Vaikunta Ekadashi

“Vaikunta Ekadashi ವೈಕುಂಠ ಏಕಾದಶಿ”

*ವೈಕುಂಠ ಏಕಾದಶಿ 02.01.2023*

*ಮುಕ್ಕೋಟಿ ದ್ವಾದಶಿ 03.01.2023*

ಧನುರ್ಮಾಸದಲ್ಲಿ ಬರುವ ಅಂದರೆ ಸಾಮಾನ್ಯವಾಗಿ ಮಾರ್ಗಶಿರ ಪುಷ್ಯ ಮಾಸದ ಶುಕ್ಲಪಕ್ಷದ ಏಕಾದಶಿಯಂದು ವೈಕುಂಠ ಏಕಾದಶಿ ಆಚರಿಸಲಾಗುತ್ತದೆ. ಅಂದು ವೈಕುಂಠದ ಉತ್ತರ ಬಾಗಿಲ ಮೂಲಕ ನಾರಾಯಣ ಮುಕ್ಕೋಟಿ ದೇವತೆಗಳಿಗೆ ದರ್ಶನ ನೀಡುತ್ತಾನೆ ಎಂಬುದು ಪ್ರತೀತಿ. ಅದೇ ಕಾರಣಕ್ಕೆ ವೈಷ್ಣವ ಆಲಯಗಳಲ್ಲಿ ವಿಶೇಷವಾಗಿ ವೈಕುಂಠ ದ್ವಾರ ರೂಪಿಸಿ, ಭಕ್ತರಿಗೆ ಪ್ರವೇಶ ಕಲ್ಪಿಸಿರುತ್ತಾರೆ

*ಏಕಾದಶಿಗೆ ಸಂಬಂಧಿಸಿದ ಕೃಷ್ಣಕಥೆ ಭಾಗವತದಲ್ಲಿ ಬಂದಿದೆ*

ನಂದಗೋಪನು ಶ್ರೀಕೃಷ್ಣನ ಸನ್ನಿಧಾನದಲ್ಲಿ ಏಕಾದಶಿ ವ್ರತವನ್ನು ತಪ್ಪದೇ ಆಚರಿಸುತ್ತಿದ್ದ.  ಒಮ್ಮೆ ಏಕಾದಶಿ ವ್ರತಮಾಡಿ ಮರುದಿನ ಅಲ್ಪದ್ವಾದಶಿ ಇದ್ದುದರಿಂದ ನಸುಕಿನಲ್ಲಯೇ ಯಮುನಾ ನದಿಯಲ್ಲಿ ಸ್ನಾನಕ್ಕೆ ಇಳಿಯುತ್ತಾನೆ.

ಆ ಸಮಯ ಇನ್ನೂ ರಾಕ್ಷಸರ ಸಂಚಾರಕಾಲವಾಗಿತ್ತು.  ರಾತ್ರಿ ಕಾಲದಲ್ಲಿ ನದೀ ಸ್ನಾನಕ್ಕೆ ಹೋಗಬಾರದು.  ಆ ತಪ್ಪಿಗೆ ಶಿಕ್ಷೆಯಾಗಿ  ವರುಣನ ಭೃತ್ಯನೊಬ್ಬ ನಂದಗೋಪನನ್ನು ಎಳೆದುಕೊಂಡು ವರುಣ ಲೋಕಕ್ಕೆ ಬರುತ್ತಾನೆ. ಇತ್ತ ನಂದಗೋಪ ಸ್ನಾನಕ್ಕೆಂದು ನದಿಗೆ ಹೋದ ನಂದಗೋಪ ಬಾರದೇ ಇದ್ದುದರಿಂದ ಗೋಪಾಲಕರೆಲ್ಲ ಚಿಂತಿತರಾಗಿ ಕೃಷ್ಣ ಬಲರಾಮರಿಗೆ ತಿಳಿಸುತ್ತಾರೆ.

ಶ್ರೀಕೃಷ್ಣನು ವಿಷಯ ತಿಳಿದವನಾಗಿ ಎಲ್ಲ ಗೋಪಾಲಕರಿಗೆ ಅಭಯವನ್ನು ಕೊಡುತ್ತಾನೆ. ಕೃಷ್ಣಾವತಾರದಲ್ಲಿ ತಂದೆಯಾದ ನಂದಗೋಪನನ್ನು ಕರೆತರುವದಾಗಿ ಗೋಪಾಲಕರಿಗೆ ತಿಳಿಸಿ ವರುಣಲೋಕಕ್ಕೆ ಹೋಗುತ್ತಾನೆ.

ವರುಣಲೋಕದಲ್ಲಿ ಶ್ರೀಕೃಷ್ಣನನ್ನು ನೋಡಿದ ವರುಣ ಸಂತೋಷದಿಂದ ಬರಮಾಡಿಕೊಳ್ಳುತ್ತಾನೆ, ತನ್ನ ಸೇವಕನಿಂದ ಆದ ಪ್ರಮಾದವನ್ನು ಕ್ಷಮಿಸುವಂತೆ ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತಾನೆ. ಶ್ರೀಕೃಷ್ಣ ವರುಣನಿಗೆ ಆಶೀರ್ವದಿಸಿ ನಂದಗೋಪನೊಂದಿಗೆ ಯಮುನಾತೀರಕ್ಕೆ ಬರುತ್ತಾನೆ.

ಗೋಪಾಲಕರಿಗೆ ನಂದಗೋಪನು ವರುಣಲೋಕದಲ್ಲಿ ಕಂಡ ಶ್ರೀಕೃಷ್ಣನ ನಿಜರೂಪವನ್ನು ಮತ್ತು ಅಲ್ಲಿ ದೊರೆತ ಭವ್ಯ ಸ್ವಾಗತವನ್ನು ವರ್ಣಿಸುತ್ತಿದ್ದರೆ ಎಲ್ಲ ಗೋಪಾಲಕರು ಭಕ್ತಿಯುಕ್ತರಾಗಿ ಆಲಿಸುತ್ತಿದ್ದರು. ನಮಗೆ ಶ್ರೀಮನ್ನಾರಾಯಣನ ದಿವ್ಯದರ್ಶನದ ಭಾಗ್ಯ ಇಲ್ಲವಾಯಿತಲ್ಲ ಎಂದು ಪರಿತಪಿಸುತ್ತಿದ್ದರು.

ಇದನ್ನು ತಿಳಿದ ಶ್ರೀಕೃಷ್ಣ ಎಲ್ಲ ಗೋಪಾಲಕರಿಗೆ ಯಮುನಾತೀರ್ಥದ ಬ್ರಹ್ಮಕುಂಡದಲ್ಲಿ ಸ್ನಾನ ಮಾಡಿ ಬರುವಂತೆ ತಿಳಿಸಿದ. ಗೋಪಾಲಕರು ಸ್ನಾನಮಾಡಿ ಬರುತ್ತಿದ್ದಂತೆ ವೈಕುಂಠಲೋಕ ಗೋಚರಿಸಿತು. ಶ್ರೀಕೃಷ್ಣನ ದಿವ್ಯವಾದ ಅನೇಕ ರೂಪಗಳು ಅವರಿಗೆ ಕಂಡವು.

ಮುಕ್ಕೋಟಿ ದ್ವಾದಶಿ ಅಂದರೇನು?  

ಧನುರ್ಮಾಸದಲ್ಲಿ ಬರುವ ಶುದ್ಧ ದ್ವಾದಶಿಯಂದು ಮುಕ್ಕೋಟಿ ದ್ವಾದಶಿ ಆಚರಿಸುತ್ತಾರೆ.  ಏಕಾದಶಿಯ ಮರು ದಿನ ದ್ವಾದಶಿ. ಮೂವತ್ತ್ಮೂರು ಕೋಟಿ ದೇವತೆಗಳು ಅಂದು ತಿರುಮಲದ ದೇವಾಲಯ ಪಕ್ಕದಲ್ಲಿರುವ ಸ್ವಾಮಿ ಪುಷ್ಕರಣಿಯಲ್ಲಿ ತೀರ್ಥ ಸ್ನಾನ ಮಾಡುತ್ತಾರೆ. ಆದ್ದರಿಂದ ಮುಕ್ಕೋಟಿ ದ್ವಾದಶಿ ಎಂಬ ಹೆಸರಿದೆ.

ಯಾವ ಕ್ಷೇತ್ರದಲ್ಲಿ ವಿಷ್ಣುವಿನ ದರ್ಶನ ಮಾಡಿದರೆ ಶ್ರೇಷ್ಠ?

ಸ್ವಯಂವ್ಯಕ್ತ ಕ್ಷೇತ್ರಗಳಲ್ಲಿ ಮಹಾವಿಷ್ಣುವಿನ ದರ್ಶನ  ಮಾಡುವುದು ಶ್ರೇಷ್ಠ.  ಅವುಗಳು – ತಿರುಮಲ, ಶ್ರೀಮುಷ್ಣಂ, ತೋತಾದ್ರಿ,  ಶ್ರೀರಂಗ, ಇತ್ಯಾದಿ.    ಇಲ್ಲಿ ಮಾಡಲಾಗದಿದ್ದರೆ ವೈಷ್ಣವ ಸಂಪ್ರದಾಯದ ದೇವಸ್ಥಾನ ಗಳಲ್ಲಿ ಕೂಡ ಮಾಡಬಹುದು.

ಪ್ರಶ್ನೋತ್ತರ ವೈಕುಂಠ ಏಕಾದಶಿ ಬಗ್ಗೆ :

 

. ವೈಕುಂಠ ಏಕಾದಶಿ ಎಂದು ಆಚರಿಸಲಾಗುತ್ತದೆ?

*ಉತ್ತರ* – ಧನುರ್ಮಾಸದಲ್ಲಿ ಬರುವ ಶುಕ್ಲ ಪಕ್ಷದ ಏಕಾದಶಿ (ಸಾಮಾನ್ಯವಾಗಿ ಮಾರ್ಗಶಿರ ಅಥವಾ ಪುಷ್ಯ ಮಾಸದಲ್ಲಿ) ಆಚರಿಸಲಾಗುತ್ತದೆ.

೨. ವೈಕುಂಠ ಏಕಾದಶಿಯಂದು ಉಪವಾಸ ಮಾಡಬೇಕಾ ? ಫಲಾಹಾರ ಮಾಡಬಹುದಾ

*ಉತ್ತರ* – ಎಲ್ಲಾ ಏಕಾದಶಿಯಂದೂ ಉಪವಾಸ ಮಾಡಬೇಕು.
ಅಶಕ್ತರು, ಬಸುರಿ, ಬಾಣಂತಿಯರು, ಎಂಟು ವರ್ಷದ ಒಳಗಿನವರು ಮತ್ತು ಎಂಭತ್ತು ದಾಟಿದವರು ಫಲಾಹಾರ ಮಾಡಬಹುದು.  ಬೇರೆ ಕಾರಣಗಳಿಂದ ಉಪವಾಸ ಮಾಡಲಾಗದವರು ಹಣ್ಣೂ ಸಜ್ಜಿಗೆ  ಮುುಂತಾದ ಉಪ್ಪು ರಹಿತ ಪದಾರ್ಥ  ತಿನ್ನಬಾರದು.

೩. ಕೆಲವು ದೇವಸ್ಥಾನಗಳಲ್ಲಿ ನೈವೇದ್ಯ ರೂಪದಲ್ಲಿ ಪೊಂಗಲ್, ಹುಗ್ಗಿ, ಚಿತ್ರಾನ್ನ ಇತ್ಯಾದಿ ಕೊಡುತ್ತಾರಲ್ಲ ಅದನ್ನು ತಿನ್ನಬಹುದೆ?

*ಉತ್ತರ* – ತಿನ್ನಬಾರದು. *ಮಾಧ್ವ ಸಂಪ್ರದಾಯದ* ಯಾವ ದೇವಸ್ಥಾನದಲ್ಲೂ ಕೊಡುವುದಿಲ್ಲ. ಅಕಸ್ಮಾತ್ ಅವರೇನಾದರೂ ಕೊಟ್ಟರೆ ಅವರಿಗೆ ಕೊಡಬಾರದೆಂದು ಹೇಳಿ.

೪. ಏಕಾದಶಿಯಂದು ತೀರ್ಥ ಎಷ್ಟು ಸಲ ತೆಗೆದುಕೊಳ್ಳಬೇಕು.

*ಉತ್ತರ* – ನಿರ್ಮಾಲ್ಯ ಒಂದು ಸಾರೀ ಮತ್ತು ತೀರ್ಥ ಒಂದು ಸಾರಿ ಮಾತ್ರ.

೫. ಮನೆಯಲ್ಲಿ ತೀರ್ಥ ತೆಗೆದುಕೊಂಡವರು ದೇವಸ್ಥಾನದಲ್ಲೂ ತೆಗೆದುಕೊಳ್ಳಬಹುದಾ?

*ಉತ್ತರ* – ಮನೆಯಲ್ಲಿ ತೆಗೆದುಕೊಂಡಿದ್ದರೆ ಏಕಾದಶಿಯಂದು ಅಲ್ಲಿ ಸ್ವೀಕರಿಸಬೇಡಿ.

೬. ವೈಕುಂಠ ಏಕಾದಶಿಯಂದು ಉಪವಾಸ ಮಾಡಿದರೆ ಏನು ಫಲ?

*ಉತ್ತರ* – ವೈಕುಂಠ ಏಕಾದಶಿಯಂದು ಉಪವಾಸ ಮಾಡಿದರೆ ಒಂದು ವರ್ಷದ ೨೪ ಏಕಾದಶಿ ಉಪವಾಸ ಮಾಡಿದ ಫಲ. ಪ್ರತಿ ಏಕಾದಶಿಯೂ ಉಪವಾಸ ಮಾಡಲೇಬೇಕು.

7. ದಿನತ್ರಯ ಎಂದರೇನು?
ಉತ್ತರ – ದಶಮಿ, ಏಕಾದಶಿ, ದ್ವಾದಶಿ ಈ ಮೂರೂ ದಿನಗಳನ್ನು ದಿನತ್ರಯವೆನ್ನುತ್ತಾರೆ.

8. ಏಕಾದಶಿ ಶ್ರಾದ್ಧ ಏಕಾದಶಿಯಂದೇ ಮಾಡಬಹುದಾ?
ಉತ್ತರ – ಏಕಾದಶಿಯಂದು ಶ್ರಾದ್ಧ ಮಾಡಬಾರದು. ದಶಮೀ ಅಥವಾ ದ್ವಾದಶಿ ಮಾಡಬೇಕು (ನಿಮ್ಮ ಮಠದ ಪಂಚಾಂಗದಲ್ಲಿ ಶ್ರಾದ್ಧ ಕಾಲಂ ನೋಡಿ)

9. ಏಕಾದಶಿ ಆಚರಿಸಿದ ಕೆಲವು ಭಾಗವತೋತ್ತಮರ ಹೆಸರು ತಿಳಿಸಿ.

*ಉತ್ತರ* – ಭೀಮಸೇನ, ದೂರ್ವಾಸರು, ಅಂಬರೀಷ, ರುಕ್ಮಾಂಗದ ಮುಂತಾದವರು.

10. ದೂರ್ವಾಸರು ಅಂಬರೀಷನಿಗಿಂತ ದೊಡ್ಡವರಾದರೂ ಅವರು ಏಕಾದಶಿಯ ಅನುಸರಿಸಲಿಲ್ಲವೇಕೆ?
ಉತ್ತರ – ದೂರ್ವಾಸರು ರುದ್ರದೇವರ ಅವತಾರ. ಪರಮ ವೈಷ್ಣವರು. ಆದರೆ ಅವರು ಅಂಬರೀಷನ ಏಕಾದಶಿ ಮಹತ್ವ ತಿಳಿಸಬೇಕಿತ್ತು. ಅದಕ್ಕೇ ಪರಮಾತ್ಮನ ಪ್ರೇರಣಾನುಸಾರ ಹಾಗೆ ಮಾಡಿರುತ್ತಾರೆ .

11. ಏಕಾದಶಿ ಅಭಿಮಾನಿ ದೇವತೆ ಯಾರು?
ದಶಮಿ, ಏಕಾದಶಿ ಮತ್ತು ದ್ವಾದಶಿಗೆ ಶ್ರೀಹರಿಯೇ ಅಭಿಮಾನಿ ದೇವತೆ.

Sumadhwa Seva © 2022