ಶ್ರೀ ಪುರಂದರದಾಸರು
ವೈರಾಗ್ಯ ಪಡೆದಿದ್ದು
ಶ್ರೀ ಪುರಂದರದಾಸರು
ಪುಣ್ಯದಿನ – ಪುಷ್ಯ ಬಹುಳ ಅಮಾವಾಸ್ಯೆ
ಆಗರ್ಭ ಶ್ರೀಮಂತನಾಗಿದ್ದ ಶ್ರೀನಿವಾಸ ನಾಯಕ ರತ್ನವಜ್ರ ವ್ಯಾಪಾರಿಯಾಗಿದ್ದು ಯಾರಿಗೂ ಯಾವ ದಾನವನ್ನೂ ಮಾಡದೆ ತನ್ನ ತಿಜೋರಿಯ ತುಂಬಿಸುತ್ತಿದ್ದರು. ಅಂತಹ ಜಿಪುಣ ತನ್ನ ಸಕಲ ಆಸ್ತಿ ಪಾಸ್ತಿಯನ್ನೂ ತೃಣ ಸಮಾನವೆಂದು ಪರಿಗಣಿಸಿ ಸಂಸಾರದಲ್ಲಿ ವಿರಕ್ತಿ ಬಂದು ಮಧುಕರವೃತ್ತಿಯನ್ನು ಅನುಸರಿಸಿ ವ್ಯಾಸರಾಯರ ಬಳಿ ದಾಸ ದೀಕ್ಷೆಯ ಕೋರಿ “ಪುರಂದರ ವಿಠಲ” ಎಂಬ ಅಂಕಿತ ಪಡೆದು ಕರ್ನಾಟಕ ಸಂಗೀತ ಪಿತಾಮಹ ಎನಿಸಿ ಮೆರೆದ ಪುರಂದರದಾಸರು ಇಹಲೋಕವನ್ನು ತ್ಯಜಿಸಿದ ದಿನವೇ ಪುಷ್ಯ ಕೃಷ್ಣ ಅಮಾವಾಸ್ಯೆ.
ಪುರಂದರದಾಸರು ಜನಿಸಿದ್ದು ಮಹಾರಾಷ್ಟ್ರದ “ಪುರಂದರ ಗಡ”ದಲ್ಲಿ ಎಂದು ಪ್ರಸಿದ್ಧಿ. ಆದರೆ ಇತ್ತೀಚಿನ ಕೆಲವು ಸಂಶೋಧನೆಕಾರರು ಅವರ ಜನ್ಮಸ್ಥಳವನ್ನು
ತೀರ್ಥಹಳ್ಳಿ ತಾಲೂಕಿನ “ಆರಗ” ಎಂಬ ಊರು ಎಂದಿದ್ದಾರೆ.
ನವಕೋಟಿ ನಾರಾಯಣನೆಂದೇ ಪ್ರಸಿದ್ಧರು ಶ್ರೀನಿವಾಸ ನಾಯಕರು. ವಸಿಷ್ಠ ಗೋತ್ರದಲ್ಲಿ ವರದಪ್ಪ ನಾಯಕ ಎಂಬ ರತ್ನಪುಡಿ ವ್ಯಾಪಾರಿಯ ಮಗನಾಗಿ ಆಗರ್ಭ ಶ್ರೀಮಂತನಾಗಿ ಜನನ 1480ರಲ್ಲಿ. ಅವರ ಧರ್ಮಪತ್ನಿ ಸರಸ್ವತಿ ಬಾಯಿ ಆದರ್ಶ ಪತಿವ್ರತಾ ಸ್ತ್ರೀಯಾಗಿ ಇದ್ದರು. ಅವರಿಗೆ ನಾಲ್ಕು ಗಂಡು ಮಕ್ಕಳು. – ವರದಪ್ಪ, ಗುರುರಾಯ, ಅಭಿನವಪ್ಪ, ಮಧ್ವಪತಿ.
ನವಕೋಟಿ ನಾರಾಯಣ ದಾಸಶ್ರೇಷ್ಠರಾದರು :
ಶ್ರೀನಿವಾಸ ನಾಯಕರು ಎಲ್ಲವನ್ನೂ ತ್ಯಜಿಸಿ ದಾಸತ್ವ ದಲ್ಲೇ ಶ್ರೀಮಂತರಾದರು. ಶ್ರೀಹರಿ ಬಡ ಬ್ರಾಹ್ಮಣನ ವೇಷದಲ್ಲಿ ಒಮ್ಮೆ ಶ್ರೀನಿವಾಸನ ಅಂಗಡಿಗೆ ಬಂದು ತನ್ನ ಮಗನ ಮುಂಜಿಗೆ ಹಣ ಬೇಡಿದನಂತೆ. ಜಿಪುಣಾಗ್ರೇಸರ
ಎಂದೇ ಪ್ರಸಿದ್ಧನಾಗಿದ್ದ ಶ್ರೀನಿವಾಸ ನಾಯಕ ಪ್ರತಿ ದಿನವೂ ಮಾರನೆಯ ದಿನ ಬಾ ಎಂದು ಹೇಳುತ್ತಾ, ಕಾಲ ದೂಡುತ್ತಿರುತ್ತಾನೆ. ಹೀಗೇ ಸುಮಾರು ಆರು ತಿಂಗಳುಗಳ ಕಾಲ ಮುಂದೆ ಹಾಕಿದನಂತೆ. ಆ ಬ್ರಾಹ್ಮಣ ವೇಷದ ವಿಠಲನೂ ಬಿಡುತ್ತಿರಲಿಲ್ಲ, ನಿತ್ಯ ತಪ್ಪದೆ ಬರುತ್ತಿದ್ದ. ಕೊನೆಗೆ ಬ್ರಾಹ್ಮಣನ ಕಾಟ ತಡೆಯಲಾರದೆ ಒಂದು ಸವಕಲು ನಾಣ್ಯವನ್ನು ಕೊಟ್ಟನಂತೆ.
ಮಾರನೇ ದಿನ ಅದೇ ಬ್ರಾಹ್ಮಣ ವೇಷದ ವಿಠಲ ಶ್ರೀನಿವಾಸನಾಯಕನ ಮನೆಗೆ ಬಂದು ಸರಸ್ವತಿಯ ಬಳಿ ತನ್ನ ಮಗನ ಉಪನಯನದ ಬಗ್ಗೆ ಹೇಳಿ ಅವಳಿಂದ ಸಹಾಯ ಯಾಚಿಸುತ್ತಾನೆ. ಸರಸ್ವತಿ ಮರುಕದಿಂದ ತನ್ನ ಬಳಿ ಏನೂ ಇಲ್ಲ, ಪತಿಯ ಅನುಪಸ್ಥಿತಿಯಲ್ಲಿ, ಅಪ್ಪಣೆಯಿಲ್ಲದೆ, ಏನನ್ನೂ ಕೊಡುವ ಪರಿಸ್ಥಿತಿಯಲ್ಲಿಲ್ಲ ಎಂದು ಬೇಸರ ಪಡುತ್ತಾಳೆ. ಆಗ ಆ ಬ್ರಾಹ್ಮಣ ನಿನ್ನ ತವರಿನಲ್ಲಿ ನಿನಗೆ ಕೊಟ್ಟ ಮೂಗುತಿಯ ಮೇಲೆ ನಿನ್ನ ಅಧಿಕಾರವಿದೆ. ಅದನ್ನೇ ಕೊಡು ಎಂದಾಗ, ಅವನಿಗೆ ತನ್ನ ಮೂಗುತಿಯನ್ನು ತೆಗೆದುಕೊಟ್ಟಳಂತೆ.
ಆ ಬ್ರಾಹ್ಮಣನಾದರೋ ತಕ್ಷಣ ಮೂಗುತಿಯನ್ನು ಶ್ರೀನಿವಾಸನ ಅಂಗಡಿಗೇ ಒಯ್ದು ಅದನ್ನು ಅಡವಿಟ್ಟುಕೊಂಡು ಹಣ ಕೊಡುವಂತೆ ಕೇಳುತ್ತಾನೆ. ಶ್ರೀನಿವಾಸ ನಾಯಕ ಆ ಮೂಗುತಿಯನ್ನು ಗುರುತಿಸಿ, ಹಣಕ್ಕೆ ನಾಳೆ ಬರುವಂತೆ ಬ್ರಾಹ್ಮಣನಿಗೆ ಹೇಳಿ, ಅದನ್ನು ಪೆಟ್ಟಿಗೆಯಲ್ಲಿ ಭದ್ರವಾಗಿ ಇಟ್ಟು, ತಕ್ಷಣ ಮನೆಗೆ ಬಂದು ಪತ್ನಿಯ ಬಳಿ ಮೂಗುತಿಯನ್ನು ತೋರಿಸಲು ಹೇಳಿದನಂತೆ. ಹೆದರಿದ ಹೆಂಡತಿ ಸ್ನಾನ ಮಾಡುವಾಗ ತೆಗೆದಿಟ್ಟಿದ್ದೆ, ತರುತ್ತೇನೆಂದು ಒಳಗೆ ಹೋಗಿ ಚಿಂತಾಕ್ರಾಂತಳಾದಳು. ಇನ್ನು ತನ್ನ ಪತಿಗೆ ಸುಳ್ಳೂ ಹೇಳಲಾರದೆ, ನಿಜವನ್ನೂ ಹೇಳಲಾರದೆ, ಕೊನೆಗೆ ವಿಷ ಕುಡಿಯುವ ಪ್ರಯತ್ನ ನಡೆಸಿದಾಗ ಅವಳ ವಿಷದ ಬಟ್ಟಲಿನೊಳಕ್ಕೆ ಮೇಲಿನಿಂದ ಮೂಗುತಿ ಬಿದ್ದಿತಂತೆ. ಅವಳಿಗೆ ಆಶ್ಚರ್ಯ ಮತ್ತು ಸಂತೋಷವೂ ಆಯಿತು.
ಅದನ್ನು ತಂದು ತನ್ನ ಪತಿದೇವರಿಗೆ ಕೊಡುತ್ತಾಳೆ. ಈಗ ಆ ಆಶ್ಚರ್ಯ ಮತ್ತು ಕಾತರದಿಂದ ಅಂಗಡಿಗೆ ಹಿಂದಿರುಗಿ ಬಂದ ನಾಯಕರು ಡಬ್ಬಿಯನ್ನು ತೆಗೆದು ನೋಡಿದರೆ ಅಲ್ಲಿ ಇಟ್ಟಿದ್ದ ಮೂಗುತಿ ಇರಲಿಲ್ಲ.
ನಿತ್ಯ ತನ್ನ ಅಂಗಡಿಗೆ ಬರುತ್ತಿದ್ದ ಆ ಬ್ರಾಹ್ಮಣ ಮತ್ತೆ ಬರುತ್ತೇನೆ ಎಂದವನು ಹಿಂತಿರುಗಲಿಲ್ಲ. ಶ್ರೀನಿವಾಸ ನಾಯಕನಾದರೋ ಮನೆಯಲ್ಲಿ ಬಂದು ಪತ್ನಿಯನ್ನು ನಿಜ ಸಂಗತಿ ಹೇಳೆನಲು ಆಕೆ ಎಲ್ಲವನ್ನೂ ವಿವರವಾಗಿ ಹೇಳಿದಳು. ಆಗ ಶ್ರೀನಿವಾಸ ನಾಯಕರಿಗೆ ಜ್ಞಾನೋದಯವಾಯಿತು. ಅವನಿಗೆ ಬಂದ ಬ್ರಾಹ್ಮಣ ಬೇರೆ ಯಾರೂ ಅಲ್ಲ, ತನ್ನನ್ನು ಪರೀಕ್ಷಿಸಲು ಸ್ವತಃ ನಾರಾಯಣನೇ ಬ್ರಾಹ್ಮಣ ವೇಷದಲ್ಲಿ ಬಂದಿದ್ದನೆಂದು ಅರಿತು, ತನ್ನ ಬಗ್ಗೆ ತಾನೇ ನಾಚಿಕೆ ಪಟ್ಟುಕೊಂಡ ಶ್ರೀನಿವಾಸ, ಎಲ್ಲಾ ಶ್ರೀಮಂತಿಕೆಯನ್ನು ತೊರೆದು ವೈರಾಗ್ಯದ ಹೊಸ್ತಿಲೇರಿದ.
“ಆದದ್ದೆಲ್ಲ ಒಳಿತೆ ಆಯಿತು ನಮ್ಮ ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು” ಎಂದು ಹಾಡಿದರು
ಶ್ರೀ ವಿಜಯದಾಸರು ಪುರಂದರದಾಸರ ಜೀವನ ಚರಿತ್ರೆಯನ್ನು ಹೀಗೆ ದೇವರನಾಮ ಮೂಲಕ ಚಿತ್ರಿಸಿದ್ದಾರೆ.
ಬೇಸರದೆ ಭಜಿಸಿರೋ ಪುರಂದರ ದಾಸರಾಯರ
ಶ್ರೀಶ ನಿಮ್ಮನು ಉದಾಶೀನ ಮಾಡದೆ
ಪೋಷಿಸುವ ಸಂತೋಷದಿಂದಲಿ ! ಪ !
ಪುರಂದರಗಡಾದ ಒಳಗೆ ಹಿರಿಯ ಸಾವುಕಾರನೆನಸಿ
ಪರಿಪರಿಯ ಸೌಖ್ಯಗಳ ಸುರಿಸುತ್ತ
ಇರುತಿರಲು ನರಹರಿ ತ್ವರಿತದಿಂ ಬ್ರಾಹ್ಮಣನಾಗುತ್ತ
ಕರುಣದಲಿ ಅವರುದ್ಧ್ದರಿಸಲೋಸುಗ ಮನೆಗೆ
ಪೋಗುತ್ತ ಯಜಮಾನ ಕಂಡು
ಜರಿದು ಬ್ರಾಹ್ಮಣನ್ಹೊರಗೆ ಹಾಕಲು
ಮರುದಿವಸ ಮತ್ಹೋಗಿ ನಿಂತ |೧|
ಭಾರಿಭಾರಿಗೆ ಸಾವುಕಾರನ
ಮೋರೆಗ್ಹೊತ್ತಿ ಮೇರೆಯಿಲ್ಲದೆ
ಆರು ತಿಂಗಳು ಬೆನ್ನು ಬೀಳುತ್ತ ನಾಯಕರು ಈತನ
ಆರು ಅಟ್ಯಾರೆಂದು ಬೈಯುತ್ತ ಬೇಸತ್ತು ಎರಡು
ಹೇರು ರೊಕ್ಕಾ ಮುಂದೆ ಸುರಿಯುತ್ತ ಅದರೊಳಗೊಂದು
ಡ್ಡಾರಿಸಿಕೋ ಎಂದು ಹೇಳಲು ನಾರಾಯಣ ಬಿಟ್ಹೋದ ನಗುತ |೨|
ಹಿತ್ತಲಾ ಬಾಗಿಲಿಗೆ ಹೋಗಿ ಮತ್ತೆ ಆತನ ಮಡದಿಗಾಗಿ
ಹತ್ತಿ ಬಿದ್ದನು ವಿತ್ತ ತಾ ಎನುತ ತನ ಮಗನ ಮುಂಜ್ಯೆಂ
ದೆತ್ತಿ ಕರದಿಂ ಬಾಯಿ ತೆರೆಯುತ್ತ ಆ ಪ್ರಾಣಿ ನುಡಿದಳು
ಎತ್ತಣ ದ್ರವ್ಯವು ತನಗೆನುತ ನಿನ್ನ ಮೂಗಿನ
ಮುತ್ತಿನ ಮೂಗುತಿಯ ಕೊಡು ಎನೆ
ಉತ್ತುಮಳು ತೆಗೆದಿತ್ತಳಾಕ್ಷಣ |೩|
ಜೋಕೆಯಿಂ ಮೂಗುತಿಯನೊಯ್ದು
ಆಕಿ ಗಂಡನ ಕಣ್ಣೆದುರಿಗೆ ಹಾಕಿದನು ತಾ
ಪಾಕಿ ಕೊಡೆಯೆನುತ ಅದು ಕಂಡು ಇದು ನ
ಮ್ಮಾಕಿದೆಂದು ಈತ ನುಡಿಯುತ್ತ ಅನ್ಯರದು ಯಿಂಥಾ
ದ್ಯಾಕೆ ಯಿರಬಾರದೆನ್ನುತ್ತಾ ಬೆಲೆ ಹೇಳು ಎನಲು
ನಾಕು ನೂರು (ಪಾಕಿ) ಶುಭ್ರ ಕೊಡು
ಎಂದಾಕೆ ಹೋದನು ತಿರುಗಿ ಬಾರದೆ |೪|
ತಿರುಗಿ ಬ್ರಾಹ್ಮಣ ಬಾರದಿರಲು ಕರೆದು ತನ್ನ ಹೆಂಡತಿಯ
ಬರಿಯ ನಾಶಿಕವನ್ನೆ ಕಂಡನು ಮೂಗುತಿಯ ಎಲ್ಲೆನೆ
ಮುರಿದಿಹುದುಯೆಂದಾಕೆ ಹೇಳಲು ಒಳಗ್ಹೋಗಿ ನೀ ತಾರದಿರೆ
ಅರೆವೆ ನಿನ್ನಯ ಜೀವವೆಂದನು ವಿಷಕೊಂಬೆನೆಂದು
ಕರದಿ ಬಟ್ಟಲು ಧರಿಸಲಾಕ್ಷಣ
ತ್ವರಿತದಲಿ ಹರಿ ಅದರೊಳಾಕಿದ |೫|
ಹರುಷದಿಂ ಮೂಗುತಿಯನ್ನು
ಪುರುಷನಾ ಕೈಕೊಳಗೆಯಿಡಲು
ತರಿಸಿ ತನ್ನಲ್ಲಿದ್ದ ಪೆಟ್ಟಿಗೆಯಾ ಅದು ಕಾಣದಿರಲು
ಬೆರಗಾಗಿ ನೋಡಿದನು ಮಡದಿಯ ನಿಜ ಪೇಳುಯೆನಲು
ಅರಸಿ ಪೇಳ್ದಳು ಕೊಟ್ಟ ಸುದ್ದಿಯಾ ಅಭಿಮಾನಕಂಜಿ
ಅರದು ವಿಷವನು ಕುಡಿವೆನಲು ಸಿರಿರಮಣಾ ಕೊಟ್ಟ ಖರಿಯಾ |೬|
ದೇವ ದೇವನು ಎನ್ನ ಮನದ
ಭಾವವನ್ನು ತಿಳಿವುದಕೆ ತಾ ವೃದ್ಧ ಬ್ರಾಹ್ಮಣನಾಗಿ
ಬಂದಿದ್ದ ಪರಿಪಕ್ವವೆನಗೆ
ನ್ನಾವ ಕಾಲಕೆ ಆಗಬೇಕೆಂದ ವೈರಾಗ್ಯಭಾವದಿ
ಜೀವಿಸಿಕೊಂಡಿರುವುದೇ ಛಂದ ಹೀಗೆನುತ ಮನೆ ಧನ
ಕೋವಿದರ ಕರೆದಿತ್ತ ಹರುಷದಿ
ಕಾವನಯ್ಯನ ದಾಸನಾದ |೭|
ಲಕ್ಷ್ಮಿಪತಿಯ ಪಾದದಲ್ಲಿ ಲಕ್ಷ್ಯವಿಟ್ಟು ವ್ಯಾಸರಾಯರ
ಶಿಕ್ಷೆಯಿಂದಲಿ ಅಂಕಿತವ ಕೊಳುತ ತಿರಿಪಾದ ಐದು
ಲಕ್ಷಪದ ಸುಳಾದಿ ಪೇಳುತ್ತ ಪ್ರತಿದಿವಸದಲ್ಲು
ಪಕ್ಷಿವಾಹನ ನಾಟ್ಯವಾಡುತ ಅಪರೋಕ್ಷ ಪುಟ್ಟಲು
ಮೋಕ್ಷಸ್ಥಾನಕ್ಕೆ ಕರೆದೊಯ್ದು ಅ
ಧೋಕ್ಷಜನು ಸಂರಕ್ಷಿಸಿದ |೮|
ಘೊರ ನರಕದೊಳಗೆ ಬಿದ್ದಾ
ಪಾರ ಜನರು ಚೀರುತಿರಲು
ದ್ಧಾರ ಮಾಡಿದ ನಾರದಾರಿವರು ಅವ
ತಾರ ಮಾಡಿ ಧಾರುಣಿಯಲಿ ಮತ್ತೆ ಬಂದರು ಸರುವೋತ್ತಮ
ಹರಿ ನಾರಾಯಣನೆ ಎಂದು ಸಾರಿದರು ಹೀಗೆಂದು ತಿಳಿಯಲು
ಮಾರ ಜನಕ ವಿಜಯವಿಠ್ಠಲ ಆರಿಗಾದರು ಒಲಿವ ಕಾಣಿರೊ |೯|