ಕೃಷ್ಣಾವತಾರ ಚಿಂತನೆ

ತಮದ್ಭುತಂ ಬಾಲಕಮಂಬುಜೇಕ್ಷಣಂ                          ಚತುರ್ಭುಜಂ ಶಂಖಚಕ್ರಗದಾದ್ಯುದಾಯುಧಂ !

ಶ್ರೀವತ್ಸಲಕ್ಷ್ಮಂ ಗಲಶೋಭಿಕೌಸ್ತುಭಂ                            ಪೀತಾಂಬರಂ ಸಾಂದ್ರಪಯೋದಸೌಭಗಂ ||

(ಭಾಗವತ)

ಶ್ರೀಹರಿ ಕೃಷ್ಣಾವತಾರದ ರೂಪದಲ್ಲೇ ಸೂಕ್ಷ್ಮವಾಗಿ ತನ್ನ ವಿಶ್ವರೂಪವನ್ನು ತೋರಿಸಿದ್ದಾನೆ.   ಕೃಷ್ಣ ಅವತರಿಸಿದಾಗ ಪ್ರಾಕೃತ ಶಿಶುವಿನ ಯಾವುದೇ ಲಕ್ಷಣವೂ ಇರಲಿಲ್ಲ.   ಅಪ್ರಾಕೃತ ಶರೀರಿಯಾದ ಅವನು ಹುಟ್ಟಿನಲ್ಲೇ ಚತುರ್ಭುಜ, ಶಂಖಚಕ್ರಾದಿ ಆಯುಧಗಳು, ಎದೆಯಲ್ಲಿ ಶ್ರೀವತ್ಸ ಲಾಂಛನ, ಕಂಠದಲ್ಲಿ ಕೌಸ್ತುಭ, ಪೀತಾಂಬರಧರ,  ವಜ್ರ ವೈಢೂರ್ಯಾದಿ ನವರತ್ನ ಖಚಿತ ಕಿರೀಟ ಕುಂಡಲಿಗಳು, ಸರ್ವಾಯವಗಳಲ್ಲೂ ಆಭರಣಗಳು. ಇವೆಲ್ಲವ ಧರಿಸಿ ಜನಿಸಿದ ಕೃಷ್ಣ ತಾನು ಯಾರ ಮಗನೂ ಅಲ್ಲ ಎಂದು ನಿರೂಪಿಸಿದ.

ಜನಿಸಿದ ಮಗುವಿಗೆ ಶಂಖಚಕ್ರಾದಿ ಆಯುಧಗಳು, ಶ್ರೀವತ್ಸ , ಪೀತಾಂಬರ ಇದೆಲ್ಲ ತಂದೆಯ ರೇತತ್ಸಿನಿಂದ ಬರಲು ಸಾಧ್ಯವೇ.  ಶ್ರೀಕೃಷ್ಣನದ್ದು ಹುಟ್ಟಲ್ಲ ಪ್ರಾದುರ್ಭಾವವೆಂದು ಇದರಿಂದಲೇ ತಿಳಿಯುತ್ತದೆ.   ದೇವಕಿಯೇ ಹೇಳುತ್ತಾಳೆ “ನೀನು ನನ್ನ ಮಗನಲ್ಲ. ನೀನು ಅವ್ಯಕ್ತ, ಆದ್ಯ, ಜ್ಞಾನಸ್ವರೂಪ, ಪ್ರಾಕೃತ ಗುಣರಹಿತ, ನಿರ್ವಿಕಾರ,  ಸಾಕ್ಷಾತ್ ವಿಷ್ಣುವೇ ಆಗಿರುವಿ”.

 

ಜಾತ: ಕಂಸವಧಾರ್ಥಾಯ ಭೂಭಾರೋತ್ತಾರಣಾಯ ಚ |
ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ |
ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ |

ಶ್ರೀ ಕೃಷ್ಣ ಪರಮಾತ್ಮ ಜನಿಸಿದ್ದು ಭೂದೇವಿಯ ಪ್ರಾರ್ಥನೆಯಂತೆ.  ತನ್ನ ಮೇಲೆ ದೈತ್ಯರು, ರಾಕ್ಷಸರು, ವಂಚಕರು ಎಲ್ಲಾ ಸೇರಿ ಭೂಭಾರ ವಾಗಿರುವುದನ್ನು ಸಹಿಸಲಾರದೆ ಭೂದೇವಿಯು ಎಲ್ಲಾ ದೇವತೆ ಗಳೊಂದಿಗೆ ಪರಮಾತ್ಮನ ಕೋರಿದ್ದಾಗ ಅವರ ಸಂಕಷ್ಟಕ್ಕೆ ಓಗೊಟ್ಟು ಅವತರಿಸಿದ ರೂಪವೇ “ಕೃಷ್ಣಾವತಾರ”.
ಅವನ ಅವತಾರದ ಕೆಲವು ಕಾರಣಗಳು :-
ಅ. ದುಷ್ಟ ಕಂಸ ಮತ್ತವನ ಪರಿವಾರದ ವಧೆ.
ಆ. ಭೂಭಾರಹರಣ
ಇ.  ಕೌರವರ ವಿನಾಶ
ಈ. ಪಾಂಡವರ ಹಿತರಕ್ಷಣಾ
ಉ. ಧರ್ಮಸಂಸ್ಥಾಪನ 
ಊ. ದೈತ್ಯ ಸಂಹಾರ 

 

ಕೃಷ್ಣ ಅವತಾರ ಮಾಡಲು ಆಯ್ದುಕೊಂಡಿದ್ದು ರಾತ್ರಿ ಕಾಲ.  ಆ ಹೊತ್ತಿನಲ್ಲಿ ನಿಶಾಚರರು ಅಂದರೆ ರಾಕ್ಷಸರ ವ್ಯವಹಾರ ಕಾಲ. ಸದಾ ಅಲ್ಲಿ ಕಾವಲಿರುತ್ತಿದ್ದ ಕಂಸನ ಭೃತ್ಯರು ಆಗ ನಿದ್ರಾವಶರಾದರು.  ಸೆರೆಮನೆಯ ಬಾಗಿಲುಗಳೆಲ್ಲವೂ ಬೀಗವಿದ್ದರೂ ಇದ್ದಕ್ಕಿದ್ದಂತೆ ತೆರೆದವು.

ಕೃಷ್ಣ ಪ್ರಾದುರ್ಭಾವವಾದ ಸ್ವಲ್ಪ ಸಮಯದ ನಂತರ ವಸುದೇವನಿಗೆ ಹೇಳುತ್ತಾನೆ ” ನೀನು ನನ್ನನ್ನು ನಂದಗೋಕುಲಕ್ಕೆ ಕರೆದುಕೊಂಡು ಹೋಗಿ, ಅಲ್ಲೇ ನನ್ನನ್ನು ಬಿಟ್ಟು ಅಲ್ಲಿ ಯಶೋದೆಯಲ್ಲಿ ಜನಿಸಿರುವ ದುರ್ಗೆಯನ್ನು ಇಲ್ಲಿಗೆ ಕರೆದುತಾ”

ಅದರಂತೆ ವಸುದೇವನು ಬಾಲಕೃಷ್ಣನನ್ನು ಕರೆದುಕೊಂಡು ಹೊರಟಾಗ ಕಂಸನ ದ್ವಾರಪಾಲಕರು ಬಾಹ್ಯಪ್ರಜ್ಞೆಯೇ ಇಲ್ಲದೆ ನಿದ್ರಾಪರವಶರಾಗಿರಲು, ಕಬ್ಬಿಣದ ಸರಪಳಿಗಳು ಕಳಚಿ, ಬಾಗಿಲುಗಳೆಲ್ಲ ತಮ್ಮಷ್ಟಕ್ಕೆ ತಾವೇ ತೆರೆಯಲು, ಮಳೆಯಲ್ಲಿ ಆದಿಶೇಷನು ತನ್ನ ಹೆಡೆಗಳಿಂದ ಛತ್ರಿಯಂತೆ ಬರಲು, ಯಮುನೆಯು ದಾರಿಮಾಡಿಕೊಡಲು, ನಂದಗೋಕುಲ ತಲುಪಿ  ಶ್ರೀ ಕೃಷ್ಣನ ಅಲ್ಲಿ  ಯಶೋದೆಯ ಬಳಿ ಮಲಗಿಸಿ, ಅಲ್ಲಿ ಅವತರಿಸಿದ್ದ ದುರ್ಗೆಯನ್ನು ಎತ್ತಿಕೊಂಡು ಪುನಃ: ಮಥುರೆಗೆ ಬಂದು ಕಾರಾಗೃಹಕ್ಕೆ ತಲುಪಿ ದೇವಕಿಯ ಕೈಲಿ ಆ ಹೆಣ್ಣು ಮಗುವನ್ನು ಒಪ್ಪಿಸಿದನು.

ಇಲ್ಲಿ ಕಂಸನಿಗೆ ಹೆದರಿ ಕೃಷ್ಣ ನಂದಗೋಕುಲಕ್ಕೆ ಹೊರಟನೇ ?  ವಾದಿರಾಜರು ತಮ್ಮ ರುಕ್ಮಿಣೀ ವಿಜಯದಲ್ಲಿ ನಿರೂಪಿಸುತ್ತಾರೆ.    ಕೃಷ್ಣ ಅವತರಿಸಿದ ವಿಷಯ ಕಂಸನಿಗೆ ತಲುಪಿದಾಗ ಅವನು ಕೃಷ್ಣನನ್ನು ಕೊಲ್ಲಲು ಬಂದು ತಾನೇ ಹತನಾಗುವನು.  ಆದರೆ ಕೃಷ್ಣಾವತಾರದ ಹಿನ್ನೆಲೆ ಕೇವಲ ಕಂಸಸಂಹಾರಕ್ಕಷ್ಟೇ ಸೀಮಿತವಲ್ಲ.   “ವಿನಾಶಾಯ ಚ ದುಷ್ಕೃತಾಂ” ಎಂಬಂತೆ ಎಲ್ಲಾ ದುಷ್ಟರ ಸಂಹಾರ.  ಕಂಸನ ಭೃತ್ಯ ದುಷ್ಟರೆಲ್ಲರ ಸಂಹಾರ.  ಇದರಿಂದ ಕಂಸನಿಗೂ ತನ್ನ ಬಂಧು ಬಾಂಧವರ ಸಾವನ್ನು ನೋಡುವ ಅವಕಾಶ.  ಮತ್ತು ಅಲ್ಲಿ ಅವತರಿಸಿರುವ ದುರ್ಗೆಯನ್ನು ನೋಡಲು ಹೊರಟನು.

 

ಪೂತನಾ ಜೀವಿತಾಹಾರೀ – ಶ್ರೀಕೃಷ್ಣ ಮೊದಲು ಸಂಹರಿಸಿದ್ದು ಹೆಣ್ಣನ್ನೇ.  ರಾಮಾವತಾರದಲ್ಲೂ ಮೊದಲು ಸಂಹರಿಸಿದ್ದು ಹೆಣ್ಣನ್ನೇ.

ಕಂಸನಿಂದ ಪ್ರೇರಿತಳಾದ ಪೂತನೆ ತನ್ನ ರಾಕ್ಷಸೀ ರೂಪವ ಮರೆಸಿ ಸುಂದರವಾದ ಸ್ತ್ರೀ ರೂಪ ಮಾಯೆಯಿಂದ ಧರಿಸಿ  ಎಲ್ಲಾ ಮಕ್ಕಳನ್ನೂ ಸಂಹರಿಸುತ್ತಾ , ನಂದಗೋಪನ ಮನೆಯಲ್ಲಿ ತೊಟ್ಟಿಲಲ್ಲಿರುವ ಕೃಷ್ಣನ ಎತ್ತಿಕೊಂಡು ವಿಷಪೂರಿತ ಸ್ತನ್ಯಪಾನ ಮಾಡಿಸಲು ಕೃಷ್ಣನು ಎರಡೂ ಕೈಗಳಿಂದ ಗಟ್ಟಿಯಾಗಿ ಅವಳ ಸ್ತನಗಳನ್ನು ಹಿಡಿದುಕೊಂಡು ಪಾನಮಾಡಿ ಅವಳ ಪ್ರಾಣವನ್ನೇ ತೆಗೆಯಲು, ಆ ಪೂತನಿಯು ತನ್ನ ನಿಜರೂಪದಿ ಸಾಯಲು, ಆ ದೇಹ ಬಿದ್ದ ರಭಸಕ್ಕೆ ಹನ್ನೆರಡು ಮೈಲಿ ದೂರವಿರುವ ಮರಗಳೆಲ್ಲ ಮುರಿದವು.  ಅವಳ ದೇಹದ ಕೋರೆ ಹಲ್ಲುಗಳು ರಥದ ಮರದಂತೆಯೂ, ಅವಳ ಮೂಗಿನ ದ್ವಾರಗಳು ಪರ್ವತದ ಗುಹೆಯಂತೂ, ಅವಳೆರಡೂ ಸ್ತನಗಳೂ ಬಂಡೆಕಲ್ಲಿನಂತೂ,  ಹೀಗೇ ಅತಿ ಕ್ರೂರವಾಗಿ ಕಂಡಳು.
ಪೂತನಿಯಲ್ಲಿ ಜೀವದ್ವಯಾವೇಷವಿದ್ದು , ಅವಳಲ್ಲಿದ್ದ ಊರ್ವಶಿಗೆ ಸ್ವರ್ಗವಾಗಿದ್ದು, ತಾಟಕಿಗೆ ತಮಸ್ಸಾಯಿತು.
ಶಕಟಾಸುರ ಭಂಜನ :
ಪೂತನಿಯ ಅಂತ್ಯವಾದ ನಂತರ ಕಂಸನು ತನ್ನ ಇನ್ನೊಬ್ಬ ಭೃತ್ಯ ಶಕಟನನ್ನು ಕಳಿಸಿದನು.
ಕೃಷ್ಣನಿಗೆ ನಾಲ್ಕು ತಿಂಗಳು, ಅಂದು ಕೃಷ್ಣನ ಜನ್ಮನಕ್ಷತ್ರ.  ಬಹಿನಿಷ್ಕ್ರಮಣೋತ್ಸವಕ್ಕೆ ಸಿದ್ಧವಾಗಿದೆ.  ಯಶೋದೆಯು ಮಗುವಿಗೆ ಮಂಗಳಸ್ನಾನ ಮಾಡಿಸಿ, ಬಂದುಬಾಂಧವರ ಉಪಚಾರದಲ್ಲಿ ಮಗ್ನಳಾಗಿ, ಮಗುವನ್ನು ಒಂದು ಬಂಡಿಯ ಕೆಳಗೆ ಮಲಗಿಸಿದಳು.  ಕೃಷ್ಣನಾದರೋ ಸ್ತನ್ಯಪಾನ ಬೇಕೆಂದು ಕೇಳಿದಾಗ, ಜನಗಳ ನಡುವೆಯಿದ್ದ ಯಶೋದೆಗೆ ಅದು ಕೇಳಿಸದಿದ್ದಾಗ, ಕೃಷ್ಣ ತನ್ನ ಕಾಲನ್ನು ಎತ್ತಿ ಆಡಿಸಲು, ಚಕ್ರವು ಮುರಿದು   ಬಂಡೀ ರೂಪದಲ್ಲಿದ್ದ ಶಕಟಾಸುರನು ಸತ್ತನು.
ವಸುದೇವಸುತಂ ದೇವಂ ಕಂಸಚಾಣೂರಮರ್ದನಮ್ |
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ !!
  • ವಸುದೇವನ ಮಗನಾಗಿಯೂ, ದೇವತಾ ಸ್ವರೂಪನಾಗಿಯೂ, ಕಂಸ ಚಾಣೂರ ಮೊದಲಾದವರನ್ನು ಕೊಂದವನಾಗಿಯೂ, ದೇವಕಿಗೆ  ಪರಮಾನಂದವನ್ನೂ ನೀಡುವ, ಜಗತ್ತಿಗೆಲ್ಲಾ ಧರ್ಮವನ್ನು ತಿಳಿಸುವವನಾಗಿಯೂ, ಜಗದ್ಗುರುವೂ  ಆಗಿರುವ ಕೃಷ್ಣನಿಗೆ ವಂದಿಸುತ್ತೇನೆ..
ಶ್ರೀಕೃಷ್ಣನು ತನ್ನ ಗುರುವಾಗಿ ಸಾಂದೀಪಿನಾಚಾರ್ಯರನ್ನು ಆರಿಸಿಕೊಂಡು 64 ಕಲೆಗಳಲ್ಲಿ ಪ್ರವೀಣನಾಗಿದ್ದನು,  ಅವನಿಗೆ 16108 ಪತ್ನಿಯರಿದ್ದರು ಮತ್ತು ಅವರಿಂದ ಕೃಷ್ಣನಿಗೆ   161080 ಗಂಡು ಮಕ್ಕಳಿದ್ದರು ಅರ್ಥಾತ್ ಆ ಎಲ್ಲಾ ಗಂಡುಮಕ್ಕಳಿಗೂ ತಲಾ ಹತ್ತು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳಿದ್ದಳು. ಅಷ್ಟೂ ಜನ ಪತ್ನಿಯರೊಂದಿಗೂ ಬೇರೆ ಬೇರೆ ರೂಪ ಪಡೆದು ಕೃಷ್ಣ ಇದ್ದ.    ಒಮ್ಮೆ ನಾರದರಿಗೆ ಕೃಷ್ಣನಿಗೆ ಇಷ್ಟು ಜನ ಪತ್ನಿಯೊಂದಿಗೆ ಹೇಗೆ ರಮಣ ಮಾಡುತ್ತಾನೆಂಬ ಕುತೂಹಲ.  ತನ್ನ ಅಷ್ಟೂ  ಪತ್ನಿಯರಿಗೂ ಪ್ರತ್ಯೇಕ ಪ್ರತ್ಯೇಕ ಅರಮನೆ ಕಟ್ಟಿಸಿದ್ಧ.   ಪರೀಕ್ಷಾ  ಮಾಡಲು  ಬಂದರು.  ಒಂದು ಮನೆಯಲ್ಲಿ ಕೃಷ್ಣ ಪತ್ನಿಯೊಡನೆ ಸರಸಸಲ್ಲಾಪದಲ್ಲಿದ್ದ.  ಇನ್ನೊಂದೆಡೆ ಮಕ್ಕಳೊಂದಿಗೆ ಆಟವಾಡುತ್ತಿದ್ದ, ಮತ್ತೊಂದೆಡೆ ದೇವರ ಪೂಜೆ ಮಾಡುತ್ತಿದ್ದ.

ಕೃಷ್ಣಾರ್ಪಣಮಸ್ತು

 

Sumadhwa Seva © 2022