Bhojana Vidhi ಭೋಜನ ವಿಧಿ

Bhojana Vidhi ಭೋಜನ ವಿಧಿ

*ಭೋಜನ* ಎಂಬುದು ವೈಶ್ವಾನರ ಯಜ್ಞ

ಭೋಜನದ ಮೊದಲು ಕೈಕಾಲು, ತೊಳೆದುಕೊಂಡು ಶುದ್ಧ ಬಟ್ಟೆಯನ್ನು ಧರಿಸಿ ಮಾಡಬೇಕು.  ಆರೋಗ್ಯವಂತರು ಹಾಸಿಗೆ ಮೇಲೆ ಕುಳಿತು ಭೋಜನ ಮಾಡಬೇಡಿ.  ನೆಲದ ಮೇಲೆ ಕುಳಿತು ಮಾಡಿ.

ಹೋಮ, ಶ್ರಾದ್ಧ, ದೇವತಾರ್ಚನೆಗೆ ಮೊದಲು ಭೂಮಿ ಶುದ್ಧ ಮಾಡುವಂತೆ ಮೊದಲು ಊಟ ಮಾಡುವ ಜಾಗ ಶುದ್ಧ ಮಾಡಿಕೊಳ್ಳಿ. ಅರ್ಥಾತ್ ಮಂಡಲ ಮಾಡಿಕೊಳ್ಳಿ. ಮಂಡಲವನ್ನು ಮಾಡಿದರೆ ದೇವತೆಗಳು, ಋಷಿಗಳು, ವಸ್ತುಗಳು, ಆದಿತ್ಯರು, ಇವರುಗಳ ಸಾನ್ನಿಧ್ಯ ಇರುತ್ತೆ.  ಮಂಡಲ ಮಾಡದಿದ್ದರೆ ರಾಕ್ಷಸರು, ಪಿಶಾಚಿಗಳ ಸಾನ್ನಿಧ್ಯ ಇರುತ್ತೆ. ಇದರಿಂದ ಆಹಾರದ ಶಕ್ತಿ ಹಾಳಾಗುತ್ತದೆ.

ತನ್ನ ಎಲೆಗೇ ತಾನೇ ಮಂಡಲ ಮಾಡಿಕೊಳ್ಳಬಾರದು. ಬೇರೆಯವರು ಮಾಡಬೇಕು. ಅಥವಾ ಕನಿಷ್ಠ ಎಡಗೈಯಿಂದ ಮಂಡಲ ತಾನೇ ಮಾಡಿಕೊಳ್ಳಬೇಕು. ಎಡಗೈಯು ಪರಹಸ್ತವೆಂದೇ ಪ್ರಸಿದ್ಧ. ಮಂಡಲ ಚತುರಸ್ರಾಕಾರವಾಗಿ ಮಾಡಬೇಕು.

ಪರಿಷೇಚನಕ್ಕೆ ಮೊದಲು ಅಭಿಘಾರ (ತುಪ್ಪವನ್ನು) ಅನ್ನದ ಮೇಲೆ ಹಾಕಬೇಕು. ನಂತರ ತೀರ್ಥವನ್ನು ಎಲೆಗೆ ಬಡಿಸಿದ ಅನ್ನ ಪದಾರ್ಥದ ಮೇಲೆ ಹಾಕಬೇಕು.

ನಂತರ ಎಲೆಯಲ್ಲಿ ಬಡಿಸಿದ ಪದಾರ್ಥಗಳಿಗೆ ಗಾಯತ್ರಿ ಮಂತ್ರದಿಂದ ಪ್ರೋಕ್ಷಿಸಬೇಕು.

ಪ್ರೋಕ್ಷಣೆ. :
ಓಂ ಭೂರ್ಭುವಃ ಸ್ವಃ | ತತ್ಸವಿತುರ್ವರೇಣ್ಯಂ|
ಭರ್ಗೋ ದೇವಸ್ಯ ಧೀಮಹಿ
ಧಿಯೋ ಯೋನಃ ಪ್ರಚೋದಯಾತ್ ||
ಇತಿ ಪ್ರೋಕ್ಷ್ಯ|| (ಅನ್ನಕ್ಕೆ ನೀರನ್ನು ಚಿಮುಕಿಸುವುದು)

*ಪರಿಷೇಚನ*
ನಂತರ ಬಲಗೈಯ ಮಧ್ಯಭಾಗದಲ್ಲಿ (ಬಲಗೈ ಮಧ್ಯದಲ್ಲಿ ದೇವತಾ

ಸನ್ನಿಧಾನವಿರುತ್ತದೆ) ನೀರನ್ನು ಹಾಕಿಕೊಂಡು ಎಲೆಯ/ ತಟ್ಟೆಯ ಬಲಭಾಗದಿಂದ ಪ್ರಾರಂಭಿಸಿ ಸುತ್ತುಗಟ್ಟಬೇಕು.

*ಸತ್ಯಂ ತ್ವರ್ತೇನ ಪರಿಷಿಂಚಾಮಿ* (ಹಗಲಿನಲ್ಲಿ) |
“ಸತ್ಯ” ಎಂಬ “ಅನಿರುದ್ಧ” ರೂಪವು “ಋತ”ವೆಂಬ “ನಾರಾಯಣ” ರೂಪದಿಂದ ವ್ಯಾಪ್ತವಾಗಿದೆ ಎಂದು ಚಿಂತಿಸಬೇಕು.

ಋತಂ ತ್ವಾ ಸತ್ಯೇನ ಪರಿಷಿಂಚಾಮಿ (ರಾತ್ರಿ) !
“ಋತ” ಎಂಬ “ನಾರಾಯಣ” ರೂಪವು “ಸತ್ಯ”ವೆಂಬ “ಅನಿರುದ್ಧ” ರೂಪದಿಂದ ವ್ಯಾಪ್ತವಾಗಿದೆ ಎಂದು ಚಿಂತಿಸಬೇಕು.

*ಚಿತ್ರಾಹುತಿ* :.
ಪರಿಷೇಕ ನಂತರ ಎಲೆಯ ಬಲಭಾಗದಲ್ಲಿ ಚಿತ್ರ, ಚಿತ್ರಗುಪ್ತ, ಯಮರಿಗೆ ಆಹುತಿ ತೆಗೆದಿಡುವುದು. ಇಲ್ಲಿ ಬರೀ ಘೃತಮಿಶ್ರಿತ ಅನ್ನವನ್ನು ಮಾತ್ರ ಆಹುತಿ ಇಡಬೇಕು. ಅದರ ಗಾತ್ರ ಕಿರು ನೆಲ್ಲಿಕಾಯಿಯಷ್ಟು ಇರಬೇಕು.

ಪೂರ್ವಾಭಿಮುಖವಾಗಿ ಭೋಜನಕ್ಕೆ ಕುಳಿತಾಗ ಮೇಲಿನಿಂದ ಕೆಳಗೆ ಆಹುತಿ ಕೊಡಬೇಕು. (ಅಂದರೆ ಎಲೆಯ ಬಲ ಅಗ್ರ ಭಾಗದಿಂದ).
ಇತರೇ ದಿಕ್ಕಿನಲ್ಲಿ ಕುಳಿತಾಗ ಕೆಳಗಿನಿಂದ ಮೇಲೆ ಇಡಬೇಕು.

ಚಿತ್ರಾಹುತಿಯಲ್ಲಿ ಸಾಮಾನ್ಯವಾಗಿ ಎರಡು ಅಥವಾ ನಾಲ್ಕು ಆಹುತಿ ಇಡುವ ಸಂಪ್ರದಾಯವಿದೆ..

*ಎರಡು ಆಹುತಿ ಇಡುವವರು* :
ಚಿತ್ರಾಯ ನಮಃ: |
ಚಿತ್ರಗುಪ್ತಾಯ ನಮಃ: !

*ನಾಲ್ಕು ಆಹುತಿ ಇಡುವವರು* :
ಚಿತ್ರಾಯ ನಮಃ: |
ಚಿತ್ರಗುಪ್ತಾಯ ನಮಃ: !
ಯಮಾಯ ನಮಃ:!
ಸರ್ವಭೂತೇಭ್ಯೋ ನಮಃ!

ಚಿತ್ರಾಹುತಿ ಇಟ್ಟ ನಂತರ ಕೈತೊಳೆಯಬೇಕು (ಅರ್ಥಾತ್ ಕೈಗೆ ಸ್ವಲ್ಪ ನೀರನ್ನು ಹಾಕಿಕೊಳ್ಳಿ) ಇದರಿಂದ ಹಸಿವೆ, ಬಾಯಾರಿಕೆಯಿಂದ ಬಳಲುತ್ತಿರುವ ಭೂತಗಳಿಗೆ ತೃಪ್ತಿ ಆಗುತ್ತದೆ.

*”ಚಿತ್ರಾಹುತಿ” ಏಕೆ?*
ಚಿತ್ರ ಮತ್ತು ಚಿತ್ರಗುಪ್ತರು ಯಮಧರ್ಮನ ಅನುಚರರು.”ಚಿತ್ರನು” ನಾವು ಮಾಡುವ ಸತ್ಕಾರ್ಯ, ದಾನ, ಧರ್ಮದ ಲೆಕ್ಕವಿಟ್ಟರೆ, “ಚಿತ್ರ ಗುಪ್ತನು” ನಾವು ಮಾಡುವ ಅಧರ್ಮಗಳ ಪಟ್ಟಿಯನ್ನು ಮಾಡುತ್ತಾನೆ. “ಯಮಧರ್ಮನು” ಚಿತ್ರ ಮತ್ತು ಚಿತ್ರಗುಪ್ತರ ಲೆಕ್ಕವನ್ನು ನೋಡಿ, ವಿವೇಚಿಸಿ, ಯೋಗ್ಯ ಶಿಕ್ಷೆ ನೀಡುವನು.  ನಾವು ಮಾಡುವ ಸಕಲ ಕಾರ್ಯಗಳನ್ನು ಪಂಚಭೂತಗಳು ಸಾಕ್ಷೀಭೂತರಾಗಿ ನೋಡುತ್ತಿರುತ್ತವೆ.

ಇವರೆಲ್ಲರಿಗೂ ತೃಪ್ತಿಯಾಗಿ ನಮ್ಮಲ್ಲಿ ಸತ್ಕಾರ್ಯ ಪ್ರೇರಣೆಯಾಗಲಿ, ಎಂಬ ಉದ್ದೇಶದಿಂದ ಚಿತ್ರಾಹುತಿ ಕೊಡುತ್ತೇವೆ. ಚಿತ್ರಾಹುತಿ ನೀಡೇ ಭುಂಜಿಸಬೇಕು. ಎಲೆ ಹರಿದಿದ್ದರೆ ಚಿತ್ರಾಹುತಿ ನೀಡಬಾರದು ಅದರ ಬದಲು ಒಂದು ಹಿಡಿಯಷ್ಟು ಅನ್ನವನ್ನು ಎಲೆಯ ಹೊರಗೆ ತೆಗೆದಿಡಬೇಕು.

#ರಾತ್ರಿ ಭೋಜನಕ್ಕೆ ಚಿತ್ರಾಹುತಿ ಬೇಡ.
#ಉಪನಯನವಾದ ಮಕ್ಕಳು, ಎಲ್ಲಾ ಗಂಡಸರೂ ಚಿತ್ರಾಹುತಿ ನೀಡಬೇಕು.

#ಸೂತಕ / ವೃದ್ಧಿಯಲ್ಲಿರುವವರು ಚಿತ್ರಾಹುತಿ ನೀಡಬೇಕಿಲ್ಲ.
#ಹೆಂಗಸರು ಚಿತ್ರಾಹುತಿ ನೀಡಬಾರದು.

ಆಪೋಶನ :

ಭೋಜನಕ್ಕೆ ಮೊದಲು  ತುಳಸೀ ಸಹಿತ ಸಾಲಿಗ್ರಾಮ ತೀರ್ಥದಿಂದ
ಆಪೋಶನ  ಸ್ವೀಕರಿಸಬೇಕು.  ಆಪೋಶನವಿಲ್ಲದೆ ಭೋಜನ ಮಾಡಬಾರದು. ಆಪೋಶನ ನಮ್ಮ ಬಲಭಾಗದಲ್ಲಿ ಸ್ವೀಕರಿಸಬೇಕು.

ಆಪೋಶನಕ್ಕೆ ತೀರ್ಥವನ್ನು ಬೇರೆಯವರಿಂದ ಹಾಕಿಸಿಕೊಳ್ಳಿ. ನಿಮ್ಮ ಪತ್ನಿ / ತಾಯಿ ಕೂಡ ಹಾಕಬಹುದು. ಯಾರೂ ಇಲ್ಲದಿದ್ದರೆ ಪ್ರತ್ಯೇಕವಾಗಿ ಒಂದು ಉದ್ಧರಣೆ ತೀರ್ಥ ತೆಗೆದಿಟ್ಟುಕೊಂಡು ಕೂಡಿ. ಪರಿಷೇಚನದ ನಂತರ ಸ್ವೀಕರಿಸಿ.
ಪರಿಷೇಕದ ನೀರಿನ ಶೇಷದಿಂದ ಆಪೋಶನ ಮಾಡಬಾರದು.
ಆಪೋಶನ ಸ್ವೀಕರಿಸುವಾಗ ಶಬ್ದ ಮಾಡಬಾರದು
ಭೋಜನ ಪೂರ್ವ  ಆಪೋಶನ ಸ್ವೀಕರಿಸುವಾಗ ಹೇಳುವ ಮಂತ್ರ
“ಅಮೃತೋಪಸ್ತರಣಮಸಿ ಸ್ವಾಹಾ” 
– ಹೇ ಅಮೃತ – ಹೇ ವಾಯುವೇ, ನೀನು
ಉಪಸ್ತರಣಂ – ಭಗವಂತನ  ಕೊಡುವ ವಸ್ತ್ರ ಅಸಿ – ಆಗಿರುವೆ.
ಭೋಜನ ನಂತರ  ಆಪೋಶನ ಸ್ವೀಕರಿಸುವಾಗ ಹೇಳುವ ಮಂತ್ರ
” ಅಮೃತಾಪಿಧಾನಮಸಿ ಸ್ವಾಹಾ ” 
ಅಮೃತ+ಅಪಿಧಾನಂ+ಅಸಿ – ಅಮೃತಾಪಿಧಾನಮಸಿ
– ಹೇ ಅಮೃತ – ಹೇ ವಾಯುವೇ, ನೀನು
ಅಪಿಧಾನಂ – ಭಗವಂತನ ಹೊದ್ದುಕೊಳ್ಳುವ  ವಸ್ತ್ರ ಅಸಿ – ಆಗಿರುವೆ.
ಪ್ರಾಣಾಹುತಿ 
ಪ್ರಾಣಾಹುತಿಯನ್ನು ದಂತ ಸ್ಪರ್ಶವಿಲ್ಲದೆ ನಾಲಿಗೆಯ ರುಚಿ ನೋಡದ ಹಾಗೆ ಮತ್ತು ಹಲ್ಲುಗಳಿಂದ ಜಗಿಯದೇ ನುಂಗಬೇಕು.  ಪ್ರಾಣಾಹುತಿ ಕಾಲದಲ್ಲಿ ಮಾತನಾಡಬಾರದು.

ಪ್ರಾಣಾಹುತಿ ಸಮಯದಲ್ಲಿ ಎಲೆಯನ್ನು ಸ್ಪರ್ಶಿಸಿರಲೇಬೇಕು. ಎಲೆಯನ್ನು ಬೆರಳುಗಳಿಂದ ಸ್ಪರ್ಶಿಸದೇ ಹಾಗೆ ಭೋಜನ ಮಾಡಿದರೆ ಆ ಅನ್ನವು ಅಭೋಜ್ಯವೆನಿಸಿದ್ದು ತಿಂದವನು ನರಕಭಾಗಿಯಾಗುವನು.

*ಪ್ರಾಣಾಹುತೀನಾಂ ಸಮಯೇ ಪಾತ್ರಗ್ರಹಣ ಮಾಚರೇತ್*

*ಭುಂಜಾನಾಶ್ಚೈವ ಯೋ ವಿಪ್ರೋ ಪಾತ್ರಂ ಹಸ್ತೇನ ಮುಂಚತಿ*!
*ಅಭೋದ್ಯಂ ತತ್ ಭವೇದನ್ನಂ ಭುಂಜಾನೋ ನರಕಂ ವ್ಯಜೇತ್* !

 

*ಪಂಚ ಪ್ರಾಣಾಹುತಿ ಮಂತ್ರಗಳು

೧. ಪ್ರಾಣಾಯ ಸ್ವಾಹಾ
೨. ಅಪಾನಾಯ ಸ್ವಾಹಾ
೩. ವ್ಯಾನಾಯ ಸ್ವಾಹಾ
೪. ಉದಾನಾಯ ಸ್ವಾಹಾ
೫. ಸಮಾನಾಯ ಸ್ವಾಹಾ

ಪಂಚಾಹುತಿಯ ನಂತರ
೬. ಬ್ರಹ್ಮಣೇ ಸ್ವಾಹಾ

 

ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಇವು ಪಂಚವಾಯುಗಳು.

*ಪ್ರಾಣವು*   ಮೇಲ್ಮುಖವಾಗಿ ಹರಿಯುವಂತಾದ್ದು. ಪ್ರಾಣವಾಯುವಿನ ಸ್ಥಾನ ಶ್ವಾಸಕೋಶ. ಇದು ಉಸಿರಾಟದ ಪ್ರಕ್ರಿಯೆಯನ್ನು ನಿರ್ವಹಿಸುವುದು.

*ಅಪಾನ ವಾಯುವು* ಚಂದ್ರನ ಶೀತಲ ಶಕ್ತಿ. ಇದು ದೇಹವನ್ನು ಹೊರಗಿನಿಂದ ರಕ್ಷಿಸುತ್ತದೆ.  ಹೊಟ್ಟೆಯ ಭಾಗದಲ್ಲಿ ನಾಭಿಯ ಕೆಳಗೆ ಈ ಅಪಾನ ವಾಯುವಿನ ಸ್ಥಾನವಾಗಿದೆ. ವಿಸರ್ಜನಾ ಅಂಗಗಳ ಮತ್ತು ಜನನೇಂದ್ರಿಯಗಳ ಮೂಲಕ ಆಗುವ ವಿಸರ್ಜನೆಗೆ ಅಪಾನ ವಾಯು ಕಾರಣವಾಗಿದೆ.

*ವ್ಯಾನ ವಾಯು* – ಶರೀರದ ಎಲ್ಲೆಡೆ ವ್ಯಾಪಿಸಿ ಚಲನೆಯ ಶಕ್ತಿಯಾಗಿದೆ. 72000 ನಾಡಿಗಳಲ್ಲಿ ಸಂಚರಿಸುತ್ತಾ ತಿಂದ ಆಹಾರವನ್ನು ಪರಿಣಾಮಗೊಳಿಸುವನು.

*ಉದಾನ ವಾಯುವು* ಧ್ವನಿಪೆಟ್ಟಿಗೆಯ ಮೇಲ್ಭಾಗದ ಆಧಿಪತ್ಯವನ್ನು ಹೊಂದಿದೆ.   ಈ ವಾಯವಿನ ಕ್ರಿಯೆಯು ಸುಷುಮ್ನಾ ನಾಡಿಯಲ್ಲಿ ಗೋಚರಿಸುತ್ತದೆ. ಪ್ರಾಣ ಮತ್ತು ಅಪಾನ ವಾಯುಗಳನ್ನು ಒಳಗೆ ಮತ್ತು ಹೊರ ಗೆ ಹೋಗುವುದನ್ನು ತಡೆಯವುದರ ಮೂಲಕ ಅವನ್ನು ಒಟ್ಟಿಗೆ ಸುಷುಮ್ನಾ ನಾಡಿಯಲ್ಲಿ ಸಂಚರಿಸುವಂತೆ ಮಾಡುವದೇ ಉದಾನ ವಾಯು.

ಶರೀರದ ಮಧ್ಯ ಭಾಗವು *ಸಮಾನ ವಾಯುವಿನ* ಸ್ಥಾನ ಆಗಿದೆ. ಪ್ರಾಣ ಮತ್ತು ಆಹಾರವನ್ನು ಹೀರಿಕೊಳ್ಳುವುದೇ ಅಲ್ಲದೆ ಆಹಾರದ ಜೀರ್ಣಕ್ರಿಯೆಯಲ್ಲೂ ಸಹಕರಿಸುತ್ತದೆ. ಪ್ರಾಣ ಮತ್ತು ಅಪಾನ ವಾಯುಗಳ ನಡುವೆ ಸಮತೋಲನಕ್ಕೆ ಸಹಾ ಸಮಾನವಾಯುವೇ ಕಾರಣವಾಗಿದೆ.  . ಸಮಾನನು ನಾಡೀದ್ವಾರಾ ಜೀವವನ್ನು ಪುಣ್ಯಪಾಪಗಳಿಗನುಸಾರ ಸಂಬಂಧಿತ ಲೋಕಗಳಿಗೆ ಕರೆದೊಯ್ಯುವನು

ಮತ್ತು

ಆರನೇ ಆಹುತಿ ಸೃಷ್ಟಿ ಕರ್ತ ಬ್ರಹ್ಮನಿಗೆ ಬ್ರಹ್ಣಣೇ ಸ್ವಾಹಾ ಎಂದು ಸ್ವೀಕರಿಸುತ್ತೇವೆ.

 

ನಾವು ಭುಂಜಿಸುವ ಆಹಾರ ಶ್ರೀಹರಿಗೆ ನಿವೇದಿತವಿರಬೇಕು. ಶ್ರೀ ಹರಿಗೆ ನಿವೇದಿತವಾದ ಆಹಾರವನ್ನು ರಮಾ ದೇವಿಗೂ, ನಂತರ ಸರಸ್ವತೀ ಭಾರತೀ ಸಹಿತ ಬ್ರಹ್ಮ ವಾಯುದೇವರಿಗೂ ತಾರತಮ್ಯಾನುಸಾರ ನಿವೇದಿಸಿ, ನಂತರ ವೈಶ್ವದೇವ ಮಾಡಿ, ನಂತರ ಯತಿಗಳಿಗೆ ಹಸ್ತೋದಕ ನೀಡಿ, ( ಸಾಧ್ಯವಾದರೆ ಅತಿಥಿ ಅಭ್ಯಾಗತರಿಗೆ ಭೋಜನ, ) ನಂತರ ತಾನು ಭುಂಜಿಸಬೇಕು.

 

ನೈವೇದ್ಯ, ವೈಶ್ವದೇವ  ಸಮರ್ಪಿಸದೆ ಭೋಜನ ಮಾಡುವಂತಿಲ್ಲ.

 

ನಾವು ಬಾಯಾರಿಕೆಯಿಂದ ನೀರು ಸೇವಿಸುವಾಗಲೂ , ಹಣ್ಣು ತಿನ್ನುವಾಗಲೂ, ಅದನ್ನು ಕೃಷ್ಣಾರ್ಪಣಮಸ್ತು ಎಂದು ಸ್ವೀಕರಿಸಬೇಕು ಎಂದು ಶ್ರೀ ದೇವೇಂದ್ರ ತೀರ್ಥರು ಹೇಳುತ್ತಿದ್ದರು

*ಸಲಹೆ* – ಮನೆಯಲ್ಲಿ ವೈಶ್ವದೇವ ಮಾಡಲು ಇಜ್ಜಿಲಿನ ಅಡುಗೆಗೆ ಅವಕಾಶ ಇರುವುದಿಲ್ಲ. ಹೇಗೆ ಮಾಡುವುದು ? ಎಂದು ಕೆಲವರು ಕೇಳುತ್ತಾರೆ. ಅಂತಹ ಸಂದರ್ಭದಲ್ಲಿ ಸಣ್ಣ ಅಗ್ಗಿಷ್ಟಿಕೆಯಲ್ಲಿ ಅರ್ಧ ಪಾವಿನಷ್ಟು ಅನ್ನ ಮಾಡಿ, ಅದರಲ್ಲೇ ಸ್ವಲ್ಪಕ್ಕೆ ಹಾಲು ಸಕ್ಕರೆ ಹಾಕಿ ಪಾಯಸ ಮಾಡಿ. ಅದನ್ನು ಶ್ರೀ ಹರಿಗೆ ನಿವೇದಿಸಿ, ರಮಾ ನೈವೇದ್ಯ ಮಾಡಿ, ಸರಸ್ವತೀ ಭಾರತೀ ಸಹಿತ ಬ್ರಹ್ಮ ವಾಯುಗಳಿಗೆ, ಗರುಡ ಶೇಷರಿಗೆ ನಿವೇದಿಸಿ, ವೈಶ್ವದೇವ ಮಾಡಿ, ನೈವೇದ್ಯ ಮೊದಲು ಬಡಿಸಿ , ಪರಿಷೇಚನ ಚಿತ್ರಾವತಿ ಮಾಡಿ, ನಂತರ ಬೇರೆ ಪದಾರ್ಥಗಳನ್ನು (ಗ್ಯಾಸ್ ನಲ್ಲಿ ಮಾಡಿದ ಅಡುಗೆ ತಿನ್ನುವವರಿಗೆ )
ಸ್ವೀಕರಿಸಿ.

ಒಟ್ಟಿನಲ್ಲಿ ವೈಶ್ವದೇವ ಮಾಡಿದ ಅಡುಗೆ ಭುಂಜಿಸಬೇಕು.

ಅದೂ ಕಷ್ಟವಾದರೆ ನೀವು ತಿನ್ನುವ ಆಹಾರವನ್ನು ಕನಿಷ್ಠ ಕೃಷ್ಣಾರ್ಪಣಮಸ್ತು ಹೇಳಿ ಭುಂಜಿಸಿ.

ನಮ್ಮ ಭೋಜನ ಪಾಯಸದಿಂದ ಪ್ರಾರಂಭವಾಗಬೇಕು. ಆಯುರ್ವೇದ ಪ್ರಕಾರ ಬರೀ ಹೊಟ್ಟೆಯಲ್ಲಿ ಹಾಲು ನೀರು, ಪಾಯಸ ಮಿಶ್ರಿತ ಆಹಾರ ಆಯಸ್ಸು ವೃದ್ಧಿಸುತ್ತದೆ. ಆದ್ದರಿಂದಲೇ ಪಾಯಸ ಮೊದಲು ತಿನ್ನಬೇಕು.

 

ಉತ್ತರಾಪೋಷಣ 

ಭೋಜನ ನಂತರ  ಆಪೋಶನ ಸ್ವೀಕರಿಸುವಾಗ ಹೇಳುವ ಮಂತ್ರ
” ಅಮೃತಾಪಿಧಾನಮಸಿ ಸ್ವಾಹಾ “
ಉತ್ತರಾಪೋಷಣ ನಂತರ ಮತ್ತೇನನ್ನೂ ತಿನ್ನಬಾರದು..
ಆಪೋಶನ ನಂತರ ಹೇಳಬೇಕಾದ ಮಂತ್ರ :
ರೌರವೇ ಪೂಯನಿಲಯೇ ಪದ್ಮಾರ್ಬುದನಿವಾಸಿನಂ !
ಅರ್ಥಿನಾಮುದಕಂ ದತ್ತಂ ಅಕ್ಷಯ್ಯಮುಪತಿಷ್ಠತು !!
“ರೌರವ”ವೆಂಬ  ಪೂಯನಿಲಯದಲ್ಲಿ (ಕೀವುಯುಕ್ತ ನರಕ) ಕೋಟ್ಯಾನುಕೋಟಿ ನಿವಾಸಿಗಳು ನೀರಿಗಾಗಿ ಕಾಯುತ್ತಿರುತ್ತಾರೆ ಅವರಿಗೆ ಈ ಜಲವು ಅಕ್ಷಯವಾಗಲಿ
ಎಲ್ಲಾ ಮುಗಿದ ಮೇಲೆ ಹೇಳಬೇಕಾದ ಮಂತ್ರ :
“ಅನ್ನದಾತಾ ಸುಖೀಭವ” – ನಿಮಗೆ ಅನ್ನ ನೀಡಿದ ಬೆಳೆಗಾರ, ಉದ್ಯೋಗದಾತ, ಎಲ್ಲರೂ ಸುಖವಾಗಿರಲಿ ಎಂದು ಹೇಳಿ ಉತ್ತರಾಪೋಷಣದ ಉಳಿದ ನೀರನ್ನು ಎಲೆಯ ಮೇಲಿರುವ ಉಪ್ಪಿನ ಮೇಲೆ ಹಾಕಬೇಕು

ಬಡಿಸುವುದು ( ಪರಿವೇಷಣ)

ಮೊದಲು ಎಲೆಯ/ತಟ್ಟೆಯ ಕೆಳಗೆ ಮಂಡಲ ಮಾಡಬೇಕು.
ಎಲೆಯ ಮೇಲೆ  ಅಭಿಘಾರ ಮಾಡಬೇಕು
ನಂತರ ಉಪ್ಪು ಬಡಿಸಬೇಕು.
ಯಾವ ಪದಾರ್ಥವನ್ನೂ ಬರೀ ಕೈಯಿಂದ ಬಡಿಸಬಾರದು. ಸೌಟಿನಿಂದ ಬಡಿಸಬೇಕು.
ಪಾತ್ರೆಯಿಂದ ನೇರವಾಗಿ ಬಡಿಸಬಾರದು.
ಭೋಜನ ಕಾಲದಲ್ಲಿ ಪರಸ್ಪರ ಸ್ಪರ್ಶ ಮಾಡಬಾರದು
ಭೋಜನ ಕಾಲದಲ್ಲಿ ದೇವರ ಸ್ಮರಣೆ ಮಾಡುತ್ತಿರಿ
ಅನವಶ್ಯಕ ಅಸಂಬದ್ಧ ವಿಷಯ ಮಾತನಾಡಬೇಡಿ
ಆರೋಗ್ಯವಿರುವವರು ನೆಲದ ಮೇಲೆ ಕುಳಿತು ಭುಂಜಿಸಿ
ಭುಂಜಿಸುವಾಗ ಶಬ್ಧ ಮಾಡಬಾರದು
ಭೋಜನ ಮಾಡುವಾಗ ರಜಸ್ವಲೆಯನ್ನು ಮಾತನಾಡಬಾರದು.
ಭೋಜನ ಮುಗಿಯುವವರೆಗೂ ಮಧ್ಯದಲ್ಲಿ ಏಳಬಾರದು.
ಭೋಜನ ಕಾಲದಲ್ಲಿ ಶೂದ್ರ, ಚಂಡಾಲ ದರ್ಶನ, ಮಾತು ಮಾಡಬಾರದು.
ತೀರ್ಥವನ್ನು ಸ್ವೀಕರಿಸುವಾಗ ಶಬ್ದ ಮಾಡಬಾರದು

…….

ಆಧಾರ : ಶ್ರೀ ಚತುರ್ವೇದಿ ವೇದವ್ಯಾಸಾಚಾರ್ಯರ “ಭೋಜನ ಪದ್ಧತಿ”  ಮತ್ತು ನಮ್ಮ ತಂದೆ ಶ್ರೀ S N ರಾಮಚಂದ್ರಾಚಾರ್ಯರ ಮಾರ್ಗದರ್ಶನ.

Leave a Reply

Your email address will not be published.

Sumadhwa Seva © 2022