ಹಾಳಾಗುವುದು.  ಈ ಸಾಂಸಾರಿಕ ವಿಷಯ ವಸ್ತುಗಳು ವಿಷದಂತಿದ್ದರೂ ಅರ್ಥವಾಗದೆ ಬಲುರುಚಿಯಾಗಿದೆ ಎಂದೇ ಭ್ರಮಿಸುವೆವು.  ಇದನ್ನೇ ಕಟ್ಟೇರಾಯನಿಗೆ ಬಲುರುಚಿಯೆಂಬೆ ಎಂದಿದ್ದಾರೆ.

ಒಂದೆರಡೆರೆದರೆ ಬಹುರುಚಿಯೆಂಬೆ – (ಒಂದು + ಎರಡು = ಮೂರು) ಈ ಸಂಸಾರದಲ್ಲಿ ಯೌವ್ವನ, ಮದದ ಜೊತೆಗೆ ಹಾಳು ಮಾಡಲು ಕಾಮ, ಕ್ರೋಧ, ಲೋಭಗಳು (ಅಂದರೆ ಒಂದರ ಜೊತೆಗೆ ಇನ್ನೊಂದೆರಡು ಮೆಣಸಿನಕಾಯಿ ಸೇರಿಸಿದರೆ) ಬಹುರುಚಿಯೆಂಬಂತೆ ಇರುತ್ತೆ ಈ ಸಂಸಾರ.

ಅದು ಎರಡೆರದರೆ ಅತಿ ಖಾರೆಂಬೆ –  ಈ ಕಾಮ ಕ್ರೋಧಾದಿಗಳ ಜೊತೆ ಇನ್ನೂ ಎರಡು ಮೆಣಸಿನಕಾಯಿ ಸೇರಿದರೆ ( ೩  ೨ = ೬) ಕಾಮಕ್ರೋಧಾದಿ ಆರು ಸೇರಿದರೆ, ಭಗವಂತನ ಸ್ಮರಣೆಯೇ ಇಲ್ಲದೇ ತಾನೇ ಸರ್ವ ಸ್ವತಂತ್ರವೆಂಬ ದುರಹಂಕಾರ ಬಂದು ಮೆರೆವಾಗ, ಇನ್ನೊಬ್ಬ ಬಲಿಷ್ಟನಿಂದ ಅವಮಾನವಾದಾಗ ಬಹುಖಾರೆಂಬ ಅವಮಾನವಾಯಿತು.

ಅದು ಎರಡೆರದರೆ ಅತಿ ಖಾರೆಂಬೆ –  ಈ ಕಾಮಕ್ರೋಧಾದಿಗಳ ಜೊತೆಗೆ ಇನ್ನೂ ಎರಡು ಮೆಣಸಿನಕಾಯಿಗಳು ಸೇರಿದರೆ (೬ + ೨ = ೮) ಅಷ್ಟ ಮದಗಳೂ ಸೇರಿದ್ದರೆ, ಅಂದರೆ ಯೌವ್ವನ, ಧನ, ಅಧಿಕಾರ, ಅವಿವೇಕಾದಿಗಳೂ ಸೇರಿದ್ದರೆ; ಇವುಗಳಲ್ಲಿ ಒಂದೊಂದಿದ್ದರೂ ಅನರ್ಥಕಾರಿ.  ಎಲ್ಲವೂ ಸೇರಿದರೆ ಕೇಳುವುದೇ ಬೇಡ.

ಬಡವರಿಗೆಲ್ಲಾ ನಿನ್ನಾಧಾರ – ಭಗವಂತನ ಭಕ್ತರಾದ ಕುಚೇಲ ಮೊದಲಾದವರಿಗೆಲ್ಲ ನಿನ್ನ ನಾಮವೇ ಆಧಾರ.  ಭೋಜನ ಮಾಡುವಾಗಲೂ ಗೋವಿಂದ ಎಂದು ಉಚ್ಚರಿಸುತ್ತಾ ಭುಂಜಿಸಬೇಕು.  ಅಡಿಗೆ ಮಾಡುವಾಗಲೂ ಭಗವಂತನ ನಾಮೋಚ್ಚಾರಣ ಪೂರ್ವಕ ಮಾಡಬೇಕು.

ಬಾಯಲ್ಲಿ ಕಡಿದರೆ ಬೆಂಕಿಯ ಖಾರ –  ಬಾಯಲ್ಲಿ ಮೆಣಸಿನಕಾಯಿ ಕಡಿದರೆ ಹೇಗೆ ಖಾರದಿಂದ ಭಗವಂತನ ಸ್ಮರಣೆ ಕಷ್ಟವೋ, ಹಾಗೆ ಸಂಸಾರಿಕ ವಿಷಗಳಿಂದ ಕಾಮಕ್ರೋಧಾದಿ ಕಿಚ್ಚುಗಳಿಂದ ಪುರಂದರ ವಿಠಲನ ನೆನೆಯೋದು ಅತಿ ಪ್ರಯಾಸಕರವಾದದ್ದು.  ಆದ್ದರಿಂದ ಈ ಮೆಣಸಿನಕಾಯಿಯಂತೆ ಭಗವಂತರನ್ನು ಮರೆಸುವ ಈ ವಿಷಯ ಪದಾರ್ಥಗಳನ್ನು ತೊರೆದು, ಭಗವನ್ನಾಮಾಮೃತವನ್ನು ಪಾನ ಮಾಡಿರಿ ಎಂದಿದ್ದಾರೆ ಪುರಂದರ ದಾಸರು.

 

+++++++++++++++++++++++++++++++++++++++++++++++++++++++++

ಮುಂಡಿಗೆ – ಮಾಡು ಸಿಕ್ಕದಲ್ಲ

ಮಾಡು ಸಿಕ್ಕದಲ್ಲ, ಮಾಡಿನಗೂಡು ಸಿಕ್ಕದಲ್ಲ
ಜೋಡು ಹೆಂಡಿರಿಗಂಜಿ ಓಡಿಹೋಗುವಾಗ
ಗೋಡೆ ಬಿದ್ದು ಬಯಲಾಯಿತಲ್ಲ | ಪ |

ಎಚ್ಚರಗೊಳಲಿಲ್ಲ ಮನವೆ, ಹುಚ್ಚನಾದೆನಲ್ಲ
ಅಚ್ಚಿನೊಳಗೆ ಮೆಚ್ಚು ಮೆಚ್ಚಿನೊಳಗೆ ಅಚ್ಚು
ಕಿಚ್ಚೆದ್ದು ಹೋಯಿತಲ್ಲ | ೧ |
ಮುಪ್ಪು ಬಂದಿತಲ್ಲ ಪಾಯಸ ತಪ್ಪದೆ ಉಣಲಿಲ್ಲ |
ತುಪ್ಪದ ಬಿಂದಿಗೆ ತಿಪ್ಪೆ ಮೇಲೆ ದೊಪ್ಪನೆ ಬಿತ್ತಲ್ಲ |೨ |
ಯೋಗವು ಬಂದಿತಲ್ಲ, ಬದುಕು ವಿಘಾಗವಾಯಿತಲ್ಲ |
ಭೋಗಿಶಯನ ಶ್ರೀ ಪುರಂದರವಿಠಲನ ಆಗ ನೆನೆಯಲಿಲ್ಲ | ೩ |

ಮಾಡು ಸಿಕ್ಕದಲ್ಲ –   ಮಾಡು ಎಂದರೆ ಭಕ್ತಿ.  ಮಾಡಿನ ಗೂಡಿ ಎಂದರೆ ವೈಕುಂಠ. ಅಥವಾ ಮಾಡು ಎಂದರೆ ಅಟ್ಟ. ನಮಗೆ ಮೇಲಿರುವ ಅಟ್ಟವೆಂದರೆ ವೈಕುಂಠ.   ಆ ವೈಕುಂಠ ಹೊಂದಲು ಮಾಡಿದ ಗೂಡು ಎಂದರೆ ಸತ್ಕರ್ಮಾನುಷ್ಠಾನಕ್ಕೆ ಅನುಕೂಲಕರವಾದ ಭಾರತದ ಭೂಭಾಗ.    ಅಲ್ಲಿರುವ ತೀರ್ಥಕ್ಷೇತ್ರಗಳು, ಸಜ್ಜನ ಸಹವಾಸ, ಇವುಗಳೇ ಮಾಡಿನ ಗೂಡು.

ಜೋಡಿಹೆಂಡರಂಜಿ –   ಜೋಡಿಹೆಂಡಿರು – ಬುದ್ಧಿ ಮತ್ತು ಬುದ್ಧಿ ತತ್ವ. ಉಮಾದೇವಿಯ ವಶವಾಗಿರುವ ಬುದ್ಧಿತತ್ವ ಹಗೂ ಗರುಡದೇವರ ವಶದಲ್ಲಿರುವ ಚಿತ್ತವೆಂದು ಕರೆಸಿಕೊಳ್ಳುವ ಬುದ್ಧಿ.  ಇವರಿಬ್ಬರೂ ಜೋಡಿ ಹೆಂಡರಿದ್ದಂತೆ.  ಈ ಬುದ್ಧಿ ಮತ್ತು ಚಿತ್ತ ಇವೆರದೂ ಓಡಿ ಹೋದರೆ ಇಂದ್ರ ಕಾಮರ ವಶವಾದ ಬಾಹ್ಯ ಮನಸ್ಸಿನ ಸ್ಥಿತಿ ಗೋಡೆಯೇ ಬಿದ್ದ ಮನೆಯಂತಿರುವುದು.  ಅರ್ಥಾತ್ – ದುಷ್ಟರ ಹಾವಳಿಗೆ ಒಳಗಾಗುವುದು.  ಅಥವಾ ಮಾಡು ಸಿಕ್ಕಲು ಮುಖ್ಯವಾದದ್ದು ಹರಿಸ್ಮರಣೆ ಮತ್ತು ತತ್ವಜ್ಞಾನ.  ಇವೆರಡೂ ಇಲ್ಲದಿದ್ದರೆ ಮಾಡು ಸಿಗದು.  ಇವೆರಡಕ್ಕೂ ಪ್ರತಿಬಂಧಕಗಳು ಹರಿಯ ವಿಸ್ಮರಣೆ ಮತ್ತು ಅನ್ಯಥಾ ಜ್ಞಾನ.  ಇವೆರಡೂ ಇರುವವರೆಗೂ ಈ ದೇಹವೆಂಬ ಗೋಡೆ ಸ್ಥಿರವೆಂದೇ ಭಾವನೆ.  ಇವರಿಬ್ಬಊ ಶಾಸ್ತ್ರ ಶ್ರವಣದಿಂದ ನಮ್ಮನ್ನು ಬಿಟ್ಟು ಹೋಗುವಾಗ, ನಮ್ಮ ದೇಹವೆಂಬ ಗೋಡೆಯೇ ಬಿದ್ದಿರುತ್ತದೆ.

ಎಚ್ಚರಗೊಳಲಿಲ್ಲ ಮನವೆ – ಭಗವಂತನ ಬಗ್ಯೆ ಎಚ್ಚರಗೊಳ್ಳದೆ ಸಾಂಸಾರಿಕ ಸುಖದಲ್ಲೇ ಕಾಲ ದೂಡುತ್ತೇವೆ.

ಮುಪು ಬಂದಿತಲ್ಲ ಪಾಯಸ ತಪ್ಪದೆ ಉಣಲಿಲ್ಲ –  ಹರಿನಾಮ ಸ್ಮರಣೆಯೇ ಪಾಯಸ.  ನಮಗೆ ಮುಪ್ಪು ಬಂದರೂ ಹರಿನಾಮ ಸ್ಮರಣೆಯೇ ಇಲ್ಲದೆ ಕಾಲ ಕಳೆಯುತ್ತೀವಿ.  ಸಾಧನ ಮಾಡಿದರೆ ಮಾತ್ರ ಮಾಡು ಸಿಗುತ್ತದೆ.

ತುಪ್ಪದೆ ಬಿಂದಿಗೆ – ತುಪ್ಪದ ಬಿಂದಿಗೆ ಎಂದರೆ ಸಾಧನ ಶರೀರ.    ಶಾಸ್ತ್ರಜನ್ಯವಾದ ತತ್ವ ನಿಶ್ಚಯ ಮತ್ತು ಸದುಪದೇಶ ಹೊಂದದೆ ಶರೀರವು ಭೂಮಿಗೆ ಭಾರವಾಗಿ ಬಿದ್ದಿತು.  ತತ್ವಜ್ಞಾನದ ದುರುಪಯೋಗವಾದಾಗ, ತುಪ್ಪದ ಬಿಂದಿಗೆ ತಿಪ್ಪೆಗೆ ಬಿದ್ದ ಹಾಗೆ.  ತಿಪ್ಪೆಗೆ ಬಿದ್ದ ತುಪ್ಪ ಎತ್ತಿಕೊಂಡರೆ ದುರ್ನಾಥ ತಪ್ಪಿದ್ದಲ್ಲ.

ಯೋಗವು ಬಂದಿತಲ್ಲ – ಸಾಧನ ಶರೀರವಿದು.  ಆದರೆ ಬದುಕು ಮಾತ್ರ ಪುಣ್ಯಪಾಪಗಳಿಗಾಗಿಯೇ ವಿಭಾಗವಾಯಿತು.  ಆ ಪುಣ್ಯ-ಪಾಪಗಳ ನಡುವು ಭೋಗಶಯನ ಶ್ರೀ ಪುರಂದರವಿಠಲನ್ನ ಮರೆತೇ ಜೀವನ ಹಾಳಾಯಿತು.

 

{Source : Sri Chaturvedi Vedavyasachar}

Leave a Reply

Your email address will not be published.

Sumadhwa Seva © 2022