Buddavatara

click for “Buddavatara” in kannada

Please note there are two buddhaas.   The one who preached Shoonya Vaada and the one who preached the correct version for the sajjanaas.     After Dwapara yuga, devataas had gone back to their respective lokaas.    Sri Vedavyasa Devaru was invisible.

Then Tripuraas who were killed by Rudradevaru were born again in the disguise of Vaidikaas and as such they had access to Shastras.

One among these Tripuraas was again born as the son of Shuddodhana.  This Shuddodhana got a baby and he was performing vedic jata karma to the baby.   At the same time, Srihari made that Baby to disappear and he himself came to that place.

The new child (Srihari) who replaced Siddartha did the upadesha which were against Vedaas.  To further convince them about the same, he told devataas to throw weapons on the child.    He swallowed all the weapons including Rudradevara Trishula and sat on Vishnu Chakra.   Then he started preaching “Shunya vaada”  (The same shunyavaada is represented by Advaitees in a different manner).    As Srihari’s budha roopa sat on the Vishnu Chakra, they thought that this child superior to Vishnu and followed his preachings.

Please note :  The preachings by Srihari’s Buddha roopa is only for asura jana mohanaartha.

Some of the teachings by Buddhavatara roopi paramathma with dual meanings, one for the asuraas and one for the sajjanaas

Veda: apramanam

meaning vedaas are not having any pramanam   (for the asuraas)

meaning “a”karachavachya paramathma’s is pramana as per veda (for sajjanaas)

Shoonyam

The world is shoonya (for asuraas)

Sham – sukha;  u + u = of high relevance + svaabhivika, shoo – That god

Neeyate – niyamana ( Srihari does the niyamana of the entire world and he has sukha, which is svaabhivika) (This is for sajjanaas).

abhaava –  The entire world is brought up by akaara vaachya paramathma

asat – The entire world is destroyed by akaara vachya paramathma

kShaNika – Srihari’s word are prameya siddha

The words Shoonya, abhaava, asat, kshaNika were misrepresented to asuraas and represented to sajjanaas in a different way.

 

ತತ:ಕಲೌ ಸಂಪ್ರವೃತ್ತೇ ಸಮ್ಮೋಹಾಯ ಸುರದ್ವಿಷಾಮ್ |
ಬುದ್ಧೋ ನಾಮ್ನಾ ಜಿನಸುತಃ ಕೀಕಟೇಷು ಭವಿಷ್ಯತಿ ||

ಭಾಗವತ  1-3-24

ಇದು ಒಂದು ಮೋಹಕ ಅವತಾರ. ಅರ್ಹತೆ ಇಲ್ಲದ ತಾಮಸ ಪ್ರವೃತ್ತಿಯವರು ತಾವು ಸನ್ಮಾರ್ಗ ಹಿಡಿದು ಉನ್ನತಿಗೆ ಏರಲು ಪ್ರಯತ್ನಿಸಿದಾಗ ಅವರನ್ನು ಹಾದಿ ತಪ್ಪಿಸಿ ಅವರಿಗೆ ಉಚಿತವಾದ ಮಾರ್ಗಕ್ಕೆ ಅವರನ್ನು ಹಿಂತಿರುಗುಸುವುದಕ್ಕಾಗಿ ತಳೆದ ಅವತಾರ ಈ “ಬುದ್ಧಾವತಾರ”.  ಈ ಅವತಾರದ ಬಗ್ಗೆ ಇಂದಿಗೂ ಪಂಡಿತರ ನಡುವೆ ಗೊಂದಲಗಳಿವೆ. ಹೆಚ್ಚಿನ ಪಂಡಿತರು ಬುದ್ಧಾವತಾರಗಳು ಎರಡಿವೆ ಎಂದು ಹೇಳುತ್ತಾರೆ. ಒಂದು ಐತಿಹಾಸಿಕ ಬುದ್ಧಾವತಾರ; ಇನ್ನೊಂದು ಪೌರಾಣಿಕ ಬುದ್ಧಾವತಾರ.
ಈ ಗೊಂದಲಕ್ಕೆ ಕಾರಣವೆಂದರೆ, ಮೇಲೆ ಉಲ್ಲೇಖಿಸಲಾದ ಭಾಗವತದಲ್ಲಿನ ಶ್ಲೋಕ. ಶ್ಲೋಕದಲ್ಲಿ ಕಲೌ ಸಂಪ್ರವೃತ್ತೇ ಎಂದಿದೆ. ಅಂದರೆ ಕಲಿಯುಗದಲ್ಲಿ ಆದ ಅವತಾರ ಎಂದು ಅರ್ಥ ಮಾಡುತ್ತಾರೆ. ಕಲಿಯುಗದಲ್ಲಿ ಭಗವಂತನಿಗೆ ಅವತಾರವಿಲ್ಲವಾದುದರಿಂದ ಈ ಐತಿಹಾಸಿಕ ಬುದ್ಧ ಭಗವಂತನ ಅವತಾರವಲ್ಲ ಎಂಬುದು ಒಂದು.

ಇನ್ನು ಎರಡನೆಯದಾಗಿ, ಬುದ್ಧೋನಾಮ್ನ ಜಿನಸುತಃ ಎಂದಿದೆ. (ಈಗ ಮುದ್ರಿತವಾಗಿರುವ ಕೆಲವು ಭಾಗವತ ಪುಸ್ತಕಗಳಲ್ಲಿ, ಜನಸುತಃ ಎಂದು ಮುದ್ರಿಸಿರುತ್ತಾರೆ. ಆದರೆ ಮೂಲಪಾಠ ಜಿನಸುತಃ ಎಂಬುದಾಗಿರುತ್ತದೆ.) ಅಂದರೆ ಜಿನ ಎಂಬುವವರ ಮಗನಾಗಿ ಬುದ್ಧ ಹುಟ್ಟಿದ. ಆದರೆ ಐತಿಹಾಸಿಕ ಬುದ್ಧನ ತಂದೆಯ ಹೆಸರು ಶುದ್ದೋದನ – ಜಿನ ಅಲ್ಲ. ಆದುದರಿಂದ ಈ ಬುದ್ಧ ಬೇರೆ ಎಂಬ ವಾದ.  ಮೂರನೆಯದಾಗಿ ಕೀಕಟೇಷು ಭವಿಷ್ಯತಿ ಎಂಬುದಾಗಿ ಇದೆ. ಕೀಕಟ ಎಂದರೆ ಈಗಿನ ಬಿಹಾರ ಪ್ರಾಂತ. ಕೀಕಟ ಎಂಬುದರ ಸರಿಯಾದ ಅರ್ಥವೆಂದರೆ, ವೈದಿಕಸಂಸ್ಕಾರವಿಲ್ಲದ ಜನರು ವಾಸ ಮಾಡುತ್ತಿರುವ ಪ್ರದೇಶ ಎಂದಾಗುತ್ತದೆ. ಬುದ್ಧ ಹುಟ್ಟಿದ್ದು ನೇಪಾಳದಲ್ಲಿ, ಬಿಹಾರದಲ್ಲಿ ಅಲ್ಲ. ಆದುದರಿಂದ ಈ ಬುದ್ಧ ಬೇರೆ ಎಂಬ ವಾದ. ಇನ್ನು ಕೊನೆಯದಾಗಿ ಬುದ್ಧ ಬತ್ತಲೆಯಾಗಿದ್ದ ಎಂಬ ವಿಷಯ. ಐತಿಹಾಸಿಕ ಬುದ್ಧ ಬತ್ತಲೆಯಾದ ಉಲ್ಲೇಖವಿಲ್ಲ. ಆದುದರಿಂದ ಈ ಬುದ್ಧ ಬೇರೆ ಎಂದು ವಾದಿಸುತ್ತಾರೆ. ಹೀಗಾಗಿ ಗೊಂದಲವೋ ಗೊಂದಲ.
ಆದರೆ ಶ್ರೀಮದಾಚಾರ್ಯರು ಭಾಗವತ ತಾತ್ಪರ್ಯನಿರ್ಣಯದಲ್ಲಿ ಈ ಇಬ್ಬರೂ ಬುದ್ಧರು ಬೇರೆ ಬೇರೆಯಲ್ಲ, ಒಂದೇ ಎಂಬ ವಿಷಯ ಸ್ಪಷ್ಟಪಡಿಸಿರುತ್ತಾರೆ. ಭಗವಂತನಿಗೆ ಕಲಿಯುಗದಲ್ಲಿ ಅವತಾರವಿಲ್ಲ ಎಂಬುದು ನಿಜ. ಆದರೆ ನಿಜವಾಗಿ ಕಲಿಯುಗ ಪ್ರಾರಂಭವೇ ಅಗಿಲ್ಲ. ಈಗ ನಾವು ಸಂಧಿಕಾಲದಲ್ಲಿದ್ದೇವೆ. ಬುದ್ಧನ ಅವತಾರವಾಗಿದ್ದು ದ್ವಾಪರ-ಕಲಿಯುಗಗಳ ಸಂಧಿಯಲ್ಲಿ. ಕಲಿಯುಗದಲ್ಲಿ ಅಲ್ಲ. ಮಹಾಭಾರತ ಯುದ್ಧದಲ್ಲಿ ದುರ್ಯೋಧನ ತೊಡೆಮುರಿದುಕೊಂಡು ಬಿದ್ದ ದಿನದಿಂದಲೇ ಕಲಿಯುಗ ಪ್ರಾರಂಭವಾಗುತ್ತದೆ ಎಂದು ಹೇಳುವುದಾದರೂ, ಒಂದು ಯುಗ ಮುಗಿದು ಇನ್ನೊಂದು ಯುಗ ಪ್ರಾರಂಭದ ಮಧ್ಯದಲ್ಲಿ ಸಂಧಿಕಾಲವಿರುತ್ತದೆ. ಹೀಗಾಗಿ ಅವನು ಸತ್ತ ನಂತರವೂ ಕೃಷ್ಣ ಇದೇ ಭೂಮಿಯ ಮೇಲೆ 36 ವರ್ಷಗಳ ಕಾಲ ಇದ್ದು ನಂತರ ಅವತಾರ ಸಮಾಪ್ತಿ ಮಾಡಿದ. ಹೀಗಾಗಿ ಬುದ್ಧನ ಅವತಾರ ವಾಗಿದ್ದು ಕಲಿಯುಗದಲ್ಲಿ ಅಲ್ಲ – ದ್ವಾಪರ-ಕಲಿ ಯುಗಗಳ ಸಂಧಿಯಲ್ಲಿ. ಎರಡನೆಯದಾಗಿ ಜಿನಸುತಃ  ಎಂಬ ಶಬ್ದ. ಜಿನ ಎನ್ನುವುದು ಹೆಸರಲ್ಲ. ಜೈನಧರ್ಮ ಮತಾವಲಂಬಿಗಳನ್ನು ಜಿನರು ಎಂದು ಕರೆಯುತ್ತಾರೆ. ಬುದ್ಧನ ತಂದೆ ಜೈನಮತ ಪ್ರವರ್ತಕನಾಗಿದ್ದುದರಿಂದ ಅವನನ್ನು ಜಿನ ಎಂದು ಉಲ್ಲೇಖಿಸಲಾಗಿದೆ. ಅವನ ಹೆಸರು ಶುದ್ದೋಧನ ಎಂದೇ ಇತ್ತು. ಹುಟ್ಟಿದ್ದು ನೇಪಾಳದಲ್ಲಿಯಾದರೂ ಅವನು ಬುದ್ಧನಾಗಿದ್ದು ಬಿಹಾರದ ಬುದ್ಧಗಯಾದಲ್ಲಿ, ಬೋಧಿವೃಕ್ಷದ ಕೆಳಗೆ. ಇನ್ನು ಬುದ್ಧ ಬತ್ತಲೆಯಾದ ವಿಷಯ ನಾವು ವಾಸ ಮಾಡುವ ಈ ಭೂಲೋಕಕ್ಕೆ ಸಂಬಂಧಿಸಿದ್ದಲ್ಲ. ಅದು ಅದೃಶ್ಯ ಲೋಕಕ್ಕೆ  ಸಂಬಂಧಿಸಿದ ವಿಷಯ. ತಮ್ಮ ಪತ್ನಿಯರ ಪಾತಿವ್ರತ್ಯದ ಪ್ರಭಾವದಿಂದ ತ್ರಿಪುರಾಸುರರು ಮದೋನ್ಮತ್ತರಾಗಿ ಮೆರೆಯುತ್ತಿದ್ದಾಗ, ಅವರ ಪತ್ನಿಯರ ಪಾತಿವ್ರತ್ಯವನ್ನು  ಕೆಡಿಸಲೆಂದೇ  ಬುದ್ಧ ಅವರ ಮುಂದೆ ಬತ್ತಲಾಗಿ ಬಹಳ ಮೋಹಕನಾಗಿ ನಿಂತು ಅವರ ಪಾತಿವ್ರತ್ಯವನ್ನು ಭಂಗಗೊಳಿಸಿ ತ್ರಿಪುರಾಸುರರ ಸಂಹಾರಕ್ಕೆ ಕಾರಣವಾದ ಈ ಘಟನೆ ನಡೆದಿದ್ದು ಅದೃಶ್ಯ ಲೋಕದಲ್ಲಿ. ಹೀಗಾಗಿ ಈ ಘಟನೆ ಐತಿಹಾಸಿಕವಾಗಿ ದಾಖಲೆಯಾಗುವ ಸಾಧ್ಯತೆಗಳಿರಲಿಲ್ಲ. ಈ ಕಾರಣಗಳಿಗಾಗಿ ಸ್ಪಷ್ಟವಾಗುವುದೇನೆಂದರೆ, ಐತಿಹಾಸಿಕ ಬುದ್ಧ ಹಾಗೂ ಪೌರಾಣಿಕ ಬುದ್ಧ ಬೇರೆ ಬೇರೆಯಲ್ಲ. ಇಬ್ಬರೂ ಒಂದೇ ಎಂದು. ಹೀಗಾಗಿ ಯಾವುದೇ ಗೊಂದಲವಿಲ್ಲ.

 

ತ್ರಿಪುರಾಸುರನ ಪತ್ನಿಯರು ತ್ರಿಪುರಗಳಲ್ಲಿದ್ದ ಜಲಾಶಯಗಳಲ್ಲಿ ಜಲಕ್ರೀಡೆ ಆಡುತ್ತಿದ್ದಾಗ, ಜಲಾಶಯದ ನೀರು ಒಣಗಿಸಿ ಅವರ ಪತ್ನಿಯರ ಮನಸ್ಸನ್ನು ತಾನು ದಿಗಂಬರನಾಗಿ ಒಲಿಸಿ ಪಾತಿವ್ರತ್ಯ ಕೆಡಿಸಿ, ಅವರ ಪತಿವ್ರತೆಯರು ಎಂಬ ಅಭಿಮಾನ ಹೋಗಲಾಡಿಸಿ, ಆ ತ್ರಿಪುರಾಸುರಾದಿ ದೈತ್ಯರನ್ನು ಕೊಂದಿದ್ದು.

 

ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ 

ಕಾಯ್ದ ಸುಜನರನು ||೩೦||
ತ್ರಿಪುರವ ಹಾನಿಗೈಸಿದ ನಿಪುಣ – ಶ್ರೀಕೃಷ್ಣನ ಅವತಾರ ಸಮಾಪ್ತಿಯಾದ ನಂತರ, ಒಂಬತ್ತನೆಯ ಅವತಾರವಾಗಿ ಭಗವಂತನು ಬುದ್ಧಾವತಾರವನ್ನು ತಳೆದನು.   ಬುದ್ಧನಾಗಿ ಅವತರಿಸಿದ ಭಗವಂತನು ಧರ್ಮದಂತೆ ಕಾಣುವ ಅಧರ್ಮವನ್ನು, ಧರ್ಮಾಭಾಸವನ್ನು, ಪಾಷಂಡಧರ್ಮವನ್ನು ಅಸುರರಿಗೆ ಬೋಧಿಸುವನು.  ಅಸುರ ಸ್ತ್ರೀಯರ ಎದುರಿಗೆ ಪಾತಿವ್ರತ್ಯ ಧರ್ಮವನ್ನು ತೆಗಳುವನು.ತಾರಕಾಸುರನಿಗೆ ತಾರಾಕ್ಷ, ಕಮಲಾಕ್ಷ ಮತ್ತು ವಿದ್ಯುನ್ಮಾಲಿ ಎಂಬ ಮೂವರು ಮಕ್ಕಳು.  ಸುರರಿಂದ ಸೋಲಿಸಲ್ಪಟ್ಟ ಅಸುರರು ಮಯನನ್ನು ಮೊರೆಹೊಕ್ಕಾಗ, ಮಯನು ತಾರಾಕ್ಷನಿಗೆ ಬಂಗಾರದಿಂದ, ಕಮಲಾಕ್ಷನಿಗೆ ಬೆಳ್ಳಿಯಿಂದ ಮತ್ತು ವಿದ್ಯುನ್ಮಾಲಿಗೆ ಕಬ್ಬಿಣದಿಂದ ಮೂರು ಸಂಚಾರಿ ಪಟ್ಟಣಗಳನ್ನು ನಿರ್ಮಿಸುವನು.  ಬ್ರಹ್ಮದೇವರಿಂದ ಮೂರು ಪಟ್ಟಣಗಳು ಒಂದೆಡೆ ಸೇರಿದಾಗ, ಒಂದೇ ಬಾಣದಿಂದ ಏಕಕಾಲದಲ್ಲಿ ಹೊಡೆದರೆ ಮಾತ್ರ ನಾಶವಾಗುವುವೆಂಬ ವರ ಪಡೆದಿರುವರು.  ಮಯನ ಉಪದೇಶದಿಂದ ಅಸುರರು ಬಹುಕಾಲ ಧರ್ಮಮಾರ್ಗದಲ್ಲಿರುವರು.  ಅವರಿಗೆ ಅವರ ಪತ್ನಿಯರ ಪಾತಿವ್ರತ್ಯದ ಬಲವೂ ಸೇರಿ ಅವರನ್ನು ಕೊಲ್ಲುವುದು ಯಾರಿಂದಲೂ ಸಾಧ್ಯವಿರುವುದಿಲ್ಲ.   ಇದೆಲ್ಲಾ ಬಲದಿಂದ ಕೊಬ್ಬಿದ ಅಸುರರು ತಮ್ಮ ಸಂಚಾರಿ ಪಟ್ಟಣಗಳಲ್ಲಿ ಅಡಗಿ ಕುಳಿತುಕೊಂಡು ದೇವತೆಗಳನ್ನು ಪೀಡಿಸುವರು.  ದೇವತೆಗಳು ರುದ್ರದೇವರನ್ನು ರಕ್ಷಿಸೆಂದು ಪ್ರಾರ್ಥಿಸಲು, ಶಿವನು ಪಾಶುಪತಾಸ್ತ್ರವನ್ನು ಪ್ರಯೋಗಿಸುವನು.  ಬಾಣಾಗ್ನಿಯಿಂದ ಉರಿದು ತ್ರಿಪುರವಾಸಿಗಳಾದ ಅಸುರರು ಮೃತರಾಗುವರು.  ಆಗ ಪುನಃ ಅಸುರರ ರಕ್ಷಣೆಗೆ ಬರುವ ಮಯನು ಸಿದ್ಧಾಮೃತರಸ ಕೂಪವನ್ನು ನಿರ್ಮಿಸಿ, ಸತ್ತ ಅಸುರರನ್ನು ಅದರಲ್ಲಿ ಅದ್ದಿ ಮತ್ತೆ ಬದುಕಿಸುವನು.  ಹೀಗೆ ಬದುಕಿದ ಅಸುರರು ದ್ವಿಗುಣ ಶಕ್ತಿಯಿಂದ, ಬಲ, ದರ್ಪದಿಂದ ಬೆಳೆದು ನಿಂತು, ಸಿಡಿಲನ್ನೇ ಕುಡಿಯುವಂತೆ ಉರಿಯುತ್ತಾ ಬರುವರು.  ಭಗ್ನ ಸಂಕಲ್ಪರಾದ ರುದ್ರದೇವರು ಹತಾಶರಾಗಿ ಕುಳಿತುಬಿಡುವರು.  ಆ ಸಮಯದಲ್ಲಿ ಭಗವಂತನಾದ ಶ್ರೀಹರಿಯು ತಾನು ಅತಿಶಯವಾದ ಆಕಳ ರೂಪವನ್ನು ಧರಿಸಿ, ಕರುವಿನ ರೂಪದಲ್ಲಿ ಬ್ರಹ್ಮದೇವರನ್ನು ಕರೆದುಕೊಂಡು ಬಂದು ಸಿದ್ಧಾಮೃತರಸದ ಕೊಳದಲ್ಲಿದ್ದ ಸಮಸ್ತ ರಸವನ್ನೂ ಹೀರಿ ಬಿಡುವರು.  ವಿಚಿತ್ರವೂ, ಅತಿಶಯವೂ ಆಗಿದ್ದ ಈ ಆಕಳು ಮತ್ತು ಕರುವನ್ನು ಕಾವಲಿನವರು ನೋಡಿದರೂ ಕೂಡ, ಮೋಡಿಗೊಳಗಾದವರಂತೆ, ಸುಮ್ಮನೆ ನೋಡುತ್ತಾ ನಿಲ್ಲುವರು.  ಹೀಗೆ ಆಕಳನ್ನು ಓಡಿಸದೆ, ಕಾವಲಿನವರು ಭ್ರಮೆಯಿಂದ ನೋಡುತ್ತಿರುವಂತೆಯೇ ಗೋವು ಹಾಗೂ ವತ್ಸ ಮಾಯವಾಗುವರು.  ಇದರಿಂದ ಮಯನು ಇದು ಭಗವಂತನದೇ ಮಹಿಮೆಯೆಂದು ಅರಿತುಕೊಂಡು ಚಿಂತಿಸುತ್ತಿದ್ದ ದೈತ್ಯರಿಗೆ ’ದೇವತೆಯಾಗಲೀ, ಅಸುರನಾಗಲೀ ಭಗವಂತನು ಕೊಟ್ಟ ಸುಖ ಹಾಗೂ ದುಃಖಗಳನ್ನು ಅನುಭವಿಸಲೇ ಬೇಕು’ ಎಂದು ತಿಳಿಸುವನು. ಭಗವಂತನು ಅಸುರರ ಪತ್ನಿಯರಿಗೆ ಯಜ್ಞವು ಪಾಪಕರವಾದ ಪಶುಹಿಂಸಾರೂಪವಾದುದು.  ಪತ್ನಿಯಾದವಳು ಹೀಗೆ ಪತಿ ಆಚರಿಸುವ ಯಜ್ಞ ಕಾರ್ಯದಲ್ಲಿ ಪತಿಯೊಂದಿಗೆ ಇರುವವಳಾದ್ದರಿಂದ ಪತಿಪತ್ನಿ ಭಾವಕ್ಕೆ ಮಹತ್ವ ನೀಡಬಾರದೆಂದು ಬೋಧಿಸುವನು.  ಭಗವಂತನ ಬೋಧನೆಯಿಂದ ತ್ರಿಪುರಾಸುರರಿಗೆ ಪತ್ನಿಯರ ಪಾತಿವ್ರತ್ಯ ಧರ್ಮದ ರಕ್ಷೆ ಇಲ್ಲವಾಗುವುದು.  ಅದೇ ಸಮಯದಲ್ಲಿ ಭಗವಂತನು ರುದ್ರದೇವರಿಗೆ ಭೂದೇವಿ ಹಾಗೂ ಸಮಸ್ತ ದೇವತಾ ಶಕ್ತಿಗಳಿಂದ ಯುದ್ಧೋಪಕರಣಗಳನ್ನು ಒದಗಿಸಿ ಬಲವನ್ನು ಅನುಗ್ರಹಿಸುವನು.  ರಥ, ಸೂತ, ಧ್ವಜ, ಧನುಸ್ಸು ಮತ್ತು ಕವಚಗಳಿಗೆ ಅಭಿಮಾನಿ ದೇವತೆಗಳಾಗಿ ನಿಂತ ದೇವತೆಗಳಂತೆಯೇ ಶ್ರೀಹರಿಯೂ ತಾನು ಕೂಡ “ಬಾಣ”ರೂಪವನ್ನು ಧರಿಸುವನು.  ಶಂಕರನು ಅಭಿಜಿನ್ಮುಹೂರ್ತದಲ್ಲಿ ನಾರಾಯಣ ಬಾಣದಿಂದ ತ್ರಿಪುರಗಳನ್ನು ಸುಟ್ಟು, ತ್ರಿಪುರಾರಿ ಎನಿಸುವನು.   ಬಾಣದ ತುದಿಯಲ್ಲಿ ಭಗವಂತನು ತಾನೆ ಬೆಂಕಿಯಾಗಿ ನಿಂತು ತ್ರಿಪುರಗಳ ದಹನ ಕಾರ್ಯ ಮಾಡಿ ಅದರ ಯಶಸ್ಸನ್ನು ಶಂಕರಿನಿಗಿತ್ತು ’ತ್ರಿಪುರಾರಿ’ ಎನಿಸುವಂತೆ ಮಾಡುವನು.  ಶಿವನು ತ್ರಿಪುರಾಸುರರ ಮೂರು ಪಟ್ಟಣಗಳನ್ನು ಭಗವಂತನ ತೇಜಸ್ಸಿಗೆ ಆಹುತಿಯಾಗಿಸುವನು.

ತ್ರಿಪುರಾಸುರರು ಶಿವನಿಂದ ಹತರಾದ ಮೇಲೆ ಭೂತಳದಲ್ಲಿ ಪುನಃ ಹುಟ್ಟುವರು.  ದಿವ್ಯವಾದ ತತ್ವಜ್ಞಾನವನ್ನು ಹೊಂದಿ, ಮೋಕ್ಷ ಸಾಧನೆಯಲ್ಲಿ ನಿರತರಾಗಿ ಸಾವಿರಾರು ದುಷ್ಟರಿಗೆ ತತ್ವಜ್ಞಾನದ ಉಪದೇಶ ಮಾಡುವರು.  ತ್ರಿಪುರಾಸುರರಲ್ಲಿ ಮೊದಲನೆಯವನಾದ ತಾರಾಕ್ಷನು ಶುದ್ಧೋದನನೆಂಬ ಹೆಸರುಳ್ಳ ಜಿನನಾಗಿ ಹುಟ್ಟುವನು.  ಅವನ ಮಗನಾಗಿ ಭಗವಂತನು ಆವಿರ್ಭವಿಸುವನು.  ಶುದ್ಧೋದನನಿಗೆ ಹುಟ್ಟಿದ್ದ ಮಗವನ್ನು ದೂರ ಸರಿಸಿ, ಭಗವಂತನು ಶಿಶುರೂಪದಲ್ಲಿ ಪ್ರಕಟಗೊಳ್ಳುವನು. ದಾನವರಿಗೆ ದಾರಿ ತಪ್ಪಿಸಿ, ಇವರ ಕೈವಶವಾಗಿ ಬಂಧನದಲ್ಲಿದ್ದ “ಜ್ಞಾನ”ದ ಬಿಡುಗಡೆಗಾಗಿ ಭಗವಂತನು ಬುದ್ಧಾವತಾರ ತಾಳುವನು.  ಆಗ ತಾನೆ ಹುಟ್ಟಿದ ಮಗು ಶುದ್ಧೋದನ ಮತ್ತು ಇತರರು ಮಾಡುತ್ತಿದ್ದ ವೈದಿಕ ಕರ್ಮಗಳ ಆಚರಣೆಯನ್ನು ಕಂಡು ಗಟ್ಟಿಯಾಗಿ ನಗಲು ಪ್ರಾರಂಭಿಸುವುದು.  ಆಶ್ಚರ್ಯಗೊಂಡ ಜಿನ ಮೊದಲಾದವರು ಮಗುವನ್ನು ಯಾರೆಂದು ಕೇಳಲು ಮಗು ತಾನು ’ಬುದ್ಧ’ನೆಂದು ಉತ್ತರಿಸುವುದು.  ಭಗವಂತನು ದೇವತೆಗಳ ಸಹಾಯದಿಂದ ಅಸುರರಲ್ಲಿ ತನ್ನದೇ ರೂಪದ ವಿಷಯದಲ್ಲಿ ಭರವಸೆ ಮೂಡಿಸಲು ತನ್ನ ಜೊತೆ ಯುದ್ಧ ಮಾಡುವಂತೆ ಪ್ರೇರೇಪಿಸುವನು.  ಸಮಸ್ತ ದೇವತೆಗಳೂ ತನ್ನ ಮೇಲೆ ಪ್ರಯೋಗಿಸಿದ ಆಯುಧಗಳೆಲ್ಲವನೂ ಶಿಶುರೂಪಿ ಭಗವಂತನು ನುಂಗುವನು.  ವಿಷ್ಣು ರೂಪಿ ಭಗವಂತನು ಶಿಶುವಿನ ಮೇಲೆ ಪ್ರಯೋಗಿಸಿದ ಸುದರ್ಶನ ಚಕ್ರವನ್ನು ಹಿಡಿದು, ಆಸನವನ್ನಾಗಿ ಮಾಡಿ ಅದರ ಮೇಲೆ ಕುಳಿತುಕೊಳ್ಳುವನು.  ದೇವತೆಗಳು ನೀನೇ ಸರ್ವೋತ್ತಮನೆಂದು ತಿಳಿಸಿ, ಹೊರಟುಹೋಗುವರು.  ಇದರಿಂದ ಜಿನ ಮೊದಲಾದ ದೈತ್ಯರು ಭಗವಂತನ ಮಾತುಗಳನ್ನು ಪ್ರಮಾಣವನ್ನಾಗಿ ನಂಬುವರು.  ಭಗವಂತ ಬೋಧಿಸಿದ ಸರ್ವವೂ ಶಾಸ್ತ್ರಮಯವಾಗಿದ್ದರೂ ಕೂಡ, ಅಸುರರು ಅದರ ಅಂತರಾರ್ಥ ತಿಳಿಯದೇ ವಿಪರೀತಾರ್ಥವನ್ನು ತಿಳಿದು, ಮೋಹಕ್ಕೆ ಒಳಗಾಗುವರು.    ಹೀಗೆ ದೇವತೆಗಳಿಗೆ ಅಂತರಾರ್ಥವನ್ನು ತಿಳಿಯುವಂತೆ ಬೋಧಿಸಿದ ತತ್ವವನ್ನು “ಪ್ರಶಾಂತ ವಿದ್ಯೆ”ಯೆಂದು ಕರೆಯುವರು.  ಭಗವಂತನು, ಅಸುರರಿಗೆ, ಅಧರ್ಮಿಗಳಿಗೆ ಮೋಹಕವಾಗಿ ಮಿಥ್ಯಾಜ್ಞಾನವನ್ನು ಬಣ್ಣಿಸುವನು.  ತಾಮಸ ಮೂಲದವರಾದ ಕಾರಣ, ಸಾತ್ವಿಕಾರ್ಥವನ್ನು ಅರಿಯುವ ಅವಕಾಶವಿರುವುದಿಲ್ಲ.  ದುಷ್ಟರಿಗೆ ಪವಿತ್ರವಾದ ತತ್ವಜ್ಞಾನವು ದೊರೆಯದಂತೆ ಮಾಡಲೆಂದೇ ಬುದ್ಧಾವತಾರವಾಯಿತು ಎಂದು ತಿಳಿಯಬೇಕು.

ಭಾಗವತ ೨ನೆಯ ಸ್ಕಂಧ ೭ನೆಯ ಅಧ್ಯಾಯದಲ್ಲಿ ಬುದ್ಧಾವತಾರವನ್ನು

ದ್ವೇವದ್ವಿಷಾಂ ನಿಗಮವರ್ತ್ಮನಿ ನಿಷ್ಠಿತಾನಾಂ
ಪೂರ್ಭಿರ್ಮಯೇನ ವಿಹಿತಾಭಿರದೃಶ್ಯತೂರ್ಭಿಃ |
ಲೋಕಾನ್ ಘ್ನತಾಂ ಮತಿವಿಮೋಹಮತಿಪ್ರಲೋಭಂ
ವೇಷಂ ವಿಧಾಯ ಬಹು ಭಾಷ್ಯತ ಔಪಧರ್ಮ್ಯಮ್ || – ದೇವತೆಗಳ ಶತ್ರುಗಳಾದ ದಾನವರು ಮಾಯಾಸುರನು ಮಾಡಿಕೊಟ್ಟ ಅದೃಶ್ಯವಾದ ವೇಗವುಳ್ಳ ಪುರಗಳಲ್ಲಿ ವಾಸಿಸುತ್ತಾ ಮನುಷ್ಯರನ್ನು ಹಿಂಸಿಸುವಾಗ ಭಗವಂತನು ಜನರ ಮನಸ್ಸಿನಲ್ಲಿ ಮೋಹವನ್ನೂ, ಪ್ರಲೋಭನೆಯನ್ನೂ ಉಂಟು ಮಾಡುವ ವೇಷವನ್ನು ಧರಿಸಿ ಬುದ್ಧದೇವರ ರೂಪದಲ್ಲಿ ಬಹುಪ್ರಕಾರದ ಉಪಧರ್ಮಗಳನ್ನು ಉಪದೇಶ ಮಾಡುವನು ಎಂದೂ

ಏಕಾದಶಸ್ಕಂಧ ೪ನೆಯ ಅಧ್ಯಾಯದಲ್ಲಿ “ವಾದೈರ್ವಿಮೋಹಯತಿ ಯಜ್ಞಕೃತೋSತದರ್ಹಾನ್” – ಆದಿಪುರುಷನು ಬೌದ್ಧಾವತಾರವನ್ನೆತ್ತಿ ಯಜ್ಞಕ್ಕೆ ಅನಧಿಕಾರಿಗಳಾದವರು ಯಜ್ಞ ಮಾಡುವುದನ್ನು ನೋಡಿ ಅನೇಕ ಪ್ರಕಾರವಾದ ತರ್ಕ-ವಿತರ್ಕಗಳಿಂದ ಅವರನ್ನು ಯಜ್ಞ ಕರ್ಮದಿಂದ ವಿಮುಖರನ್ನಾಗಿ ಮಾಡುವನು ಎಂದೂ ಉಲ್ಲೇಖಿಸಲಾಗಿದೆ.

ಆಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ  ಭಗವಂತನ ಬೌದ್ಧಾವತಾರವನ್ನು
ಚಂದ್ರಶತಾನನ ಕುಂದಸುಹಾಸ ನಂದಿತ ದೈವತಾSSನಂದ ಸುಪೂರ್ಣ
ದೈತ್ಯ ವಿಮೋಹಕ ನಿತ್ಯಸುಖಾದೇ ದೇವಸುಬೋಧಕ ಬುದ್ಧ ಸ್ವರೂಪ || – ನೂರಾರು ಚಂದ್ರರಷ್ಟು ಪ್ರಕಾಶಮಾನನಾದ ಮಲ್ಲಿಗೆ ಹೂವಿನಂತೆ ಮಂದಸ್ಮಿತವುಳ್ಳ ದೇವತೆಗಳಿಗೆ ಸಂತೋಷಕಾರಿಯಾದ ಪೂರ್ಣಾನಂದ ಸ್ವರೂಪಿಯಾದ ಶ್ರೀಕೃಷ್ಣನನ್ನು, ದೈತ್ಯರಿಗೆ ಮೋಹಪ್ರದನೂ, ಜ್ಞಾನಿಗಳಿಗೆ ಮೋಕ್ಷಪ್ರದನೂ, ದೇವತೆಗಳಿಗೆ ಜ್ಞಾನಪ್ರದನೂ ಆದ ಬುದ್ಧನನ್ನು ನಮಸ್ಕರಿಸುತ್ತೇನೆ ಎಂದೂ

ನವಮೋಧ್ಯಾಯದಲ್ಲಿ
ದಿತಿಸುತ ಮೋಹನ ವಿಮಲ ವಿಬೋಧನ ಪರಗುಣ ಬುದ್ಧ ಹೇ ಭವ ಮಮ ಶರಣಮ್
ಶುಭತಮ ಕಥಾಶಯ ಪರಮ ಸದೋದಿತ ಜಗದೇಕ ಕಾರಣ ರಾಮರಮಾರಮಣ || – ದೈತ್ಯರನ್ನು ಮೋಹಗೊಳಿಸಿದ ಬ್ರಹ್ಮಾದಿಗಳಿಗೆ ಜ್ಞಾನಪ್ರದನಾದ ಜ್ಞಾನಾನಂದಾದಿಗುಣಗಳುಳ್ಳ ಬುದ್ಧಾವತಾರಿಯಾದ ಬ್ರಹ್ಮ ಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ ಪುರುಷೋತ್ತಮನೂ, ಸದಾ ಪ್ರಕಾಶಮಾನನೂ ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ ಆತ್ಮಾರಾಮನೂ ಆದ ಲಕ್ಷ್ಮೀಪತಿಯೇ ನಿನ್ನನ್ನು ಶರಣು ಹೊಂದುತ್ತೇನೆ ಎಂದು ಸ್ತುತಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ  ಬೌದ್ಧಾವತಾರವನ್ನು
ಬುದ್ಧಾವತಾರ ಕವಿ ಬದ್ಧಾನುಕಂಪ ಕುರು ಬದ್ಧಾಂಜಲೌ ಮಯಿ ದಯಾಂ
ಶೌದ್ಧೋದನಿ ಪ್ರಮುಖ ಸೈದ್ಧಾಂತಿಕಾಸುಗಮ ಬೌದ್ಧ, ಗಮ ಪ್ರಣಯನ || – ಅಜ್ಞಾನಿಗಳಿಗೆ ತಿಳಿಯಲು ಅಸಾಧ್ಯವಾದ ಬೌದ್ಧಾಗಮವನ್ನು ರಚಿಸಿದ, ಜ್ಞಾನಿಗಳಲ್ಲಿ ಅನುಗ್ರಹ ಬುದ್ಧಿಯಿಂದಿರುವ ಬುದ್ಧರೂಪಿಯಾದ ಪರಮಾತ್ಮನೇ ಕೈಮುಗಿದು ಬೇಡುತ್ತಿರುವ ನನ್ನನ್ನು ಅನುಗ್ರಹಿಸು ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ “ಗೀತಗೋವಿಂದ” ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ  ಬೌದ್ಧಾವತಾರವನ್ನು
ನಿಂದಸಿ ಯಜ್ಞ ವಿಧೇರಹಹ ಶ್ರುತಿಜಾತಂ
ಸದಯ ಹೃದಯದರ್ಶಿತ ಪಶುಘಾತಂ
ಕೇಶವ ಧೃತ ಬುದ್ಧ ಶರೀರ ಜಯ ಜಗದೀಶ ಹರೇ || –    ಶ್ರುತಿ ಜನ್ಯ ಯಜ್ಞ ವಿಧೇಯಕವೆನ್ನುತ್ತ ಪ್ರಾಣಿಹತ್ಯೆ ಮಾಡುವವರನ್ನು ಖಂಡಿಸುವ ಸಹೃದಯಿ ಬುದ್ಧ ರೂಪನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಮಾನವನ ವಿಕಾಸಕ್ಕೆ ಭಗವಂತನ  ಬೌದ್ಧಾವತಾರವನ್ನು ಸಮನ್ವಯಿಸಿಕೊಂಡಾಗ ವಿಕಾಸಗೊಂಡಿರುವ ಮಿದುಳಿನಿಂದ ಅತಿ ಜ್ಞಾನ ಪಡೆದು ಅದನ್ನು ದುರುಪಯೋಗ ಪಡಿಸಿಕೊಂಡು, ಬಂಧನದಲ್ಲಿ ಸಿಲುಕಿರುವಾಗ,  ಬಿಡುಗಡೆಯ ದಾರಿಯನ್ನು ಸೂಚಿಸುವುದು.  ಜ್ಞಾನವು ಅಪಾತ್ರರ, ಸ್ವಾರ್ಥಿಗಳ ವಶವಾದಾಗ, ನಡೆಯುವುದೆಲ್ಲಾ ಅನಾಚಾರ, ಅನೀತಿ, ಅಧರ್ಮಗಳೇ ಆಗುವುವು.  ಗಟ್ಟಿಯಲ್ಲದ, ಪೊಳ್ಳು ಸಂಸ್ಕಾರ, ಸಂಸ್ಕೃತಿಗಳು ಅಟ್ಟಹಾಸ ಮಾಡುತ್ತಾ ಜ್ಞಾನವನ್ನು ಬಂಧಿಸುವುವು.  ಪ್ರದರ್ಶನದ, ಡಂಬಾಚಾರದ, ಅನಾಗರಿಕರ ವಶದಿಂದ ಜ್ಞಾನದ ಬಿಡುಗಡೆ ಮಾಡುವುದೇ ಬೌದ್ಧಾವತಾರವೆನ್ನಬಹುದು.  ಶುದ್ಧವಾದ ಜ್ಞಾನವನ್ನು ಕಾಪಾಡುವ ಭಗವಂತನು, ಸಾತ್ವಿಕರನ್ನು ರಕ್ಷಿಸುವ ಸಲುವಾಗಿ, ಧರ್ಮವನ್ನು ಸಂಸ್ಥಾಪಿಸುವ ಸಲುವಾಗಿ, ಬುದ್ಧನಾಗಿ ಅವತರಿಸುವನೆಂದು ತಿಳಿಯಬಹುದು.  ಭಗವದ್ಗೀತೆಯಲ್ಲಿ ಭಗವಂತ ಸ್ವತಃ ನುಡಿದಿರುವ   “ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ” ಎಂಬ ಭರವಸೆಯ ಮಾತುಗಳು ಬುದ್ಧಾವತಾರಕ್ಕೆ ಬೆಳಕು ಚೆಲ್ಲುವುದೆಂದು ತಿಳಿಯಬಹುದು.

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ “ಪಂಚ ಮಹಾಯಜ್ಞ ಸಂಧಿ”ಯ ೩೪ನೆಯ ಪದ್ಯದಲ್ಲಿ, ಶರೀರದ ಗುದಭಾಗದಲ್ಲಿ ಬುದ್ಧ ರೂಪಿ ಭಗವಂತನ ಮೂರ್ತಿಯನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು  ಬುದ್ಧನ ರೂಪದಿಂದವತರಿಸಿದಾಗ ರಮಾದೇವಿಯು ’ದೇವಕಿ’ಯಾಗಿರುತ್ತಾಳೆ ಎಂದಿದ್ದಾರೆ.  ಹಾಗೂ ತಮ್ಮ ತತ್ವಸುವ್ವಾಲಿಯಲ್ಲಿ

ಜಿನನೆಂಬ ದನುಜ ಸಜ್ಜನ ಕರ್ಮವನು ಮಾಡೆ
ಜನಿಸಿ ಅವರಲ್ಲಿ ದುರ್ಬುದ್ಧಿ | ದುರ್ಬುದ್ಧಿ ಕವಿಸಿದ
ವಿನುತ ಶ್ರೀಬುದ್ಧ ದಯವಾಗೋ || – ಜಿನನೆಂಬ ದಾನವನು ಸುಜೀವರಿಗೆ ಅರ್ಹವಾದ ವೇದೋಕ್ತ ಕರ್ಮಗಳನು ಮಾಡುತ್ತಿರಲು, ಅವತರಿಸಿ, ಜಿನ ಮತ್ತು ಅವನ ಅನುಯಾಯಿಗಳಲ್ಲಿ, ದುರ್ಬುದ್ಧಿ ಕವಿಸಿದ, ಮಿಥ್ಯಾಜ್ಞಾನವು ಅವರನ್ನು ಆವರಿಸುವಂತೆ ಮಾಡಿದ, ಬ್ರಹ್ಮಾದಿಗಳಿಂದ ವಿಶೇಷವಾಗಿ ಸ್ತುತ್ಯನಾದ, ಬುದ್ಧರೂಪೀ ಶ್ರೀಹರಿಯೇ ಕೃಪೆಮಾಡು ಎಂದು ಪ್ರಾರ್ಥಿಸಿದ್ದಾರೆ.

ದಶಾವತಾರದಲ್ಲಿ ಉಲ್ಲೇಖಿಸಲ್ಪಟ್ಟಿರುವ ಒಂಭತ್ತನೆಯ ಅವತಾರವಾದ ಬುದ್ಧಾವತಾರದ ಭಗವಂತನನ್ನು ಆಗಲೇ ಹುಟ್ಟಿದ ಶಿಶುರೂಪದಲ್ಲಿಯೂ, ಸುರರ ಆಯುಧಗಳನ್ನೆಲ್ಲಾ ನುಂಗುತ್ತಿರುವ ರೂಪದಲ್ಲಿಯೂ, ವಿಷ್ಣುವಿನ ಸುದರ್ಶನ ಚಕ್ರವನ್ನು ಆಸನವನ್ನಾಗಿ ಮಾಡಿಕೊಂಡ ರೂಪವನ್ನೂ, ನಗುಮುಖದಿಂದ ಜ್ಞಾನಮುದ್ರೆ ತೋರುತ್ತಾ ಉಪದೇಶ ಮಾಡುವ ರೂಪವನ್ನೂ ಅನುಸಂಧಾನ ಮಾಡಿಕೊಂಡು ಧ್ಯಾನಿಸಿ, ಪ್ರಾರ್ಥಿಸಬೇಕೆಂದು ಶ್ರೀಮದಾಚಾರ್ಯರು ತಿಳಿಸಿರುವರು.

ಅಗ್ನಿ ಪುರಾಣದಲ್ಲಿ ಬುದ್ಧರೂಪಿ ಭಗವಂತನು ಗೌರವರ್ಣದಿಂದ ಶೋಭಿಸುತ್ತಿರುವನು, ಪೀತ ವಸ್ತ್ರಧಾರಿಯೆನಿಸುವನು, ಪದ್ಮಾಸನದಲ್ಲಿ ಕುಳಿತು, ಒಂದು ಕರವು ಅಭಯಮುದ್ರೆಯಿಂದಲೂ, ಇನ್ನೊಂದು ಕರವು ಆಶೀರ್ವಾದರೂಪದಿಂದಲೂ ಶೋಭಿಸುವುದೆಂದು ವರ್ಣಿಸಲಾಗಿದೆ.  ಬುದ್ಧಾವತಾರದಲ್ಲಿ ಭಗವಂತನು ಶಸ್ತ್ರಧಾರಣೆಯನ್ನು ಮಾಡಲೇ ಇಲ್ಲ.  ಬೋಧ ಮಾಡಿ, ಉಪದೇಶ ಕೊಟ್ಟು ಮಹಿಮೆಯನ್ನು ತಿಳಿಸಿರುವನು.

1 Comment

Add a Comment
  1. It would be great if you set the Gautama Buddha version as a Non Entity. There are many who do not understand the difference between Vishnu avatara buddha and the Gautama buddha. The clarification would add value.

Leave a Reply

Your email address will not be published.

Sumadhwa Seva © 2022