ಕೃಷ್ಣನ ಷಣ್ಮಹಿಷಿಯರು

 

 

ಶ್ರೀ ಕೃಷ್ಣ ಪರಮಾತ್ಮನಿಗೆ  ಹದಿನಾರು ಸಾವಿರಕ್ಕೂ ಹೆಚ್ಚು ಪತ್ನಿಯರಿದ್ದರು.  ಅದರಲ್ಲಿ ಅಷ್ಟ ಮಹಾಮಹಿಷಿಯರು ರುಕ್ಮಿಣೀ, ಸತ್ಯಭಾಮ, ನೀಲ, ಮಿತ್ರವೃಂದ, ಜಾಂಬವತಿ, ಭದ್ರ, ಲಕ್ಷ್ಮಣ, ಕಾಲಿಂದೀ ಸೇರಿದ್ದಾರೆ. 


ರುಕ್ಮಿಣೀ ಸತ್ಯಭಾಮ ದೇವಿಯರು ಸಾಕ್ಷಾತ್ ಲಕ್ಷ್ಮೀದೇವಿಯ “ಶ್ರೀ ” ಮತ್ತು “ಭೂ” ರೂಪಗಳು.  ಉಳಿದ ಆರು ಕೃಷ್ಣಪತ್ನಿಯರು ಗರುಡ ಶೇಷ ರುದ್ರರಿಗಿಂತ ಕಡಿಮೆ ಕಕ್ಷೆಯಲ್ಲಿ ಬರುವವರು.
ನೀಲಾದೇವಿ –  ಯಶೋದೆಯ ಅಣ್ಣನಾದ ಕುಂಭಕ ಎಂಬ ಹೆಸರುಳ್ಳ ಗೋಪಾಲನ ಮಗಳಾಗಿ “ನೀಲಾ” ಎಂಬ ನಾಮಧೇಯದಿಂದ ಹುಟ್ಟಿದ್ದಳು.  ಅವಳು ಹಿಂದಿನ ಜನ್ಮದಲ್ಲೇ ಪರಮಾತ್ಮನನ್ನೇ ಪತಿಯಾಗಿ ಪಡೆಯಬೇಕೆಂದು ತಿರುಪತಿಯಲ್ಲಿ ಕಪಿಲತೀರ್ಥದಲ್ಲಿ , ಪಾಪನಾಶಿನಿಯಲ್ಲಿ ಸ್ನಾನಗೈದು ,  ನಾರಾಯಣ ದೇವರನ್ನು ಕುರಿತು ತಪಗೈದಳು.   ನಾನು ನಿನ್ನ ಪತ್ನಿಯಾಗಬೇಕೆಂದು  ಕೋರಿದಳು.  ಕೃಷ್ಣನು ತನ್ನ ಉಪನಯನ ಪೂರ್ವದಲ್ಲೇ  ಏಳು ದೈತ್ಯ  ವೃಷಭಗಳನ್ನು ಕೊಂದು ನೀಲಾಳನ್ನು ವಿವಾಹವಾದನು.  ಆ ಕುಂಭಕನೇ ನಗ್ನಜಿತ್ ರಾಜನಾಗಿ ಜನಿಸಿದನು.  ಅ ಕನ್ಯೆಯೇ ಮತ್ತೊಮ್ಮೆ ನೀಲಾದೇವಿಯೆಂಬ ಹೆಸರಿನಲ್ಲಿ ಇನ್ನೊಂದು ರೂಪದಲ್ಲಿ ಹುಟ್ಟಿದಳು.    ಆ ನೀಲಾದೇವಿಯ ಸ್ವಯಂವರದಲ್ಲಿ ಮತ್ತೊಮ್ಮೆ ರುದ್ರದೇವರ ವರಬಲದಿಂದ ಹುಟ್ಟಿದ್ದ ಏಳು ದೈತ್ಯ ವೃಷಭಗಳನ್ನು ಕೊಂದು ನೀಲಾದೇವಿಯನ್ನು ವಿವಾಹವಾದನು.  ಆಗ ಕುಂಭಕನ ಮಗಳಾದ ನೀಲಾದೇವಿಯೂ ರಾಜಪುತ್ರಿಯಾದ ನೀಲಾದೇವಿಯಲ್ಲಿ ಪ್ರವೇಶಿಸಿ ಒಂದೇ ರೂಪವುಳ್ಳವಳಾದಳು .
 
ಭದ್ರಾದೇವಿ –  ಇವಳು ಹಿಂದಿನ ಜನ್ಮದಲ್ಲಿ ನಳನ ಮಗಳಾಗಿದ್ದಳು. ಅವಳೂ ಭಗವಂತನೇ ತನ್ನ ಪತ್ನಿಯಾಗಬೇಕೆಂದು ಕೋರಿದ್ದಳು.  ಅವಳು ಭಗವಂತನ ನಾಮಸ್ಮರಣೆ ಮಾಡಿ ಪ್ರಾಣ ಬಿಟ್ಟಳು.  ಅವಳು ಮುಂದಿನ ಜನ್ಮದಲ್ಲಿ ವಸುದೇವನ ತಂಗಿಯಾದ ಕೈಕೇಯಿಯಲ್ಲಿ “ಭದ್ರಾ” ಎಂಬ ಹೆಸರಿಂದ ಹುಟ್ಟಿದಳು.   ಮತ್ತು ಶ್ರೀ ಕೃಷ್ಣನನ್ನು ವಿವಾಹವಾದಳು.
 
ಮಿತ್ರವಿಂದಾದೇವಿ –   ಮಿತ್ರವಿಂದೆಯು ಹಿಂದಿನ ಜನ್ಮದಲ್ಲಿ ಅಗ್ನಿಷ್ಪಾತ್ತ ಎಂಬ ಪಿತೃದೇವತೆಯ ಮಗಳಾಗಿ ಜನಿಸಿ, “ಮಿತ್ರ” ಎಂಬ ಹೆಸರಿನ ಭಗವಂತನ ಹೊಂದಲು ಸಾತ್ವಿಕ ಪುರಾಣಗಳನ್ನು ಅನವರತ ಕೇಳಿ ಭಗವತ್ಕಥಾಶ್ರವಣದ ಫಲವಾಗಿ ಮುಂದೆ ವಸುದೇವನ ತಂಗಿಯಾದ ಸುಮಿತ್ರೆಯ ಮಗಳಾಗಿ “ಮಿತ್ರವಿಂದೆ” ಎಂಬ ಹೆಸರಿನಿಂದ ಜನಿಸಿ, ಸ್ವಯಂವರದಲ್ಲಿ ಕೃಷ್ಣನ ಕೊರಳಲ್ಲಿ ಮಾಲೆಯನ್ನು ಹಾಕಿ ವಿವಾಹವಾದಳು.
 
ಕಾಳಿಂದೀದೇವಿ –  ಇವಳು ಸೂರ್ಯ ಪುತ್ರಿ, ಯಮುನೆಯ ತಂಗಿ. ಇವಳೂ ಕೃಷ್ಣನನ್ನೇ ವಿವಾಹವಾಗಬಯಸಿ ಯಮುನೆಯ ತೀರದಲ್ಲಿ ತಪಸ್ಸು ಮಾಡುತ್ತಿದ್ದಳು. ಅದೇ ಸಮಯದಲ್ಲಿ ಕೃಷ್ಣಾರ್ಜುನರು ಬೇಟೆಗಾಗಿ ಯಮುನಾತೀರಕ್ಕೆ ಬಂದರು. ಅಲ್ಲಿ ತಪಸ್ಸು ಮಾಡುತ್ತಿದ್ದ ಅ ಕನ್ಯೆಯನ್ನು ಅರ್ಜುನನು ಏಕೆ ತಪಸ್ಸು ಮಾಡುತ್ತಿರುವೆ ಎನ್ನಲು ಅವಳು ಕೃಷ್ಣನ ವಿವಾಹವಾಗುವ ಬಯಕೆಯನ್ನು ಹೇಳಿದಳು.  ಅವಳ ಅನುಗ್ರಹಿಸಲು ಕೃಷ್ಣನು ಕಾಲಿಂದಿಯನ್ನು ವಿವಾಹವಾದಳು.
 
ಲಕ್ಷಣಾದೇವಿ –  ಮದ್ರದೇಶದ ರಾಜನ ಮಗಳಾಗಿ ಜನಿಸಿ, ಅವಳ ಸ್ವಯಂವರದಲ್ಲಿ ಕೃಷ್ಣನು ಮತ್ಸ್ಯಯಂತ್ರವನ್ನು ಭೇದಿಸಿ, ಯುದ್ಧಕ್ಕೆ ಬಂದ ಎಲ್ಲಾ ರಾಜರುಗಳನ್ನೂ ಗೆದ್ದು ಲಕ್ಷಣಾದೇವಿಯನ್ನು ವಿವಾಹವಾಗಿ ದ್ವಾರಕಾ ಪಟ್ಟಣಕ್ಕೆ ಕರೆದುಕೊಂಡು ಹೋದನು.
 
ಜಾಂಬವತೀದೇವಿ –  ಇವಳ ನಿಜವಾದ ಹೆಸರು “ರೋಹಿಣಿ”.  ಜಾಂಬವಂತನ ಮಗಳಾದ್ದರಿಂದ “ಜಾಂಬವತಿ”.   ಸ್ಯಮಂತಕಮಣಿಯನ್ನರಸಿ ಬಂದ ಕೃಷ್ಣನು ಜಾಂಬವಂತನೊಂದಿಗೆ ಹದಿನೆಂಟು ದಿನ ಯುದ್ಧ ಮಾಡಿ, ಅವನ ಪರಾಕ್ರಮವನ್ನು ಜಗತ್ತಿಗೆ ತೋರಿಸಿ, ನಂತರ ತನ್ನ ರಾಮರೂಪವನ್ನು ತೋರಿಸಿ, ಸಂತಸಗೊಂಡ ಜಾಂಭವಂತ ತನ್ನ ಮಗಳಾದ ಜಾಂಬವತಿಯನ್ನು ಕೊಟ್ಟು ವಿವಾಹ ಮಾಡಿದನು.
 
ಜಾಂಬವತಿಯು ಉಳಿದ ಷಣ್ಮಹಿಷಿಯರಿಗಿಂತ ಶ್ರೇಷ್ಟಳು. ಎಲ್ಲಾ ಷಣ್ಮಹಿಷಿಯರಲ್ಲಿ ರಮಾದೇವಿಯರ ಸನ್ನಿಧಾನ ಇರುವ ಸಂದರ್ಭದಲ್ಲಿ ಮಾತ್ರ ಕೃಷ್ಣನು ಅವರನ್ನು ಸೇರುವನು
Sumadhwa Seva © 2022