ಸುಮಧ್ವ ವಿಜಯ ಸರ್ಗ 1

ಸುಮಧ್ವ ವಿಜಯ ಸರ್ಗ 1
ನಮ್ಮ ಪರಮಪೂಜ್ಯ ಶತಾಯುಷಿ, ಪ್ರಾತ: ಸ್ಮರಣೀಯ ತಂದೆ, ಮತ್ತು ಗುರುಗಳೂ ಆದ ಶ್ರೀ S.N  ರಾಮಚಂದ್ರಾಚಾರ್ಯರ ಆಶೀರ್ವಾದದಿಂದ ನನ್ನ ಯಥಾಶಕ್ತಿ “ಸುಮಧ್ವ ವಿಜಯ” ಅನುವಾದ ಮತ್ತು ಪ್ರಶ್ನೋತ್ತರ ಆರಂಭಿಸಿದ್ದೇನೆ.  ನನಗೆ ಮೊದಲು ಸುಮಧ್ವವಿಜಯ ಪಾಠ ಮಾಡಿದ್ದ  ದಿವಂಗತ. ಶ್ರೀ ಅಲೆವೂರು ಸುಬ್ರಾಯಾಚಾರ್ಯರ ಸ್ಮರಣೆ  ಮತ್ತು ನನ್ನ ಹೆಚ್ಚಿನ ಶಾಸ್ತ್ರ ಪಾಠ ಮಾಡುತ್ತಿರುವ ಗುರುಗಳು – ಮಧ್ವಶಾಸ್ತ್ರ ಸಂಪನ್ನ ಶ್ರೀ ಹೊಳವನಹಳ್ಳಿ ಶ್ರೀನಿವಾಸಾಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳೊಂದಿಗೆ ಪ್ರಾರಂಭಿಸಿದ್ದೇನೆ.   ನನ್ನ ಈ ಲೇಖನಕ್ಕೆ ಹೆಚ್ಚಿನ ಸಹಾಯ ಪರಮಪೂಜ್ಯ ಶ್ರೀ ವಿಶ್ವನಂದನ ತೀರ್ಥ ಶ್ರೀಪಾದಂಗಳವರ ಗ್ರಂಥ “ಸುಮಧ್ವವಿಜಯ” ಅವರಿಗೆ ಆಭಾರಿಯಾಗಿದ್ದೇನೆ.

 

ಕಾಂತಾಯ ಕಲ್ಯಾಣ-ಗುಣೈಕ-ಧಾಮ್ನೇ
ನವ-ದ್ಯುನಾಥ-ಪ್ರತಿಮ-ಪ್ರಭಾಯ |
ನಾರಾಯಣಾಯಾಖಿಲ-ಕಾರಣಾಯ
ಶ್ರೀ-ಪ್ರಾಣ-ನಾಥಾಯ ನಮಸ್ಕರೋಮಿ || ೧ ||
ಅಹಂ – ನಾನು ; ಕಾಂತಾಯ – ಮನೋಹರನಾದ ; ಕಲ್ಯಾಣ – ಮಂಗಳಕರವಾದ; ಗುಣೈಕ – ಗುಣ + ಏಕ ಗುಣಗಳಿಗೆ ಮುಖ್ಯ ; ಧಾಮ್ನೇ – ಆಶ್ರಯನಾದವನು. ಜ್ಞಾನಾನಂದಾದಿ, ಗುಣಗಳೇ ದೇಹವಾಗಿ ಉಳ್ಳವನು. ಅವನ ಗುಣಗಳಿಗೂ ದೇಹಕ್ಕೂ ಅಭೇದ. ಅರ್ಥಾತ್ ಅಪ್ರಾಕೃತ ಶರೀರಿ. ನವದ್ಯುನಾಥ – ನವ + ದ್ಯುನಾಥ – ಆಗ ತಾನೇ ಉದಯಿಸುತ್ತಿರುವ ಸೂರ್ಯನ ಪ್ರತಿಮ – ಸದೃಶವಾದ ಪ್ರಭಾಯ – ಕಾಂತಿ ಯುಳ್ಳ, ಅಖಿಲ – ಸಮಸ್ತ ಜಗತ್ತಿಗೆ (ಚರಾಚರ ಪ್ರಪಂಚಕ್ಕೆ) ಕಾರಣಾಯ – ನಿಮಿತ್ತ ಕಾರಣನಾದ; ಶ್ರೀ ಪ್ರಾಣನಾಥಾಯ – ಶ್ರೀ ಅಂದರೆ ಲಕ್ಷ್ಮೀ ದೇವಿ ಮತ್ತು ಶ್ರೀ ಪ್ರಾಣ – ಭಾರತೀ ಸಹಿತ ಮುಖ್ಯಪ್ರಾಣ ನಾಥಾಯ – ಸ್ವಾಮಿಯಾದ ನಾರಾಯಣಾಯ – ನಾರಾಯಣನಿಗೆ ನಮಃ ಕರೋಮಿ – ನಮಿಸುತ್ತೇನೆ.

 

ಅನಾಕುಲಂ ಗೋಕುಲಮುಲ್ಲಲಾಸ ಯತ್ಪಾಲಿತಂ ನಿತ್ಯಮನಾವಿಲಾತ್ಮ |
ತಸ್ಮೈ ನಮೋ ನೀರದ ನೀಲ ಭಾಸೇ ಕೃಷ್ಣಾಯ ಕೃಷ್ಣಾ ರಮಣ ಪ್ರಿಯಾಯ |೨!
ಪದಚ್ಛೇದ –
ಅನಾಕುಲಂ ಗೋ ಕುಲಂ ಉಲ್ಲಲಾಸ ಯತ್ಪಾಲಿತಂ ನಿತ್ಯಂ ಅನಾವಿಲ ಆತ್ಮ |
ತಸ್ಮೈ ನಮ: ನೀರದ ನೀಲ ಭಾಸೇ ಕೃಷ್ಣಾಯ ಕೃಷ್ಣಾ ರಮಣ ಪ್ರಿಯಾಯ !!

 

ನಿತ್ಯಂ – ಯಾವಾಗಲೂ, ಅನಾವಿಲ – ನಿರ್ದುಷ್ಟವಾದ, ಆತ್ಮ – ಸ್ವರೂಪವುಳ್ಳ, ಅನಾಕುಲಂ – ವ್ಯಾಕುಲರಹಿತವಾದ, ಗೋ – ಗೋವುಗಳ, ವೇದಗಳ, ಬ್ರಾಹ್ಮಣರ, ಕುಲಂ – ಸಮುದಾಯವು, ಯತ್ – ಯಾರಿಂದ, ಪಾಲಿತಂ – ಪಾಲಿಸಲ್ಪಟ್ಟು, ಉಲ್ಲಲಾಸ – ಶೋಭಿಸಿತೋ, ತಸ್ಯೈ – ಅಂತಹ ನೀರದ – ಮೇಘದಂತೆ, ನೀಲ – ಕಪ್ಪಾದ ಭಾಸೇ – ಕಾಂತಿಯುತವಾದ, ಕೃಷ್ಣಾ – ದ್ರೌಪದಿಗೆ, ರಮಣ – ಪತಿಗಳ, ಪ್ರಿಯಾಯ – ಪ್ರಿಯನಾದ, ಕೃಷ್ಣಾಯ – ಕೃಷ್ಣನಿಗೆ ನಮ: – ನಮಸ್ಕಾರಗಳು.
(ಇದು ಯಾದವ ಕೃಷ್ಣನ ಪರವಾದ ಅರ್ಥ) (ದ್ರೌಪದಾದೇವಿ ಕೂಡ ಕೃಷ್ಣ ವರ್ಣದವಳು, ಆದ್ದರಿಂದ ಅವಳಿಗೆ “ಕೃಷ್ಣಾ” ಎಂದು ಹೆಸರು)

 

ಅಥವ

 

ನಿತ್ಯಂ – ಯಾವಾಗಲೂ, ಅನಾವಿಲ – ನಿರ್ದುಷ್ಟವಾದ, ಆತ್ಮ – ಸ್ವರೂಪವುಳ್ಳ, ಅನಾಕುಲಂ – ವ್ಯಾಕುಲರಹಿತವಾದ, ಗೋ – ವೇದಗಳ, ಬ್ರಾಹ್ಮಣರ, ಕುಲಂ – ಸಮುದಾಯವು, ಯತ್ – ಯಾರಿಂದ, ಪಾಲಿತಂ – ಪಾಲಿಸಲ್ಪಟ್ಟು, ಉಲ್ಲಲಾಸ – ಶೋಭಿಸಿತೋ, ತಸ್ಯೈ – ಅಂತಹ ನೀರದ – ಮೇಘದಂತೆ, ನೀಲ – ಕಪ್ಪಾದ ಭಾಸೇ – ಕಾಂತಿಯುತವಾದ, ಕೃಷ್ಣಾ – ದ್ರೌಪದಿಗೆ (ಭಾರತೀದೇವಿಗೆ) (ದ್ರೌಪದಾದೇವಿ ಕೂಡ ಕೃಷ್ಣ ವರ್ಣದವಳು, ಆದ್ದರಿಂದ ಅವಳಿಗೆ “ಕೃಷ್ಣಾ” ಎಂದು ಹೆಸರು) ರಮಣ – ನಿಜಪತಿಯಾದ ಭೀಮಸೇನನ , ಪ್ರಿಯಾಯ – ಪ್ರಿಯನಾದ, ಕೃಷ್ಣಾಯ – ವೇದವ್ಯಾಸರಿಗೆ (ವಾಸಿಷ್ಟ ಕೃಷ್ಣ) ನಮ: – ನಮಸ್ಕಾರಗಳು.
(ಇದು ವಾಸಿಷ್ಟ ಕೃಷ್ಣ – ವೇದವ್ಯಾಸರ ಬಗ್ಗೆ)

 

ಅಪಿ ತ್ರಿಲೋಕ್ಯಾ ಬಹಿರುಲ್ಲಸಂತೀ ತಮೋ ಹರಂತೀ ಮುಹುರಾಂತರಂ ಚ |
ದಿಶ್ಯಾದ್ ದೃಶಂ ನೋ ವಿಶದಾಂ ಜಯಂತೀ ಮಧ್ವಸ್ಯ ಕೀರ್ತಿರ್ದಿನ-ನಾಥ-ದೀಪ್ತಿಂ | ೩!
ಪದಚ್ಛೇದ :
ಅಪಿ ತ್ರಿಲೋಕ್ಯಾ: ಬಹಿ: ಉಲ್ಲಸಂತೀ ತಮ: ಹರಂತೀ ಮುಹು: ಆಂತರಂ ಚ
ದಿಶ್ಯಾತ್ ದೃಶಂ ನ: ವಿಶದಾಂ ಜಯಂತೀ ಮಧ್ವಸ್ಯ ಕೀರ್ತಿ: ದಿನನಾಥ ದೀಪ್ತಿಂ !

 

ಮಧ್ವಸ್ಯ – ಆಚಾರ್ಯ ಮಧ್ವರ ಕೀರ್ತಿ:- ಕೀರ್ತಿಯು ತ್ರಿಲೋಕ್ಯಾ: ಮೂರು ಲೋಕಗಳ (ಸ್ವರ್ಗ ಮರ್ತ್ಯ ಪಾತಾಳ) ಬಹಿ: ಅಪಿ – ಹೊರಗೂ ಕೂಡ ಉಲ್ಲಸಂತೀ – ಪ್ರಜ್ವಲಿಸುತ್ತಿರುವುದು, ಆಂತರಂ ಚ – ಶರೀರದ ಒಳಗೂ (ಮನಸ್ಸಿನ) ಇರುವ ತಮ: – ಅಜ್ಞಾನ ಎಂಬ ಅಂಧಕಾರವನ್ನು ಮುಹು: – ಬಾರಿ ಬಾರಿಗೂ (ಮತ್ತೆ ಮತ್ತೆ) ಹರಂತೀ – ನಾಶಮಾಡುವುದು ದಿನನಾಥ – ಹಗಲಿನ ಒಡೆಯ ಸೂರ್ಯನ ; ದೀಪ್ತಿಂ – ಕಾಂತಿಯನ್ನು ಜಯಂತೀ ಚ – ಜಯಿಸುವುದು (ಸೂರ್ಯನ ಕಾಂತಿಯನ್ನೂ ಮೀರಿಸುಹುದು) ಮತ್ತು ನ: – ನಮಗೆ ವಿಶದಾಂ – ಶುದ್ಧವಾದ ದೃಶಂ – ಜ್ಞಾನವೆಂಬ ದೃಷ್ಟಿ ದಿಶ್ಯಾತ್ – ಕೊಡಲಿ.
ಸೂರ್ಯನ ಪ್ರಕಾಶವು ಮೂರು ಲೋಕಗಳಲ್ಲಿ ಪಸರಿಸುತ್ತದೆ. ಆದರೆ ಈ ಮೂರು ಲೋಕಗಳ ಹೊರಗೆ ಪ್ರಕಾಶಿಸುವುದಿಲ್ಲ. ಮತ್ತು ಮನಸ್ಸಿನ ಒಳಗಿನ ಅಜ್ಞಾನವೆಂಬ ಕತ್ತಲೆಯನ್ನು ಓಡಿಸಲಾಗದು. ಆದರೆ ಆಚಾರ್ಯ ಮಧ್ವರ ಕೀರ್ತಿಯೆಂಬ ಪ್ರಕಾಶವು ಎಲ್ಲಾ ಲೋಕಗಳಲ್ಲೂ, ಪ್ರಕಾಶಿಸುವುದಲ್ಲದೆ ನಮ್ಮ ಹೃದ್ಗತವಾದ ಅಜ್ಞಾನವೆಂಬ ಕತ್ತಲೆಯನ್ನು ಮತ್ತೆ ಮತ್ತೆ ನಾಶಮಾಡುವುದು
ತಮೋ-ನುದಾಽಽನಂದಮವಾಪ ಲೋಕ-
ಸ್ತತ್ವ-ಪ್ರದೀಪಾಕೃತಿ-ಗೋ-ಗಣೇನ |
ಯದಾಸ್ಯ-ಶೀತಾಂಶು-ಭುವಾ ಗುರೂಂಸ್ತಾನ್
ತ್ರಿವಿಕ್ರಮಾರ್ಯಾನ್ ಪ್ರಣಮಾಮಿ ವರ್ಯಾನ್ || ೪ ||
ಪದಚ್ಛೇದ :
ತಮ: ನುದಾ ಆನಂದಂ ಅವಾಪ ಲೋಕ: ತತ್ವಪ್ರದೀಪ ಆಕೃತಿ ಗೋ ಗಣೇನ ಯತ್ ಆಸ್ಯ ಶೀತಾಂಶು ಭುವಾ ಗುರೂನ್ ತಾನ್ ತ್ರಿವಿಕ್ರಮಾರ್ಯಾನ್ ಪ್ರಣಮಾಮಿ ವರ್ಯಾನ್ || ೪ ||
ಲೋಕ: – ಜನರು ತಮ: ಅಜ್ಞಾನವೆಂಬ ಕತ್ತಲೆಯ ನುದಾ – ನಾಶಗೊಳಿಸುವ ಯತ್ – ಯಾರ ಆಸ್ಯ – ಮುಖವೆಂಬ ಶೀತಾಂಶು – ಚಂದ್ರನಿಂದ (ಚಂದ್ರನ ಕಾಂತಿಯಿಂದ) ಭುವಾ – ಉತ್ಪನ್ನವಾದ ತತ್ವಪ್ರದೀಪ – ತತ್ವಪ್ರದೀಪ ಎಂಬ ಆಕೃತಿ – ಸ್ವರೂಪವುಳ್ಳ ಗೋ – ಶಾಸ್ತ್ರ ವಾಕ್ಯಗಳು ಗಣೇನ – ಸಮೂಹದಿಂದ ಆನಂದಂ – ಆನಂದವನ್ನು ಅವಾಪ – ಹೊಂದಿದರು. ತಾನ್ – ಅಂತಹ ವರ್ಯಾನ್ – ಶ್ರೇಷ್ಠರಾದ ಗುರೂನ್ -ಗುರುಗಳೂ, ತಂದೆಯೂ ಆದ ತ್ರಿವಿಕ್ರಮಾರ್ಯನ್- ಪೂಜ್ಯರೂ ಆದ ತ್ರಿವಿಕ್ರಮ ಪಂಡಿತರನ್ನು ಪ್ರಣಮಾಮಿ – ನಮಿಸುತ್ತೇನೆ.
ಈ ಶ್ಲೋಕದಲ್ಲಿ ತಮ್ಮ ತಂದೆಯೂ ಗುರುಗಳೂ ಆದ ವಾಯುಸ್ತುತಿ ಕರ್ತೃವೂ ಆದ ತ್ರಿವಿಕ್ರಮ ಪಂಡಿತರನ್ನು ಸ್ತುತಿಸಿದ್ದಾರೆ. ಚಂದ್ರನ ಕಿರಣಗಳು ಕತ್ತಲೆ ಯಲ್ಲಿರುವವರಿಗೆ ಪದಾರ್ಥಗಳ ನೋಡಲು ದೀಪದಂತೆ ಆಕೃತಿಯಿಂದ ತಮಸ್ಸೆಂಬ ಕತ್ತಲೆ ಪರಿಹರಿಸುವಂತೆ, ತತ್ವಪ್ರದೀಪ ಕೃತಿಯು ಅಜ್ಞಾನ ಎಂಬ ಅಂಧಕಾರದಲ್ಲಿರುವವರಿಗೆ ಪರಮಾತ್ಮನ ತತ್ವವನ್ನು ತಮ್ಮ ದೀಪ ಸದೃಶ ಗ್ರಂಥದಿಂದ ಪರಿಹರಿಸಿದ್ದಾರೆ
ಮುಕುಂದ-ಭಕ್ತ್ಯೈ ಗುರು-ಭಕ್ತಿ-ಜಾಯೈ
ಸತಾಂ ಪ್ರಸತ್ತ್ಯೈ ಚ ನಿರಂತರಾಯೈ |
ಗರೀಯಸೀಂ ವಿಶ್ವ-ಗುರೋರ್ವಿಶುದ್ಧಾಂ
ವಕ್ಷ್ಯಾಮಿ ವಾಯೋರವತಾರ-ಲೀಲಾಮ್ || ೫ ||
ಪದಚ್ಛೇದ :
ಗುರು ಭಕ್ತಿ ಜಾಯೈ ಮುಕುಂದ ಭಕ್ತೈ ಸತಾಂ ನಿರಂತರಾಯೈ ಪ್ರಸತ್ಯೈ ಚ ವಿಶ್ವ ಗುರೋ: ವಾಯೋ: ಗರೀಯಸೀಂ ವಿಶುದ್ಧಾಂ ಅವತಾರ ಲೀಲಾಂ ವಕ್ಷ್ಯಾಮಿ !!
ಗುರು – ಗುರುಗಳ ಭಕ್ತಿ – ಭಕ್ತಿಯಿಂದ ಜಾಯೈ – ಪ್ರಾಪ್ತವಾದ ಮುಕುಂದ – ಮುಕ್ತಿಪ್ರದ ಶ್ರೀಹರಿಯ ಭಕ್ತೈ – ಭಕ್ತಿಗಾಗಿ ಸತಾಂ – ಸಜ್ಜನರ ನಿರಂತರಾಯೈ – ನಿರಂತರವಾದ ಪ್ರಸತ್ಯೈ  – ಪ್ರಸಾದಕ್ಕೋಸ್ಕರ – ಮತ್ತು ವಿಶ್ವ – ಸಮಸ್ತ ಮುಕ್ತಿಯೋಗ್ಯ ಜನರಿಗೇ, ಗುರೋ: ಜ್ಞಾನ ಪ್ರದ ಗುರುಗಳಾದ ವಾಯೋ: – ಆವತಾರತ್ರಯ ವಾಯುದೇವರ ಲೀಲಾಂ – ಚರಿತೆಯನ್ನು ವಕ್ಷ್ಯಾಮಿ – ಹೇಳುತ್ತೇನೆ
ನಾರಾಯಣ ಪಂಡಿತರು ಈ ಶ್ಲೋಕದ ಮೂಲಕ ಗ್ರಂಥದ ವಿಷಯವನ್ನೂ, ಅದರ ಪ್ರಯೋಜನವನ್ನೂ ಮತ್ತು ಅಧಿಕಾರಿಗಳು ಯಾರು ಎಂದು ವಿವರಿಸಿದ್ದಾರೆ.
ವಿಷಯ – ವಾಯು ಚರಿತ್ರೆ; ಪ್ರಯೋಜನ – ವಾಯುದೇವರ ಅನುಗ್ರಹ ಅದರಿಂದ ಸಂತೋಷ. ಅಧಿಕಾರಿಗಳು – ಹರಿಗುರು ಭಕ್ತಿಯುಳ್ಳವರು

 

ತಾಂ ಮಂತ್ರ ವರ್ಣೈರನುವರ್ಣನೀಯಾಂ
ಶರ್ವೇಂದ್ರ ಪೂರ್ವೈರಪಿ ವಕ್ತು ಕಾಮೇ |
ಸಂಕ್ಷಿಪ್ನು ವಾಕ್ಯೇ ಮಯಿ ಮಂದ ಬುದ್ಧೌ
ಸಂತೋ ಗುಣಾಢ್ಯಾಃ ಕರುಣಾಂ ಕ್ರಿಯಾಸುಃ || ೬ ||

ಶರ್ವೇಂದ್ರ – ಶರ್ವ – ರುದ್ರದೇವರು, ಇಂದ್ರ – ಇಂದ್ರದೇವರು ಪೂರ್ವೈರಪಿ – ಇವರೇ ಮುಂತಾದ ದೇವತೆಗಳೂ ಕೂಡ, ಮಂತ್ರವರ್ಣ್ಯೈ – ವೇದವಾಕ್ಯಗಳಿಂದ, ಅನುವರ್ಣನೀಯಾಂ – ವರ್ಣಿಸಲು ಯೋಗ್ಯವಾದ, ತಾಂ – ಅಂತಹ ವಾಯುದೇವರ ಮಹಿಮೆಯನ್ನು, ವಕ್ತು – ಹೇಳಬೇಕೆಂಬ ಕಾಮೇ – ಅಪೇಕ್ಷೆಯುಳ್ಳ ಮಂದಬುದ್ದೌ – ಅಲ್ಪವಾದ ಬುದ್ದಿಯುಳ್ಳ ಸಂಕ್ಷಿಪ್ನು ವಾಕ್ಯೆ – ಸಂಕ್ಷಿಪ್ತವಾದ ವಾಕ್ಯಗಳುಳ್ಳ, ಮಯಿ – ನನ್ನಲ್ಲಿ ಗುಣಾಢ್ಯಾ: ಗುಣಪೂರ್ಣರಾದ ಸಂತ: ಸಜ್ಜನರು ಕರುಣಾಂ – ಕೃಪೆಯನ್ನು ಕ್ರಿಯಾಸು : ಮಾಡಲಿ.

ಸಮಸ್ತ ಚೇಷ್ಟಾಪ್ರದರಾದ ವಾಯುದೇವರ ಚರಿತೆಯನ್ನು ಸಂಪೂರ್ಣವಾಗಿ ಹೇಳಲು ಅಸಾಧ್ಯವಾದ್ದರಿಂದ ಮನಸ್ಸಿನ ಶುದ್ಧಿಗಾಗಿ ಹೇಳುತ್ತೇನೆ ಎಂದಿದ್ದಾರೆ ಕವಿಗಳು

ಉಚ್ಚಾವಚಾ ಯೇನ ಸಮಸ್ತ-ಚೇಷ್ಟಾಃ
ಕಿಂ ತತ್ರ ಚಿತ್ರಂ ಚರಿತಂ ನಿವೇದ್ಯಮ್ |
ಕಿಂತೂತ್ತಮ-ಶ್ಲೋಕ-ಶಿಖಾ-ಮಣೀನಾಂ
ಮನೋ-ವಿಶುದ್ಧ್ಯೈ ಚರಿತಾನು-ವಾದಃ || ೭ ||
ಯೇನ – ಯಾರಿಂದ (ಯಾವ ವಾಯುದೇವರಿಂದ) ಉಚ್ಚಾವಚಾ:  ಉಚ್ಚ – ದೊಡ್ಡದಾದ, ಆವಚಾ: – ಚಿಕ್ಕದಾದ ಸಮಸ್ತ – ಎಲ್ಲಾ ಚೇಷ್ಟಾ: – ವ್ಯಾಪಾರಗಳು (ಭವಂತಿ – ನಡೆಯುವುದೋ), ತತ್ರ – ಅಂತಹ ವಿಷಯದಲ್ಲಿ ಚಿತ್ರಂ- ಆಶ್ಚರ್ಯವೆಂಬ ಕಿಂ ಚರಿತಂ – ಯಾವ ಚರಿತ್ರೆಯು ನಿವೇದ್ಯಂ – ವರ್ಣಿಸಲು ಶಕ್ಯ. ಕಿಂತು – ಆದರೆ ಉತ್ತಮ ಶ್ಲೋಕ – ಶ್ರೇಷ್ಠ ಕೀರ್ತಿಯುಳ್ಳ ಶಿಖಾಮಣೀನಾಂ – ಶಿರೋರತ್ನದಂತಿರುವ ವಾಯುವಿನ ಚರಿತ – ಚರಿತೆಯನ್ನು ಅನುವಾದ: – ವರ್ಣನೆಯು ಮನ: – ಮನಸ್ಸಿನ ವಿಶುದ್ದ್ಯೈ – ಶುದ್ಧಿಗೋಸ್ಕರ
ವಾಯುದೇವರು ಎಂತಹ ಕಠಿಣವಾದ ಮತ್ತು ಸುಲಭವಾದ ಕೆಲಸವನ್ನೂ ಮಾಡಬಲ್ಲರು. ಅವರ ಎಲ್ಲಾ ಮಹಿಮೆಗಳನ್ನು ಹೇಳಲು ಅಸಾಧ್ಯ. ಆದರೂ ಯಥಾಶಕ್ತಿ ವರ್ಣಿಸಿ ಮನಶುದ್ಧಿ ಹೊಂದಲು, ಮನೋ ವಿಶುದ್ಧತೆಗಾಗಿ ಅವರ ಚರಿತ್ರೆ ವರ್ಣಿಸುವೆನು.
ಮಾಲಾ-ಕೃತಸ್ತಚ್ಚರಿತಾಖ್ಯ-ರತ್ನೈಃ
ಅಸೂಕ್ಷ್ಮ-ದೃಷ್ಟೇಃ ಸ-ಕುತೂಹಲಸ್ಯ |
ಪೂರ್ವಾಪರೀಕಾರಮಥಾಪರಂ ವಾ
ಕ್ಷಾಮ್ಯಂತು ಮೇ ಹಂತ ಮುಹುರ್ಮಹಾಂತಃ || ೮ ||
ತತ್– ಆ ವಾಯುವಿನ ಚರಿತಾಖ್ಯ – ಚರಿತ + ಆಖ್ಯ – ಚರಿತೆಯೆಂಬ ಹೆಸರುಳ್ಳ; ರತ್ನೈ – ರತ್ನಗಳಿಂದ ಮಾಲಾಕೃತ – ಮಾಲೆಯನ್ನು ಮಾಡುವ ಅಸೂಕ್ಷ್ಮದೃಷ್ಟೇ: – ಸೂಕ್ಷ್ಮ ದೃಷ್ಟಿಯಿಲ್ಲದ, ಸಕುತೂಹಲಸ್ಯ – ಕುತೂಹಲಭರಿತ ಮೇ – ನನ್ನ ಪೂರ್ವಾಪರೀಕಾರಂ – ಮೊದಲು ವರ್ಣಿಸಬೇಕಾದ್ದನ್ನು ಅಪರೀಕಾರಂ – ಆಮೇಲೆ ಹೇಳುವುದು ಅಥ ಹಾಗೇ ಅಪರಂ ವಾ – ನಂತರ ವರ್ಣಿಸುವುದು ಮೊದಲು ವರ್ಣಿಸುವುದಾಗಲೀ ಮಹಾಂತ: – ಸಜ್ಜನರು ಮುಹು : ಬಾರಿ ಬಾರಿಗೂ ಹಂತ – ದಯೆಯಿಂದ ಕ್ಷಾಮ್ಯಂತು – ಕ್ಷಮಿಸಲಿ.
ಮಧ್ವರ ಚರಿತ್ರೆಯನ್ನು ಮೊದಲು ಹೇಳುವುದನ್ನು ನಂತರ ಹೇಳಿರಬಹುದು ಅಥವಾ ನಂತರ ಹೇಳುವುದನ್ನು ಮುಂಚೆಯೇ ಹೇಳುವುದು ಮುಂತಾದವನ್ನು ಸಜ್ಜನರು ಕ್ಷಮಿಸಿ ಎಂದಿದ್ದಾರೆ.

 

ಶ್ರೀ-ವಲ್ಲಭಾಜ್ಞಾಂ ಸ-ಸುರೇಂದ್ರ-ಯಾಜ್ಞಾಂ
ಸಂಭಾವ್ಯ ಸಂಭಾವ್ಯ-ತಮಾಂ ತ್ರಿಲೋಕ್ಯಾಮ್ |
ಪ್ರಾಣೇಶ್ವರಃ ಪ್ರಾಣಿ-ಗಣ-ಪ್ರಣೇತಾ
ಗುರುಃ ಸತಾಂ ಕೇಸರಿಣೋ ಗೃಹೇಽಭೂತ್ || ೯ ||
ಸತಾಂ – ಸಜ್ಜನರ ಗುರು:– ಗುರುಗಳಾದ ತ್ರಿಲೋಕ್ಯಾಂ – ಮೂರು ಲೋಕಗಳಲ್ಲಿಯೂ, ಪ್ರಾಣಿ ಗಣ ಪ್ರಣೇತಾ – ಸಕಲ ಜೀವರಿಗೆ ಪ್ರೇರಕರಾದ, ‌ಸ್ವಾಮಿಯಾದ ಪ್ರಾಣೇಶ್ವರ: – ಸಕಲ ಇಂದ್ರಿಯಾಭಿಮಾನಿ ದೇವತೆಗಳ ಸ್ವಾಮಿಯಾದ ವಾಯುದೇವರು , ಸಂಭಾವ್ಯತಾಂ – ಪುರಸ್ಕರಿಸಲು ಯೋಗ್ಯರಾದ , ಸ ಸುರೇಂದ್ರ ಯಾಂಚಾಂ – ಶ್ರೇಷ್ಠ ದೇವತೆಗಳ ಪ್ರಾರ್ಥನೆಯಂತೆ, ಶ್ರೀ ವಲ್ಲಭ – ಲಕ್ಷ್ಮೀ ವಲ್ಲಭ ಶ್ರೀಹರಿಯ ಅಜ್ಞಾಂ – ಆಜ್ಞೆಯನ್ನು ಸಂಭಾವ್ಯ – ಪುರಸ್ಕರಿಸಿ ಕೇಸರಿಣ -: ಕೇಸರಿ ಎಂಬ ಕಪಿಯ ಗೃಹೇ – ಪತ್ನಿಯಲ್ಲಿ ಅಭೂತ್ – ಅವತರಿಸಿದರು

 

ವಾಯುದೇವರು ಸಕಲಜೀವ ಪ್ರೇರಕರು. ಅವರು ಸಕಲ ಪ್ರಾಣಿಗಳಿಗೆ – ಸಕಲ ಜೀವಿಗಳಿಗೆ, ಇಂದ್ರಿಯಾ ಅಭಿಮಾನಿಗಳಿಗಿಂತ ಶ್ರೇಷ್ಠರು. ಪರಮಾತ್ಮನ ಆದೇಶದಂತೆ ವಾಯುದೇವರು ಕೇಸರಿ ಎಂಬ ವಾನರನ ಪತ್ನಿಯಲ್ಲಿ ಅವತರಿಸಿದರು
ಯೇ-ಯೇ ಗುಣಾ ನಾಮ ಜಗತ್-ಪ್ರಸಿದ್ಧಾಃ
ಯಂ ತೇಷು-ತೇಷು ಸ್ಮನಿದರ್ಶಯಂತಿ |
ಸಾಕ್ಷಾನ್ಮಹಾ-ಭಾಗವತ-ಪ್ರಬರ್ಹಂ
ಶ್ರೀಮಂತಮೇನಂ ಹನುಮಂತಮಾಹುಃ || ೧೦ ||
ಯೇ ಯೇ – ಯಾವ ಯಾವ ಗುಣಾ ನಾಮ – ಗುಣವೆಂಬವು, ಜಗತ್ ಪ್ರಸಿದ್ದಾ: – ಜಗತ್ತಿನಲ್ಲಿ ಪ್ರಸಿದ್ಧವಾಗಿವೆಯೋ ತೇಷು ತೇಷು – ಅವುಗಳಲ್ಲಿ ಯಂ – ಯಾರನ್ನು ಸ್ಮ ನಿದರ್ಶಯಂತಿ – ಪ್ರಸಿದ್ಧವಾಗಿ ನಿರ್ದೇಶಿಸುತ್ತಾರೋ, ತಂ – ಅಂತಹ ಸಾಕ್ಷಾತ್ – ಮುಖ್ಯವಾಗಿ, ಮಹಾಭಾಗವತ ಪ್ರಬರ್ಹಂ – ಮಹಾ ಭಗವದ್ಬಕ್ತರಲ್ಲಿ ಶ್ರೇಷ್ಠರಾದ, ಶ್ರೀಮಂತಂ – ವೈರಾಗ್ಯಾದ ಗುಣಭರಿತರಾದ ಏನಂ – ಈ ಮಗುವನ್ನು (ಕೇಸರಿ ಪುತ್ರ) ಹನುಮಂತಂ ಆಹು: ಹನುಮಂತನೆಂದು ಕರೆದರು

 

ಕರ್ಮಾಣಿ ಕುರ್ವನ್ ಪರಮಾದ್ಭುತಾನಿ
ಸಭಾಸು ದೈವೀಷು ಸಭಾಜಿತಾನಿ |
ಸುಗ್ರೀವ-ಮಿತ್ರಂ ಸ ಜಗತ್-ಪವಿತ್ರಂ
ರಮಾ-ಪತಿಂ ರಾಮ-ತನುಂ ದದರ್ಶ || ೧೧ ||

ಸುಗ್ರೀವ ಮಿತ್ರಂ – ಸುಗ್ರೀವನ ಮಿತ್ರನಾದ ಸ: – ಹನುಮಂತನು ದೈವೀಷು – ದೈವಸಂಬಂಧವಾದ, ಸಭಾಸು – ಸಭೆಗಳಲ್ಲಿ ಸಭಾಜಿತಾಸು – ಪುರಸ್ಕರಿಸಲ್ಪಟ್ಟ ಪರಮಾದ್ಭುತಾನಿ – ಶ್ರೇಷ್ಟ ಮತ್ತು ಅಧ್ಭುತವಾದ ಕರ್ಮಾಣಿ – ಕೆಲಸಗಳನ್ನು ಕುರ್ವನ್ ಸನ್ – ಮಾಡುವವರಾಗಿ ಜಗತ್ಪವಿತ್ರಂ – ಜಗತ್ತನ್ನು ಪವಿತ್ರಿಸುವ ರಾಮ  – ರಾಮ ಎಂಬ ತನುಂ– ಶರೀರವುಳ್ಳ ರಮಾಪತಿಂ – ಲಕ್ಷ್ಮೀ ಪತಿ ರಾಮಚಂದ್ರನನ್ನು ದದರ್ಶ – ನೋಡಿದರು

 

ಪಾದಾರವಿಂದ ಪ್ರಣತೋ ಹರೀಂದ್ರಃ
ತದಾ ಮಹಾಭಕ್ತಿ ಭರಾಭಿನುನ್ನಃ |
ಅಗ್ರಾಹಿ ಪದ್ಮೋದರ ಸುಂದರಾಭ್ಯಾಂ
ದೋರ್ಭ್ಯಾಂ ಪುರಾಣೇನ ಸ ಪೂರುಷೇಣ || ೧೨ ||

ತದಾ ಆಗ ಮಹಾಭಕ್ತಿ ಮಹಾಭಕ್ತಿಯ ಭರ ಭಾರದಿಂದ ಅಭಿನುನ್ನಃ – ಬಾಗಿದ ಪಾದಾರವಿಂದ- ಪಾದಾರವಿಂದಗಳಲ್ಲಿ ಪ್ರಣತ: ನಮಿಸಿದ ಹರೀಂದ್ರ: – ಕಪಿಶ್ರೇಷ್ಠ ಸ: ಹನುಮಂತನು ಪುರಾಣೇನ ಪುರಾಣಗಳಿಂದ ಪೂರುಷೇಣ ಪುರುಷ ಶಬ್ಧವಾಚ್ಯನಾದ ರಾಮನಿಂದ ಪದ್ಮೋದರ – ಕಮಲದ ಮಧ್ಯಭಾಗದಂತೆ ಸುಂದರಾಭ್ಯಾಂ – ಮನೋಹರವಾದ ದೋರ್ಭ್ಯಾಂ ಎರಡೂ ಕೈಗಳಿಂದ ಆಗ್ರಾಹಿ – ಸ್ವೀಕರಿಸಿದನು

ಪುರಾಣ ಪುರುಷೋತ್ತಮ ಶ್ರೀ ರಾಮಚಂದ್ರನು ತನ್ನ ಪಾದಕ್ಕೆರಗಿದ ಕಪಿಶ್ರೇಷ್ಟನಾದ ಹನುಮಂತನ ತೋಳುಗಳನ್ನು ತನ್ನ ಕಮಲಗರ್ಭದಂತೆ ಸುಂದರವಾದ ತೋಳುಗಳಿಂದ ಎತ್ತಿ ಹಿಡಿದ.

 

ಅದಾರ್ಯಸಾಲಾವಲಿ ದಾರಣೇನ
ವ್ಯಾಪಾದಿತೇಂದ್ರ ಪ್ರಭವೇನ ತೇನ |
ಪ್ರಾದ್ಯೋತನಿ ಪ್ರೀತಿ ಕೃತಾ ನಿಕಾಮಂ
ಮಧುದ್ವಿಷಾ ಸಂದಿದಿಶೇ ಸ ವೀರಃ |೧೩ |

ಅದಾರ್ಯ – ಸೀಳಲಸಾಧ್ಯವಾದ ಸಾಲಾವಲಿ – ತಾಲವೃಕ್ಷದ ಸಾಲನ್ನು ದಾರಣೇನ – ಸೀಳಿದ , ಇಂದ್ರಪ್ರಭವೇನ ಇಂದ್ರಪುತ್ರ ವಾಲಿಯನ್ನು ವ್ಯಾಪಾದಿತ – ಸಂಹರಿಸಿ ಪ್ರಾದ್ಯೋತನಿಪ್ರದ್ಯೋತನ ಅಂದರೆ ಸೂರ್ಯ ಪುತ್ರ ಸುಗ್ರೀವನಲ್ಲಿ ಪ್ರೀತಿಕೃತಾ – ಪ್ರೀತಿ ಮಾಡಿದ ಮಧುದ್ವಿಷಾ – ಮಧುನಾಮಕ ದೈತ್ಯನ ವೈರಿಯಾದ ತೇನ – ಶ್ರೀ ರಾಮನಿಂದ ನಿಕಾಮಂ – ವಿಶೇಷವಾಗಿ ವೀರ: ಸ: ವೀರನಾದ ಹನುಮಂತನು ಸಂದಿದಿಶೇ – ಕಳಿಸಲ್ಪಟ್ಟನು.

ಇದೊಂದೇ ಪದ್ಯದಿಂದ ಸುಗ್ರೀವ ಸಖ್ಯ, ವಾಲಿ ನಿಗ್ರಹ ಮತ್ತು ಹನುಮಂತನ ಸೀತಾ ಅನ್ವೇಷಣೆಗೆ ಆಜ್ಞೆ ಇಷ್ಟೂ ವಿಷಯವನ್ನು ಪಂಡಿತಾಚಾರ್ಯರು ತಿಳಿಸಿದ್ದಾರೆ.

 

ಕರ್ಣಾಂತಮಾನೀಯ ಗುಣ ಗ್ರಹೀತ್ರಾ
ರಾಮೇಣ ಮುಕ್ತೋ ರಣ ಕೋವಿದೇನ |
ಸ್ಫುರನ್ನಸೌ ವೈರಿ ಭಯಂಕರೋಽಭೂತ್
ಸತ್ಪಕ್ಷಪಾತೀ ಪ್ರದರೋ ಯಥಾಽಗ್ರ್ಯಃ || ೧೪ ||

ಗುಣಗ್ರಹೀತ್ರಾ – ಗುಣಗ್ರಾಹಿಯಾದ ರಣಕೋವಿದೇನ – ಯುದ್ಧದಲ್ಲಿ ಕುಶಲನಾದ ರಾಮೇಣ – ರಾಮನಿಂದ ಕರ್ಣಾಂತಂ ಕಿವಿಯವರೆಗೂ ಆನೀಯ ಕರೆದು ಮುಕ್ತ: ಬಿಡಲ್ಪಟ್ಟ ಸ್ಫುರನ್ ಪ್ರಕಾಶಮಾನವಾದ ಪ್ರದರ ಯಥಾ – ಬಾಣದಂತೆ ಸತ್ಪಕ್ಷಪಾತೀ – ಸಜ್ಜನಪಕ್ಷಪಾತಿಯಾದ (ಅಥವಾ ಸತ್ – ನಿರ್ದುಷ್ಪವಾದ ಪಕ್ಷ – ರೆಕ್ಕೆಗಳಿಂದ ಪಾತೀ – ಹಾರತಕ್ಕ ) ಅಗ್ರ್ಯ – ಶ್ರೇಷ್ಟನಾದ ಅಸೌ – ಹನುಮಂತನು ವೈರಿಭಯಂಕರ: – ವೈರಿ ಭಯಂಕರವಾಗಿ ಅಭೂತ್ – ಆದನು

ರಾಮಚಂದ್ರನು ಗುಣ ಎಂಬ ಧನಸ್ಸಿನ ಜ್ಯಾವನ್ನು ಹಿಡಿದು ತನ್ನ ಕಿವಿಯವರೆಗೂ ಎಳೆದು ಬಾಣವನ್ನು ಬಿಟ್ಟಂತೆ ಹನುಮಂತ ದೇವರನ್ನು ಸೀತಾಕೃತಿಯ ಅನ್ವೇಷಣೆಗೆ ಕಳುಹಿಸಲು ಅವನ ಕಿವಿಯ ಬಳಿ ರಹಸ್ಯ ಸಂದೇಶವನ್ನು ನೀಡಿದ ರೀತಿಯಲ್ಲಿತ್ತು. ಧನಸ್ಸಿನಿಂದ ಬಾಣವನ್ನು ಬಿಡುವಾಗ ಧನಸ್ಸಿನಿಂದ ಜ್ಯಾವನ್ನು ಕಿವಿಯವರೆಗೂ ಎಳೆದು ಬಾಣ ಪ್ರಯೋಗ ಮಾಡುವ ರಾಮನ ಕಾರ್ಯದಲ್ಲಿ, ಹನುಮಂತನನ್ನು ರಾಮಬಾಣಕ್ಕೆ ಹೋಲಿಸಿದ್ಜಾರೆ.

ನಾಲ್ಕೂ ದಿಕ್ಕುಗಳಲ್ಲಿ ಕಪಿಗಳು ಸೀತಾನ್ವೇಷಣೆಗೆ ಹೊರಟಾಗ ಹನುಮಂತನಿಗೇ ಅಂಗುಲೀಯಕ ನೀಡಿ ಸೀತೆಗೆ ಹೇಳಬೇಕಾದ್ದನ್ನು ಅವನ ಕಿವಿಯಲ್ಲಿ ಹೇಳಿ ಕಳುಹಿಸಿದ್ದರಿಂದ ತನ್ನ ಕಾರ್ಯ ಸಾಧನೆ ಮಾಡಲು ಇವನೊಬ್ಬನಿಂದ ಮಾತ್ರ ಸಾಧ್ಯ ಎಂದು ನಿರೂಪಿಸುವಂತೆ, ರಾಮಚಂದ್ರನು ಹನುಮಂತನ ಸೀತೆಗೆ ಹೇಳಬೇಕಾದ್ದನ್ನು ಕಿವಿಯಲ್ಲಿ ಹೇಳಿದೆನೋ ಎಂಬಂತೆ ಕವಿಗಳು ಉತ್ಪ್ರೇಕ್ಷೆ ಮಾಡಿದ್ದಾರೆ.

 

ಗೋಭಿಃ ಸಮಾನಂದಿತ ರೂಪಸೀತಃ
ಸ್ವವಹ್ನಿ ನಿರ್ದಗ್ಧ ಪಲಾಶಿ ರಾಶಿಃ |
ಅಹೋ ಹನೂಮನ್ನವ ವಾರಿದೋಽಸೌ
ತೀರ್ಣಾಂಬುಧಿರ್ವಿಷ್ಣು ಪದೇ ನನಾಮ
|| ೧೫ ||

ಅಸೌ ಸ: ಈ ಹನುಮಂತನು ಗೋಭಿಃ ರಾಮಸಂದೇಶದ ಮಾತುಗಳಿಂದ ( ಹನುಮಂತ ಎಂಬ ಮೇಘವು) ಸಮಾನಂದಿತ – ಸಂತಸಗೊಂಡ ರೂಪಸೀತ: ಸೀತಾಕೃತಿಯು (ಸಸ್ಯಗಳು) ಸ್ವ ವಹ್ನಿ – ತನ್ನ ಬಾಲದ ವಹ್ನಿಯಿಂದ (ಬೆಂಕಿಯಿಂದ) (ಮಿಂಚಿನ ಬೆಳಕೆಂಬ ಬೆಂಕಿಯಿಂದ) ನಿರ್ದಗ್ದ – ದಹಿಸಲ್ಪಟ್ಟ ಪಲಾಶಿ – ರಾಕ್ಷಸರ (ವೃಕ್ಷಗಳ) ರಾಶಿ: ಸಮೂಹವುಳ್ಳ (ಪಲಾಶಿರಾಶಿ – ವೃಕ್ಷ ಸಮೂಹವನ್ನು) ನವ – ಹೊಸದಾದ ನೀರದ: – ಮೋಡವು ತೀರ್ಣ– ದಾಟಿದ ಅಂಬುಧಿ: ಸನ್ – ಸಮುದ್ರವುಳ್ಳದ್ದಾಗಿ ವಿಷ್ಣು: ಪದೇ – ಶ್ರೀರಾಮನ ಪಾದದಲ್ಲಿ (ವಿಷ್ಣು ಪದೇ – ಆಕಾಶದಲ್ಲಿ) ನನಾಮ – ನಮಿಸಿದನು, ಬಗ್ಗಿತು. ಅಹೋ – ಆಶ್ಚರ್ಯವು !!

ಈ ಶ್ಲೋಕದಲ್ಲಿ ಸಂಪೂರ್ಣ ಸುಂದರಕಾಂಡವನ್ನು ಚಿತ್ರಿಸಿದ್ದಾರೆ

ಮೋಡವು ನೀರಿನಿಂದ ಸಸ್ಯಗಳಿಗೆ ಹರ್ಷಗೊಳಿಸಿ, ಸಿಡಿಲಿನಿಂದ ವೃಕ್ಷಗಳ ದಹಿಸಿ, ಆಕಾಶದಲ್ಲಿ ಲೀನವಾದಂತೆ ಹನುಮಂತನು ಶ್ರೀರಾಮಸಂದೇಶ ಎಂಬ ವಚನಗಳಿಂದ ಸೀತಾಕೃತಿಗೆ ಆನಂದಗೊಳಿಸಿ, ತನ್ನ ಬಾಲದ ಬೆಂಕಿಯಿಂದ ರಾಕ್ಷಸ ಕೂಟವನ್ನು ದಹಿಸಿ, ಪುನಃ: ಸಮುದ್ರ ದಾಟಿ ಶ್ರೀರಾಮನ ಪಾದಕ್ಕೆ ನಮಸ್ಕರಿಸಿದನು. ಹನುಮಂತನ ಈ ಕಾರ್ಯ ಅದ್ಭುತ !!

ಇಲ್ಲಿ ಪ್ರಸ್ತುತಿಪಡಿಸಿರುವ ಮಾಹಿತಿಗಳು – ಹನುಮನ ಸಮುದ್ರೋಲ್ಲಂಘನ, ಸೀತಾದೇವಿಯ ಭೇಟಿ, ಅವಳಿಗೆ ರಾಮಸಂದೇಶ ರವಾನೆ, ನಂತರ ರಾವಣನ ವನ ಧ್ವಂಸ, ರಾವಣನ ಭೇಟಿ, ಲಂಕಾದಹನ, ಪುನಃ: ಸಮುದ್ರೋಲ್ಲಂಘನ, ರಾಮಚಂದ್ರನಿಗೆ ಸಮರ್ಪಣೆ

 

ಅಪಕ್ಷಪಾತೀ ಪುರುಷಸ್ತ್ರಿಲೋಕ್ಯಾಂ-
ಭೋಗ-ಭೋಕ್ತಾ ಪತಗಾಧಿ-ರಾಜಮ್ |
ವಿಶ್ವಂಭರಂ ಬಿಭ್ರದಸೌ ಜಿಗಾಯ
ತ್ವರಾಪರಾ ಕ್ರಾಂತಿಷು ಚಿತ್ರಮೇತತ್  ! ೧೬|

ಅಪಕ್ಷಪಾತೀ – ಪಕ್ಷಪಾತರಹಿತನಾದ (ರೆಕ್ಕೆಗಳಿಲ್ಲದೆ ಹಾರುವವನು) , ತ್ರಿಲೋಕ್ಯಾಂ – ಮೂರು ಲೋಕಗಳಲ್ಲಿ ಪುರುಷ: – ಶ್ರೇಷ್ಟನಾದ, ಅಭೋಗಭೋಕ್ತಾ – ಹನುಮಂತ – ವಿಷಯ ಸುಖವ ಭೋಗಿಸದವ , ಭೋಗರಹಿತ ಬ್ರಹ್ಮಚಾರಿ. (ಗರುಡ – ಹಾವಿನ ಶರೀರ ತಿನ್ನವವ) ಅಸೌ – ಹನುಮಂತನು ವಿಶ್ವಂಭರಂ – ಜಗತ್ತನ್ನೇ ತನ್ನ ಉದರದಲ್ಲಿಟ್ಟುಕೊಂಡಿರುವ ಶ್ರೀಹರಿಯನ್ನು, ಬಿಭ್ರತ್ – ಧರಿಸಿ, ತ್ವರಾ – ವೇಗವಾಗಿ, ಪರಾಕ್ರಾಂತಿಷು – ಪರಾಕ್ರಮದಲ್ಲಿ ಪತಗಾಧಿರಾಜಂಪತಗ – ಪಕ್ಷಿಗಳಿಗೆ, ಅಧಿರಾಜಂ – ಪಕ್ಷಿರಾಜನಾದ ಗರುಡನನ್ನು, ಜಿಗಾಯ – ಗೆದ್ದರು. ಏತತ್ – ಇದು ಚಿತ್ರಂ – ಆಶ್ಚರ್ಯ.

ಹನುಮಂತ ದೇವರು ಹಾರುತ್ತಾರೆ, ಆದರೆ ಅವರಿಗೆ ಗರುಡನಂತೆ ರೆಕ್ಕೆಯಿಲ್ಲ. ಹನುಮಂತ ಗರುಡನಂತೆ ಹಾವಿನ ಶರೀರ ತಿನ್ನುವವರಲ್ಲ ಆದ್ದರಿಂದ ಅವರು ಅಭೋಗಭೋಕ್ತೃ. ಗರುಡ ಭಕ್ಷಿಸುವುದರಿಂದ ಭೋಗಭೋಕ್ತೃ. ಇಬ್ಬರೂ ವಿಶ್ವಂಭರನನ್ನು ಹೊತ್ತವರು.  ಪರಮಾತ್ಮ ವಾಯವಾಹನನೂ ಹೌದು ಗರುಡವಾಹನನೂ ಹೌದು. ಮೂಲತಃ: ವಿಷ್ಣು ಸಹಸ್ರನಾಮದಲ್ಲಿ ವರದೋ ವಾಯುವಾಹನ ಎಂದಿದೆ.  ಜಗತ್ತನ್ನು ಧಾರಣೆ ಮಾಡಿದ್ದರಿಂದ ಪರಮಾತ್ಮ ವಿಶ್ವಂಭರ.   ವೇಗ ಮತ್ತು ಪರಾಕ್ರಮದಲ್ಲಿ ಹನುಮಂತ ದೇವರು ಪಕ್ಷಿರಾಜ ಗರುಡನನ್ನು ಗೆದ್ದರೆಂದು ಅರ್ಥ.

 

ನಿಬದ್ಧ್ಯ ಸೇತುಂ ರಘುವಂಶಕೇತು-
ಭ್ರೂಭಂಗಸಂಭ್ರಾಂತಪಯೋಧಿಮಧ್ಯೇ |
ಮುಷ್ಟಿಪ್ರಹಾರಂ ದಶಕಾಯ ಸೀತಾ-
ಸಂತರ್ಜನಾಗ್ರ್ಯೋತ್ತರಮೇಷಕೋಽದಾತ್ || ೧೭ ||

ಏಷಕ: ಈ ಹನುಮಂತನು ರಘುವಂಶ ಕೇತು – ರಘುವಂಶಕ್ಕೆ ಧ್ವಜದಂತಿರುವ ರಾಮಚಂದ್ರನ ಭ್ರೂಭಂಗ – ಹುಬ್ಬು ಆಡಿಸೋಣದರಿಂದ ಸಂಭ್ರಾಂತ – ಕಂಗೆಟ್ಟ ಹೆದರಿದ , ಪಯೋಧಿ – ಸಮುದ್ರದ ಮಧ್ಯೇ – ಮಧ್ಯದಲ್ಲಿ, ಸೇತುಂ – ಸೇತುವೆಯನ್ನು, ನಿಬಧ್ಯ – ಕಟ್ಟಿ, ಸೀತಾ ಸಂತರ್ಜನ – ಸೀತಾದೇವಿಯನ್ನು ನೋಯಿಸಿದಕ್ಕೆ, ಅಗ್ರ್ಯ – ಶ್ರೇಷ್ಠವಾದ, ಉತ್ತರಂ – ಉತ್ತರವಾಗಿ ಮುಷ್ಠಿಪ್ರಹಾರಂ – ಮುಷ್ಠಿಪ್ರಹಾರವನ್ನು ದಶಕಾಯ – ದಶಶಿರನಾದ ರಾವಣನಿಗೆ ಅದಾತ್ – ಕೊಟ್ಟರು. ಹನುಮಂತನ ಮುಷ್ಠಿ ಪ್ರಹಾರಕ್ಕೆ ಹತ್ತೂ ಮುಖಗಳಿಂದಲೂ ರಾವಣ ರಕ್ತಕಾರಿದ.

ಸಮುದ್ರವು ರಾಮನಿಗೆ ದಾರಿ ಕೊಡದಿರಲು, ರಾಮಚಂದ್ರ ಕೋಪ ಪ್ರಕಟಿಸಲು , ಸಮುದ್ರ ರಾಜ ಬಂದು ಕ್ಷಮೆ ಕೇಳಿ ಸೇತುವೆ ಕಟ್ಟಿರಿ ಎಂದು ಕೋರಲು ಕಪಿಗಳಿಂದ ಕೂಡಿ, ಹನುಮಂತ ದೇವರು ಸೇತುವೆ ಕಟ್ಟಿಸಿದರು

 

ಜಾಜ್ವಲ್ಯಮಾನೋಜ್ಜ್ವಲ-ರಾಘವಾಗ್ನೌ
ಚಕ್ರೇ ಸ ಸುಗ್ರೀವ-ಸು-ಯಾಯಜೂಕೇ |
ಆಧ್ವರ್ಯವಂ ಯುದ್ಧ-ಮುಖೇ ಪ್ರತಿಪ್ರ-
ಸ್ಥಾತ್ರಾ ಸುಮಿತ್ರಾ-ತನಯೇನ ಸಾಕಮ್ || ೧೮ ||

ಸ: ಆ ಹನುಮಂತನು ಜಾಜ್ವಲ್ಯಮಾನ: ಪ್ರಜ್ವಲಿಸುತ್ತಿರುವ ಉಜ್ವಲ ಉಜ್ವಲವಾದ ರಾಘವಾಗ್ನೌ – ಶ್ರೀರಾಮ ಎಂಬ ಅಗ್ನಿಯು, ಸುಗ್ರೀವ ಸು ಸುಗ್ರೀವನೆಂಬ ಶ್ರೇಷ್ಠ ಯಾಯಜೂಕೆ – ಯಜಮಾನ, ಯುದ್ಧಮುಖೇ – ಯುದ್ಧವೆಂಬ ಯಜ್ಞದಲ್ಲಿ, ಪ್ರತಿಪ್ರಸ್ಥಾತ್ರಾ – ಅಧ್ವರ್ಯುವಿಗೆ ಸಹಾಯಕನು , .ಸುಮಿತ್ರಾತನಯೇನ – ಸುಮಿತ್ರಾತನಯ ಲಕ್ಷ್ಮಣನಿಂದ ಸಾಕಂ – ಕೂಡಿ ಅಧ್ವರ್ಯವಂ – ಅಧ್ವರ್ಯುವಾಗಿ ಚಕ್ರೇ – ಮಾಡಿದರು

ಯಜ್ಞದಲ್ಲಿ ಯಜಮಾನ, ಅಗ್ನಿ, ಋತ್ವಿಕ್, ಅಧ್ವರ್ಯು, ಇರಬೇಕು. ರಾಮರಾವಣ ಯುದ್ಧವೇ ಯಜ್ಞ, ರಾಮನೇ ಅಗ್ನಿ, ಸುಗ್ರೀವನೇ ಯಜಮಾನ, ಲಕ್ಷ್ಮಣನೇ ಪ್ರತಿಪ್ರಸ್ಥಾತೃವೆಂಬ ಋತ್ವಿಕ್, ಹನುಮಂತನೇ ಅಧ್ವರ್ಯು.

 

ರಾಮಾರ್ಚನೇ ಯೋ ನಯತಃ ಪ್ರಸೂನಂ
ದ್ವಾಭ್ಯಾಂ ಕರಾಭ್ಯಾಮಭವತ್ ಪ್ರಯತ್ನಃ |
ಏಕೇನ ದೋಷ್ಣಾ ನಯತೋ ಗಿರೀಂದ್ರಂ
ಸಂಜೀವನಾದ್ಯಾಶ್ರಯಮಸ್ಯ ನಾಭೂತ್ || ೧೯ ||

ರಾಮಾರ್ಚನೇ – ರಾಮದೇವರ ಪೂಜೆಗಾಗಿ ಯ: ಯಾವ ದ್ವಾಭ್ಯಾಂ – ಎರಡೂ ಕರಾಭ್ಯಾಂ – ಕೈಗಳಿಂದ ಪ್ರಸೂನಂ ಹೂವನ್ನು ನಯತಃ ತರುತ್ತಿರುವ ಅಸ್ಯ – ಹನುಮಂತದೇವರಿಗೆ ಯ: ಯಾವ ಪ್ರಯತ್ನವು ಏಕೇನ ದೋಷ್ಣಾ ಒಂದೇ ಹಸ್ತದಿಂದ, ಸಂಜೀವನಾದ್ಯ – ಸಂಜೀವನಾದಿ ಔಷಧಿಗಳಿಗೆ, ಆಶ್ರಯಂ – ಆಶ್ರಯವಾದ ಗಿರೀಂದ್ರಂ – ಪರ್ವತಶ್ರೇಷ್ಟವಾದ ಗಂದಮಾದನ ಪರ್ವತವನ್ನು ನಯತ: ತರುತ್ತಿರುವ ಹನುಮಂತ ದೇವರಿಗೆ ನಾಭೂತ್ – ಆಗಲಿಲ್ಲ.

ತಾತ್ಪರ್ಯ : ಈ ಶ್ಲೋಕದಲ್ಲಿ ರಾಮಾಯಣ ಕದನ, ಇಂದ್ರಜಿತುವಿನ ನಾಗಪಾಶ ಪ್ರಯೋಗ, ಎಲ್ಲಾ ಕಪಿಗಳ ಮತ್ತು ಲಕ್ಷ್ಮಣರ ಮೂರ್ಛೆ, ಸುಷೇಣನ ಸಲಹೆಯಂತೆ ಹನುಮ ಕ್ಷಣಮಾತ್ರದಲ್ಲಿ ಇಡೀ ಪರ್ವತ ಸಮೂಹವನ್ನೇ ತಂದಿದ್ದು, ಹನುಮನ ರಾಮಾರ್ಚನ ಶೈಲಿ, ಅವರ ಸಾಮರ್ಥ್ಯ ಮುಂತಾದವನ್ನು ತೋರಿದ್ದಾರೆ.

ಹನುಮಂತ ದೇವರು ರಾಮದೇವರ ಪೂಜೆಗೋಸ್ಕರ ಎರಡೂ ಕೈಗಳಿಂದ ಪುಷ್ಪವನ್ನು ತರುವಾಗ , ಪುಷ್ಪಗಳಿಗೆ ತಮ್ಮ ಉಸಿರು ಬೀಳದಂತೆ, ಉಗುರು ತಗಲದಂತೆ, ದೇಹದ ಯಾವುದೇ ಭಾಗಕ್ಕೆ ತಗಲದಂತೆ ತರುವಾಗ, ಪ್ರಯಾಸವಾಯಿತು. ಅದೇ ಹನುಮಂತ ದೇವರು ಒಂದೇ ಕೈಯಿಂದ ಗಂದಮಾದನ ಪರ್ವತ ತರುವಾಗ ಲೀಲಾಜಾಲವಾಗಿ ಸ್ವಲ್ಪವೂ ಆಯಾಸವಾಗಲಿಲ್ಲ. ದೇವರ ಪೂಜೆಗೆ ತರುವ ಹೂವನ್ನು ಎಷ್ಟು ಎಚ್ಚರದಿಂದ ತರಬೇಕು ಎಂಬುದನ್ನು ನಿರೂಪಿಸಲು ಪಂಡಿತಾಚಾರ್ಯರು ಈ ಮಹಿಮೆಯನ್ನು ವರ್ಣಿಸಿದ್ದಾರೆ.
ಅಂದರೆ ಇದು ನಮಗೆ ಹೂವನ್ನು ತರುವಾಗ ಎಚ್ಚರಿಕೆ ನೀಡಿದ್ದಾರೆ.

ಗಂಧಮಾದನ ಪರ್ವತವು ನಾಲ್ಕು ಔಷಧಿಗಳನ್ನು ಹೊಂದಿರುತ್ತದೆ.
ಮೃತಸಂಜೀವಿನಿ – ಸತ್ತವರ ಬದುಕಿಸಲು,  ವಿಶಲ್ಯಕರಣಿ – ನಾಟಿದ ಬಾಣ ತೆಗೆಯಲು
ಸಂಧಾನಕರಣಿ – ಮುರಿದ ಮೂಳೆ ಜೋಡಿಸಲು,   ಸವರ್ಣಕರಣಿ – ಗಾಯಗಳಿಂದಾದ ವಿವರ್ಣತೆ ಪರಿಹರಿಸಲು

ಪ್ರಾಕ್ಪಂಚಾಶತ್ಸಹಸ್ರೈ….
(ವಾಯು ಸ್ತುತಿ)
ಹನುಮಂತ ದೇವರು ೫೦೦೦೦ ಯೋಜನ ದೂರದಿಂದ ಸಂಜೀವನಾದಿ ಇವುಗಳ ಆಶ್ರಯವಾದ ಗಂದಮಾದನ ಪರ್ವತ ಲಂಕೆಗೆ ತಂದರು.

ಗಂದಮಾದನ ಪರ್ವತ ನೂರು ಯೋಜನ ಎತ್ತರ, ಅಗಲ, ಮತ್ತು ಲಂಕೆಯಿಂದ ದೂರ ೫೦೦೦೦ ಯೋಜನ, ಹನುಮಂತ ತಂದಿದ್ದು ಒಂದೇ ಕೈ.

ತಂದ ಕಾರಣ ಇಂದ್ರಜಿತುವಿನ ನಾಗಪಾಶಕ್ಕೆ ತುತ್ತಾದ ಲಕ್ಷ್ಮಣನನ್ನು , ಕಪಿಗಳನ್ನು, ಬದುಕಿಸಲು, ಕಪಿಗಳ ವೈದ್ಯ ಸುಷೇಣನ ಮಾತಿನಂತೆ, ಹನುಮನು ತಂದ ಪರ್ವತದ ವಾಸನೆಯಿಂದಲೇ ಎಲ್ಲಾ ಕಪಿಗಳೂ ಮೊದಲಿನಂತಾಗಿ ಬದುಕಿದರು

ಸಂಜೀವಿನ ತಂದಿದ್ದು ಎರಡು ಬಾರಿ. ಇಂದ್ರಜಿತುವಿನ ನಾಗಪಾಶ ಪ್ರಸಂಗ ಮತ್ತು ರಾವಣನ ಪ್ರಹಾರಕ್ಕೆ ಸುಸ್ತಾಗಿದ್ದ ಲಕ್ಷ್ಮಣನ ಉದ್ದಾರಕ್ಕೆ

ಮತ್ತೆ ಆ ಪರ್ವತವನ್ನು ತಾವು ನಿಂತ ಜಾಗದಿಂದಲೇ ಅದು ಮುನ್ನ ಇದ್ದ ಜಾಗಕ್ಕೆ ಸ್ವಲ್ಪವೂ ವ್ಯತ್ಯಾಸವಿಲ್ಲದಂತೆ ಎಸೆದರು.

This Shloka establishes the quality of devotion Hanuman had towards Rama pooja. Flowers won’t weigh much, but Hanuman felt it difficult to carry flowers even in two hands but he carried the Sanjeevini mountain in single hand easily.

Gandhamadhana Parvata near Meru Parvata, had four mountains viz

a. Mruta Sanjeevini – which revives life of dead
b. Sandhanakarani – which United broken parts of body
c. Savarnakarani – which brings back the natural colour back
d. Vishalya Karini – which removes imbedded arrows

 

ಸ ದಾರಿತಾರಿಂ ಪರಮಂ ಪುಮಾಂಸಂ
ಸಮನ್ವಯಾಸೀನ್ನರ-ದೇವ-ಪುತ್ರ್ಯಾ |
ವಹ್ನಿ-ಪ್ರವೇಶಾಧಿಗತಾತ್ಮ-ಶುದ್ಧ್ಯಾ
ವಿರಾಜಿತಂ ಕಾಂಚನ-ಮಾಲಯೇವ || ೨೦ ||

ದಾರಿತ ಅರಿಂ – ಶತ್ರುಗಳನ್ನು ಸಂಹರಿಸಿದ ಪರಮಂ ಶ್ರೇಷ್ಟ ಪುಮಾಂಸಂ – ಪುರುಷಶಬ್ದ ವಾಚ್ಯನಾದ ವಹ್ನಿ ಪ್ರವೇಶ – ಅಗ್ನಿಪ್ರವೇಶದಿಂದ ಅಧಿಗತ ಆತ್ಮ ಶುದ್ಧ್ಯಾ – ತನ್ನ ಪಾವಿತ್ರ್ಯತೆ ಲೋಕಕ್ಕೆ ತಿಳಿಸಿದ ನರದೇವ – ಜನಕರಾಜನ ಪುತ್ರ್ಯಾ – ಪುತ್ರಿಯಾದ ಸೀತೆಯಿಂದ ಕಾಂಚನ ಮಾಲಾ ಇವ – ಬಂಗಾರದ ಹಾರದಂತೆ ವಿರಾಜಿತಂ ಪ್ರಕಾಶಿಸುತ್ತಿರುವ ಶ್ರೀರಾಮನನ್ನು ಸ:– ಆ ಹನುಮಂತನು ಸಮನ್ವಯ ಆಸೀತ್ – ಅನುಸರಿಸಿದನು

ರಾವಣಾದಿ ಅಸಂಖ್ಯಾತ ಶತ್ರು ಸಂಹಾರ ನಂತರ, ಲೋಕರೀತ್ಯಾ ಸೀತಾ ಕೃತಿಯಲ್ಲಿ ಅಗ್ನಿಪ್ರವೇಶಿಸಿ ಶುದ್ಧಳಾದಂತೆ , ಅದೇ ಸಮಯದಿ ಅಗ್ವಿಯಿಂದಲೇ ನಿಜ ಸೀತೆಯು ಕೈಲಾಸದಿಂದ ಮರಳಿ ರಾಮಚಂದ್ರನೊಂದಿಗೆ ಹೊರಟಳು. ಹನುಮಂತನು ಅವರನ್ನು ಅನುಸರಿಸಿದ

After the killing of Ravanaadi, Rakshasas , Rama returned to Ayodhya with Seetha, who had proved her purity by Agni Pravesha, just like a gold chain tested in fire to purify it, which is not caused in any manner. Hanuman accompanied Rama.

 

ಶ್ಯಾಮಂ ಸ್ಮಿತಾಸ್ಯಂ ಪೃಥುದೀರ್ಘ-ಹಸ್ತಂ
ಸರೋಜ-ನೇತ್ರಂ ಗಜರಾಜ-ಯಾತ್ರಮ್ |
ವಪುರ್ಜಗನ್ಮಂಗಲಮೇಷ ದೃಗ್ಭ್ಯಾಂ
ಚಿರಾದಯೋಧ್ಯಾಧಿಪತೇಃಸಿಷೇವೇ |೨೧|

ಶ್ಯಾಮಂ – ನೀಲಮೇಘಶ್ಯಾಮನಾದ ಸ್ಮಿತ – ಮಂದಹಾಸಭರಿತ ಆಸ್ಯ – ಮುಖವುಳ್ಳ ಪೃಥು ದೀರ್ಘ ಹಸ್ತಂ – ಪುಷ್ಟವೂ ನೀಳವೂ ಆದ ಕೈಗಳುಳ್ಳ ಸರೋಜ ನೇತ್ರಂ – ಕಮಲದಂತ ಕಣ್ಣುಗಳುಳ್ಳ ಗಜರಾಜ ಯಾತ್ರಂ – ಗಜರಾಜನಂತೆ ನಡಿಗಯುಳ್ಳ ಜಗನ್ ಮಂಗಲಂ – ಜಗತ್ತಿಗೇ ಮಂಗಲವನ್ನು ಮಾಡುವ ಅಯೋಧ್ಯಾಧಿಪತೇ: ಶ್ರೀರಾಮಚಂದ್ರನ ವಪು: ಶರೀರವನ್ನು ಸ: ಹನುಮಂತ ದೇವರು ದೃಗ್ಭ್ಯಾಂ – ನೇತ್ರದ್ವಯದಿಂದ ದರ್ಶಿಸುತ್ತಾ ಸಿಷೇವೆ – ಸೇವಿಸಿದರು.

ಪರಮಾತ್ಮನ ಶರೀರವನ್ನು ಸಂಕ್ಷಿಪ್ತ ಪರಿಚಯ ನೀಡಿದ್ದಾರೆ. ನೀಲ ಮೇಘ ಶ್ಯಾಮ ಎಂದರೆ ಆಕಾಶದಂತೆ ತಿಳಿನೀಲಿ ಬಣ್ಣ, ಸದಾ ಮಂದಸ್ಮಿತ, ದೀರ್ಘ ಬಾಹು, ಮುಖ ಕಮಲದಂತೆ ವಿಶಾಲವಾದ ಕಣ್ಣಿಂದ ಕೂಡಿತ್ತು. ಅವನ ನಡೆ ಗಜರಾಜ ಐರಾವತದಂತೆ ಗಾಂಭೀರ್ಯ ತುಂಬಿತ್ತು. ಅಂತಹ ಜಗನ್ಮೋಹನ ಜಗನ್ಮಂಗಳ ರಾಮಚಂದ್ರನ ಹನುಮಂತ ಸೇವಿಸಿದರು

 

ರಾಜ್ಯಾಭಿಷೇಕೇಽವಸಿತೇಽತ್ರ ಸೀತಾ
ಪ್ರೇಷ್ಠಾಯ ನಸ್ತಾಂ ಭಜತಾಂ ದಿಶೇತಿ |
ರಾಮಸ್ಯ ವಾಣ್ಯಾ ಮಣಿ-ಮಂಜು-ಮಾಲಾ-
ವ್ಯಾಜೇನ ದೀರ್ಘಾಂ ಕರುಣಾಂ ಬಬಂಧ || ೨೨ ||

ರಾಜ್ಯಾಭಿಷೇಕೇ – ರಾಜ್ಯಾಭಿಷೇಕವು ಅವಸಿತೇ – ಮುಗಿದಿರಲು, ಅತ್ರ – ಸಭೆಯಲ್ಲಿ, ನ: ನಮ್ಮನ್ನು, ಭಜತಾಂ – ಸೇವಿಸುವವರ, ಪ್ರೇಷ್ಠಾಯ – ಹೆಚ್ಚು ಪ್ರೀತಿಪಾತ್ರರಾದವರಿಗೆ ತಾಂ – ಆ ಹಾರವನ್ನು ದಿಶ ಇತಿ – ಕೊಡು ಎಂದು, ರಾಮಸ್ಯ – ರಾಮಚಂದ್ರನ ವಾಣ್ಯಾ – ಮಾತಿನಂತೆ, ಸೀತಾ – ಸೀತಾದೇವಿಯು ಮಣಿಮಂಜು – ರತ್ನದ ಮನೋಹರವಾದ ಮಾಲಾ – ಹಾರದ, ವ್ಯಾಜೇನ – ನಿಮಿತ್ತವಾಗಿ ದೀರ್ಘಾಂ – ಅವಿಚ್ಛಿನ್ನವಾಗಿ ಕರುಣಾಂ – ಕರುಣೆಯಿಂದ ಬಬಂಧ – ಬಂಧನ ಮಾಡಿದರು

ಸೀತೆಗೆ ಒಂದು ಅಮೂಲ್ಯ ರತ್ನ ಹಾರವೊಂದನ್ನು ನೀಡಿ, ಪಟ್ಟಾಭಿಷಿಕ್ತನಾದ ರಾಮನು, ನಿನಗೆ ಅತ್ಯಂತ ಪ್ರೀತಿಪಾತ್ರನಿಗೆ ಕೊಡು ಎಂದಾಗ, ಸೀತಾದೇವಿಯು ಅದನ್ನುಹನುಮಂತನಿಗೆ ನೀಡಿದಳು. ಇದರಿಂದ ತನಗೆ ಹನುಮಂತನು ಅತ್ಯಂತ ಪ್ರೀತಿಪಾತ್ರ ಮತ್ತು ಸೀತೆಗೆ ಕೂಡ ಹನುಮಂತ ಪ್ರೀತಿಪಾತ್ರ ಎಂದು ತಿಳಿಸಿದ್ದಾರೆ.

ಸುಮಧ್ವ ವಿಜಯ
ಸರ್ಗ 1. ಶ್ಲೋಕ 23

ಹೃದೋರು-ಸೌಹಾರ್ದ-ಭೃತಾಽಧಿಮೌಲಿ
ನ್ಯಸ್ತೇನ ಹಸ್ತೇನ ದಯಾರ್ದ್ರ-ದೃಷ್ಟ್ಯಾ |
ಸೇವಾ-ಪ್ರಸನ್ನೋಽಮೃತ-ಕಲ್ಪ-ವಾಚಾ
ದಿದೇಶ ರಾಮಃ ಸಹ-ಭೋಗಮಸ್ಮೈ || ೨೩ ||

ಸೇವಾಪ್ರಸನ್ನ: ಹನುಮಂತನ ಸೇವೆಯಿಂದ ಪ್ರಸನ್ನನಾದ ದೇವ: – ಶ್ರೀರಾಮಚಂದ್ರನು ಹೃದಾ – ಮನಸ್ಸಿನಿಂದ ಉರುಸೌಹಾರ್ದ್ರ – ಅತ್ಯಂತ ಸ್ನೇಹದಿಂದ ಯುತ – ಕೂಡಿರುವ ಅಧಿಮೌಲಿ – ಶಿರಸ್ಸಿನಲ್ಲಿ ನ್ಯಸ್ತೇನ – ಇಟ್ಟ ಹಸ್ತೇನ – ಕೈಯಿಂದ ದಯಾರ್ದ್ರ – ದಯಾಪೂರ್ಣವಾದ ದೃಷ್ಟ್ಯಾ – ದೃಷ್ಟಿಯಿಂದ ಅಮೃತಕಲ್ಪ – ಅಮೃತಸಮಾನವಾದ ವಾಚಾ ಚ – ಮಾತಿನಿಂದಲೂ ಅಸ್ಮೈ – ಹನುಮಂತನಿಗೆ ಸಹಭೋಗಂ – ಸಹಭೋಗವನ್ನು (ಬ್ರಹ್ಮಪದವಿ) ದಿದೇಶ – ಕೊಟ್ಟರು.

ಇಲ್ಲಿ ಹನುಮಂತನ ಸೇವಾ ಮಹತ್ವವನ್ನು ಹನುಮನಿಗೆ ಸದೃಶರಾರೂ ಇಲ್ಲ ಎಂದೂ ತಿಳಿಸಿದ್ದಾರೆ. ಇತರರಾರಿಗೂ ನೀಡದ ಪರಮಾನುಗ್ರಹ “ಸಹಭೋಗ” ಎಂದರೆ ಬ್ರಹ್ಮಪದವಿಯ ನೀಡಿ ಆಲಿಂಗನವನ್ನೂ ಕೊಟ್ಟ ಶ್ರೀರಾಮ.

ಬ್ರಹ್ಮಪದವಿಯಲ್ಲಿರುವ ಭೋಗ ಇತರ ಸಕಲ ಪ್ರಾಣಿಗಳ ಸುಖಾನುಭವಕ್ಕಿಂತ ಹೆಚ್ಚು. ಜಗದ್ವಿಷಯಕವಾದ ಭಗವದ್ಭೋಗಗಳೆಲ್ಲ ಭಗವದಧೀನವಾಗಿ ಬ್ರಹ್ಮಪದವಿಯಲ್ಲೂ ಇದೆ. ಅದಕ್ಕೆಂದೇ ಸಹಭೋಗವೆಂದು ಹೆಸರು. ಬ್ರಹ್ಮಪದವಿಗೆ ಸಮ. ಮುಕ್ತಿ ಪರ್ಯಂತವಷ್ಟೇ ಅಲ್ಲ ಮುಕ್ತಿಯಲ್ಲೂ ಇತರ ಮುಕ್ತರ ಅಧಿಪತ್ಯವೂ ಇದೆ.

 

ಪ್ರೇಷ್ಠೋ ನ ರಾಮಸ್ಯ ಬಭೂವ ತಸ್ಮಾತ್
ನ ರಾಮ-ರಾಜ್ಯೇಽಸುಲಭಂ ಚ ಕಿಂಚಿತ್ |
ತತ್-ಪಾದ-ಸೇವಾ-ರತಿರೇಷ ನೈಚ್ಛತ್
ತಥಾಽಪಿ ಭೋಗಾನ್ ನನು ಸಾ ವಿರಕ್ತಿಃ || ೨೪ ||


– ರಾಮರಾಜ್ಯದಲ್ಲಿ ಅಸುಲಭಂ ಚ – ಸುಲಭವಲ್ಲದ್ದು ಕಿಂಚಿತ್ – ಯಾವುದೂ ಇಲ್ಲ, ರಾಮಸ್ಯ – ರಾಮನಿಗೆ ತಸ್ಮಾತ್ – ಹನುಮಂತನಿಗಿಂತ ಪ್ರೇಷ್ಠ: – ಪ್ರಿಯರು ನ ಬಭೂವ – ಇರಲಿಲ್ಲ. ತಥಾSಪಿ – ಆದರೂ ಏಷ: ಈ ಹನುಮಂತನು ತತ್ಪಾದಸೇವಾ – ರಾಮದೇವರ ಪಾದಸೇವೆಯಲ್ಲಿ ರತಿ: ಸನ್ – ವಿಶೇಷ ಆಸಕ್ತಿಯುಳ್ಳವರಾಗಿ ಭೋಗಾನ್ – ವಿಷಯ ಭೋಗಗಳನ್ನು ನ ಐಚ್ಛತ್ – ಇಚ್ಛಿಸಲಿಲ್ಲ ಸಾ – ಅದು ವಿರಕ್ತಿ: ನನು – ವೈರಾಗ್ಯವಲ್ಲವೇ.

ಶ್ರೀ ರಾಮಚಂದ್ರನ ಪಾದಸೇವಾ ನಿರತರಾದ ಹನುಮಂತ ದೇವರು ವಿಷಯ ಭೋಗಗಳನ್ನು ಇಚ್ಛಿಸಲಿಲ್ಲ . ರಾಮರಾಜ್ಯದಲ್ಲಿ ಯಾವುದಕ್ಕೂ ಕೊರತೆಯಿರಲಿಲ್ಲ. ರಾಮಚಂದ್ರ ಮೆಚ್ಚಿ ಏನು ಬೇಕಾದರೂ ಕೇಳೆಂದಾಗ ನಿರ್ವ್ಯಾಜ ಭಕುತಿಯ ಬೇಡಿದನು ಎಂದು ದಾಸರಾಯರು ಹೇಳುತ್ತಾರೆ. – “ಸೇವಕತನದ ರುಚಿಯನೇನರಿದೆಯೋ ದೇವ”

 

ನಮೋ-ನಮೋ ನಾಥ ನಮೋ-ನಮಸ್ತೇ
ನಮೋನಮೋ ರಾಮ ನಮೋನಮಸ್ತೇ |
ಪುನಃ-ಪುನಸ್ತೇ ಚರಣಾರವಿಂದಂ
ನಮಾಮಿನಾಥೇತಿ ನಮನ್ ಸ ರೇಮೇ || ೨೫ ||

ನಾಥ – ಎಲೈ ಸ್ವಾಮಿಯೇ, ನಮೋ ನಮ: – ನಮಸ್ಕಾರಗಳು. ತೇ – ನಿನಗೆ ನಮೋ ನಮ: ನಮಸ್ಕಾರವು. ರಾಮ – ರಾಮನೇ ನಮೋ ನಮಃ – ನಮಸ್ಕಾರಗಳು. ನಾಥ – ಸ್ವಾಮಿಯೇ, ತೇ- ನಿನ್ನ ಚರಣಾರವಿಂದಂ – ಚರಣಕಮಲಗಳಿಗೆ ಪುನಃ:ಪುನಃ: ಮತ್ತೆ ಮತ್ತೆ ನಮಾಮಿ – ನಮಸ್ಕರಿಸುತ್ತೇನೆ.  ಇತಿ – ಎಂದು ನಮನ್ – ನಮಸ್ಕರಿಸುತ್ತಾ ರೇಮೇ – ಕ್ರೀಡಿಸಿದರು.

ಇದು ಹನುಮಂತ ದೇವರ ನೈಜ ಭಕ್ತಿಯನ್ನು ತೋರಿಸುತ್ತದೆ. “ಭೂಯಿಷ್ಟಾಂ ತೇ ನಮಃ ಉಕ್ತಿಂ ವಿಧೇಮ” – ನಿಮಗೆ ಮತ್ತೆ ಮತ್ತೆ ನಮಸ್ಕರಿಸುತ್ತೇನೆ, ಇಲ್ಲಿ ಹಲವು ಬಾರಿ ನಮ: ಶಬ್ದ ಪ್ರಯೋಗಿಸಿದ್ದಾರೆ. ಇದರಿಂದ ಉರಸಾ ಶಿರಸಾ ದೃಷ್ಟ್ಯಾ ಮನಸಾ ವಚಸಾ ತಥಾ ! ಪದ್ಭ್ಯಾಂ ಕರಾಭ್ಯಾಂ ಜಾನುಭ್ಯಾಂ ಪ್ರಣಾಮೋsಷ್ಟಾಂಗ ಈರಿತ: ” ಎಂಬಂತೆ ಸಾಷ್ಟಾಂಗ ನಮಸ್ಕಾರ ಮಾಡಿದರು ಎಂದು ಸೂಚಿತವಾಗಿದೆ. ನಮ: ಶಬ್ದವನ್ನು ಹಲವು ಬಾರಿ ಬಳಸಿರುವುದರಿಂದ ಹನುಮಂತ ದೇವರು ಸದಾ ಸೇವಾ ತತ್ಪರರಾಗಿರುತ್ತಿದ್ದರು ಮತ್ತು ಅನೇಕಾವರ್ತಿ ನಮಿಸುತ್ತಿದ್ದರು ಎಂದು ತಾತ್ಪರ್ಯ.

 

ಕಿಂ ವರ್ಣಯಾಮಃ ಪರಮಂ ಪ್ರಸಾದಂ
ಸೀತಾಪತೇಸ್ತತ್ರ ಹರಿ-ಪ್ರಬರ್ಹೇ |
ಮುಂಚನ್ ಮಹೀಂ ನಿತ್ಯ-ನಿಷೇವಣಾರ್ಥಂ
ಸ್ವಾತ್ಮಾನಮೇವೈಷ ದದೌ ಯದಸ್ಮೈ || ೨೬ ||

ಯತ್ – ಯಾವ ಕಾರಣದಿಂದ ಏಷ: ಶ್ರೀರಾಮನು ಮಹೀಂ ಭೂಮಿಯನ್ನು ಮುಂಚನ್ ಬಿಡುವವನಾಗಿ ನಿತ್ಯ ನಿಷೇವಣಾರ್ಥಂ ಸದಾ ಸೇವಿಸಲು ಅಸ್ಮೈ ಈ ಹನುಮಂತನಿಗೆ ಸ್ವಾತ್ಮಾನಮೇವ ತನ್ನನ್ನೇ ದದೌ ಕೊಟ್ಟನು ತತ್ ಆದ್ದರಿಂದ ಹರಿ ಪ್ರಬರ್ಹೇ ಕಪಿಗಳಲ್ಲೇ ಶ್ರೇಷ್ಠರಾದ ತತ್ರ ಹನುಮಂತರಲ್ಲಿ ಸೀತಾಪತೇ: ಸೀತಾಪತಿಯ ಪರಮಂ ಅತ್ಯುತ್ತಮ ಪ್ರಸಾದಂ ಅನುಗ್ರಹವನ್ನು ಕಿಂ ವರ್ಣಯಾಮ: ಏನೆಂದು ವರ್ಣಿಸುವುದು.

ಕಪಿಶ್ರೇಷ್ಠ ಹನುಮಂತನಲ್ಲಿ ತಾನು ಭೂಲೋಕವನ್ನು ಬಿಟ್ಟು ಹೋಗುವಾಗ ರಾಮಚಂದ್ರನು ತನ್ನನ್ನೇ ತಾನು ಅಂದರೆ ತನ್ನ ರೂಪವನ್ನೇ ಹನುಮಂತನ ನಿತ್ಯ ಸೇವೆಗಾಗಿ ಅನುಗ್ರಹಿಸಿದನು

 

ಸ್ವಾನಂದ-ಹೇತೌ ಭಜತಾಂ ಜನಾನಾಂ
ಮಗ್ನಃ ಸದಾ ರಾಮ-ಕಥಾ-ಸುಧಾಯಾಮ್ |
ಅಸಾವಿದಾನೀಂ ಚ ನಿಷೇವಮಣೋ
ರಾಮಂ ಪತಿಂ ಕಿಂಪುರುಷೇ ಕಿಲಾಽಸ್ತೇ || ೨೭ ||

ಭಜತಾಂ ಸೇವಿಸುವ ಜನಾನಾಂ ಜನರಿಗೆ ಸ್ವಾನಂದಹೇತೌ – ಮೋಕ್ಷಕ್ಕೆ ಕಾರಣವಾದ ರಾಮಕಥಾ ಸುಧಾಯಾಂ ರಾಮಕಥೆಯೆಂಬ ಅಮೃತಸುಧೆಯಲ್ಲಿ ಸದಾ ಯಾವಾಗಲೂ ಮಗ್ನ: ಆಸಕ್ತರಾದ ಅಸೌ – ಹನುಮಂತನು ಇದಾನೀಂ ಚ ಈಗಲೂ ಪತಿಂ ರಾಮಂ ಸ್ವಾಮಿಯಾದ ರಾಮಚಂದ್ರನನ್ನು ನಿಷೇವಮಾಣ: ಸೇವಿಸುತ್ತಾ ಕಿಂಪುರುಷೇ ಕಿಂ ಪುರುಷ ಖಂಡದಲ್ಲಿ ಅಸ್ತೇ ಕಿಲ – ಇದ್ದಾರಷ್ಟೇ .

ಹನುಮಂತ ದೇವರು ಇಂದಿಗೂ ಕಿಂಪುರುಷ ಖಂಡದಲ್ಲಿ ರಾಮಚಂದ್ರ ದೇವರ ಚರಿತ್ರೆಯೆಂಬ ಅಮೃತದಲ್ಲಿ ಮಗ್ನರಾಗಿ ಸೇವಿಸುತ್ತಿದ್ದಾರೆ

 

ತಸ್ಯೈವ ವಾಯೋರವತಾರಮೇನಂ
ಸಂತೋ ದ್ವಿತೀಯಂ ಪ್ರವದಂತಿ ಭೀಮಮ್ |
ಸ್ಪೃಷ್ಟೈವ ಯಂ ಪ್ರೀತಿಮತಾಽನಿಲೇನ
ನರೇಂದ್ರ-ಕಾಂತಾ ಸುಷುವೇಽತ್ರ ಕುಂತೀ || ೨೮ ||

ಪ್ರೀತಿಮತಾ – ಪ್ರೀತಿ ಮಾಡುವ ಅನಿಲೇನ ವಾಯುದೇವರಿಂದ ಸ್ಪ್ರಷ್ಟ್ವಾ ಏವ ಸ್ಪರ್ಶಮಾತ್ರದಿಂದ ನರೇಂದ್ರಕಾಂತಾ – ಪಾಂಡುರಾಜನ ಪತ್ನಿ ಕುಂತೀ ಕುಂತಿಯು ಅತ್ರ ಭೂಮಿಯಲ್ಲಿ ಯಂ ಯಾರನ್ನು ಸುಷುವೇ ಜನ್ಮವಿತ್ತಳೋ ಏನಂ ಅಂತಹ ಭೀಮಂ ಭೀಮನನ್ನು ತಸ್ಯ ವಾಯೋರೇವ ವಾಯುದೇವರದ್ದೇ ದ್ವಿತೀಯಂ ಅವತಾರಂ ಎರಡನೇ ಅವತಾರವೆಂದು ಸಂತ: ಸಜ್ಜನರು ಪ್ರವದಂತಿ ಹೇಳುತ್ತಾರೆ.

ಭೀಮಾವತಾರ ವಿವರಿಸುತ್ತಾ ಕುಂತಿದೇವಿಯನ್ನು ಸ್ಪರ್ಶ ಮಾತ್ರದಿಂದಲೇ ವಾಯುದೇವರು ಭೀಮನಾಗಿ ಕ್ಷಣಮಾತ್ರದಲ್ಲಿ ಅವತರಿಸಿ ಗರ್ಭವಾಸಾದಿ ದು:ಖ ರಹಿತರಾಗಿ ಅವತರಿಸಿದರು.

 

ಇಂದ್ರಾಯುಧಂ ಹೀಂದ್ರ-ಕರಾಭಿನುನ್ನಂ
ಚಿಚ್ಛೇದ ಪಕ್ಷಾನ್ ಕ್ಷಿತಿಧಾರಿಣಾಂ ಪ್ರ್ರಾಕ್ |
ಬಿಭೇದ ಭೂಭೃದ್-ವಪುರಂಗ-ಸಂಗಾತ್
ಚಿತ್ರಂ ಸ ಪನ್ನೋ ಜನನೀ-ಕರಾಗ್ರಾತ್ || ೨೯ ||

ಪ್ರಾಕ್ – ಮೊದಲು ಇಂದ್ರಾಯುಧಂ – ಇಂದ್ರನ ಆಯುಧವಾದ ವಜ್ರಾಯುಧವು ಇಂದ್ರಕರ ಇಂದ್ರನ ಕೈಯಿಂದ ಅಭಿನುನ್ನಂ ಹಿ – ಪ್ರಯೋಗಿಸಲು ಕ್ಷಿತಿ – ಭೂಮಿಯನ್ನು ಧಾರಿಣಾಂ – ಧರಿಸಿರುವ ಪರ್ವತಗಳ ಪಕ್ಷಾನ್ – ರೆಕ್ಕೆಗಳನ್ನು ಚಿಚ್ಛೇದ – ಕತ್ತರಿಸಿತು. ಜನನೀ ಕರ – ತಾಯಿಯ ಕೈಯಿಂದ ಅಗ್ರಾತ್ – ಅಗ್ರಭಾಗದಿಂದ ಪನ್ನ: – ಜಾರಿ ಬಿದ್ದ ಸ: – ಭೀಮಸೇನನು ಭೂಭೃತ್ – ಶತಶೃಂಗ ಪರ್ವತದ ವಪು: ಶರೀರವನ್ನು ಅಂಗಸಂಗಾತ್ – ದೇಹ ಸಂಬಂಧದಿಂದ ಬಿಭೇದ – ಸೀಳಿದರು. ಚಿತ್ರಂ– ಆಶ್ಚರ್ಯ.

ಹಿಂದೆ ಕೃತಯುಗದಲ್ಲಿ ಪರ್ವತಗಳಿಗೆ ರೆಕ್ಕೆಗಳಿದ್ದವು , ಅವು ಎಲ್ಲೆಂದರಲ್ಲಿ ಹಾರಿ ಎಲ್ಲೆಂದರಲ್ಲಿ ಇಳಿಯುತ್ತಿತ್ತು ಮತ್ತು ಇದರಿಂದ ಜನರಿಗೆ ಹಿಂಸೆಯಾಗುತ್ತಿತ್ತು. ಆಗ ಇಂದ್ರದೇವರು ತಮ್ಮ ವಜ್ರಾಯುಧ ಪ್ರಯೋಗ ಮಾಡಿ ಪರ್ವತಗಳ ರೆಕ್ಕೆಗಳನ್ನು ಕತ್ತರಿಸಿ ಅವು ಹಾರದಂತೆ ಮಾಡಿದರು. ಕುಂತೀ ದೇವಿಯು ಪುತ್ರ ಭೀಮನನ್ನು ಎತ್ತಿಕೊಂಡು ಶತಶೃಂಗ ಪರ್ವತದಲ್ಲಿ ಬರುವಾಗ, ಹುಲಿಯ ಕೂಗಿನಿಂದ ಹೆದರಿ ತನ್ನ ಕೈಗಳಿಂದ ಮಗುವನ್ನು ಎತ್ತಿ ಹಾಕಲು ಆ ಪರ್ವತವು ಚೂರು ಚೂರಾಯಿತು.

ವಾಯುದೇವರನ್ನು ಆಖಣಾಶ್ಮಸಮ ಭೇದಿಸಲಾಸಾಧ್ಯವವರು ಎನ್ನುತ್ತಾರೆ.

 

ಪುರೇ ಕುಮಾರಾನಲಸಾನ್ ವಿಹಾರಾತ್
ನೀರೀಕ್ಷ್ಯ ಸರ್ವಾನಪಿ ಮಂದ-ಲೀಲಃ |
ಕೈಶೋರ-ಲೀಲಾಂ ಹತ-ಸಿಂಹ-ಸಂಘಾಂ
ವೃತ್ತಾಂ ವನೇ ಪ್ರಾಕ್ ಸ್ಮರತಿ ಸ್ಮ ಸೂತ್ಕಃ || ೩೦ ||

ಸ: ಪುರೇ ಭೀಮಸೇನನು ಹಿಂದೆ ಹಸ್ತಿನಾಪುರದಲ್ಲಿ ಮಂದಲೀಲ: ಅಪಿ – ಅಲ್ಪ ಸ್ವಲ್ಪ ಆಟವಾಡುವವರು
ವಿಹಾರಾತ್ – ಆಟದಿಂದ ಆಲಸಾನ್ ಆಲಸ್ಯವುಳ್ಳವನ್ನಾಗಿ ಸರ್ವಾನ್ ಕುಮಾರಾನ್ ಎಲ್ಲಾ ಕುರು ಕುಮಾರರನ್ನೂ ನಿರೀಕ್ಷ್ಯ – ನಿರೀಕ್ಷಿಸಿ ವನೇ – ಅರಣ್ಯದಲ್ಲಿ ಪ್ರವೃತ್ತಾಂ – ನಡೆದ ಹತ ಸಿಂಹ ಸಂಘಾಂ – ಸಂಹರಿಸಲ್ಪಟ್ಟ ಸಿಂಹದ ಸಮೂಹವನ್ನು ಕೈಶೋರಲೀಲಾಂ – ಬಾಲಲೀಲೆಗಳನ್ನು ಸ್ಮರತಿ ಸ್ಮ – ಸ್ಮರಿಸಿಕೊಂಡರು

ಭೀಮಸೇನ ದೇವರು ಹಸ್ತಿನಾಪುರದಲ್ಲಿ ಅಲ್ಪ ಬಲವುಳ್ಳ ದುರ್ಯೋಧನಾದಿ ಕೌರವ ಸಹೋದರರೊಡನೆ ಆಡುವಾಗ ಅವರುಗಳು ಆಯಾಸವಾಗುತ್ತಿದ್ದರು. ಭೀಮಸೇನ ನಿರಾಯಾಸವಾಗಿ ಆಡುತ್ತಿದ್ದ. ಹಿಂದೆ ಶತಶೃಂಗ ಪರ್ವತದಲ್ಲಿದ್ದಾಗ ಸಿಂಹಗಳೊಂದಿಗೆ ಆಟವಾಡಿದ್ದನ್ನು ಸ್ಮರಿಸಿದರು. ಅವನು ಸಿಂಹಗಳನ್ನು ಸಿಂಹಗಳಿಂದಲೇ ಹೊಡೆಯುತ್ತಿದ್ದ ಆನೆಗಳನ್ನು ಆನೆಗಳಿಂದಲೇ ಹೊಡೆದು ಉರುಳಿಸುತ್ತಿದ್ದ. ಅಂತಹವನಿಗೆ ಈ ಕೌರವ ಬಾಲಕರು ಯಾವ ರೀತಿಯಿಂದಲೂ ಸಮರಲ್ಲ

 

ಭುಕ್ತಂ ಚ ಜೀರ್ಣಂ ಪರಿಪಂಥಿ-ದತ್ತಂ
ವಿಷಂ ವಿಷಣ್ಣೋ ವಿಷ-ಭೃದ್-ಗಣೋಽತಃ |
ಪ್ರಮಾಣ-ಕೋಟೇಃ ಸ ಹಿ ಹೇಳಯಾಽಗಾತ್
ನೇದಂ ಜಗಜ್ಜೀವನ-ದೇಽತ್ರ ಚಿತ್ರಮ್ || ೩೧ ||

ಅತ: ಭೀಮಸೇನ ದೇವರಿಂದ ಪರಿಪಂಥಿ – ಶತ್ರುಗಳಿಂದ ದತ್ತಂ– ಕೊಡಲ್ಪಟ್ಟ ವಿಷಂ – ವಿಷವು ಭುಕ್ತಂ– ತಿನ್ನಲ್ಪಟ್ಟಿತು – ಮತ್ತು. ಜೀರ್ಣಂ ಜೀರ್ಣವೂ ಆಯಿತು. ವಿಷಭೃತ್ ವಿಷವನ್ನು ಧರಿಸಿದ ಸರ್ಪಗಳ ಗಣ: – ಸಮೂಹವು ವಿಷಣ್ಣ: ಕಂಗೆಡಿಸಿದೆ. ಸ: ಭೀಮಸೇನ ದೇವರು ಪ್ರಮಾಣ ಕೋಟೇ: – ಪ್ರಮಾಣಕೋಟಿಯೆಂಬ ಮಡುವಿನಿಂದ, ಹೇಲಯಾ – ಆಟದಿಂದ ಆಗಾತ್ ಹಿ – ಮೇಲೆದ್ದು ಬಂದ. ಇದಂ – ಇದು ಜಗತ್ ಜೀವನ – ಜಗತ್ತಿಗೆ ಜೀವನ ದೇ – ಕೊಡುವ ಅತ್ರ – ವಾಯುದೇವರ ವಿಷಯದಲ್ಲಿ ಚಿತ್ರಂ – ಆಶ್ಚರ್ಯವಲ್ಲ

ದುರ್ಯೋಧನ ಭೀಮನನ್ನು ಕೊಲ್ಲಲು ಅವನಿಗೆ ಆಹಾರದಲ್ಲಿ ಕಾಲಕೂಟ ವಿಷ ಸೇರಿಸಿ ತಿನ್ನಿಸಿದರೂ ಅದನ್ನೂ ಅರಗಿಸಿಕೊಂಡರು. ನಂತರ ವಿಷಪೂರಿತ ಹಾವುಗಳಿಂದ ಮಲಗಿರತಕ್ಕ ಭೀಮನನ್ನು ಕಚ್ಚಲು ಬಿಟ್ಟಾಗ, ಆ ಹಾವುಗಳ ದಂತಗಳೇ ಮುರಿದಿದ್ದವು. ನಿದ್ದೆಯಲ್ಲಿದ್ದ ಭೀಮನನ್ನು ಹಗ್ಗದಿಂದ ಬಂಧಿಸಿ ಗಂಗಾ ನದಿಯಲ್ಲಿರತಕ್ಕ ಪ್ರಮಾಣ ಕೋಟಿ ಎಂಬ ಮಡುವಿಗೆ ಹಾಕಿದಾಗ, ಅಲ್ಲೂ ಕೂಡ ಮೇಲೆದ್ದು ಬಂದ ಭೀಮಸೇನ

 

ದಗ್ಧ್ವಾಪುರಂ ಯೋಗಬಲಾತ್ ಸ ನಿರ್ಯನ್
ಧರ್ಮಾನಿವಸ್ವಾನ್ ಸಹಜಾನ್ ದಧಾನಃ |
ಅದಾರಿ-ಭಾವೇನ ಜಗತ್ಸು ಪುಜ್ಯೋ
ಯೋಗೀವ ನಾರಾಯಣಮಾಸಸಾದ || ೩೨ ||

ಯೋಗಬಲಾತ್ – ಯೋಗ ಬಲದಿಂದ , ಉಪಾಯದಿಂದ, ಸ: -ಆ ಭೀಮಸೇನನು
ಪುರಂ – ಅರಗಿನ ಮನೆಯನ್ನು, ಶರೀರವನ್ನು ದಗ್ದ್ವಾ – ಸುಟ್ಟು , ಸ್ವಾನ್ – ಸ್ವಕೀಯರಾದ, ಸಹಜಾನ್ – ಅಣ್ಣ ತಮ್ಮಂದಿರನ್ನು ಧರ್ಮಾನಿವ – ಧರ್ಮಗಳು ಎಂಬಂತೆ ದಧಾನ: – ಧರಿಸಿ, ನಿರ್ಯನ್ – ಹೊರಡುವವರಾಗಿ, ಅದ – ರಾಕ್ಷಸನ, ಅರಿಭಾವೇನ – ರಾಕ್ಷಸರ, ಶತ್ರು ಪೀಡೆಯಿಂದ, ದೇಹವು ಸೀಳದಿರುವುದರಿಂದ ಜಗತ್ಸು – ಜಗತ್ತಿನಲ್ಲಿ, ಪೂಜ್ಯ: – ಪೂಜ್ಯರಾದ ಯೋಗೀವ – ಯೋಗಿಯಂತೆ ನಾರಾಯಣಂ – ನಾರಾಯಣನನ್ನು ಮತ್ತು ವೇದವ್ಯಾಸರನ್ನು ಆಸಸಾದ – ಹೊಂದಿದರು

ಯೋಗಿಯು ತನ್ನ ಯೋಗ ಬಲದಿಂದ ಶರೀರವನ್ನು ದಹಿಸಿ ಮತ್ತು ಗೂಢ ಪುರುಷನು ಉಪಾಯದಿಂದ ಶತ್ರು ಪಟ್ಟಣವನ್ನು ದಹಿಸುವಂತೆ, ಕಾಮಾದಿ ಶತ್ರುಗಳ ಬಾಧೆಗೆ ಒಳಗಾಗದೆ ಪರಮಾತ್ಮನ ಸೇರುವಂತೆ , ಭೀಮಸೇನ ಅರಗಿನ ಮನೆಯನ್ನು ಉಪಾಯದಿಂದ ಸುಟ್ಟು ಮತ್ತು ಪುರೋಚನಾದಿಗಳನ್ನು ಸುಟ್ಟು , ಅಲ್ಲಿಂದ ಹೊರಟು ಧರ್ಮರಾಜಾದಿಗಳನ್ನು ಹೊತ್ತು ಹಿಡಿಂಬವನದತ್ತ ನಡೆದು ಅಲ್ಲಿ ಹಿಡಿಂಬನ ಕೊಂದು ಅವನ ಸಹೋದರಿ ಭಾರತೀದೇವಿಯ ಆವೇಶವುಳ್ಳ ಹಿಡಿಂಬೆಯನ್ನು ವೇದವ್ಯಾಸ ದೇವರ ಆಣತಿಯಂತೆ ವರಿಸಿದನು

 

ಸಮರ್ಪ್ಯ ಕೃತ್ಯಾನಿ ಕೃತೀ ಕೃತಾನಿ
ವ್ಯಾಸಾಯ ಭೂಮ್ನೇ ಸುಕೃತಾನಿ ಯಾವತ್ |
ಕರಿಷ್ಯಮಾಣಾನಿ ಚ ತಸ್ಯ ಪೂಜಾಂ
ಸಂಕಲ್ಪಯಾಮಾಸ ಸ ಶುದ್ಧಬುದ್ಧಿಃ || ೩೩ ||

ಶುದ್ಧ ಬುದ್ಧಿ: ಶುದ್ಧವಾದ ಬುದ್ಧಿಯುಳ್ಳ ಕೃತೀ – ಜ್ಞಾನಿಗಳಾದ ಸ: ಭೀಮಸೇನ ದೇವರು ತಾವತ್ ಕೃತಾನಿ – ಅಲ್ಲಿಯವರೆಗೂ ಮಾಡಲ್ಪಟ್ಟ ಕೃತಾನಿ – ಕೆಲಸಗಳನ್ನು ಭೂಮ್ನೇ – ಗುಣಪರಿಪೂರ್ಣನಾದ ವ್ಯಾಸಾಯ – ವೇದವ್ಯಾಸ ದೇವರಿಗೆ ಸಮರ್ಪ್ಯ – ಸಮರ್ಪಿಸಿ ಕರಿಷ್ಯಮಾಣಾನಿ – ಮುಂದೆ ಮಾಡಲಿರುವ ಸ್ವಕೃತಾನಿ – ಸಕಲ ಪುಣ್ಯಕಾರ್ಯಗಳನ್ನು ತಸ್ಯ – ಆ ವೇದವ್ಯಾಸರ ಪೂಜಾಂ – ಪೂಜೆಯೆಂದು ಸಂಕಲ್ಪಯಾಮಾಸ – ಸಂಕಲ್ಪಿಸಿದರು.

ಭೀಮಸೇನ ದೇವರು ತಮ್ಮ ಜನನದಿಂದ ಆರಂಭಿಸಿ ವೇದವ್ಯಾಸ ದೇವರನ್ನು ದರ್ಶನ ಮಾಡುವವರೆಗೂ ಮಾಡಿದ ಸಕಲ ಕರ್ಮಗಳನ್ನೂ ವೇದವ್ಯಾಸರಿಗೆ ಸಮರ್ಪಿಸಿದರು. ನಾವು ಏನೇ ಮಾಡಲಿ ಅದನ್ನು ದೇವರಿಗೆ ಸಮರ್ಪಣೆ ಮಾಡಬೇಕು ಎಂದು ಹೇಳಿದ್ದಾರೆ. ಮತ್ತು ಮುಂದೆ ತಾವು ಮಾಡುವ ದುಷ್ಟರ ಸಂಹಾರ , ದುರ್ಯೋಧನಾದಿಗಳ ಸಂಹಾರ ಎಲ್ಲವನ್ನೂ ಸಂಕಲ್ಪ ಮಾಡಿದರು. ಪ್ರತಿಯೊಬ್ಬರೂ ತಮ್ಮ ಅಂದಿನ ಕರ್ಮಗಳೊಂದಿಗೆ ಹಿಂದೆ ಮಾಡಿದ ಮುಂದೆ ಮಾಡತಕ್ಕ ಸಕಲ ಕರ್ಮಗಳನ್ನೂ ದೇವರಿಗೆ ಸಮರ್ಪಿಸಬೇಕು ಎಂಬ ತತ್ವವನ್ನೂ ನಿರೂಪಿಸಿದ್ದಾರೆ

 

ವಿಷ್ಣೋಃ-ಪದ-ಶ್ರಿದ್ ಬಕ-ಸನ್ನಿರಾಸೀ
ಕ್ಷಿಪ್ತಾನ್ಯ-ಪಕ್ಷಿ-ಪ್ರಕರಃ ಸು-ಪಕ್ಷಃ |
ಸ-ಸೋದರೋಽಥಾಽದಿತ ರಾಜ-ಹಂಸಃ
ಸ ರಾಜ-ಹಂಸೀಮಿವ ರಾಜ-ಕನ್ಯಾಮ್ || ೩೪ ||

ಅಥ – ನಂತರದಲ್ಲಿ ವಿಷ್ಣೋ: – ವಿಷ್ಣುವಿನ ಪದ – ಪಾದುಕಮಲಗಳನ್ನು ವಿಷ್ಣೋ:ಪದ – ಆಕಾಶವನ್ನು ಶ್ರಿತ್ – ಆಶ್ರಯಿಸಿರುವ ಬಕ – ಬಕಾಸುರನನ್ನು, ಬಕಪಕ್ಷಿಯನ್ನು, ಸನ್ನಿರಾಸೀ – ನಾಶ ಮಾಡಿದ ಕ್ಷಿಪ್ತ ಅನ್ಯಪಕ್ಷಿ – ನಾಶವಾದ ಬೇರೆ ಪಕ್ಷಿಗಳ ಪ್ರಕರ: – ಸಮೂಹವುಳ್ಳ ಸುಪಕ್ಷ: – ಉತ್ತಮ ಸಿದ್ಧಾಂತವುಳ್ಳ , ರೆಕ್ಕೆಗಳುಳ್ಳ, ಸಸೋದರ: ಸಹೋದರರಿಂದ ಕೂಡಿ ಸ: – ಆ ಭೀಮಸೇನನು ರಾಜಹಂಸ: – ಶ್ರೇಷ್ಠವಾದ ಹಂಸವು ರಾಜಹಂಸೀಮಿವ – ಶ್ರೇಷ್ಟ ಹೆಣ್ಣು ಹಂಸವನ್ನು ಎಂಬಂತೆ, ರಾಜಕನ್ಯಾಂ – ದ್ರುಪದ ರಾಜನ ಪುತ್ರಿ ದ್ರೌಪದಿಯನ್ನು ಆದಿತ – ಸ್ವೀಕರಿಸಿದರು.

ಭೀಮಸೇನ ದೇವರು ದ್ರೌಪದಿಯನ್ನು ಸ್ವೀಕಾರ ಮಾಡಿದ್ದನ್ನು ರಾಜಹಂಸ ಪಕ್ಷಿಗೆ ಹೋಲಿಸಿದ್ದಾರೆ. ಸಹೋದರರೊಂದಿಗೆ ಭೀಮಸೇನ ಎಂಬ ರಾಜಹಂಸ ಪಕ್ಷಿಯು ದ್ರೌಪದಿ ಎಂಬ ಹೆಣ್ಣು ರಾಜಹಂಸ ಪಕ್ಷಿಯನ್ನು ಸ್ವೀಕರಿಸಿದನ್ನು ವಿವರಿಸಿದನು.

ಬಕ – ಭೀಮಸೇನನು ಬಕಾಸುರನನ್ನು ಸಂಹರಿಸಿದನು. ಅದೇ ರೀತಿ ರಾಜಹಂಸವೂ ಬಕ ಪಕ್ಷಿಯನ್ನು ಜಯಿಸಿ ರಾಜಹಂಸಿಯನ್ನು ಪಡೆಯುವಂತೆ ಭೀಮನು ದ್ರೌಪದಿಯನ್ನು ಪಡೆದ.
ಭೀಮಸೇನ ದೇವರು ಅನ್ಯಪಕ್ಷಿಗಳನ್ನು ಅಂದರೆ ಜರಾಸಂಧಾದಿ ದೈತ್ಯರನ್ನು ನಿರಾಕರಣೆ ಮಾಡಿ ಸೋಲಿಸಿದರು.

 

ಇಂದೀವರ-ಶ್ರೀ-ಜಯಿ-ಸುಂದರಾಭಂ
ಸ್ಮರಾನನೇಂದುಂ ದಯಿತಂ ಮುಕುಂದಮ್ |
ಸ್ವ-ಮಾತುಲೇಯಂ ಕಮಲಾಯತಾಕ್ಷಂ
ಸಮಭ್ಯನಂದತ್ ಸು-ಚಿರಾಯ ಭೀಮಃ || ೩೫ ||

ಭೀಮ: – ಭೀಮಸೇನ ದೇವರು ಇಂದೀವರ – ಕನ್ನೈದಿಲೆ ಹೂವಿನ ಶ್ರೀ – ಕಾಂತಿಯನ್ನು ಜಯಿ – ಗೆಲ್ಲುತ್ತಿರುವ ಸುಂದರ ಆಭಂ – ಸುಂದರ ಕಾಂತಿಯುಳ್ಳ ಸ್ಮೇತ – ಮುಗುಳುನಗೆ ಕೂಡಿದ ಆನನೇಂದು – ಚಂದ್ರನಂತೆ ಮುಖವುಳ್ಳ ಕಮಲ ಆಯತ – ಕಮಲದಂತೆ ವಿಸ್ತಾರವಾದ ಅಕ್ಷಂ – ಕಣ್ಣುಗಳುಳ್ಳ ದಯಿತಂ – ಪ್ರೀತಿಪಾತ್ರನಾದ ಸ್ವ ಮಾತುಲೇಯಂ – ತನ್ನ ಸೋದರಮಾವನ ಮಗನಾದ ಮುಕುಂದಂ – ಮುಕ್ತಿಪ್ರದನಾದ ಕೃಷ್ಣ ಪರಮಾತ್ಮನನ್ನು ಸುಚಿರಾಯ – ಬಹುಕಾಲ ಸಮಭ್ಯನಂದತ್ – ನೋಡಿ ಸಂತೋಷಪಟ್ಟರು.

ದ್ರೌಪದಿಯ ಸ್ವಯಂವರ ಮಂಟಪದಲ್ಲಿ ತನ್ನ ಸೋದರಮಾವನ ಪುತ್ರ ಕನ್ನೈದಿಲೆಯ ಕಾಂತಿಯನ್ನೂ ಮೀರಿದ ಕಾಂತಿಯುಳ್ಳ, ಅಪ್ರಾಕೃತ ಶ್ಯಾಮಲ ವರ್ಣ ವಿಶಿಷ್ಠನಾದ ಕೃಷ್ಣ ದರ್ಶನದಿಂದ ಸಂತಸರಾದ ಭೀಮಸೇನ ದೇವರು ಭೂಭಾರಹರಣಾರ್ಥ ಅನೇಕ ರಾಜರ ಸಮೂಹವನ್ನು ಪರಾಭವಗೊಳಿಸಿದರು.

 

ಮಹಾಗದಂ ಚಂಡರಣಂ ಪೃಥಿವ್ಯಾಂ
ಬಾರ್ಹದ್ರಥಂ ಮಂಕ್ಷು ನಿರಸ್ಯ ವೀರಃ |
ರಾಜಾನಮತ್ಯುಜ್ಜ್ವಲ-ರಾಜ-ಸೂಯಂ
ಚಕಾರ ಗೋವಿಂದಸುರೇಂದ್ರಜಾಭ್ಯಾಂ|೩೬|

ಗೋವಿಂದ ಸುರೇಂದ್ರಜಾಭ್ಯಾಂ – ಶ್ರೀಕೃಷ್ಣ ಮತ್ತು ಇಂದ್ರಪುತ್ರ ಅರ್ಜುನನಿಂದ ಕೂಡಿ ಮಹಾಗದಂ – ದೊಡ್ಡ ಗದೆಯುಳ್ಳ ವೀರ: – ವೀರನಾದ ಭೀಮಸೇನ ದೇವರು ಪೃಥಿವ್ಯಾಂ – ಭೂಲೋಕದಲ್ಲಿ ಚಂಡರಣಂ – ಘೋರ ಯುದ್ಧದಲ್ಲಿ ಬಾರ್ಹದ್ರತಂ – ಬೃಹದ್ರಥನ ಮಗನಾದ ಬಾರ್ಹದ್ರತ – ಜರಾಸಂಧನನ್ನು ಮಂಕ್ಷು – ಶೀಘ್ರದಲ್ಲಿ ನಿರಸ್ಯ – ಕೊಂದು ರಾಜಾನಂ – ಧರ್ಮರಾಜನನ್ನು ಅತ್ಯುಜ್ವಲಂ – ಅತ್ಯಂತ ಪ್ರಕಾಶಮಾನವಾದ ರಾಜಸೂಯಂ – ರಾಜಸೂಯ ಯಾಗವನ್ನು ಚಕಾರ – ಮಾಡಿದರು

ಧರ್ಮರಾಜನ ರಾಜಸೂಯ ಯಾಗಕ್ಕೆ ಕೃಷ್ಣಾರ್ಜುನ ಸಹಿತನಾದ ಭೀಮಸೇನ ದೇವರು ಬೃಹತ್ತಾದ ರಥವನ್ನು ಹೊಂದಿದ್ದ ಬೃಹದ್ರತನ ಮಗನಾದ ಜರಾಸಂಧನ ಕೊಂದರು.

 

ದುಃಶಾಸನೇನಾಽಕುಲಿತಾನ್ ಪ್ರಿಯಾಯಾಃ
ಸೂಕ್ಷ್ಮಾನರಾಲಾನಸಿತಾಂಶ್ಚ ಕೇಶಾನ್ |
ಜಿಘಾಂಸಯಾ ವೈರಿಜನಸ್ಯ ತೀಕ್ಷ್ಣಃ
ಸ ಕೃಷ್ಣಸರ್ಪಾನಿವ ಸಂಚಿಕಾಯ || ೩೭ ||ದು:ಶಾಸನೇನ – ದು:ಶಾಸನನಿಂದ ಅಕುಲಿತಾನ್ – ಕೆಣಕಲ್ಪಟ್ಟ ಪ್ರಿಯಾಯಾ: ದ್ರೌಪದಿಯ ಸೂಕ್ಷ್ಮಾನ್ ಸೂಕ್ಷ್ಮವಾದ ಅರಾಲಾನ್ – ಸೊಟ್ಟಗಿರುವ ಮತ್ತು ಅಸಿತಾನ್ ಕಪ್ಪಾದ ಕೇಶಾನ್ ಕೇಶಗಳನ್ನು ಸ: ಭೀಮಸೇನ ದೇವರು ವೈರಿಜನಸ್ಯ ಶತ್ರುಗಳ ಜಿಘಾಂಸಯಾ – ಕೊಲ್ಲಲು ಇಚ್ಛೆಯುಳ್ಳ ತೀಕ್ಷ್ಣ: ಗರುಡ ಮಂತ್ರವ ತಿಳಿದ ಕ್ರೂರಿಯು ಕೃಷ್ಣಸರ್ಪಾನಿವ – ಕೃಷ್ಣ ಸರ್ಪದಂತೆ ಸಂಚಿಕಾಯ – ಒಟ್ಟುಗೂಡಿಸಿದರು.ದುಶ್ಯಾಸನನು ಸಭೆಯಲ್ಲಿ ದ್ರೌಪದಾದೇವಿಯ ಮೃದುವೂ,ಸೊಟ್ಟವೂ, ಕಪ್ಪು ಬಣ್ಣದ್ದಾದ ಕೂದಲನ್ನು ಎಳೆದಾಗ ಕೋಪಗೊಂಡ ಭೀಮಸೇನ ದೇವರು ಶತ್ರುಗಳನ್ನು ಕೊಲ್ಲುವೆನೆಂದು ಪ್ರತಿಜ್ಞೆ ಮಾಡಿ ಆ ಕೂದಲನ್ನು ಯುದ್ಧಭೂಮಿಯಲ್ಲಿ ತಾವೇ ಕಟ್ಟಿದರು. ಅದು ಹೇಗಿತ್ತೆಂದರೆ ಗರುಡ ಮಂತ್ರವನ್ನು ತಿಳಿದ ದುಷ್ಟನು ತನ್ನ ಮಂತ್ರೌಷಧಿಗಳ ಬಲದಿಂದ ಪಂಜರದಲ್ಲಿರುವ ಸರ್ಪಗಳನ್ನು ಓಡಿಸಿದಾಗ ಗರುಡ ಮಂತ್ರವರಿತ ಮತ್ತೋರ್ವ ಶತ್ರುಗಳನ್ನು ಕೊಲ್ಲಲು ತನ್ನ ಪಂಜರದಲ್ಲಿ ಇಟ್ಟುಕೊಂಡಂತೆ ಆಯಿತು.

ಭೀಮಸೇನ ದೇವರು ದುಶ್ಯಾಸನನಿಂದ ಬಿಚ್ಚಲ್ಪಟ್ಟ ಕೇಶಗಳನ್ನು ಶತ್ರುಗಳಾದ ದುರ್ಯೋಧನಾದಿಗಳ ಕೊಲ್ಲುವೆನೆಂಬ ಪ್ರತಿಜ್ಞೆಯಿಂದ ಕಟ್ಟಿದರು. ಇದರಿಂದ ಕೃಷ್ಣ ಸರ್ಪಗಳು ಹೇಗೆ ಶತ್ರು ಸಂಹಾರಕ್ಕೆ ಕಾರಣವಾಗುವುದೋ ಅದೇ ರೀತಿ ದುಶ್ಯಾಸನನಿಂದ ಎಳೆಯಲ್ಪಟ್ಟ ದ್ರೌಪದಿಯ ಕೇಶಗಳನ್ನು ದುರ್ಯೋಧನಾದಿಗಳ ಸಂಹಾರಕ್ಕೆ ಕಾರಣವಾಯಿತು.

ಕೃಷ್ಣ ಸರ್ಪಗಳು ಸೂಕ್ಷ್ಮ, ವಕ್ರ ಮತ್ತು ಕಪ್ಪಗಿರುತ್ತವೆ. ಅದೇ ರೀತಿ ಕೃಷ್ಣೆಯ (ದ್ರೌಪದಿಯ) ಕೇಶಗಳೂ ಸೂಕ್ಷ್ಮ, ವಕ್ರ ಮತ್ತು ಕಪ್ಪಗಿರುತ್ತವೆ ಎಂಬ ಉಪಮಾನ ಕೊಟ್ಟಿದ್ದಾರೆ

ಜಾಜ್ವಲ್ಯಮಾನಸ್ಯ ವನೇ-ವನೇಽಲಂ
ದಿಧಕ್ಷತಃ ಪಾರ್ಥಿವ-ಸಾರ್ಥಮುಗ್ರಮ್ |
ಸತ್ತ್ವಾನಿ ಪುಂಸಾಂ ಭಯದಾನಿ ನಾಶಂ
ವೃಕೋದರಾಗ್ನೇರ್ಗುರು-ತೇಜಸಾಽಽಪುಃ || ೩೮ ||ವನೇವನೇ – ಕಾಡುಗಳಲ್ಲಿ ಉಗ್ರಂ – ಉಗ್ರವಾದ, ಪಾರ್ಥಿವ – ರಾಜರುಗಳ ( ಪೃಥ್ವಿಗೆ ಸಂಬಂಧಿತ ಒಡೆಯ), ವೃಕ್ಷಗಳ (ಪೃಥ್ವಿಯಲ್ಲಿ ಬೆಳೆಯುವ ವೃಕ್ಷಗಳು) , ಸಾರ್ಥಂ – ಸಮೂಹವನ್ನು ದಿಧಕ್ಷತ: – ನಾಶಮಾಡಲಿಚ್ಚಿಸುವ ಅಲಂ – ಹೆಚ್ಚಾಗಿ ಜಾಜ್ವಲ್ಯಮಾನಸ್ಯ – ಜಾಜ್ವಲ್ಯಮಾನವಾದ ವೃಕೋದರಾಗ್ನೇ: – ವೃಕ ನಾಮಕ ಅಗ್ನಿಯನ್ನು ಉದರದಲ್ಲಿ ಹೊಂದಿದ ವೃಕೋದರ (ಭೀಮಸೇನ) ಎಂಬ ಅಗ್ನಿಯು ಗುರು – ಹೆಚ್ಚಾದ ತೇಜಸಾ – ತೇಜಸ್ಸಿನಿಂದ ಪುಂಸಾಂ – ಜನರಿಗೆ, ಭಯ – ಭಯವನ್ನು ದಾನಿ – ಕೊಡುವ ಸತ್ವಾನಿ – ಪ್ರಾಣಿಗಳು ನಾಶಂ – ನಾಶವನ್ನು ಆಪು: – ಹೊಂದಿದವು.ಕಾಡಿನಲ್ಲಿ ಪ್ರಜ್ವಲಿಸುತ್ತಿರುವ ಕಾಡ್ಗಿಚ್ಚು ಕ್ರೂರ ಮೃಗಗಳು ಸುಡುವಂತೆ, ಭೀಮಸೇನನು ವನವಾಸ ಕಾಲದಲ್ಲಿ ಕಿರ್ಮೀರಾದಿ ದುಷ್ಟ ರಾಜರನ್ನು ಸಂಹರಿಸಿದ. ಅಗ್ನಿಯು ಪ್ರತಿ ಅರಣ್ಯದಲ್ಲೂ ಪ್ರಕಾಶಮಾನವಾದುದು. ಭೀಮಸೇನ ದೇವರೂ ಸಹ ತಮ್ಮ ವನವಾಸ ಕಾಲದಲ್ಲಿ ಪ್ರಜ್ವಲಿಸಿದರು

ಭೋಗಾಧಿಕಾ ಭೋಗವತೋಽರುಣಾಕ್ಷಾನ್
ಇತಸ್ತತಃ ಸಂಚಲತೋ ಧರೇಂದ್ರೇ |
ಬಹೂನ್ ದ್ವಿ ಜಿಹ್ವಾನ್ ಮಣಿಮತ್ ಪುರೋಗಾನ್ 

ಅಸೌ ಕಟೂನ್ ಕ್ರೋಧವಶಾನ್ ಜಘಾನ || ೩೯ ||

ಅಸೌ – ಈ ಭೀಮಸೇನ ದೇವರು, ಭೋಗ – ವಿಷಯ ಭೋಗಗಳಿಂದ ಅಭೋಗವತ: – ಪೂರ್ಣವಾದ ಭೋಗದಿಂದ (ತುಂಬಿದ) , ಸರ್ಪಶರೀರದ ಹೆಡೆಗಳುಳ್ಳ
ಅಧಿಕ – ಹೆಚ್ಚಾದ ಭೋಗವತ: – ಭೋಗ ಸಾಮರ್ಥ್ಯವುಳ್ಳ ಅರುಣಾಕ್ಷಾನ್ – ಕೆಂಪಾದ ಕಣ್ಣುಗಳುಳ್ಳ, ಧರೇಂದ್ರೇ – ಪರ್ವತ ಪ್ರದೇಶದಲ್ಲಿ ಇತಸ್ತತ: – ಇಲ್ಲಿಂದ ಅಲ್ಲಿಗೆ ಸಂಚರತ: – ಸಂಚರಿಸುತ್ತಿರುವ , ಬಹೂನ್ – ಅನೇಕ ಮಂದಿ ದ್ವಿಜಿಹ್ವಾನ್ – ಎರಡು ಬಗೆಯ ಮಾತನಾಡುವ, ಎರಡು ನಾಲಿಗೆಯುಳ್ಳ, ಕಟೂನ್ – ಕ್ರೂರವಾದ ಕ್ರೋಧವಶಾನ್ – ಕ್ರೋಧವಶ ಎಂಬ ದೈತ್ಯರಾದ ಮಣಿಮತ್ ಪುರೋಗಾನ್ – ಮಣಿಮಂತಾದಿ ರಾಕ್ಷಸರನ್ನು , ರತ್ನಗಳಿಂದ ಕೂಡಿದ ಸರ್ಪಗಳನ್ನು ಜಘಾನ – ಕೊಂದರು.

ಮಣಿಮಂತಾದಿ ರಾಕ್ಷಸರನ್ನು ಕ್ರೂರ ಸರ್ಪಗಳಂತೆ ಹೋಲಿಸಲಾಗಿದೆ.

ಕ್ರೋಧವಶ ಎಂಬ ಗುಂಪು – ತೋರಿಕೆಗೆ ಭಕ್ತರು ಆದರೆ ಹರಿಯನ್ನು ದ್ವೇಷಿಸುವವರು.

ಸೌಗಂಧಿಕಾ ಪುಷ್ಪಹರಣ ಸಮಯದಲ್ಲಿ ಸರ್ಪಗಳಂತೆ ಲೋಕಕಂಟಕರಾಗಿದ್ದ ಮಣಿಮಂತ ಮೊದಲಾದ ಕ್ರೋಧವಶ ದೈತ್ಯರನ್ನು ಕಾಡ್ಗಿಚ್ಚಿನಂತೆ ಭೀಮಸೇನ ದೇವರು ಸಂಹರಿಸಿದರು.

ಅಗ್ನಿಯು ಕ್ರೋಧವಶರಾದ (ಕೋಪಕ್ಕೆ ವಶ) ದ್ವಿಜಿಹ್ವ – ಎರಡು ನಾಲಿಗೆಗಳಿರುವ ಸರ್ಪಗಳನ್ನು ಸಂಹರಿಸುವಂತೆ, ಭೀಮನು ದ್ವಿಜಿಹ್ವ – ಮತ್ಸರಿಗಳಾದ ಕ್ರೋಧವಶ ನಾಮಕ ದೈತ್ಯರನ್ನು ಸಂಹರಿಸಿದರು. ಸರ್ಪಗಳು ಯಾವುದೋ ಒಂದು ಪರ್ವತದಲ್ಲಿ ಸುತ್ತಾಡುವಂತೆ, ಕ್ರೋಧವಶರು ಗಂಧಮಾದನ ಪರ್ವತದಲ್ಲಿ ಸುತ್ತಾಡುತ್ತಿದ್ದರು.

ಸರ್ಪಗಳು ಭೋಗಾಧಿಕಗಳು – ದೀರ್ಘ ದೇಹವುಳ್ಳವು. ಕ್ರೋಧವಶರೂ ಭೋಗಾಧಿಕರು – ಭೋಗಿಗಳಲ್ಲಿ ಹೆಚ್ಚು ಆಸಕ್ತರು.

ಸರ್ಪಗಳು ಮಣಿಯನ್ನು ಹೆಡೆಯಲ್ಲಿ ಹೊಂದಿದ್ದರೆ, ಕ್ರೋಧವಶರು ಮಣಿಮಾನ್ ಎಂಬ ದೈತ್ಯನ ಮುಖ್ಯಸ್ಥನಾಗಿ ಹೊಂದಿದವರು.

ಅಥೈಷ ವೇಷಾಂತರ ಭಸ್ಮ ಲೀನಃ
ಕ್ರಮೇಣ ವಾಯು ಪ್ರಭವಃ ಸು ತೇಜಾಃ |
ರುದ್ಧಾಖಿಲಾಶಂ ಮುಖರಂ ಪ್ರಚಂಡಂ
ಭಸ್ಮೀ-ಚಕಾರಾಖಿಲ ಕೀಚಕೌಘಂ |೪೦|ಅಥ ಏಷ: ವೇಷಾಂತರ ಭಸ್ಮ ಲೀನ: ಕ್ರಮೇಣ ವಾಯು ಪ್ರಭವ: ಸುತೇಜಾ: ರುದ್ಧ ಅಖಿಲ ಆಶಂ ಮುಖರಂ ಪ್ರಚಂಡಂ ಭಸ್ಮೀ ಚಕಾರ ಅಖಿಲ ಕೀಚಕ ಓಘಂ||ಅಥ – ಅನಂತರ (ವನವಾಸದ ನಂತರ ಅಜ್ಞಾತವಾಸ ಕಾಲದಲ್ಲಿ ಮತ್ಸ್ಯ ದೇಶದ ವಿರಾಟರಾಜನ ಆಸ್ಥಾನದಲ್ಲಿ) ವೇಷಾಂತರ – ಮಾರು ವೇಷದಲ್ಲಿ ( ಸೂದ ವೇಷದಲ್ಲಿ ಅಡುಗೆಯವನಾಗಿ ವಲಲ ನಾಮಧೇಯನಾಗಿದ್ದ ಭೀಮಸೇನ) ಭಸ್ಮ – ಭಸ್ಮದಲ್ಲಿ (ಬೂದಿಯಲ್ಲಿ) ಲೀನ: – ಅಡಗಿದ್ದು ಸುತೇಜಾ: ಒಳ್ಳೆಯ ತೇಜಸ್ಸಿನಿಂದ ಕೂಡಿ ಕ್ರಮೇಣ – ಕ್ರಮವಾಗಿ ವಾಯು: ವಾಯುದೇವರಿಂದ, ಗಾಳಿಯಿಂದ ಪ್ರಭವ: ಜನಿಸಿದ, ಪ್ರಭವಸಿದ, ಏಷ: ಭೀಮಸೇನನು, ಅಗ್ನಿಯು ರುದ್ಧ- ತಡೆಯಲ್ಪಟ್ಟ, ಅಖಿಲ – ಎಲ್ಲರ, ಸಮಸ್ತ ಆಶಂ – ಆಸೆಗಳುಳ್ಳ, ದಿಕ್ಕುಗಳುಳ್ಳ ಮುಖರಂ – ಶಬ್ದ ಮಾಡುತ್ತಿರುವ ಪ್ರಚಂಡಂ – ಭಯಂಕರರಾದ, ಭಯಂಕರವಾದ ಅಖಿಲ – ಸಮಸ್ತ ಕೀಚಕ – ಕೀಚಕರ, ಬಿದಿರಿನ ಓಘಂ – ಗುಂಪನ್ನು , ಮಳೆಯನ್ನು ಭಸ್ಮೀಚಕಾರ – ಭಸ್ಮ ಮಾಡಿದರು, ಮಾಡಿತು.

ಇಲ್ಲಿ ಭೀಮಸೇನ ದೇವರನ್ನು ಅಗ್ನಿಗೆ ಹೋಲಿಸಿದ್ದಾರೆ. ಅಗ್ನಿ ಹೇಗೆ ಬಿದಿರು ಸಮೂಹವನ್ನು ಸುಲಭವಾಗಿ ಭಸ್ಮ ಮಾಡುವುದೋ ಅದೇ ರೀತಿ ಭೀಮಸೇನ ದೇವರು ಕೀಚಕ ಮತ್ತು ಉಪ ಕೀಚಕರನ್ನು (ಒಟ್ಟು 106 ಜನರನ್ನು) ಸಂಹರಿಸಿದರು.

ಸ ಕೃಷ್ಣ-ವರ್ತ್ಮಾ ವಿಜಯೇನ ಯುಕ್ತೋ
ಮುಹುರ್ಮಹಾ-ಹೇತಿ-ಧರೋಽಪ್ರಧೃಷ್ಯಃ |
ಭೀಷ್ಮ-ದ್ವಿಜಾದ್ಯೈರತಿ-ಭೀಷಣಾಭಂ
ವಿಪಕ್ಷ-ಕಕ್ಷಂ ಕ್ಷಪಯನ್ ವಿರೇಜೇ || ೪೧||ಸ: ಕೃಷ್ಣ ವರ್ತ್ಮಾ ವಿಜಯೇನ ಯುಕ್ತ: ಮುಹು: ಮಹಾ ಹೇತಿ ಧರ: ಅಪ್ರಧೃಷ್ಯ: ಭೀಷ್ಮ ದ್ವಿಜ ಆದ್ಯೈ: ಅತಿ ಭೀಷಣ ಆಭಂ ವಿಪಕ್ಷ ಕಕ್ಷಂ ಕ್ಷಪಯನ್ ವಿರೇಜೇ |*ವಿಜಯೇನ* – ಅರ್ಜುನನಿಂದ, ವಿಜಯದಿಂದ, ಯುಕ್ತ: – ಕೂಡಿದ ಮುಹು: -ಮತ್ತೆ ಮತ್ತೆ ಮಹಾ – ದೊಡ್ಡದಾದ ಹೇತಿ – ಆಯುಧಗಳನ್ನು, ಜ್ವಾಲೆಗಳನ್ನು ಧರ:– ಧರಿಸಿರುವ ಅಪ್ರಧೃಶ್ಯ: – ಶತ್ರುಗಳಿಂದ ಅಭೇಧ್ಯರಾದ, ಅಭೇಧ್ಯವಾದ ಕೃಷ್ಣವರ್ತ್ಮಾ – ಕೃಷ್ಣನ ಮಾರ್ಗವುಳ್ಳ ಸ:– ಭೀಮಸೇನ ದೇವರು, ಅಗ್ನಿಯು, ಭೀಷ್ಮ – ಭೀಷ್ಮ, ಭಯಂಕರವಾದ, ದ್ವಿಜ ಆದ್ಯೈ : ದ್ರೋಣಾದಿಗಳಿಂದ, ಪಕ್ಷಿಗಳು ಮೊದಲಾದವರಿಂದ ಅತಿಭೀಷಣ – ಅತಿ ಭಯಂಕರವಾದ ಆಭಂ – ಕಾಂತಿಯುತವಾದ ವಿಪಕ್ಷಕಕ್ಷಂ – ಶತ್ರುಪಕ್ಷವೆಂಬ ಅರಣ್ಯವನ್ನು ಕ್ಷಪಯನ್ – ನಾಶ ಮಾಡುವವರಾಗಿ ವಿರೇಜೇ – ಪ್ರಕಾಶಿಸಿದರು

ಕುರುಕ್ಷೇತ್ರ ಯುದ್ಧದಲ್ಲಿ ಭೀಮಸೇನ ದೇವರ ಪಾತ್ರವನ್ನು ವಿವರಿಸಿದ್ದಾರೆ. ತನ್ನ ಜ್ವಾಲೆಯಿಂದ ಅಗ್ನಿಯು ಕಾಡ್ಗಿಚ್ಚಿನಂತೆ ಕ್ರೂರ ಪ್ರಾಣಿ ಪಕ್ಷಿಗಳಿಂದ ಕೂಡಿದ ಭಯಂಕರ ಅರಣ್ಯವನ್ನು ದಹಿಸಿ ತಾನು ಹೋದ ಮಾರ್ಗವೆಲ್ಲ ಕೃಷ್ಣವರ್ಣ (ಸುಟ್ಟು ಕಪ್ಪಾಗಿ) ಮಾಡುವಂತೆ ಭೀಮನೂ ಕೂಡ ಅರ್ಜುನನೊಂದಿಗೆ ಕೃಷ್ಣನ ಮಾರ್ಗದರ್ಶನದಲ್ಲಿ ಭೀಷ್ಮ, ದ್ರೋಣ ಮುಂತಾದವರ ಸಮೂಹವುಳ್ಳ ಕೌರವ ಪಕ್ಷವನ್ನು ನಾಶ ಮಾಡಿದರು.

ಅಗ್ನಿಯು ತನ್ನ ತಾಪದಿಂದ ಅಪ್ರಧೃಷ್ಯ. ಭೀಮಸೇನನನ್ನು ಯಾವ ಶತ್ರುವೂ ನಾಶ ಮಾಡಲು (ಸೋಲಿಸಲು) ಅಸಾಧ್ಯವಾದ್ದರಿಂದ ಅಪ್ರಧೃಶ್ಯ.

ದ್ವಿಜ ಅಂದರೆ ಪಕ್ಷಿಗಳು – ಹೇಗೆಂದರೆ ಒಮ್ಮೆ ಮೊಟ್ಟೆಯಾಗಿ ಬಂದು ನಂತರ ಮತ್ತೊಮ್ಮೆ ಪಕ್ಷಿಯಾಗಿ ಹುಟ್ಟುವುದರಿಂದ.
ದ್ವಿಜ ಎಂದರೆ ದ್ರೋಣಾದಿ ಬ್ರಾಹ್ಮಣರು – ಹೇಗೆಂದರೆ ಒಮ್ಮೆ ಮಾತೃಗರ್ಭದಿಂದ ಹುಟ್ಟಿ ನಂತರ ಉಪನಯನ ಸಮಯದಲ್ಲಿ ವೇದ ಮಾತೆ ಗಾಯತ್ರಿಯ ಉಪದೇಶ ಆಗುವುದರಿಂದ.

ತರಸ್ವಿನಃ ಪ್ರೋಚ್ಚಲಿತಾನಧೀರಾನ್
ನಿರ್ದಗ್ಧ-ಪಕ್ಷಾನತಿತೀಕ್ಷ್ಣ-ಕೋಪಾನ್ |
ಸ ಧಾರ್ತರಾಷ್ಟ್ರಾನ್ ಬಹು-ಹೇತಿ-ಲೀಲೋ
ವಿನಾಶ್ಯ ವಿಶ್ವಾನ್ ಪರಯಾ ಶ್ರಿಯಾಽಭಾತ್ || ೪೨ ||ತರಸ್ವಿನ: ಪ್ರೋಚ್ಚಲಿತಾನ್ ಅಧೀರಾನ್ ನಿರ್ದಗ್ದ ಪಕ್ಷಾನ್ ಅತಿ ತೀಕ್ಷ್ಣ ಕೋಪಾನ್ ಸ: ಧಾರ್ತರಾಷ್ಟ್ರಾನ್ ಬಹುಹೇತಿ ಲೀಲ: ವಿನಾಶ್ಯ ವಿಶ್ವಾನ್ ಪರಯಾ ಶ್ರಿಯಾ ಅಭಾತ್ !ಇಲ್ಲಿ ಭೀಮಸೇನ ಮತ್ತು ಅಗ್ನಿಯ ಹೋಲಿಕೆಯನ್ನು ಮುಂದುವರಿಸಿದ್ದಾರೆ.

ಧಾರ್ತರಾಷ್ಟ್ರ ಎಂಬ ಪಕ್ಷಿಗಳು – ಕೆಂಪು ಕಾಲು ಮತ್ತು ಕೊಕ್ಕು ಹೊಂದಿದ್ದು ಉಳಿದ ಭಾಗಗಳು ಬೆಳ್ಳಗಿರುತ್ತೆ. ಅಗ್ನಿಯು ತನ್ನ ಜ್ವಾಲೆಗಳಿಂದ ಜ್ವಲಿಸುತ್ತಾ
ಧಾರ್ತರಾಷ್ಟ್ರ ಪಕ್ಷಿಗಳನ್ನು ಸುಡುವಂತೆ ದುರ್ಯೋಧನಾದಿಗಳು ಭೀಮಸೇನ ದೇವರೆಂಬ ಅಗ್ನಿಗೆ ಆಹುತಿಯಾದರು.

ಬಹು – ಹೆಚ್ಚಾದ ಹೇತಿ – ಆಯುಧಗಳ ಜ್ವಾಲೆಗಳ ಲೀಲ: – ಆಟವುಳ್ಳ ಸ:– ಭೀಮಸೇನ ದೇವರು, ಅಗ್ನಿಯು ತರಸ್ವಿನ: – ವೇಗವುಳ್ಳ ಪ್ರೋಚ್ಚಲಿತಾನ್ – ಧರ್ಮಭ್ರಷ್ಠರಾದ ಅಧೀರಾನ್ – ಧೈರ್ಯವಿಲ್ಲದ ನಿರ್ದಗ್ಧ- ಸುಡಲ್ಪಟ್ಟ ಪಕ್ಷಾನ್ – ಪಕ್ಷವುಳ್ಳ , ರೆಕ್ಕೆಯುಳ್ಳ ಅತಿ ತೀಕ್ಷ್ಣ – ಹೆಚ್ಚಾದ ಭಯಂಕರವಾದ ಕೋಪಾನ್ – ಕೋಪವುಳ್ಳ ವಿಶ್ವಾನ್ – ಸಮಸ್ತ ಧಾರ್ತರಾಷ್ಟ್ರಾನ್ – ಧೃತರಾಷ್ಟ್ರನ ಪುತ್ರರನ್ನು , ಧಾರ್ತರಾಷ್ಟ್ರವೆಂಬ ಪಕ್ಷಿಗಳ ವಿನಾಶ್ಯ – ನಾಶಗೊಳಿಸಿ ಪರಯಾ – ಶ್ರೇಷ್ಠವಾದ ಶ್ರಿಯಾ – ಕಾಂತಿಯಿಂದ ಅಭಾತ್ – ಪ್ರಕಾಶಿಸಿದರು.

 

ಕೃಷ್ಣಾಂಘ್ರಿ-ಪಂಕೇರುಹ-ಭೃಂಗ-ರಾಜಃ
ಕೃಷ್ಣಾ-ಮುಖಾಂಭೋರುಹ-ಹಂಸ-ರಾಜಃ |
ಪ್ರಜಾ-ಸರೋಜಾವಲಿ-ರಶ್ಮಿ-ರಾಜಃ
ಸ-ಸೋದರೋಽರಾಜತ ವೀರ-ರಾಜಃ|| ೪೩|ಕೃಷ್ಣ ಅಂಘ್ರಿ ಪಂಕೇರುಹ ಭೃಂಗರಾಜ: ಕೃಷ್ಣಾ ಮುಖಾಂ ಭೋರುಹ ಹಂಸರಾಜ: ಪ್ರಜಾ ಸರೋಜ ಆವಲಿ ರಶ್ಮಿ ರಾಜ: ಸಸೋದರ ಅರಾಜತ ವೀರರಾಜ: !ಕೃಷ್ಣ – ಕೃಷ್ಣನ ಅಂಘ್ರಿ – ಪಾದಗಳೆಂಬ ಪಂಕೇರುಹ – ಕಮಲಕ್ಕೆ ಭೃಂಗರಾಜ: ಶ್ರೇಷ್ಠ ದುಂಬಿಯಂತಿರುವ ಕೃಷ್ಣಾ – ದ್ರೌಪದಿಯ ಮುಖ ಪಂಕೇರುಹ – ಮುಖ ಕಮಲಕ್ಕೆ ಹಂಸರಾಜ: ರಾಜಹಂಸ ಪ್ರಜಾ ಸರೋಜಾ – ಪ್ರಜೆಗಳೆಂಬ ಕಮಲದ ಆವಲಿ – ಗುಂಪಿಗೆ ರಶ್ಮಿ ರಾಜ – ಸೂರ್ಯನಂತೆ ಇರುವ ವೀರರಾಜ: – ಭೀಮಸೇನ ದೇವರು ಸಸೋದರ: ತನ್ನ ಸಹೋದರರೊಂದಿಗೆ ಅರಾಜತ – ವಿರಾಜಿಸಿದರು.

ಹೇಗೆ ಭ್ರಮರವು ಕಮಲದಲ್ಲಿರುವ ಮಧುವನ್ನು ಪಾನ ಮಾಡುವುದೋ ಅದೇ ರೀತಿ ಭೀಮಸೇನರೆಂಬ ಭ್ರಮರವು ತನ್ನ ಸಹೋದರರೊಡನೆ ಕೃಷ್ಣ ಪರಮಾತ್ಮನ ಪಾದಕಮಲಗಳ ಅರ್ಚನಾದಿಗಳಿಂದ ಪ್ರಕಾಶಿಸಿದರು

ಪೌತ್ರೇ ಪವಿತ್ರಾಹ್ವಯ-ಜಾಮಿ-ಪೌತ್ರೇ
ಧರಾಂ ನಿಧಾಯಾಸುರ-ಧೀಷು ತಾಪಂ |
ಕೀರ್ತಿಂ ತ್ರಿಲೋಕ್ಯಾಂ ಹೃದಯಂ ಮುಕುಂದೇ
ಭೇಜೇ ಪದಂ ಸ್ವಂ ಸಹಜೈಃ ಸ ಭೀಮಃ || ೪೪ ||ಪೌತ್ರೇ ಪವಿತ್ರ ಆಹ್ವಯ ಜಾಮಿ ಪೌತ್ರೇ ಧರಾಂ ನಿಧಾಯ ಅಸುರ ಧೀಷು ತಾಪಂ ಕೀರ್ತಿಂ ತ್ರಿಲೋಕ್ಯಾಂ ಹೃದಯೇ ಮುಕುಂದಂ ಭೇಜೇ ಪದಂ ಸ್ವಂ ಸಹಜೈ: ಸ: ಭೀಮ: |ಪವಿತ್ರ – ಪವಿತ್ರವಾದ ಆಹ್ವಯ – ಹೆಸರುಳ್ಳ ಶ್ರೀ ಕೃಷ್ಣನ ಜಾಮಿ- ತಂಗಿಯಾದ ಸುಭದ್ರೆಯ ಪೌತ್ರೇ- ಮೊಮ್ಮಗನಾದ, ಪೌತ್ರೇ – ತನ್ನ ಮೊಮ್ಮಗನಾದ ಪರೀಕ್ಷಿತನಲ್ಲಿ ಧರಾಂ- ಭೂಮಿಯನ್ನು ಅಸುರ- ಅಸುರರ ಧೀಷು- ಬುದ್ಧಿಯಲ್ಲಿ ತಾಪಂ- ಸಂತಾನವನ್ನು ತ್ರಿಲೋಕ್ಯಾಂ- ಮೂರು ಲೋಕಗಳಲ್ಲಿ ಕೀರ್ತಿಂ- ಕೀರ್ತಿಯನ್ನು ಹೃದಯೇ- ತನ್ನ ಹೃದಯದಲ್ಲಿ ಮುಕುಂದಂ– ಮುಕ್ತಿಪ್ರದ ಕೃಷ್ಣನನ್ನು ನಿಧಾಯ – ಇಟ್ಟು ಸ: ಭೀಮ: – ಭೀಮಸೇನನು ಸಹಜೈ: – ಸೋದರರೊಂದಿಗೆ ಸ್ವಂ- ತಿಮ್ಮ ಪದಂ– ಮೂಲರೂಪವನ್ನು ಭೇಜೇ – ಹೊಂದಿದರು.

ಭೀಮಸೇನ ದೇವರು ತಮ್ಮ ಮೊಮ್ಮಗನಿಗೆ (ಅರ್ಜುನನ ಮಗನ ಮಗ) ರಾಜ್ಯವನ್ನು ನೀಡಿದರು.

ವಿಷ್ಣೋಃ ಪದಾಂತಂ ಭಜತಾಽನಿಲೇನ
ಘೋರ-ಪ್ರಘಾತೈರಿತಿ ನಾಶಿತಸ್ತೇ |
ರಸೋಜ್ಝಿತಾಶ್ಚಂಚಲ-ವೃತ್ತಯೋಽಲಂ
ಶೋಭಾಂ ನ ಭೇಜುಃ ಸುರ-ವೈರಿ-ಮೇಘಾಃ || ೪೫ ||

ವಿಷ್ಣೋ: ಪದಾಂತಂ ಭಜತಾ ಅನಿಲೇನ ಘೋರ ಪ್ರಘಾತೈ; ಇತಿ ನಾಶಿತಾ: ತೇ ರಸ ಉಜ್ಜಿತಾ: ಚಂಚಲ ವೃತ್ತಿಯ: ಅಲಂ ಶೋಭಾ ನಾ ಭೇಜು ಸುರ ವೈರಿ ಮೇಘಾ: !

ಮೇಘಗಳು ರಸವೆಂಬ ಜಲಬಿಂದುಗಳಿಂದ ಕೂಡಿ ಕಾಂತಿಯುತವಾಗಿರುತ್ತವೆ. ಆದರೆ ಅದೇ ಮೇಘಗಳು ಮಳೆಯನ್ನು ಸುರಿಸಿದ ಮೇಲೆ ಕಾಂತಿಹೀನವಾಗುತ್ತದೆ. ಅದೇ ರೀತಿ ದೈತ್ಯರು ಭೀಮಸೇನನೊಂದಿಗೆ ಹೋರಾಡಿ ಸೋತು ಕಾಂತಿರಹಿತರಾದರು. ವಾಯುವು (ಗಾಳಿಯು) ವಿಷ್ಣು ಪದವೆಂದು ಆಕಾಶದಲ್ಲಿ ಚಲಿಸುತ್ತದೆ. ವಾಯುವಿನ ಅವತಾರಿ ಭೀಮಸೇನನು ವಿಷ್ಣುವಿನ ಪಾದವನ್ನು ಭಜಿಸುವವರು.

ವಿಷ್ಣೋ:– ಶ್ರೀಹರಿಯ ಪದ- ಪಾದಗಳ ಅಂತಂ- ಸಮೀಪವನ್ನು ವಿಷ್ಣೋ:ಪದ – ಆಕಾಶದ (ವಿಷ್ಣುಪದ – ತ್ರಿವಿಕ್ರಮ ರೂಪದಿಂದ ತನ್ನ ಪಾದದಿಂದ ಆಕಾಶ ಸ್ಪರ್ಶಿಸಿದ್ದರಿಂದ) ಅಂತಂ- ಸಮೀಪವನ್ನು ಭಜತಾ – ಹೊಂದಿದ ಅನಿಲೇನ- ವಾಯುವಿನ ಅವತಾರಿ ಭೀಮಸೇನನಿಂದ , ಗಾಳಿಯಿಂದ ಘೋರ– ಘೋರವಾದ ಪ್ರಘಾತೈ:– ಹೊಡೆತದಿಂದ ಇತಿ ನಾಶಿಕಾ – ಈ ರೀತಿ ನಾಶಗೊಂಡ ತೇ – ಆ ದೈತ್ಯರು ಅಲಂ- ಅತ್ಯಂತ ಚಂಚಲ ವೃತ್ತಿಯ: ಚಂಚಲ ವೃತ್ತಿಯ (ವ್ಯಾಪಾರದ) ಅಲಂ – ಹೆಚ್ಚಿನ ರಸ – ಬಲದಿಂದ, ನೀರಿನಿಂದ ಉಜ್ಜಿತಾ:– ಬಿಡಲ್ಪಟ್ಟ ತೇ- ಸುರವೈರಿ- ದೈತ್ಯರು ಎಂಬ ಮೇಘಾ:– ಮೋಡಗಳು ಶೋಭಾಂ- ಶೋಭೆಯನ್ನು ನ ಭೇಜು: ಹೊಂದಲಿಲ್ಲ.

ವಿಷ್ಣು ಪಾದವನ್ನು (ಕೃಷ್ಣನ) ಆಶ್ರಯಿಸಿದ ಭೀಮನು ತನ್ನ ಪ್ರಚಂಡ ಹೊಡೆತಗಳಿಂದ ಶತ್ರುಕೋಟೆಯ ನಾಶ ಮಾಡಲು, ನಿರ್ವೀರ್ಯರಾದ ದೈತ್ಯರೆಂಬ ಚಂಚಲ ಮೇಘಗಳು ನಿಸ್ತೇಜರಾದರು.

ಏತತ್-ಪ್ರತೀಪಂ ಕಿಲ ಕರ್ತುಕಾಮಾಃ
ನಷ್ಟೌಜಸಃ ಸಂಕಟಮೇವಮಾಪ್ಯ |
ಮುಕುಂದ-ವೈಗುಣ್ಯ-ಕಥಾಂ ಸ್ವ-ಯೋಗ್ಯಾಂ
ಕಾಲೇ ಕಲಾವಕಲಯಂತ ತೇಽಲಮ್ || ೪೬ ||ಏತತ್ ಪ್ರತೀತಂ ಕಿಲ ಕರ್ತುಕಾಮಾ:
ನಷ್ಟ ಔಜಸ: ಸಂಕಟಂ ಏವಂ ಆಪ್ಯ ಮುಕುಂದ ವೈಗುಣ್ಯ ಕಥಾಂ ಸ್ವ ಯೋಗ್ಯಾಂ ಕಾಲೇ ಕಲೌ ಆಕಲಯಂತ ತೇ ಅಲಂ ||ನಷ್ಟೌಜಸ:– ನಾಶವಾದ ಪರಾಕ್ರಮವುಳ್ಳ ತೇ- ಆ ದೈತ್ಯರು ಏವಂ– ಹೀಗೆ ಅಲಂ- ಹೆಚ್ಚು ಸಂಕಟಂ- ಸಂಕಟವನ್ನು ಆಪ್ಯ– ಹೊಂದಿ ಏತತ್ಪ್ರತೀಪಂ – ಇದರ ವಿರೋಧವನ್ನು ಕರ್ತುಕಾಮಾ: – ಮಾಡಲು ಅಪೇಕ್ಷೆಯುಳ್ಳವರಾಗಿ ಸ್ವ– ತಮಗೆ ಯೋಗ್ಯಾಂ- ಯೋಗ್ಯವಾದ ಕಲೌ ಕಾಲೇ ಕಲಿಯುಗದಲ್ಲಿ ಮುಕುಂದ – ಮುಕ್ತಿಪ್ರದ ಕೃಷ್ಣನ ವೈಗುಣ್ಯ– ನಿರ್ಗುಣದ ಕಥಾಂ- ವಾದವನ್ನು ಆಕಲಯಂತ ಕಿಲ- ರಚಿಸಿದರಷ್ಟೆ.

ಭೀಮಸೇನ ದೇವರಿಂದ ಹತರಾದ ಮಣಿಮಂತನೇ ಮೊದಲಾದವರು ಸಂಕಟದಿಂದ ಭೀಮಸೇನನಿಗೆ ಪ್ರತೀಕಾರ ಮಾಡಲು ತತ್ವನಾಶ ಮಾಡಲು ದೇವರು ನಿರ್ಗುಣನೆಂದು ಶಾಸ್ತ್ರ ರಚನೆ ಮಾಡಿದರು

ಸುಮಧ್ವ ವಿಜಯ ಸರ್ಗ 1 ಶ್ಲೋಕ 47

ಯೋ ಭೂರಿ-ವೈರೊ ಮಣಿಮಾನ್ ಮೃತಃ ಪ್ರಾಗ್
ವಾಗ್ಮೀ ಬುಭೂಷುಃ ಪರಿತೋಷಿತೇಶಃ |
ಸ ಸಂಕರಾಖ್ಯೋಽ೦ಘ್ರಿ-ತಳೇಷು ಜಜ್ಞೇ
ಸ್ಪೃಧಾ ಪರೇಽಪ್ಯಾಸುರಿಹಾಸುರೇಂದ್ರಾಃ || ೪೭ ||

ಯ: ಭೂರಿವೈರ: ಮಣಿಮಾನ್ ಮೃತ: ಪ್ರಾಕ್ ವಾಗ್ಮೀ ಬುಭೂಷು: ಪರಿತೋಷಿತ: ಸ: ಸಂಕರಾಖ್ಯ: ಅಂಘ್ರಿತಲೇಷು ಜಜ್ಞೇ ಸ್ಪೃಧಾ ಪರೇ ಅಪಿ ಆಸು: ಇಹ ಅಸುರೇಂದ್ರಾ: !!

ಯ: – ಯಾರು ಪ್ರಾಕ್- ಹಿಂದೆ ಮೃತ: ಭೀಮನಿಂದ ಸತ್ತಿದ್ದ ದೈತ್ಯರು ಭೂರಿ– ಹೆಚ್ಚಿನ ವೈರ:- ವೈರವುಳ್ಳ ವಾಗ್ಮೀ- ವಾಗ್ಮಿ ಬುಭೂಷು: – ಆಗಬೇಕೆಂದು ಈಶ: – ಈಶ್ವರನನ್ನು ಪರಿತೋಷಿತ – ತಪಸ್ಸು ಮಾಡಿ ಸಂತೋಷ ಗೊಳಿಸಿ, ಪರೇ- ಇತರ ಅಸುರೇಂದ್ರಾ: – ದೈತ್ಯರೊಂದಿಗೆ ಸ್ಪ್ರಧಾ – ಸ್ಪರ್ಧೆಯಿಂದ ಜಜ್ಞೇ– ಹುಟ್ಟಿದನು.

ದ್ವಾಪರಯುಗದಲ್ಲಿ ದ್ರೌಪದಿಯ ಅಪೇಕ್ಷೆಯಂತೆ ಭೀಮಸೇನ ಸೌಗಂಧಿಕಾ ಪುಷ್ಪ ತರಲು ಹೋದಾಗ ಅಲ್ಲಿ ಭೀಮಸೇನನ ವಿರುದ್ಧ ತನ್ನ ಪಡೆಯೊಡನೆ ಯುದ್ಧ ಮಾಡಿ ಸಂಹರಿಸಲ್ಪಟ್ಟು, ಈಗ ಕಲಿಯುಗದಲ್ಲಿ ಹೆಚ್ಚಿನ ವೈರ ಬೆಳೆಸಿಕೊಂಡು ರುದ್ರ ದೇವರನ್ನು ತಪಸ್ಸಿನಿಂದ ಒಲಿಸಿಕೊಂಡು ವಾಕ್ಪಟುತ್ವ ವರವ ಪಡೆದು ಬ್ರಾಹ್ಮಣರಾಗಿ ಹುಟ್ಟಿದರು.

ಸುಮಧ್ವ ವಿಜಯ ಸರ್ಗ 1 ಶ್ಲೋಕ 48

ಸಾನ್ನಾಯ್ಯಮವ್ಯಕ್ತ-ಹೃದಾಖು-ಭುಗ್ ವಾ
ಶ್ವಾ ವಾ ಪುರೋಡಾಶಮಸಾರ-ಕಾಮಃ |
ಮಣಿಸ್ರಜಂ ವಾ ಪ್ಲವಗೋಽವ್ಯವಸ್ಥೋ
ಜಗ್ರಾಹ ವೇದಾದಿಕಮೇಷ ಪಾಪಃ || ೪೮ ||

ಸಾನ್ನಾಯಂ ಅವ್ಯಕ್ತ ಹೃತ್ ಆಖು ಭುಕ್ ವಾ ಶ್ವಾ ವಾ ಪುರೋಡಾಶಂ ಅಸಾರ ಕಾಮ: ಮಣಿಸ್ರಜಂ ವಾ ಪ್ಲವಗ: ಅವ್ಯವಸ್ಥ: ಜಗ್ರಾಹ ವೇದಾದಿಕಂ ಏಷ: ಪಾಪ: ||

ಪಾಪ: ಪಾಪಿಷ್ಟರಾದ ಏಷ: ಅವರು ಅವ್ಯಕ್ತ ಹೃತ್ – ಅವಿತಿರುವ ಆಖು– ಇಲಿಯನ್ನು ಭುಕ್ – ತಿನ್ನುವ ಬೆಕ್ಕಿನಂತೆ ಸಾನ್ನಾಯಮಿವ ವಾ – ಸಾನ್ನಾಯ ಎಂಬ ಯಾಗ ದ್ರವ್ಯವೆಂಬಂತೆ ಅಸಾರ – ನಿಸ್ಸಾರವಾದುದನ್ನು ಕಾಮ: ಬಯಸುವ ಶ್ವಾ – ಶ್ವಾನವು (ನಾಯಿಯು) ಪುರೋಡಾಶಂ ವಾ – ಯಜ್ಞದ ಪುರೋಡಾಶ ಎಂಬ ದ್ರವ್ಯವನ್ನೋ ಎಂಬಂತೆ ಅವ್ಯವಸ್ಥ: ಚಂಚಲವಾದ ಪ್ಲವಗ: ಕೋತಿಯು ಮಣಿಸ್ರಜಂ ವಾ – ರತ್ನದ ಹಾರವನ್ನೋ ಎಂಬಂತೆ ವೇದಾದಿಕಂ – ವೇದಾದಿಗಳನ್ನು ಜಗ್ರಾಹ – ಸ್ವೀಕರಿಸಿದನು.

ಬೆಕ್ಕು ಹೇಗೆ ಗೂಢವಾಗಿದ್ದು ಕಣ್ಣು ಮುಚ್ಚಿ ಸಾಧುವಂತೆ ವರ್ತಿಸುತ್ತಾ ಸಮಯ ಸಾಧಿಸಿ ಹಾಲು ಕುಡಿಯುವಂತೆ ಇವರು ಬ್ರಹ್ಮನನ್ನು ಶೂನ್ಯತ್ವ ಗೂಢವಾಗಿ ಹೇಳಿ ಸಾಧುವಂತೆ ವರ್ತಿಸಿ ವೇದಾದಿ ಸಚ್ಛಾಸ್ತ್ರವನ್ನು ಸ್ವೀಕರಿಸಿದನು.

ನಾಯಿಯು ಜುಗುಪ್ಸಿತ ಮಲವನ್ನು ಅಪೇಕ್ಷಿಸುವಂತೆ ಅಪ್ರಮಾಣವಾದ ಜೀವ ಬ್ರಹ್ಮ ಐಕ್ಯ , ಬ್ರಹ್ಮ ನಿರ್ಗುಣತ್ವ ಜಗನ್ಮಿಥ್ಯಾತ್ವ ಮೊದಲಾದವನ್ನು ಅಪೇಕ್ಷಿಸಿದರು.

ಸುಮಧ್ವ ವಿಜಯ ಸರ್ಗ 1 ಶ್ಲೋಕ 49

ಜನೋ ನಮೇನ್ನಾಪರಥೇತಿ ಮತ್ವಾ
ಶಠಶ್ಚತುರ್ಥಾಶ್ರಮಮೇಷ ಭೇಜೇ |
ಪದ್ಮಾಕರಂ ವಾ ಕಲುಷೀ-ಚಿಕೀರ್ಷುಃ
ಸು-ದುರ್ದಮೋ ದುಷ್ಟ-ಗಜೋ ವಿಶುದ್ಧಂ || ೪೯ ||

ಜನೋ ನಮೇತ್ ನ ಅಪರಥಾ ಇತಿ ಮತ್ವಾ ಶಠ: ಚತುರ್ಥಾಶ್ರಮಂ ಏಷ: ಭೇಜೇ ಪದ್ಮಾಕರಂ ವಾ ಕಲುಷೀ ಚಿಕೀರ್ಷು: ಸುದುರ್ದಮ: ದುಷ್ಟಗಜ: ವಿಶುದ್ಧಂ!!

ಸುದುರ್ಗಮ: ದುರ್ಗಮವಾದ ದುಷ್ಟ ಗಜ: – ಕೆಟ್ಟ ಆನೆಯು ಕಲುಷೀ – ಕಲುಷಿತವಾಗಿ ಚಿಕೀರ್ಷು: – ಮಾಡಲು ವಿಶುದ್ಧಂ – ಶುದ್ಧವಾದ ಪದ್ಮಾಕರಂ ವಾ – ಪದ್ಮಸರೋವರವನ್ನೆಂಬಂತೆ ಶಠ: ಮೂರ್ಖನಾದ ಏಷ: ಅವರು ಜನ: ಜನರು ನ ನಮೇತ – ನಮಿಸುವುದಿಲ್ಲ ಇತಿ – ಹೀಗೆ ಮತ್ವಾ – ತಿಳಿದು ಚತುರ್ಥಾಶ್ರಮಂ ಸನ್ಯಾಸವನ್ನು ಭೇಜೇ ಹೊಂದಿದನು.

ಸುಮಧ್ವ ವಿಜಯ ಸರ್ಗ 1 ಶ್ಲೋಕ 50

ಅವೈದಿಕಂ ಮಾಧ್ಯಮಿಕಂ ನಿರಸ್ತಂ
ನಿರೀಕ್ಷ್ಯ ತತ್-ಪಕ್ಷ-ಸುಪಕ್ಷ-ಪಾತೀ |
ತಮೆವ ಪಕ್ಷಂ ಪ್ರತಿ-ಪಾದುಕೋಽಸೌ
ನ್ಯರೂರುಪನ್ಮಾರ್ಗಮಿಹಾನುರೂಪಂ || ೫೦ ||

ಅವೈದಿಕಂ ಮಾಧ್ಯಮಿಕಂ ನಿರಸ್ತಂ ನಿರೀಕ್ಷ್ಯ ತತ್ಪಕ್ಷ ಸುಪಕ್ಷಪಾತೀ ತಂ ಏವ ಪಕ್ಷಂ ಪ್ರತಿಪಾದುಕ: ಅಸೌ ನ್ಯರೂರುಪತ್ ಮಾರ್ಗಂ ಇಹ ಅನುರೂಪಂ||

ಅಸೌ – ಅವರು ಅವೈದಿಕಂ – ಅವೈದಿಕವಾದ (ವೇದವಿರೋಧವಾದ) ಮಾಧ್ಯಮಿಕಂ – ಭೌದ್ಧತತ್ವವನ್ನು ನಿರಸ್ತಂ- ನಿರಾಕರಿಸಿದವನಾಗಿದ್ದನ್ನು ನಿರೀಕ್ಷ್ಯ – ನೋಡಿ ತತ್ಪಕ್ಷ – ಆ ಸಿದ್ಧಾಂತದಲ್ಲೇ ಸುಪಕ್ಷಪಾತೀ – ಮನಸ್ಸುಳ್ಳವನಾಗಿ ತಂ ಪಕ್ಷಂ ಏವ – ಆ ಸಿದ್ಧಾಂತವನ್ನೇ ಪ್ರತಿಪಾದುಕ: ಸನ್ – ಪ್ರತಿಪಾದಿಸುವವನಾಗಿ ಇಹ- ಇದಕ್ಕೆ ಅನುರೂಪಂ- ಯೋಗ್ಯವಾದ ಮಾರ್ಗಂ – ಮಾರ್ಗವನ್ನು ನ್ಯರೂರುಪತ್ – ಹುಡುಕಿದರು.

ಸ್ವಭಾವತ: ಶೂನ್ಯತ್ವದಲ್ಲೇ ಪಕ್ಷಪಾತಿಯಾದ ಅವರು ಬೌದ್ಧ ಸಿದ್ಧಾಂತವನ್ನೇ ಪ್ರತಿಪಾದಿಸಲು, ಆ ಬೌದ್ಧ ಸಿದ್ಧಾಂತದ ಸಮರ್ಥಕನಾಗಿ ಉಪಾಯ ಮಾಡಿದರು

ಅಸತ್-ಪದೇಽಸನ್ ಸದಸದ್-ವಿವಿಕ್ತಂ
ಮಾಯಾಖ್ಯಯಾ ಸಂವೃತಿಮಭ್ಯಧತ್ತ |
ಬ್ರಹ್ಮಾಪ್ಯಖಂಡಂ ಬತ ಶೂನ್ಯ-ಸಿದ್ಧ್ಯೈ
ಪ್ರ-ಚ್ಛನ್ನ-ಬೌದ್ಧೋಽಯಮತಃ ಪ್ರ-ಸಿದ್ಧಃ || ೫೧ ||ಅಸತ್ ಪದೇ ಅಸನ್ ಸದಸದ್ ವಿವಿಕ್ತಂ ಮಾಯಾಖ್ಯಯಾ ಸಂವೃತಿಂ ಅಭ್ಯದತ್ತ ಬ್ರಹ್ಮ ಅಪಿ ಅಖಂಡಂ ಬತ ಶೂನ್ಯಸಿದ್ಧ್ಯೈ ಪ್ರಚ್ಛನ್ನಬೌದ್ಧ: ಆಯ್ಕೆ ಅತ: ಪ್ರಸಿದ್ಧ: !ಅಸನ್ – ಆ ಸಂಕರನು ಅಸತ್ಪದೇ – ಅಸತ್ತಿನ ಸ್ಥಾನದಲ್ಲಿ ಸದಸದ್ವಿವಿಕ್ತಂ – ಸದಸದ್ವಿಲಕ್ಷಣವನ್ನು ಸಂವೃತಿಂ – ಅಜ್ಞಾನವನ್ನು ಮಾಯಾಖ್ಯಯಾ – ಮಾಯಾ ಎಂಬ ಹೆಸರಿನಿಂದ ಶೂನ್ಯ ಸಿದ್ದೈ – ಶೂನ್ಯದ ಸಿದ್ಧಿಗೋಸ್ಕರ ಬ್ರಹ್ಮ ಅಪಿ – ಬ್ರಹ್ಮನನ್ನೂ ಅಖಂಡಂ – ನಿರ್ಧರ್ಮಿಯಾಗಿ ಅಭ್ಯದತ್ತ – ಹೇಳಿದನು. ಅತ: – ಈ ಕಾರಣದಿಂದ ಅಯಂ– ಈ ಸಂಕರನು ಪ್ರಚ್ಛನ್ನಬೌದ್ಧ: – ಪ್ರಚ್ಛನ್ನಬೌದ್ಧ ಎಂದು ಪ್ರಸಿದ್ಧ:– ಪ್ರಸಿದ್ಧನು.

ಬೌದ್ಧರು ಜಗತ್ತನ್ನು ಅಸತ್ ಎಂದರೆ ಅದ್ವೈತವು ಸದಸದ್ವಿಲಕ್ಷಣತ್ವವನ್ನು ಹೇಳಿತು. ಅಸತ್ ಎಂದರೆ ಸುಳ್ಳು. ಶುಕ್ತಿಯಲ್ಲಿ ಕಾಣುವ ರಜತ ಅಲ್ಲಿರಲಿಲ್ಲ ಎಂಬ ಬಾಧ ಬರುವುದರಿಂದ ಸತ್ ಆಗಿಲ್ಲ. ಆದರೆ ಪ್ರತ್ಯಕ್ಷವಾಗಿ ತೋರಿಸುವುದರಿಂದ ಅಸತ್ ಆಗಿಲ್ಲ. ಹೀಗೆ ಶುಕ್ತಿರಜತವು ಸದಸದ್ವಿಲಕ್ಷಣತ್ವವನ್ನು ಹೊಂದಿದೆ ಅದೇ ರೀತಿ ಬ್ರಹ್ಮನಲ್ಲಿ ತೋರುವ ಈ ಜಗತ್ತು ಸದಸದ್ವಿಲಕ್ಷಣವಾಗಿದೆ ಎಂಬ ಅಭಿಪ್ರಾಯ ಅದ್ವೈತದ್ದು. ಇದನ್ನೇ ಇವರು ಮಾಯೆ ಎಂಬ ಶಬ್ದವನ್ನು ಪ್ರಯೋಗಿಸಿದ್ದಾರೆ.

ಯದ್ ಬ್ರಹ್ಮ-ಸೂತ್ರೋತ್ಕರ-ಭಾಸ್ಕರಂ ಚ
ಪ್ರಕಾಶಯಂತಂ ಸಕಲಂ ಸ್ವ-ಗೋಭಿಃ |
ಅಚೂಚುರದ್ ವೇದ-ಸಮೂಹ-ವಾಹಂ
ತತೋ ಮಹಾ-ತಸ್ಕರಮೇನಮಾಹುಃ || ೫೨ ||

ಯತ್ ಬ್ರಹ್ಮಸೂತ್ರೋತ್ಕರ ಭಾಸ್ಕರಂ ಚ ಪ್ರಕಾಶಯಂತಂ ಸಕಲಂ ಸ್ವಗೋಭಿ: ಅಚೂಚುರತ್ ವೇದ ಸಮೂಹವಾಹಂ ತತ: ಮಹಾತಸ್ಕರಂ ಏನಂ ಆಹು:

ಸ್ವ: ತನ್ನ ಗೋಭಿ: ಮಾತುಗಳಿಂದ , ಕಿರಣಗಳಿಂದ, ಯತ್ ಸಕಲಂ – ಎಲ್ಲಾ ಪ್ರಕಾಶಯಂತಂ – ಪ್ರಕಾಶಿಸುವ ವೇದಸಮೂಹವಾಹಂ – ವೇದಗಳ ಸಮೂಹವನ್ನು ವಾಹಂ ಹೊತ್ತ, ಕುದುರೆ ಬ್ರಹ್ಮ ಸೂತ್ರೋತ್ಕರಭಾಸ್ಕರಂ – ಬ್ರಹ್ಮಸೂತ್ರವೆಂಬ ಸೂರ್ಯನ ಅಚೂಚರನ್ – ತಪ್ಪು ಅರ್ಥ ನೀಡಿದವರನ್ನು ಮಹಾತಸ್ಕರಂ – ದೊಡ್ಡ ಕಳ್ಳನೆಂದು ಆಹು: ಹೇಳುತ್ತಾರೆ.

ಸ್ವ-ಸೂತ್ರ-ಜಾತಸ್ಯ ವಿರುದ್ಧ-ಭಾಷೀ
ತದ್-ಭಾಷ್ಯ-ಕಾರೋಽಹಮಿತಿ ಬ್ರುವನ್ ಯಃ |
ತಂ ತತ್-ಕ್ಷಣಾದ್ ಯೋ ನ ದಿಧಕ್ಷತಿ ಸ್ಮ
ಸ ವ್ಯಾಸ-ರೂಪೋ ಭಗವಾನ್ ಕ್ಷಮಾಬ್ಧಿಃ || ೫೩ ||

ಸ್ವಸೂತ್ರಜಾತಸ್ಯ ವಿರುದ್ಧ ಭಾಷಿ ತದ್ಭಾಷ್ಯಕಾರ: ಅಹಂ ಇತಿ ಬ್ರುವನ್ ಯ: ಸ: ತಂ ತತ್ ಕ್ಷಣಾತ್ ಯ: ನ ದಿಧಕ್ಷತಿ ಸ್ಮ ಸ: ವ್ಯಾಸರೂಪಂ ಭಗವಾನ್ ಕ್ಷಮಿಬ್ಧಿ: !

ಅಹಂ– ನಾನು ತದ್ಭಾಷ್ಯಕಾರ: ಸನ್ – ಬ್ರಹ್ಮ ಸೂತ್ರಗಳ ಭಾಷ್ಯಕಾರನು ಇತಿ ಬ್ರುವನ್ – ಎಂದು ಹೇಳಿ ಸ್ವಸೂತ್ರ ಜಾತಸ್ಯ – ತಮ್ಮ ಬ್ರಹ್ಮ ಸೂತ್ರಗಳ ಸಮುದಾಯಕ್ಕೆ ವಿರುದ್ಧ ಭಾಷೀ – ವಿರುದ್ಧ ಮಾತನಾಡುವ ತಂ- ಅದ್ವೈತವನ್ನು ಯ:– ಯಾರು ತತ್ ಕ್ಷಣಾತ್ ಆ ಕ್ಷಣದಲ್ಲಿ ನ ದಿಧಕ್ಷತಿ ಸ್ಮ – ಸುಡಲು ಬಯಸಲಿಲ್ಲವೋ ಸ:ವ್ಯಾಸರೂಪ: ಭಗವಾನ್ – ವೇದವ್ಯಾಸ ರೂಪಿ ಭಗವಂತನು ಕ್ಷಮಾಬ್ಧಿ:– ಕ್ಷಮಾಗುಣಕ್ಕೆ ಸಮುದ್ರನು.

ನಿಗಮ-ಸನ್ಮಣಿ-ದೀಪ-ಗಣೋಽಭವತ್
ತದುರು-ವಾಗ್-ಗಣ-ಪಂಕ-ನಿಗೂಢ-ಭಾಃ |
ಅವಿದುಷಾಮಿತಿ ಸಂಕರತಾ-ಕರಃ
ಸ ಕಿಲ ಸಂಕರ ಇತ್ಯಭಿ-ಶುಶ್ರುವೇ || ೫೪ ||ನಿಗಮ ಸತ್ ಮಣಿ ದೀಪ: ಗಣ: ಅಭವತ್ ತತ್ ಉರು ವಾಕ್ ಗಣ ಪಂಕ ನಿಗೂಢ ಭಾ: ಅವಿದುಷಾಂ ಇತಿ ಸಂಕರತಾಕರ: ಸ: ಸಂಕರ: ಇತಿ ಅಭಿಶುಶ್ರುವೇ !ನಿಗಮ – ವೇದಗಳೆಂಬ ಸತ್ – ನಿರ್ದುಷ್ಟವಾದ ಮಣಿ – ಮಣಿಗಳೆಂಬ ದೀಪ: – ದೀಪಗಳ ಗಣ:- ಗುಂಪು ತತ್ – ಅವರ ಉರು- ಹೆಚ್ಚಾದ ವಾಕ್ ಗಣ – ಮಾತಿನ ಸಮುದಾಯವೆಂಬ ಪಂಕ – ಕೆಸರಿನಲ್ಲಿ ನಿಗೂಢ ಭಾ – ನಿಗೂಢವಾದ ಕಾಂತಿಯಿಂದ ಅಭವತ್ – ಆಯಿತು.

ವಿಶ್ವಂ ಮಿಥ್ಯಾ ವಿಭುರಗುಣವಾನಾತ್ಮನಾಂ ನಾಸ್ತಿ ಭೇದೋ
ದೈತ್ಯಾ ಇತ್ಥಂ ವ್ಯದಧತ ಗಿರಾಂ ದಿಕ್ಷು ಭೂಯಃ ಪ್ರಸಿದ್ಧಿಮ್ |
ಆನಂದಾದ್ಯೈರ್ಗುರು-ಗುಣ-ಗಣೈಃ ಪೂರಿತೋ ವಾಸುದೇವೋ
ಮಂದಂ-ಮಂದಂ ಮನಸಿ ಚ ಸತಾಂ ಹಂತ ನೂನಂ ತಿರೋಽಭೂತ್ || ೫೫ ||

ವಿಶ್ವಂ ಮಿಥ್ಯಾ ವಿಭು: ಅಗುಣವಾನ್ ಆತ್ಮನಾಂ ನಾ ಆಸ್ತಿ ಭೇದ: ದೈತ್ಯಾ: ಇತ್ಥಂ ವ್ಯದಧತ: ಗಿರಾಂ ದಿಕ್ಕು ಭೂಯ: ಪ್ರಸಿದ್ದಿಂ ಆನಂದಾರ್ದೈ: ಗುರುಗುಣಗಣೈ: ಪೂರಿತಂ ವಾಸುದೇವ: ಮಂದಂ ಮಂದಂ ಮನಸಿ ಚಿ ಸತಾಂ ಹಂತ ನೂನಂ ತಿರ: ಅಭೂತ್ !

ವಿಶ್ವಂ – ಪ್ರಪಂಚವು ಮಿಥ್ಯಾ- ಸುಳ್ಳು ವಿಭು ವ್ಯಾಪ್ತ ಬ್ರಹ್ಮನು ಅಗುಣವಾನ್ – ಗುಣರಹಿತನು ಆತ್ಮನಾಂ- ಜೀವರಿಗೆ ಭೇದ: ನಾಸ್ತಿ – ಭೇದವಿಲ್ಲ ಇತ್ಥಂ ಹೀಗೆ ದಿಕ್ಷು – ದಿಕ್ಕುಗಳಲ್ಲಿ ಭೂಯ: – ಬಾರಿ ಬಾರಿಗೂ ದೈತ್ಯಾ: ದೈತ್ಯರು ಗಿರಾಂ – ಮಾತುಗಳ ಪ್ರಸಿದ್ಧಿಂ – ಪ್ರಸಿದ್ಧಿಯನ್ನು ವ್ಯದಧತ – ಮಾಡಿದರು ಆನಂದಾರ್ದೈ: ಆನಂದವೇ ಮೊದಲಾದ ಗುರುಗುಣ ಶ್ರೇಷ್ಠ ಗುಣಗಳ ಗಣೈ;– ಸಮೂಹದಿಂದ ಪೂರಿತ: – ಕೂಡಿದ ವಾಸುದೇವ: ಶ್ರೀಹರಿಯು ಸತಾಂ ಸಜ್ಜನರ ಮನಸಿ ಚ – ಮನಸ್ಸಿನಲ್ಲೂ ಮಂದಂ ಮಂದಂ ನಿಧಾನವಾಗಿ ನೂನಂ- ನಿಶ್ಚಯವಾಗಿ ತಿರ: ಅಭೂತ್ – ಮರೆಯಾದನು.

ಜಗನ್ಮಿಥ್ಯಾ, ಚೇತನಗಳಿಗೆ ಭೇದವಿಲ್ಲ, ದೇವರು ನಿರ್ಗುಣಿ, ಜೀವನ ಗುಣ ವ್ಯಾವಹಾರಿಕ, ಇತ್ಯಾದಿ ಹೇಳಿ ಪರಮಾತ್ಮನ ಆನಂದಾದಿ ಗುಣಗಳನ್ನು ನಿಧಾನವಾಗಿ ಮರೆಸಿದರು

|| ಇತಿ ಶ್ರೀಮತ್ಕವಿಕುಲತಿಲಕ ತ್ರಿವಿಕ್ರಮಪಂಡಿತಾಚಾರ್ಯ ಸುತ ಶ್ರೀನಾರಾಯಣ ಪಂಡಿತಾಚಾರ್ಯ ವಿರಚಿತೇ ಶ್ರೀ ಮಧ್ವ ವಿಜಯೇ ಮಹಾಕಾವ್ಯೇ ಆನಂದಾಂಕಿತೇ ಪ್ರಥಮಃ ಸರ್ಗಃ ||

ಇಲ್ಲಿಗೆ ನಾರಾಯಣ ಪಂಡಿತಾಚಾರ್ಯ ವಿರಚಿತ ಮಧ್ವ ವಿಜಯ ಮೊದಲ ಸರ್ಗ ಸಮಾಪ್ತಿಯಾಯಿತು.

ಶ್ರೀ ಕೃಷ್ಣಾರ್ಪಣಮಸ್ತು

Sumadhwa Seva © 2022