ಪುರಂದರದಾಸರ ಉಗಾಭೋಗ 1

yelagureshaa

ಪುರಂದರದಾಸರ ಉಗಾಭೋಗಗಳು

ಏಳುತ ಗೋವಿಂದಗೆ ಕೈಮುಗಿವೆ
ಕಣ್ಣಿಲಿ ತೆಗೆದು ನೋಡುವೆ ಶ್ರೀಹರಿಯ
ನಾಲಿಗೆ ತೆಗೆದು
ನಾರಾಯಣ, ನರಹರಿ
ಸೋಳಸಾಸಿರ ಗೋಪಿಯರರಸ
ಎನ್ನಾಳುವ ದೊರೆ ಪುರಂದರವಿಠಲ

ಎಂದಿಗಾದರೂ ನಿನ್ನ ಪಾದಾರವಿಂದವೇ
ಗತಿಯೆಂತು ನಂಬಿದೆನೋ
ಬಂಧು ಬಳಗವ ಬಿಟ್ಟು ಬಂದೆ
ನಿನ್ನ ಮನೆಗಿಂದು
ಮಂದರಧರ ಗೋವಿಂದ
ಪುರಂದರವಿಠಲನೇ, ನೀನೇ ಬಂಧು

ಅನುಕೂಲವಿಲ್ಲದವರ ವರ್ಜಿಸಬೇಕು
ವಿನಯದಿ ಗುರುಹಿರಿಯರಲ್ಲಿ ಮನ್ನಣೆ ಬೇಕು
ಮನದಿ ತನ್ನ ತಾನೇ ತಿಳಿದುಕೊಳ್ಳಬೇಕು
ವನಜನಾಭನ ಭಕ್ತರ ಸಂಗವಿರಬೇಕು
ಜನರಪವಾದ ನಿಂದೆಗಂಜಿಕೊಳ್ಳಬೇಕು
ಪುರಂದರವಿಠಲನ್ನ ಚರಣಸ್ಮರಣೆ ಬೇಕು

ಒಂದೊಂದವತಾರದೊಳನಂತ ವ್ಯಾಪಾರ
ಒಂದೊಂದವಯವದೊಳನಂತ ವ್ಯಾಪಾರ
ಒಂದೊಂದುರೋಮದೊಳು ಅಜಭವಾದಿ ಕಾರ್ಯ
ಒಂದೊಂದೆ ನಿನ್ನ ಮಹಿಮೆ ಪುರಂದರವಿಠಲ

ಕಣ್ಣಲ್ಲಿ ನೀರಿಲ್ಲ ಮನದಲ್ಲಿ ಕರಗಿಲ್ಲ
ಅತ್ತೆ ಸತ್ತರೆ ಸೊಸೆ ಅಳುವಂತೆ
ಅತ್ತೆ ಅತ್ತೆ ಎಂತೆಂದು ನಾನತ್ತೆ
ಅತ್ತೆ ಸತ್ತರೆ ಎದೆ ಎರಡು ಪರಿಯಾಯಿತೆಂದು
ಅತ್ತೆ ಅತ್ತೆ ಎಂದು ಅತ್ತೆ ಪುರಂದರ ವಿಠಲನ
ದಾಸರೆಲ್ಲರ ಮುಂದೆ ಹಾಡಿ ಹಾಡಿ ನಾನತ್ತೆ

 

ಆರು ಮುನಿದು ನಮಗೇನು ಮಾಡುವರಯ್ಯ
ಊರು ಒಲಿದು ನಮಗೇನು ಮಾಡುವದಯ್ಯ
ಕೊಳಬೇಡ ನಮ್ಮೊಡಲಿಗೆ ತುಸವನು
ಇಡಬೇಡ ನಮ್ಮ ಶುನಕಗೆ ತಳಿಗೆಯ
ಆನೆಯ ಮೇಲೆ ಬಪ್ಪನ ಶ್ವಾನ ಕಚ್ಚಲು ಬಲ್ಲುದೇ?
ದೀನನಾಥ ನಮ್ಮ ಪುರಂದರವಿಠಲನುಳ್ಳತನಕ
ಆರು ಮುನಿದು ನಮಗೇನು ಮಾಡುವರಯ್ಯ |

ಒಡವೆಯನೆ ಗಳಿಸಿದರೆ, ಚೋರರ ಭಯವುಂಟು
ಸೊಬಗುಳ್ಳ ಮಡದಿಯನೆ ಗಳಿಸಿದರೆ, ಜಾರ ಭಯವುಂಟು
ಪೊಡವಿಯನು ಗಳಿಸಿದರೆ, ಪರರಾಜರ ಭಯವುಂಟು
ನಿನ್ನ ಪಾದವನೆ ಗಳಿಸಿದರೆ, ಮತ್ಯಾರ ಭಯವಿಲ್ಲ ಪುರಂದರವಿಠಲ

ಏಕಾನೇಕ ಮೂರುತಿ ಲೋಕವೆಲ್ಲ ಮೂರುತಿ
ಸನಕಾದಿಗಳೆಲ್ಲ ಸಾನ್ನಿಧ್ಯ ಮೂರುತಿ
ನಮ್ಮ ಘನ ಮಹಿಮ ಬೊಮ್ಮ ಮೂರುತಿ
ಪುರಂದರವಿಠಲನೇ ಕಾಣಿರೋ

ಅಚ್ಯುತನ ಭಕುತರಿಗೆ ಮನಮೆಚ್ಚದವನು ಪಾಪಿ
ಆ ನರನೊಳಾಡಿ, ನೋಡಿ ನುಡಿಯೆ
ಮನುಜ ವೇಷದ ರಕ್ಕಸನೊಳಾಡಿ ನುಡಿದಂತೆ
ಸಚ್ಚಿದಾನಂದಾತ್ಮ ಪುರಂದರವಿಠಲನು
ಮೆಚ್ಚ ಮೆಚ್ಚನು ಕಾಣೋ ಎಂದೆಂದಿಗೂ

ಒಡೆಯನುಳ್ಳ ತೊತ್ತಿಗ್ಯಾತರ ಚಿಂತೆ?
ಎನ್ನೊಡೆಯ, ದ್ವಾರಕವಾಸ ಎಂಬೊ ಛತ್ರವಿರೆ
ಇಂದೆಗೆಂಬುವ ಚಿಂತೆ, ನಾಳೆಗೆಂಬೋ ಚಿಂತೆ
ನಾಡದ್ದಿಗೆಂಬೋ ಚಿಂತೆ ಯಾತಕಯ್ಯ
ಅಡಿಗಡೆಗೆ ನಮ್ಮೊಡನಿದ್ದು
ಕಾವ ಭಕ್ತರೊಡೆಯ
ಪುರಂದರವಿಠಲನಿರಲಿಕ್ಕೆ

ಒಬ್ಬರ ಭಂಟನಾಗಿ ಕಾಲ ಕಳೆವುದಕ್ಕಿಂತ
ನಿರ್ಬಂಧವಿಲ್ಲದೆ ತನ್ನಿಚ್ಚೆಯೊಳಿದ್ದು
ಲಭ್ಯವಾದೊಂದು ತಾರಕ ಸಾಕು ಎನಗೆ
ಅಬ್ಬರ ಒಲ್ಲೆನಯ್ಯ ಅಷ್ಟರಲ್ಲೆ ಸಂತುಷ್ಟಗರ್ಭಿ
ಕರುಣಾಕರ ಪುರಂದರವಿಠಲ ಲಭ್ಯ
ಒಂದು ತಾರಕ ಸಾಕು ಸಾಕು

 

ಅಣಕದಿಂದಲಾಗಲಿ, ಡಂಬದಿಂದಲಾಗಲಿ
ಎಡಹಿದಡಾಗಲಿ, ಬಿದ್ದಡಾಗಲಿ
ತಾಕಿದಡಾಗಲಿ, ತಾಕಿಲ್ಲದಡಾಗಲಿ
ಮರೆದು ಮೊತ್ತೊಮ್ಮೆಯಾಗಲಿ
ಹರಿಹರಿ ಅಂದವನಿಗೆ, ನರಕದ ಭಯವ್ಯಾಕೆ?
ಯಮಪಟ್ಟಣ ಕಟ್ಟಿದರೇನು,
ಯಮಪಟ್ಟಣ ಬಟ್ಟೆ ಬಯಲಾದರೇನು
ಹರಿದಾಸರಿಗೆ ಪುರಂದರವಿಠಲ.

ಅಣುವಾಗಬಲ್ಲ ಮಹತ್ತಾಗಬಲ್ಲ
ರೂಪಾಗಬಲ್ಲ ಅರೂಪಾಗಬಲ್ಲ
ರೂಪ-ಅರೂಪೆರೆಡೊಂದಾಗಬಲ್ಲ
ವ್ಯಕ್ತನಾಗಬಲ್ಲ ನಿರ್ಗುಣನಾಗಬಲ್ಲ
ಸಗುಣ ನಿರ್ಗುಣ ಎರಡೊಂದಾಗಬಲ್ಲ
ಅಘಟಿತಘಟಿತಾಚಿಂತ್ಯಾದ್ಭುತಮಹಿಮ
ಸ್ವಗತಭೇದ ವಿವರ್ಜಿತ ಪುರಂದರವಿಠಲ

ಒಂದಕ್ಷರವ ಪೇಳಿದವರ ಉರ್ವಿಯೊಳು ಅವರೇ ಗುರು
ಎಂದು ಇಳೆಯೊಳು ಬಹುಮಾನ ಮಾಡಬೇಕು ಕುಂದದೆ
ಒಂದಿಷ್ಟು ಅವಮಾನ ಮಾಡಿದರೆ ತಪ್ಪದೆ
ಒಂದುನೂರು ಶ್ವಾನಜನ್ಮ ಕೋಟಿ ಹೊಲೆ ಜನ್ಮ
ತಂದೀವನ ಪುರಂದರವಿಠಲ

ಏನ ಓದಿದರೇನು ಏನ ಕೇಳಿದರೇನು
ಹೀನಗುಣಗಳ ಹಿಂಗದಜನರು
ಮಾನಾಭಿಮಾನವ ನಿನಗೊಪ್ಪಿಸಿದ ಮೇಲೆ
ನೀನೇ ಸಲಹಬೇಕೋ ಪುರಂದರವಿಠಲ

ಅಣು-ರೇಣು-ತೃಣದಲ್ಲಿ ಪರಿಪೂರ್ಣನಾಗಿರುವ
ಗುಣವಂತನೇ ನಿನ್ನ ಮಹಿಮೆ ಗಣನೆ ಮಾಡುವರಾರು?
ಎಣಿಸಿ ನೋಡುವಳಿನ್ನು ಏಣಾಕ್ಷಿ ಸಿರಿದೇವಿ
ಜ್ಞಾನ ಸುಗುಣತತ್ವ ವೇಣುಗೋಪಾಲ ಹರೆ
ಕಾಣಿಸೋ ನಿನ್ನ ಮಹಿಮೆ ಪುರಂದರವಿಠಲ |

ಆರು ಅಕ್ಷರವುಳ್ಳ ವ್ಯಾಹೃತಿಯಿಂದ ಓಂಕಾರ
ವಿಸ್ತಾರವಾಗುವದು ಕೇಳಿ
ಈರೀತಿ ಇಪ್ಪತ್ತನಾಲ್ಕು ಅಕ್ಷರದಿಂದ
ತೋರುತಲಿ, ಗಾಯತ್ರಿ ರಚಿಸಿದ ಹರಿಯು,
ಮೆರೆವುದೈ ಪುರುಷಸೂಕ್ತಾದಿ ಅನಂತ ವೇದರಾಶಿ
ದೊರೆ ಎಂದು ಪುಗಳುವ ಓಂಕಾರ ಶ್ರೀಕಾರ
ಮೆರೆದು ದೈವತೊಂದು ಲಕ್ಷ್ಯಗಳು
ಈರೀತಿ, ಅಶೇಷಗುಣಧಾರಯೆಂದು
ನಾರಾಯಣೋದಪೂರ್ಣಗುಣಯುತ
ಭರದಿ ಜ್ಞಾನರೂಪ ಶಬ್ದನೋ
ಮೆರೆವ ದೇವೇಶ ಶತರ್ದನ
ಧರಿಸಿದ ಪುರಂದರವಿಠಲ |

ಅತಳದಲ್ಲಿರಿಸೋ ಸುತಳದಲ್ಲಿರಿಸೋ
ತಳಾತಳ ಪಾತಾಳದಲ್ಲಿರಿಸೋ
ಮತ್ತಾವ ಯೋನಿಯಲ್ಲಿರಿಸೋ
ನೀನೆಲ್ಲಿರಿಸಿದರೆ ನಾನಲ್ಲಿರದಾದೆನೆ?
ನೀನೆಂತು ನಡೆದು ನಡೆಸಿಕೊಂಬುವೆಯೋ
ನಾನಂತಂತೆ ನಡೆಯುವೆ ಪುರಂದರವಿಠಲ |

ಅನಾಮಿಕಾ ಮಧ್ಯದ ಎರಡನೇಗೆರೆ ಆದಿ
ಇನಿತು ಮಧ್ಯಾಂಗುಲಿ ಕೊನೆಗೆರೆಕೂಡಿಸಿ
ಮನುಮೂರ್ತಿ ಪರಿಮಾಣ ಅಂಗುಷ್ಟದಿಂದಲಿ
ಎಣಿಸು ತರ್ಜನಿಮೂಲ ಪರಿಯಂತರ
ಘನ ಹತ್ತುಗೆರೆ ಜಪ ಪುರಂದರವಿಠಲಗೆ
ಮನದಿ ಅರ್ಪಿಸುತ ಗಾಯತ್ರಿ ಜಪ |

ಅನ್ನ ಪಾನಾದಿಗಳೀಯೋ ಅಭ್ಯಾಗತ ಬ್ರಾಹ್ಮಣರಿಗೆ
ಅನ್ನ ಪಾನಾದಿಗಳೀಯೋ ಆ ಚಂಡಾಲ ಸಪ್ತರಿಗೆ
ಅನ್ನ ಪಾನಾದಿಗಳೀಯೋ ಅಂಧ ದೀನ ಕೃಪಣರಿಗೆ
ಹಸಿವೆಗೆ ಹಾಗವನಿಗರ್ಪಿಸೋ ಪುರಂದರವಿಠಲಗೆ |

ಅನ್ಯರೊಬ್ಬರ ಕಾಣೆ ಮನ್ನಿಸುವರೆನ್ನ
ಆಪನ್ನ ರಕ್ಷಕನೆ ಪರಿಪಾಲಿಸು ಇನ್ನು
ಪನ್ನಂಗಶಯನ ಪುರಂದರವಿಠಲ

ಅಪರಾಧ ಹತ್ತಕೆ, ಅಭಿಷೇಕ ಉದಕ
ಅಪರಾಧ ನೂರಕೆ, ಕ್ಷೀರ ಹರಿಗೆ
ಅಪರಾಧ ಸಹಸ್ರಕೆ, ಹಾಲು ಮೊಸರು ಕಾಣೋ
ಅಪರಾಧ ಲಕ್ಷಕೆ, ಜೇನು ಘೃತ
ಅಪರಾಧ ಹತ್ತುಲಕ್ಷಕೆ, ಬಲುಪರಿ ಕ್ಷೀರ
ಅಪರಾಧ ಹೆಚ್ಚಿಗೆಗೆ, ಹತ್ತು ತೆಂಗಿನ ಹಾಲು
ಅಪರಾಧ ಕೋಟಿಗೆ, ಅಚ್ಚ ಜಲ
ಅಪರಾಧ ಅನಂತಕ್ಷಮಿಗೆ, ಗಂಧೋದಕ
ಉಪಮೆರಹಿತ ನಮ್ಮ ಪುರಂದರವಿಠಲಗೆ
ತಾಪಸೋತ್ತಮನ ಒಲುಮೆ ವಾಕ್ಯ |

ಅಪಾಯ ಕೋಟಿ ಕೋಟಿಗಳಿಗೆ ಉಪಾಯವೊಂದೇ
ಹರಿಭಕ್ತರು ತೋರಿಕೊಟ್ಟ ಉಪಾಯ ಒಂದೇ
ಪುರಂದರವಿಠಲನೆಂದು ಭೋರಿಟ್ಟು
ಕರೆವ ಉಪಾಯವೊಂದೇ

ಅರ್ಭಕನ ತೊದಲನುಡಿ ಅವರ ತಾಯಿತಂದೆ
ಉಬ್ಬಿ ಕೇಳುವರಯ್ಯ ಉರಗೇಂದ್ರಶಯನ
ಕೊಬ್ಬು ನಾನಾಡಿದರೂ ತಾಳಿ, ರಕ್ಷಿಸು ಎನ್ನ
ಕಬ್ಬುಬಿಲ್ಲನಪಿತ, ಪುರಂದರ ವಿಠಲ.

ಅಲ್ಲದ ಕರ್ಮವ ಆಚರಿಸಿದವ ಕೆಟ್ಟ
ಬಲ್ಲಿದರೊಳು ಸೆಣಸಿ ಮೆರೆದವ ಕೆಟ್ಟ
ಲಲ್ಲೆ ಮಾತಿನ ಸತಿಯರ ನಂಬಿದವ ಕೆಟ್ಟ
ಪುಲ್ಲನಾಭ ಸಿರಿಪುರಂದರವಿಠಲನ
ಮೆಲ್ಲಡಿಗಳ ನಂಬದವ ಕೆಟ್ಟ
ನರಗೇಡಿ ಬಲ್ಲಿದರೊಳು ಸೆಣೆಸಿದವ ಕೆಟ್ಟ |

ಅಲ್ಲಿ ವನಗಳುಂಟು ಆ ಪ್ರಾಕೃತವಾದ
ಫಲ ಪುಷ್ಪಗಳಿಂದೊಪ್ಪುತಲಿಹುದು
ಪಕ್ಷಿ ಜಾತಿಗಳುಂಟು ಅತಿವಿಲಕ್ಷಣವಾದ
ಕಿಲ ಕಿಲ ಶಬ್ಧವು ರಂಜಿಸುವ ನುಡಿಗಳು
ಮುಕುತರು ಬಂದು ಜಲಕೀಡೆಗಳ ಮಾಡಿ
ಕುಳಿತು ಸುಖಿಪರು ಇಂಥ ಸುಖ ಬೇಕಾದರೆ
ನೀಚ ವೃತ್ತಿಯ ಬಿಟ್ಟು ಪರಲೋಕ ಸುಖವನೀವ
ಪುರಂದರವಿಠಲನ ಭಜಿಸು ಜೀವ |

ಆಕಳ ಕಿವಿಗೆ ಯೆಣ್ಣೆ ಅಂಗೈ ಹಳ್ಳವಾಗಿರಬೇಕು
ಉದ್ದು ಮುಣಗುವಂತೆ ಇರಬೇಕು
ನೀರ ಸಾಕಾಗದೆ ಹೆಚ್ಚು ಕಡಿಮೆ ಸಾಕೆಂಬಷ್ಟು ಕುಡಿದರೆ
ಸಾಕಾರ ಪುರಂದರವಿಠಲ ಮದ್ಯಸಮ ಮಾಡುವ

————

ಆದಿಯಲಿ ಗಜಮುಖನ ಅರ್ಚಿಸಿ ಆರಂಭಿಸಲು
ಮೋದದಿಂ ಸಲ್ಲಿಸುವ ಮನೋಭೀಷ್ಟವ
ಸಾಧುಜನರೆಲ್ಲ ಕೇಳಿ ಸಕಲ ನಿರ್ಜರರಿಗೆಲ್ಲ
ಮಾದವನೇ ನೇಮಿಸಿಪ್ಪನಧಿಕಾರವ
ಆದರಿಂದಲವರೊಳಗೆ ತಾ ನಿಂದು ಕಾರ್ಯಗಳ
ಬೇಧಗೋಳಿಸದೆ ಮಾಳ್ಪ ಪುರಂದರ ವಿಠಲ

——————-

ಅಂಬರದಾಳವನು ರವಿ ಶಶಿ ಬಲ್ಲರು
ಅಂತರಲಾಡುವ ಪಕ್ಷಿ ತಾ ಬಲ್ಲುದೇ ?
ಜಲದ ಪ್ರಮಾಣ, ತಾವರೆಗಲ್ಲದೆ
ಮ್ಯಾಲಿರುವ ಗಿಡಗಳು ತಾವು ಬಲ್ಲವೇ?
ಸುರತ ಸುಖವನೆಲ್ಲ, ಯುವಕನಲ್ಲದೆ
ಬಾಲಕತನದವರು ತಾವು ಬಲ್ಲರೇ?
ದೇವ ನಿನ್ನ ಮಹಿಮೆಯ ಜ್ಞಾನಿಗಳ
ಭಕುತಿಯ ನೀನೆ ಬಲ್ಲಯ್ಯ ಪುರಂದರವಿಠಲ

——————

ಆದಿಸೃಷ್ಟಿಯಲಾರು ಮೊದಲೆ ಉದಿಸಿದರೇನು
ಅವರವರೆ ಅಧಿಕರಧಿಕರಯ್ಯ
ಕಾಲಾಜಯಾದಿಗಳು ಮೊದಲೆ ಉದಿಸಿದರೇನು
ಅವರವರೆ ಅಧಿಕಕರಯ್ಯ
ಅವರಂತರಂತರ ಅವರ ನೋಡಯ್ಯ
ಅವರವರೆ ಅಧಿಕರಧಿಕರಯ್ಯ
ಪುರಂದರವಿಠಲನ ಸಂತತಿ ನೋಡಯ್ಯ
ಅವರವರೆ ಅಧಿಕರಧಿಕರಯ್ಯ |

——————–
ಆದಿವಾರ, ಸಂಜೆ, ರಾತ್ರಿಲಿ
ಅಂಗಾರಕ, ಶುಕ್ರವಾರದಿ,
ಆದಿತ್ಯ, ಸೋಮಗ್ರಹಣದಿ,
ಅಮವಾಸಿ, ಹುಣ್ಣಿಮಿ, ದ್ವಾದಶಿಲಿ,
ವೈಧೃತಿ, ವ್ಯತೀಪಾತ ಸಂಕ್ರಮಣಗಳಲಿ
ತುಳಸಿ ತೆಗೆದರೆ, ಪುರಂದರವಿಠಲನು
ಮುನಿವನು ಕಾಣಿರೋ

—————————

ಆನೆಯ ಕಾಯ್ದಾಗ ಜ್ಞಾನವಿದ್ದದ್ದೇನೋ ?
ನಾನು ಒರರಲು ಈಗ ಕೇಳದಿದ್ದದ್ದೇನು ?
ದಾನವಾಂತಕ, ದೀನರಕ್ಷಕನೆಂಬೋ
ಮಾನ ಉಳಿಹಿಕೊಳ್ಳೊ ಶ್ರೀಪುರಂದರವಿಠಲ

————————
ಆಯಸ್ಸು ಇದ್ದರೆ, ಅನ್ನಕೆ ಕೊರತಿಲ್ಲ
ಜೀವಕ್ಕೆ ಎಂದೆಂದಿಗೆ ತನುಗಳ ಕೊರತಿಲ್ಲ
ಸಾವು, ಹುಟ್ಟು ಎಂಬೋದು ಸಹಜ ಲೋಕದೊಳಗೆ
ಕಾಲಕಾಲದಿ ಹರಿಯ ಕಲ್ಯಾಣಗುಣಗಳ
ಕೇಳದವನ ಜನ್ಮ ವ್ಯರ್ಥ, ಪುರಂದರವಿಠಲ

—————
ಆವಿನ ಕೊಂಬಿನ ತುದಿಯಲಿ
ಸಾಸಿವೆ ನಿಂತಿದ್ದ ಕಾಲವೆ
ನಿನ್ನ ನೆನೆದವ, ಜೀವನ್ಮುಕ್ತನಲ್ಲವೆ
ಸರ್ವಕಾಲದಲಿ ಒರಲುತ ನರಳುತ
ಹರಿಹರಿಯೆಂದವ ಜೀವನ್ಮುಕ್ತನೆಂಬುವುದು
ಏನು ಆಶ್ಚರ್ಯವಯ್ಯಾ ಪುರಂದರವಿಠಲ

———————————–

ಆವಾವ ಯುಗದಲಿ ವಿಷ್ಣು ವ್ಯಾಪಕನಾಗಿ
ವಿಷ್ಣು ಇದ್ದಲ್ಲಿ ವಿಷ್ಣುಲೋಕಾಗಿಪ್ಪುದಾಗಿ
ಸಾಲೋಕ್ಯ ಸಾರೂಪ್ಯ ಸಾಮೀಪ್ಯ ಸಾಯುಜ್ಯ
ಸಾದೃಶ್ಯಂಗಳು ಪಂಚವಿಧ ಮುಕುತಿ ದಾಯಕ
ಭರಿತ ನಮ್ಮ ಪುರಂದರವಿಠಲ

————————————————-

ಇಂದಿನ ದಿನವೇ ಶುಭದಿನವು
ಇಂದಿನ ವಾರ ಶುಭವಾರ
ಇಂದಿನ ತಾರೆ ಶುಭತಾರೆ
ಇಂದಿನ ಯೋಗ ಶುಭ ಯೋಗ
ಇಂದಿನ ಕರಣ ಶುಭಕರಣ
ಇಂದು ಶ್ರಿ ಪುರಂದರವಿಠಲನ
ಸಂದರುಶನ ಫಲವೆನಗಾಯಿತು

——————————————

ಇಂದಿಗೆಂಬ ಚಿಂತೆ ನಾಳಿಗೆಂಬಾ ಚಿಂತೆ ತೊತ್ತಿಗೇಕಯ್ಯ
ಒಡೆಯನುಳ್ಳನಕ ತೊತ್ತಿಗೇತರ ಚಿಂತೆ
ಅಡಿಗಡಿಗೆ ನಮ್ಮನಾಳುವ ಕಾವ ಚಿಂತೆಯವ-
ನೊಡೆಯ ಪುರಂದರವಿಠಲರಾಯನು ಇರುತಿರೆ
ಒಡೆಯನುಳ್ಳ ತೊತ್ತಿಗೇತರ ಚಿಂತೆ

———————————————————–

ಇದೇ ಮುನಿಗಳ ಮನದ ಕೊನೆ ಠಾವು
ಇದೇ ಬ್ರಹ್ಮಾದಿಗಳ ಹೃತ್ಕಮಲದ ಠಾವು
ಇದೇ ಅರಿವ ಸುಜ್ಞಾನಿಗಳಿಗೆ, ವೈಕುಂಠವು
ಇದೇ ದ್ವಾರಕವು, ಇದೇ ಕ್ಷೀರಾಂಬುಧಿ
ಇದೇ ಪುರಂದರವಿಠಲನ ಮನ ಮಂದಿರ

ಇಕೋ ನಮ್ಮ ಸ್ವಾಮಿಸರ್ವರಂತರ್ಯಾಮಿ
ಪ್ರಕಟ ಸಹಸ್ರನೇಮಿ ಭಕ್ತಜನ ಪ್ರೇಮಿ
ಒಳನೋಡಿ ನಮ್ಮ ಹೊಳೆವ ಪರಬ್ರಹ್ಮ-
ನರಿಯಬೇಕು ಮರ್ಮ
ವಸ್ತುವಿನ ನೋಡಿ ಸಮಸ್ತ ಮನಮಾಡಿ
ಅಸ್ತ ವಸ್ತು ಬೇಡಿ ಸಮಸ್ತ ನಿಚಗೂಡಿ
ಮಾಡು ಗುರು ಧ್ಯಾನ
ಮುದ್ದು ಪುರಂದರವಿಠಲನ ಚರಣವ

 

ಇರಲಿ ನಿನ್ನಲ್ಲಿ ಭಕ್ತಿ ಎನಗೆ ಇರದಿರಲಿ
ಹರಿದಾಸನೆಂದೆನ್ನ ಕರೆವರು ಸಜ್ಜನರು
ಹರಿದಾಸರನು ಯಮನೆಳೆವನೆಂಬಪಕೀರ್ತಿಯ
ಪರಿಹರಿಸಿಕೊಳ್ಳೋ ಶ್ರೀ ಪುರಂದರವಿಠಲ

ಇರುವುದಾದರೆ ಮುಗುಳುತೆನೆ
ಅದಿಲ್ಲದಿರೆ ಚಿಗುರೆಲೆ
ಅದೂ ಇಲ್ಲದಿರೆ ಬರಲು ಕಟ್ಟಿಗೆ
ಇಲ್ಲದಿದ್ದರೆ ಬೇರು ಮಣ್ಣು
ಅದೊಂದು ಇರದಿರೆ
ತುಳದಿ ತುಳಸಿ ಎಂದೊರಲಿದರೆ ಸಾಕು
ಎಲ್ಲ ವಸ್ತುಗಳಾನೀಡಾಡುವ ಪುರಂದರವಿಠಲ

 

ಇಲ್ಲೆಂಥಾ ಸುಖಗಳುಂಟೋ ಅಲ್ಲಂಥ ಸುಖಗಳುಂಟು
ದು:ಖ ಮಿಶ್ರವಾದ ಸುಖ ಇಹಲೋಕದಲ್ಲಿಪ್ಪುದು
ನಾಶವುಂಟು ದಿನಕ್ಕೊಂದು ಬಗೆ ಬಗೆಯಾದಂಥ ಸುಖವಾಗಿ
ನಾಶವಿಲ್ಲದ ಅಪ್ರಾಕೃತವಾದ ಸುಖವನನುಭವಿಸುತ್ತಾ
ಕ್ರಮದಿ ತಿರುಗುವರು ಅಂದೋಳಿಕ ಛತ್ರಚಾಮರ
ಸದಾ ಪೀತಾಂಬರ ಶಂಖಚಕ್ರಗಳಿಂದೊಪ್ಪುತ
ಪುರಂದರ ವಿಠಲನ ಭಜಿಸೆಲೋ ಜೀವ

 

ಈ ಮರ್ತ್ಯದೊಳಗೆಲ್ಲ ಅರಸಿ ನೋಡಲುದೇವ
ಅರಸು ಮೆಚ್ಚನು, ಪ್ರಜೆ ದ್ವೇಷಿಸುವರು
ಆಳುಗಳು ಒಲಿದಲ್ಲಿ, ಅರಸು ಮೆಚ್ಚನು ಒಮ್ಮೆ
ಈ ಮರ್ತ್ಯಜನರ ಚರಿತ್ರೆ ವಿಚಿತ್ರವೋ ಎಲೋ ರಂಗ
ಭೂಲೋಕದರಸ, ನಿನ್ನ ಭಕ್ತಜನರುಗಳು
ನೀ ಕರುಣಿಸಲು, ತಾವು ಕರುಣಿಸುವರು
ನೀನೊಲಿದು, ಒಮ್ಮೆ ತಿರುಗಿನೋಡೊ ಹರಿಯೆ
ಈ ಪರಿಯಲ್ಲಿ ನಿನ್ನ ದಯೆಯಲಿ ಮಹವಿಘವದೊಳು
ಅರಮೊರೆ ಆಗುತಿದೆ ಎನಗೆ ಆರು ರಕ್ಷಿಪರೋ
ಅಂಜದಿರು ನೀನೆಂದು ಅಭಯನೀವರ ಕಾಣೆ
ಶ್ರೀನಾಥ, ಅನಿಮಿತ್ತದಯಾಸಿಂಧು
ನಿನ್ನ ದಾಸರೊಲುಮೆ ಪಾಲಿಸೆಲೋ ಗುಣನಿಧಿಯೇ
ನಿನ್ನ ಚರಿತಾಮೃತವು, ತೋರಿ ಸಲಹಯ್ಯ
ಪ್ರಸನ್ನ ಮೂರುತಿ, ಅಹೋಬಲ ಪುರಂದರವಿಠಲರೇಯ

 

ಉಗುರು – ಬ್ರಹ್ಮಾಂಡಖರ್ಪರ ಒಡೆದಿತು
ಅಂಗುಟ – ದುರ್ಯೋಧನನ ಕೆಡಹಿತು
ಬಾಹು – ಕೂಸಿನ್ನ ಎತ್ತಿ ಕೆಡಹಿ ಬಿಸಾಟಿತು
ದೃಷ್ಟಿ – ಕೌರವೇಶನ ನಸುಗುಂದಿಸಿತು
ಜಗಜಟ್ಟಿ – ಪುರಂದರವಿಠಲಗೆದಿರುಂಟೆ ?

ಉದಕ ಧಾವತಿಯುಂಟು ಶಿವನ ಪೂಜೆಗೆ ನಿತ್ಯ
ಪದುಮಸಂಭವನಿಗೆ ಹೃದಯ ದಂಡನೆ ಬೇಕು
ಮಧುರ ನುಡಿಯೇ ಸಾಕು ಚೆಲುವ ಶ್ರೀಕೃಷ್ಣನಿಗೆ
ಒದಗಿ ಪೊರೆವ ನಮ್ಮ ಪುರಂದರವಿಠಲ

ಗಾಯತ್ರಿ ಜಪ ವಿಧಾನ :
ಉದಯ ಕಾಲದ ಜಪ ನಾಭಿಗೆ ಸರಿ
ಹೃದಯಕೆ ಸರಿಯಾಗಿ ಮಧ್ಯಾಹ್ನದಿ
ವದನಕೆ ಸಮನಾಗಿ ಸಾಯಂಕಾಲಕೆ ನಿತ್ಯ
ಪದುಮನಾಭನ ತಂದೆ ಪುರಂದರವಿಠಲಗೆ
ಇದೇ ಗಾಯತ್ರಿಯಿಂದ ಜಪಿಸಬೇಕು

ಉದಯಾಸ್ತಮಾನವೆಂಬೆರಡು ಕೊಳಗವನಿಟ್ಟು
ಆಯಸ್ಸು ಎಂಬೊ ರಾಶಿ ಅಳದು ಹೋಗುವ ಮುನ್ನ
ಹರಿಯ ಭಜಿಸಬೇಕು, ಮನ ಮುಟ್ಟಿ ಭಜಿಸಿದರೆ
ತನ್ನ ಕಾರ್ಯವು ಘಟ್ಟಿ, ಹಾಗಲ್ಲದಿದ್ದರೆ
ತಾಪತ್ರಯ ಬೆನ್ನಟ್ಟಿ ವಿಧಿಯೊಳುಗೈವ
ದಿಟ್ಟ ಪುರಂದರ ವಿಠಲನ ಕರುಣದ
ದೃಷ್ತಿ ಅವನ ಮೇಲಿದ್ದರೆ, ಆಗ ಜಗಜಟ್ಟಿ

ಎಡಕೆ ಭಾವಿಯುಂಟು, ಬಲಕೆ ಕೆರೆ ನೋಡು
ಮುಂದೆ ಕಾಡ್ಗಿಚ್ಚು ಹತ್ತಿತು ಎಲೊ ದೇವ
ಹಿಂದೆ ಹುಲಿ ಬೆನ್ನಟ್ಟಿ ಬರುತಲಿದೆ
ಯಾರಿಗೆ ಯಾರೋ ಪುರಂದರವಿಠಲ

ಎಡಗೈಯಿಂದಲಿ ನೀರು ಅಭ್ಯಂಗನಾಚಮನ
ಪೊಡವಿಯೊಳಗೆ ದಾನ ಮಾಡಿದ ಮನುಜಗೆ
ಎಡೆ ಮೃತ್ಯು ದಾರಿದ್ರ್ಯ ತಾಕೆ, ಕಟ್ಟುವುದು ಎಂದು
ಒಡನೆ ಶೃತಿ ಸ್ಮೃತಿ ಪೇಳುವದೋ
ಬಡವರಾಧಾರಿ ಶ್ರೀ ಪುರಂದರವಿಠಲನ್ನ ಸರಿ
ಅಡಿಗ್ಳರ್ಚಿಸಿ ಬಾಳೋ ಅಬ್ಜದಂತೆ

ಎದೆಯನಾಡಿನಲೊಂದು ಸೋಜಿಗ ಹುಟ್ಟಿ
ಮಿಡಿದು ಮಾಡಿದಂಥ ಕಣಕದ ರೊಟ್ಟಿ
ಅದಕೆ ಸಾಧನ ತೊವ್ವೆ ತುಪ್ಪವನೊಟ್ಟಿ
ಅದರ ಮೇಲೆ ಸಕ್ಕರೆಯನು ಒಟ್ಟಿ
ಅವನು ಮೆಲಬಲ್ಲ ಅವ ಜಗಜಟ್ಟಿ
ಪುರಂದರವಿಠಲ ಸುಲಭವು ಗಟ್ಟಿ

 

ಎನ್ನ ಕಡೆ ಹಾಯಿಸುವುದು ನಿನ್ನ ಭಾರ
ನಿನ್ನ ನೆನೆಯುತಲಿಹುದು ಎನ್ನ ವ್ಯಾಪಾರ
ಎನ್ನ ಸತಿಸುತರಿಗೆ ನೀನೇ ಗತಿ
ನಿನ್ನೊಪ್ಪುಸುವುದು ನನ್ನ ನೀತಿ
ಎನ್ನ ಪಡಿ ಇಕ್ಕಿ ಸಲಹುವುದು ನಿನ್ನ ಧರ್ಮ
ನಿನ್ನ ಅಡಿಗೆರಗುವುದು ಎನ್ನ ಕರ್ಮ
ಎನ್ನ ತಪ್ಪುಗಳನೆಣೆಸುವುದು ನಿನ್ನದಲ್ಲ
ನಿನ್ನ ಮರೆತು ಬದುಕುವುದು ಎನ್ನದಲ್ಲ
ನೀನಲ್ಲದಿನ್ನಾರಿಗೆ ಮೊರೆದಿಡುವೆ ನಾನು ಪುರಂದರವಿಠಲ

ಎನ್ನಮ್ಮ ಸಿರಿದೇವಿ, ಇನ್ನೂ ಅರಿಯಳು ಮಹಿಮೆ
ಕುನ್ನಿ ಮಾನವನು, ನಾನೇನು ಬಲ್ಲೆನು?
ಪನ್ನಗಾದ್ರಿ ನಿಲಯನೇ,ಪರಮಪಾವನ್ನ ಕೃಷ್ಣ
ಎನ್ನನುದ್ಧರಿಸಯ್ಯಾ ಪುರಂದರವಿಠಲ

ಎರಗಿ ಭಜಿಪೆನೊ ನಿನ್ನ ಚರಣ ಸನ್ನಿಧಿಗೆ
ಕರುಣದಿಂದಲಿ ನಿನ್ನ ಸ್ಮರಣೆಯ ಎನಗಿತ್ತು
ಮರೆಯದೆ ಸಲಹೋ ಶ್ರೀ ಪುರಂದರವಿಠಲ

ಎಲ್ಲಾ ಒಂದೇ ಎಂಬುವರ ಎರಡು ದಾಡಿಯಲ್ಲಿದ್ದ
ಹಲ್ಲುದುರೆ ಬಡಿಯಬೇಕು ಹರಿಭಕ್ತರಾದವರು
ಸಲ್ಲದು ಸಲ್ಲದು ಈ ಆತು ಇದಕೆ ಸಂಶಯಬೇಡ
ಕಲ್ಲ ನಾರಿಯ ಮಾಡಿದ ಪುರಂದರವಿಠಲನ
ಪಲ್ಲವಾಂಘ್ರಿಯ ನೆನೆದು ಪರಗತಿಯ ಪಡೆಯಿರೊ

ಎಲ್ಲಿ ಹರಿಕಥಾ ಪ್ರಸಂಗವೋ ಅಲ್ಲಿ
ಯಮುನಾ, ಗಂಗಾ, ಗೋದಾವರಿ, ಸರಸ್ವತಿ
ಎಲ್ಲ ತೀರ್ಥರು ಬಂದು ಎಣೆಯಾಗಿ ನಿಲ್ಲುವುವು
ಸಿರಿ ವಲ್ಲಭ ಪುರಂದರವಿಠಲ ಮೆಚ್ಚುವನು

ಎಲೆ ಜಿಹ್ವೆ ಕೇಶವನ ನಾಮವನೆ ಸ್ತುತಿಸು
ಎಲೆ ಕರಗಳಿರಾ, ಶ್ರೀ ಹರಿಯ ಪೂಜೆಯ ಮಾಡಿ
ಎಲೆ ನೇತ್ರಗಳಿರ, ಶ್ರೀಕೃಷ್ಣ ಮೂರ್ತಿಯ ನೋಡಿ
ಎಲೆ ಕಾಲುಗಳಿರ, ಶ್ರೀ ಹರಿಯ ಯಾತ್ರೆಯ ಮಾಡಿ
ಎಲೆ ನಾಸಿಕವೆ, ಮುಕುಂದನ ಚರಣ ಪರಿಮಳವನಾಘ್ರಾಣಿಸುತಿರು
ಎಲೆ ಶಿರವೆ, ನೀನಧೋಕ್ಷಜನ ಪಾದ ಜಲರುಹದಲ್ಲಿ ಎರಗಿರು
ಎಲೆ ಮನವೆ, ನೀ ವರದ ಕೇಶವ ಪುರಂದರವಿಠಲನ
ಭಕುತಿ ವಿಷಯಗಳಲ್ಲಿ ಅನುದಿನವು ಕಳೆಯುತ್ತಿರು

ಒಂದೇ ಒಂದು ಬೆರಳ ಜಪ
ಒಂದೇ ಆಇದು ಗೆರೆಯ ಜಪ
ಒಂದೇ ಹತ್ತು ಪುತ್ರಜೀವಿಮಣಿಯ ಜಪ
ಒಂದೇ ನೂರು ಶಂಖಮಣಿಯ ಜಪ
ಒಂದೇ ಸಾವಿರ ಹವಳದ ಜಪ
ಒಂದೇ ಹತ್ತುಸಾವಿರ ಮುತ್ತಿನಮಣಿಯ ಜಪ
ಒಂದೇ ಹತ್ತು ಲಕ್ಷ ಸುವರ್ಣಮಣಿಯ ಜಪ
ಒಂದು ಕೋಟಿ ದರ್ಭೆ ಬೆಟ್ಟಿನ ಜಪ
ಒಂದೇ ಅನಂತ ಶ್ರೀತುಲಸಿಮಣಿಯ
ಜಪವೆಂದು ಪುರಂದರವಿಠಲ ಪೇಳ್ದ

ಕತ್ತೆ ಕುದುರೆಯಾಗಿ ಹರಿಗೆ ಶರಣೆನಲುಂಟೆ?
ಹಂದಿ ನಾಯಿಯಾಗಿ ಹರಿಗೆ ಶರಣೆನಲುಂಟೆ?
ಕ್ರಿಮಿ ಕೀಟನಾಗಿ ಹರಿಗೆ ಶರಣೆನಲುಂಟೆ?
ಮರೆತೆಯಾ ಮಾನವ ಹಿಂದಿನನುಭವಗಳನು
ನಿನಗೆ ಮಾನುಷ ಜನ್ಮವು ಬರಲಾಗಿ
ಪುರಂದರವಿಠಲನ್ನ ನೆನೆ ಕಂಡ್ಯ ಎರಗು ಕಂಡ್ಯ

ಕಮಲಜನು ನಿನ್ನ ಪಾದಕಮಲವನು ತೊಳೆದಿಹನು
ಉಮಾಪತಿಯು ನಿನ್ನ ಪಾದಜಲವ ಪೊತ್ತಿಹನು
ಯಮಜ ಮಾಡುವ ರಾಜಸೂಯಯಾಗದಲ್ಲಿ
ಮಮಕರಿಸಿದೆ ಎಂತೊ ಕಾಲ ತೊಳೆವ ಊಳಿಗವ?
ಮಮ ಪ್ರಾಣಾ ಹಿ ಪಾಂಡವಾ ಎಂದು ಬಿರುದಿಗಾಗಿ
ನಮೋ ನಮೋ ಎಂದೆ ಪುರಂದರವಿಠಲ

 

ಕಂಡಕಂಡವರಿಗೆ ಅಲ್ಪರಿವ ಬಾಳುವೆಗಿಂತ
ಕೊಂಡವನೆ ಧುಮುಕಲಿಬಹುದು
ತಂಡತಂಡದ ನರರ ಕೊಂಡಾಡುವುದಕ್ಕಿಂತ
ತುಂಡರೀಸಲಿಬಹುದು ಈ ಜಿಹ್ವೆಯನ್ನು
ಮಂಡೆಬಾಗಿ ಪರರಿಗೆ ನಮಿಸುವುದಕ್ಕಿಂತ
ಗಂಡುಗತ್ತರಿ ಕೊರಳೊಳಿಟ್ಟರೆ ಘನವು
ಪಂಡಿತನೆನೆಸಾಲೊಲ್ಲೆನೋ ಪರಮಾತ್ಮ ನಿನ್ನ
ತೊಂಡರವನೆನಿಸುವ, ಬಾಗ್ಯವೀಯೋ ಪುರಂದರವಿಠಲ

 

ಕಂಡ ಸೂರ್ಯಗೆ ಸಂಧ್ಯಾಕಾಣದ ಸೂರ್ಯಗೆ
ಸಂಧ್ಯಾ ಭೂಮಂಡಲದಿ ಮಾಡದಿರಲು
ಮಾರ್ತಾಂಡ ನೂರು ಹತ್ಯಾ ಮಾಡಿದ
ಪಾಪ ಶೃತಿ ಸಾರುತಿದೆ
ಪುಂಡುಗಾರ ನರಗೆ ನರಕ ತಪ್ಪದೆಂದು
ಅಂಡಜಪತಿ ಪುರಂದರವಿಠಲ ಪೇಳ್ವ

 

ಕಾಲ ಮೇಲೆ ಮಲಗಿ ಸಿಂಪಿಯಲಿ
ಹಾಲ ಕುಡಿದು ಬೆಳೆದ
ಮೂರು ಲೋಕ ನಿನ್ನುದರದಲ್ಲಿರಲು
ಈರೇಳು ಲೋಕದ ನೀರಡಿ ಮಾಡಲು
ಮೂರು ಲೋಕದೊಡೆಯ ಶ್ರೀ ಪುರಂದರವಿಠಲ
ನಿನ್ನ ಬಾಲಕ ತನದ ಲೀಲೆಗೆ ನಮೋ ನಮೋ

ಕಾಲ ದೈವವು ನೀನೆ, ಕೈಮುಗುಯುವವ ನಾನು
ಕೈವಲ್ಯ ಫಲದಾತ ಕೇಶವನ ರಘುನಾಥ
ಯಾವ ದೈವಕ್ಕಿನ್ನು ಈ ವೈಭವಗಳ ಕಾಣೆ
ರಾವಣಾಂತಕ ಶ್ರೀ ಪುರಂದರವಿಠಲ

ಕಾಳಿಯನಂತೆ ಕಟ್ಟಿ ಬಿಗಿಯಬೇಕು
ಬಲಿಯಂತೆ ನಿನ್ನ ಬಾಗಿಲ ಕಾಯಿಸಲಿಬೇಕು
ಕುಬ್ಜೆಯಂತೆ ನಿನ್ನ ರಟ್ಟು ಬುತ್ತು ಮಾಡಿ
ಮುಂಜೆರಗ ಪಿಡಿದು ಗುಂಬೆ ಹಾಕಿಸಬೇಕು
ಪುರಂದರವಿಠಲ ನಿನ್ನ ಆಟಿ ಮುಟ್ಟಿ ಹಾಕೆಂದರೆ
ಪುಟ್ಟದು ರವಿ ತಿರಿತಿಂಬಂತೆ ಮಾಡುವೇ

ಕಿಚ್ಚಿನೊಳಗೆ ಬಿದ್ದ ಕೀಟಕ ನಾನಯ್ಯ
ಅಚ್ಯುತ ತೆಗೆಯೋ, ಅನಂತ ಕಾಯೋ
ಗೋವಿಂದ ರಕ್ಷಿಸೋ, ಘೋರಪಾತಕ ನಾನು
ಕರುಣಾಳು ಕಾಯಯ್ಯ ಪುರಂದರವಿಠಲ

ಕೀರ್ತಿ ಕಿಂಕರಗೆ, ಅಪಕೀರ್ತಿ ಮಂಕುಗಳಿಗೆ
ನಷ್ಟ ಕಷ್ಟರಿಗೆ, ಲಾಭ ಮಹಾತ್ಮರಿಗೆ
ದಾರಿದ್ರ್ಯ ದ್ರೋಹಿಗಳಿಗೆ
ವಚನ ಭ್ರಷ್ಟರಿಗೆ ಅಂಧಂತಮಸು
ಸಂದೇಹವಿಲ್ಲದಕೆ ಪುರಂದರವಿಠಲ

ಕುಂದದ ದೀಪವ ನಂದಿಪನಿಗೆ
ಕೂಷ್ಮಾಂಡ ಒಡೆವಳಿಗೆ
ಎಂದೋ ಆಪೋಶನವ ತನ್ನ ಕೈ-
ಯಿಂಡ ತಾನೇ ಎರೆದುಕೊಂಡು ಕುಡಿವಂಗೆ
ಇವರು ಮೂವರಿಗೆ ಕುಲನಾಶನವೆಂದು
ಅಂದೆ ಪುರಂದರವಿಠಲ ನಿರೂಪಿಸಿದನರಿಯ

ಕುಟುಂಬ ಭರಣ ಎರಡರಷ್ಟು ಬ್ರಾಹ್ಮಣರಿಗೆ
ವಿಧಿ ಗಡಗಡಿಸಿತು ಮೂರು ಮಾನಸ್ಥರಿಗೆ ವಿಧಿಸಿತು
ಜಡಮತಿಯ ಬಿಟ್ಟು ಯತಿಗಳಿಗೆ ನಾಲ್ಕರಷ್ಟು
ಕುಂಡಲೀಶಯನ ಪುರಂದರವಿಠಲ ಈಪರಿ
ಪೊಡವಿ ಜನರಿಗೆ ವಿಧಿಕರ್ಮ ನಿರ್ಮಿಸಿದ

ಕುಡಿಕೊಟ್ಟ ಅಮೃತವೆಂಬ ನೊರೆಹಾಲನೊಲ್ಲದೆ
ಬಟ್ಟಲೊಳಗೆ ತಿರಿತಿಂಬುವರು ಕೆಲರು
ಪಟ್ಟವಾಳಿಯ ಮುಂದೆ ಅರವಿಯ ಬಯಸುವರು
ಭ್ರಷ್ಟರಿಗೇನೆಂಬೆ ಪುರಂದರವಿಠಲ

ಕುಲಪತಿಯಾದರೂ ಸಂಧ್ಯಾವಂದನಗೈಯ್ಯದ
ಪಾಪಿಯಾದರೂ ಪರದ್ರೋಹಿಯಾದರೂ
ಪಾಪಗೈಯುತಾ ಪರಪತ್ನಿಯ ನೆರೆದರೂ ಶ್ರೀಪತಿ
ಗೋಪೀಚಂದನಲಿಪ್ತಾಂಗಗೆ ಭೂಪತಿ
ಪುರಂದರವಿಠಲ ಪಾದವ ತೋರ್ವ

ಕೂಪದಲ್ಲಿಯಾದರೂ ಕೊಳದಲ್ಲಿಯಾದರೂ
ವಾಪಿಯಲಿಯಾದರೂ ಆ ಪತ್ನಿಯ
ನೆರೆದಿದ್ದರೂ ಗೋಪೀಚಂದನದ
ಸಂಪರ್ಕವಿದ್ದರೆ ಅದೇ ಸಂಧ್ಯಾಕಾಲವೆಂದು
ಪುರಂದರವಿಠಲ ಪೇಳ್ದ

ಕ್ರಿಮಿಕೀಟಕನಾಗಿ ಹುಟ್ಟಿದಂದು ನಾನು
ಹರಿಶರಣೆಂದನಲುಂಟೆ
ಹಕ್ಕಿ ಹರಿಣಿಯಾಗೆ ಹುಟ್ಟಿದಂದು ನಾನು
ಹರಿಶರಣೆಂಡೆನಲುಂಟೆ
ಹಂದಿ ಸೊನಗನಾಗಿ ಹುಟ್ಟಿದಂದು ನಾನು
ಹರಿಶರಣೆಂಡೆನಲುಂಟೆ
ಮರೆದೆ ಮಾನವ ನಿನ್ನ ಹಿಂದಿನ ಭವಗಳನಂದು
ಮಾನುಷ ದೇಹ ಬಂದಿತೋ ನಿನಗೀಗ
ನೆನೆಯಲೋ ಬೇಗ ಪುರಂದರವಿಠಲನ

ಕೆಟ್ಟನೆಂದೆನಲೇಕೆ ಕ್ಲೇಶಪಡುವುದೇಕೆ
ಹೊಟ್ಟೆಗೋಸುಗ ಪರರ ಕಷ್ಟಪಡಿಸಲೇಕೆ
ಬೆಟ್ಟದ ಮೇಲಿದ್ದರೇನು ವನದೊಳಿದ್ದರೇನು
ಹುಟ್ಟಿಸಿದ ದೇವರು ಹುಲ್ಲು ಮೇಯಿಸದಿರುವನೇ?
ಗಟ್ಟಿಯಾಗಿ ನೆರೆ ನಂಬು ಪುರಂದರವಿಠಲನ
ಸೃಷ್ಟಿಮಾಡಿದ ಬ್ರಹ್ಮ ಸ್ಥಿತಿ ಮಾಡಲರಿಯನೇ?

ಕೆಲಕಾಲ ದಂಡ ಪಿಡಿದು ಕಾಲರಾತ್ರಿಯು
ಬೀಳೆ ಕತ್ತಲು ನೀ ಮುನ್ನೆ ಪರಿಹರಿಸು
ಅಚಿಂತ್ಯಮಹಿಮ, ನಿರ್ಗುಣಧಾಮನು ನೀನೆ
ನಿರ್ವಿಕಲ್ಪನೂ ನೀನೆ, ಎನ್ನೊಳಗಿಹ ಪುರಂದರವಿಠಲ
ಏನನಬಹುದು ಅಯ್ಯಯ್ಯ, ಜಗದಾಧಾರನು ನೀನೆ

ಕಲಿಕಾಲಕೆ ಸಮಯುಗವು ಇಲ್ಲವಿಲ್ಲಯ್ಯ
ಕಲುಷಹರ ಕೈವಲ್ಯವು ಕರಸ್ಥವಯ್ಯ
ಜಲಜಲೋಚನ ನಮ್ಮ ಪುರಂದರವಿಠಲನ್ನ
ಬಲಗೊಂದು ಸುಖಿಸಿ ಬಾಳುವುದಕೆ

 

ಕೋಳಿಗೆ ಯಾತಕ್ಕೆ ಹೊನ್ನಿನ ಪಂಜರವು
ಬೋಳಿಗೆ ಯಾತಕ್ಕೆ ಜಾಜಿ ಮಲ್ಲಿಗೆ ದಂಡೆ
ಆಳಿಲ್ಲದವನಿಗೆ ಅರಸುತನವ್ಯಾತಕ್ಕೆ
ಮಾಳಿಗೆ ಮನೆಯು ಬಡವನಿಗ್ಯಾತಕೆ
ಕೇಳಯ್ಯ ದೇವ ಪುರಂದರವಿಠಲ

ಕ್ಷೀರಸಾಗರಕ್ಕೆ ಶ್ರೀರಮಣಬಂದಂತೆ
ಪ್ರಹ್ಲಾದಗೆ ಒಲಿದು ನರಸಿಂಹ ಬಂದಂತೆ
ಭಗೀರಥನ ಮನೆಗೆ ಶ್ರೀಗಂಗೆ ಬಂದಂತೆ
ಮುಚುಕುಂದನ ಮನೆಗೆ ಶ್ರೀಕೃಷ್ಣ ಬಂದಂತೆ
ಲಕ್ಷ್ಮೀಕಾಂತ ಪುರಂದರವಿಠಲ ಬರೆ
ನನ್ನ ನಾಲಿಗೆ ತುದಿಯಲಿ
ಗಾಯನ ಮಾಡುತನಾ ಧನ್ಯನಾದೆ

 

ಗಜ ತುರಗ ಸಹಸ್ರ ದಾನ
ಗೋಕುಲ ಕೋಟಿ ದಾನ
ಭೂದಾನ ಸಮುದ್ರ ಪರ್ಯಂತರ ಧನಿ
ಪುರಂದರವಿಠಲನ ಧ್ಯಾನಕ್ಕೆ ಸಮವಿಲ್ಲ

ಗರ್ಭವಾಸ, ಗಿರ್ಭವಾಸ,ಜನನ ಗಿನನ
ಮರಣ ಗಿರಣ ದು:ಖ ಗಿಖ್ಕ
ಪ್ರಾರಬ್ಧ ಗೀರಬ್ಧ, ಆಗಾಮಿ ಗೀಗಾಮಿ
ಸಂಚಿತ ಗಿಂಚಿತ, ಎಲ್ಲ ಪುರಂದರವಿಠಲ

ಗಂಡ ಮಾಡಿದ ಪಾಪ ಹೆಂಡತಿಗಿಲ್ಲ
ಹೆಂಡತಿ ಮಾಡಿದ ಪಾಪ, ಗಂಡಗುಂಟು
ಹೆಂಡತಿ ಮಾಡಿದ ಪುಣ್ಯ ಗಂಡಗಿಲ್ಲ
ಗಂಡ ಮಾಡಿದ ಪುಣ್ಯ ಹೆಂಡತಿಗುಂಟು
ಜೀವ ಜೀವರು ಭೇದ
ನೀನೇ ಉದ್ಧರಿಸಯ್ಯಾ ಪುರಂದರವಿಠಲ

ಗಾಣದೆತ್ತಿನಂತೆ ತಿರುಗಾಡಲಾರೆ
ಬಂಡಿಯ ನೊಗದಂತೆ ಬೀಳಲಾರೆ
ಗಿಳಿಯಂತೆ ನಾ ನಿನ್ನ ಕೂಗಾಡಲಾರೆ
ನವಿಲಿನಂತೆ ನಾ ನಿನ್ನ ನಲಿದಾಡಲಾರೆ
ಪುರಂದರವಿಠಲ, ನೀನೇ ಕರುಣಾಳು ಕಾಯೋ

ಗುರಿಯ ನೆಚ್ಚವನೆ ಬಿಲ್ಲಾಳು
ಹರಿಯ ಭಜಿಸಲು ಅರಿಯದವ ಮಾಸಾಳು
ಹರಿಯೆಂದು ಓದದ ಓದೆಲ್ಲ ಹಾಳು
ಪುರಂದರವಿಠಲ ಪಾರ್ಥನ ಮನೆಯಾಳು

ಗುರುಕರುಣ ಹೊಂದುವುದು, ಪರಮ ದುರ್ಲಭವಯ್ಯ
ಪರಿಪರಿಯ ವ್ರತಗಳನು ಆಚರಿಸಲು ಫಲವೇನು?
ಶರೀರದಿ, ಪುತ್ರ, ಮಿತ್ರ, ಕಳತ್ರಾದಿ ಬಾಂಧವರು
ಇರಿಸೋರೆ ಸದ್ಗತಿಗೆ ಸಾಧನದಿ
ನಿರುತವು, ಗುರುಪಾದ ನಿಜವಾಗಿ ಮನದಲರಿತು
ಭಜಿಸಲು, ಅಖಿಲ ಸಂಪದವಕ್ಕು ಪುರಂದರವಿಠಲ

 

ಚಂದಿರಗಿಂತಿನ್ನು ನಿಂದಿರೆ ತೆರಪಿಲ್ಲ
ಸೂರ್ಯನಿಗಿಂತಿನ್ನು ತಿರುಗಿ ಹೋಯಿತು ಹೊತ್ತು
ಬೊಮ್ಮಾದಿಗಳಿಗೆಲ್ಲಾ ರುದ್ರಾದಿಗಳಿಗೆಲ್ಲಾ
ಒಂದು ಉತ್ತರನಾಡಲು ತೆರಪಿಲ್ಲ
ಈ ದೇವರನೆಲ್ಲ ಒತ್ತಿ ಆಳುವ ನಮ್ಮ
ಪುರಂದರವಿಠಲ ಕಟ್ಟರಸು ಕಾಣಿರೋ

ಚೋರನಾದರೂ ಚಂಡಾಲನಾದರೂ
ಬ್ರಹ್ಮಘ್ನ ಪಿತೃ ಘಾತಕನಾದರೂ
ಅವನಾದರೂ ಮಧ್ಯಾಹ್ನ ಕಾಲಕೆ
ಅತಿಥಿಯಾಗಿ ಮನೆಗೆ ಬಂದರೆ
ತುತಿಸಿ ಅನ್ನವನಿಟ್ಟು ಸ್ವಾಮಿ
ಪುರಂದರವಿಠಲಗರ್ಪಿಸಬೇಕು

 

ಚೋರಗೆ ಚಂದ್ರೋದಯ ಸೊಗಸುವುದೇ ?
ಜಾರಗೆ ಸೂರ್ಯೋದಯ ಸೊಗಸುವುದೇ ?
ಶ್ರೀರಮಣನ ಕಥೆಯು ಕಳ್ಳಗೆ ಮೆಚ್ಚುವುದೆ ?
ನಾರಿಗೆ ನಯನವಿಲ್ಲದೆ ಚಲುವಿಕೆಯೆ ?
ಹರಿಸ್ಮರಣೆಯಿಲ್ಲದ ಹಾಡಿಕೆಯು
ಅರಣ್ಯರೋದನ ಪುರಂದರವಿಠಲ

 

ಜಗದಂತರ್ಯಾಮಿ ನಿನ್ನ ಬಟ್ಟಬಯಲೆಂದು
ಬಗೆವವನೆ ಜಗದೊಳಗೆ ಬ್ರಹ್ಮಹತ್ಯಕಾರ
ಅಗಣಿತಗುಣ ನೀನು, ನಿನ್ನ ಗುಣಗಳೆಂಟೆಂದು
ಬಗೆವವನು ಜಗದೊಳಗೆ ಸುವರ್ಣಸ್ತೇಯ
ಜಗದೊಡೆಯ ನೀನಿರಲು, ಅನ್ಯದೇವರೊಡೆಯರೆಂದು
ಬಗೆವವನೇ ಜಗದೊಳಗೆ ಮದ್ಯಪಾನಿ
ಜಗದ ತಂದೆ ನೀನು, ನೀನೇ ತಾನೆಂದು ಬಗೆವವನು
ಜಗದೊಳಗೆ ಗುರುತಲ್ಪಗ
ಇವರ ಸಂಸರ್ಗಿಯೇ ತತ್ಸಂಯೋಗಿ
ಇವರೇ ಮುಖ್ಯ ಪಂಚಮಹಾಪತಕಿಗಳು
ಆ ಕಾರಣದಿಂದ ನೀ ನಿತ್ಯ, ನೀ ಸತ್ಯ
ನೀ ಸೇವ್ಯ, ಅಗಣಿತಗುಣನಿಲಯನೇ
ನಿನ್ನ ದಾಸರ ಸಂಗ ಸಕಲಾರ್ಥ ಸಾಧನವು
ಮನ್ನಿಸೆನ್ನ ಪುರಂದರವಿಠಲರೇಯ

Source :  ಹರಿದಾಸ ಸಾಹಿತ್ಯ ಉಗಾಭೋಗ ಸಂಪುಟ –
– ಸಂಪಾದಕರು Dr Aralumallige Parthasarathi

Leave a Reply

Your email address will not be published.

Sumadhwa Seva © 2022