ದ್ರೌಪದಾದೇವಿ

 

“ದ್ರೌಪದಿಯ ಪಂಚಪತಿತ್ವ”

 

ಭಗವಾನ್ ವೇದವ್ಯಾಸ ವಿರಚಿತ  ” ಮಹಾಭಾರತ”ದ ಬಹಳಷ್ಟು ಪಾತ್ರಗಳು ರೋಚಕವಾಗಿದೆ.

 

ಮಹಾರಾಜ ಶಂತನು ಗಂಗೆಯನ್ನು ಕಳೆದುಕೊಂಡು ಸತ್ಯವತಿಯ ಬಯಸಿ, ಅವಳಿಗಾಗಿ ತನ್ನ ಮಗನೇ ಆಜನ್ಮ ಬ್ರಹ್ಮಚಾರಿ ಆಗುತ್ತಾನೆ.  ಕುರುಡ ಪತಿಗಾಗಿ ಪತ್ನಿ ಗಾಂಧಾರಿ ಜೀವಮಾನವಿಡೀ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುತ್ತಾಳೆ.    ಸತ್ಯವತಿ ಪರಾಶರರ ಮಗನಾದ ವ್ಯಾಸರು ಮಹಾಭಾರತ ಬರೆದರೆ, ದ್ರೋಣಾಚಾರ್ಯರು ದೊನ್ನೆಯಲ್ಲಿ ರಕ್ಷಿಸಲ್ಪಟ್ಟು ಜನಿಸುತ್ತಾರೆ.  ವಿರಾಟರಾಜ ಮೀನಿನ ಉದರದಲ್ಲಿ ಜನಿಸಿದರೆ, ದುರ್ಯೋಧನಾದಿಗಳು ಮಡಿಕೆಯಲ್ಲಿ ಸಂರಕ್ಷಿಸಲ್ಪಟ್ಟು ಜನಿಸುತ್ತಾರೆ.   ಪಿತಾಮಹ ಎನಿಸಿ ಏಳು ತಲೆಮಾರುಗಳ ಕಂಡರೂ, ಸಿಂಹಾಸನಕ್ಕೆ ಅಧಿಕಾರವಿದ್ದರೂ, ಸೇವಕನಾಗಿ ದುಡಿಯುತ್ತಾನೆ ಭೀಷ್ಮ.  ದ್ರೌಪದಿ ಧೃಷ್ಟದ್ಯುಮ್ನರು ಅಗ್ನಿಯಿಂದ ಜನಿಸುತ್ತಾರೆ.    ಪಾಂಡವರು ದೇವತಾ ಅನುಗ್ರಹ ಬಲದಿಂದ ಕುಂತಿಯಲ್ಲಿ ಜನಿಸುತ್ತಾರೆ.  ವಿವಾಹ ಪೂರ್ವ ಸೂರ್ಯಾನುಗ್ರಹದಿಂದ ಜನಿಸಿದ ಕರ್ಣ “ರಾಧೇಯ” ಆಗುತ್ತಾನೆ  .    ಪಾಂಡವರ ಧರ್ಮನೀತಿ, ಕೌರವರ ಅಧರ್ಮ, ಧೃತರಾಷ್ಟ್ರನ ಪುತ್ರ ವ್ಯಾಮೋಹ, ಕಪಟಿ ಶಕುನಿಯ ದಾಳಕ್ಕೆ ಬಿದ್ದ ಪಾಂಡವರು, ಹೆಜ್ಜೆ ಹೆಜ್ಜೆಗೂ ಅವರ ಸಂರಕ್ಷಿಸಿದ ಕೃಷ್ಣ ಪರಮಾತ್ಮ, ಗೀತೋಪದೇಶದಿಂದ ಇಡೀ ಆರ್ಯಾವರ್ತದಲ್ಲೇ ಧರ್ಮಜಾಗೃತಿ ಮಾಡಿದ.  ಮಹಾಭಾರತ ಯುದ್ಧ ನೋಡುವುದಕ್ಕೆ ಪಾಂಡವ ಕೌರವರ ಯುದ್ಧದಂತೆ ಕಂಡರೂ, ನಿಜವಾಗಿ ಸಂಪೂರ್ಣ ಯುದ್ಧ ಶಸ್ತ್ರ ಎತ್ತದೇ ಮಾಡಿಸಿದವನು ಕೃಷ್ಣನೇ.  ಧರ್ಮವಿದ್ದರೆ ಅವರ ಹಿಂದೆ ನಿಂತು,  ಅಧರ್ಮ ಮಾಡಿದವರಿಗೆ ತಕ್ಕ ರೀತಿಯಲ್ಲಿ ಸೋಲಿಸಿದವನು ಕೃಷ್ಣನೇ.

ಅದೇ ರೀತಿ ಮಹಾಭಾರತದ ಅತ್ಯದ್ಭುತ ಪಾತ್ರ ದ್ರೌಪದಾ ದೇವಿಯರದ್ದು. ಕೆಲವು ಕುಹಕಿ ಕವಿಗಳು ಪಂಚವಲ್ಲಭೆ ಪಾಂಚಾಲಿ ಎಂದೂ,  ಮತ್ತೆ ಕೆಲವರು ಪಾಂಚಾಲಿ ಅರ್ಜುನನ ಹೆಂಡತಿಯೆಂದೂ, ಅವರವರ ಭಾವಕ್ಕೆ ತಕ್ಕಂತೆ ಚಿತ್ರಿಸಿದರೂ ಕೂಡ ಅವಳು ಮಹಾ ಪತಿವ್ರತೆಯೆಂದು “ಪಂಚಪತಿವ್ರತೆ”ಯರಲ್ಲಿ ಸೇರಿಸಿದ್ದಾರೆ.

ದ್ರೌಪದಾದೇವಿಯು ಸಾಕ್ಷಾತ್ ವಾಯುದೇವರ ನಿಜಪತ್ನಿ ಭಾರತೀ ದೇವಿಯ ಅವತಾರ.   ಈ ಅವತಾರದ ಬಗ್ಗೆ ಕೆಲವು ತಪ್ಪು ಕಲ್ಪನೆಗಳನ್ನು ಮಾಡಿ ಅವರ ಪಾತ್ರವನ್ನು ಕೀಳು ರೀತಿ ಕೇಲವರು ಚಿತ್ರಿಸಿದ್ದಾರೆ.  ಆದರೆ “ಮಹಾಭಾರತ” ಮತ್ತು ಆಚಾರ್ಯ ಮಧ್ವರ “ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥಗಳು”  ಆಕೆಯ ಪಾತ್ರವನ್ನು ಸೊಗಸಾಗಿ ಚಿತ್ರಿಸಿದ್ದಾರೆ.

ದ್ರೌಪದಿಯ ಜನನ -.

ಗುರು ದ್ರೋಣರ ಅಪೇಕ್ಷೆಯಂತೆ, ದ್ರುಪದನ ಹಿಡಿದು ದ್ರೋಣರಿಗೆಪ್ಪಿ ಒಪ್ಸಿಸಿದ ಭೀಮಾರ್ಜುನರ ಕೌಶಲ್ಯದಿಂದ ಚಕಿತನಾದ.  ಭೀಮಸೇನನೇ ದ್ರುಪದನನ್ನು ಹಿಡಿಯುವ ಅವಕಾಶ ಸಿಕ್ಕಿದ್ದರೂ, ಅರ್ಜುನನ ಶಪಥ – “ದ್ರುಪದನನ್ನು ಹಿಡಿದು ತರುತ್ತೇನೆಂಬ ಶಪಥ” ವಿದ್ದುದರಿಂದ ತಾನು ಅವನನ್ನು ಹಿಡಿಯದೆ ಆ ಕೀರ್ತಿ ಅರ್ಜುನನಿಗೆ ದೊರಕಲೆಂದು ಹಿಡಿಯಲಿಲ್ಲ.    ಅರ್ಜುನ ದ್ರುಪದನ ಸೆರೆ ಹಿಡಿದ ಮೇಲೂ ದ್ರುಪದನ ಸೈನಿಕರನ್ನು ಚೆಂಡಾಡುತ್ತಿದ್ದ ಭೀಮನ ಕುರಿತು ಅರ್ಜುನ “ಭೀಮ, ಇಡೀ ಸೈನ್ಯವನ್ನು ನಾಶ ಮಾಡುವುದು ಬೇಡ.  ಇವನು ನಮ್ಮ ತಂದೆಯ ಸ್ನೇಹಿತ, ಧರ್ಮಿಷ್ಠ.  ನಮ್ಮೊಂದಿಗೆ ಸಂಬಂಧಿಯಾಗಲು ಯೋಗ್ಯ”.

ದ್ರೋಣಾಚಾರ್ಯರಿಂದ ಅವಮಾನಿತನಾದೆನೆಂದು ಭಾವಿಸಿದ ದ್ರುಪದರಾಜ, ದ್ರುಪದನ ಮನಸ್ಸಿನಲ್ಲಿ ಅರ್ಜುನ ಹೇಳಿದ್ದ “ಸಂಬಂಧಿ” ಎಂಬ ಮಾತು ಸತ್ಯ ಮಾಡಬೇಕೆಂಬ ಬಯಕೆಯಾಯಿತು ದ್ರುಪದನಿಗೆ. ಅವನಿಗಾಗಿ ಒಬ್ಬ ಮಗಳನ್ನು ಪಡೆಯಲು ಬಯಸಿದ.    ಹಾಗೇ ದ್ರೋಣನನ್ನು ಕೊಲ್ಲುವ ಮಗನನ್ನು ಪಡೆಯಬಯಸಿದನು. ಅದಕ್ಕಾಗಿ    ಯಾಜೋಪಯಾಜರು ಎಂಬ ವಿಪ್ರ ಶ್ರೇಷ್ಟರ ಮೂಲಕ ಗಂಗಾತೀರದಲ್ಲಿ ವಿಶೇಷ ಯಜ್ಞ ಮಾಡಲು, ಆ ಯಜ್ಞದ ಹವಿಸ್ಸು ಸಂತಾನ ಪ್ರಾಪ್ತಿಗಾಗಿ  ಸ್ವೀಕರಿಸಲು ದ್ರುಪದನ ಪತ್ನಿಯನ್ನು ಆಹ್ವಾನಿಸಿದರು.  ಆಗ ಅಲಂಕಾರ ಮಾಡಿಕೊಳ್ಳುತ್ತಿದ್ದ ಅವಳು ಆಗಮಿಸಲು ತಡಮಾಡಲು,  ಅವಳ ಅಹಂಕಾರದಿಂದ ಕುಪಿತರಾದ ಆ ವಿಪ್ರೋತ್ತಮರು ಹವಿಸ್ಸನ್ನು ಅಗ್ನಿಯಲ್ಲಿ ಹೋಮಿಸಿಬಿಟ್ಟರು.    ಎರಡು ವೈಷ್ಣವ ಮಂತ್ರಗಳಿಂದ ಹೋಮಿಸುತ್ತಿದ್ದಂತೆ ಮೊದಲು ಅಗ್ನಿಯಿಂದ ಹೊರಬಂದವನೇ ಅಗ್ನಿಯ ಅವತಾರಿಯಾದ ಧೃಷ್ಟದ್ಯುಮ್ನ.  ಅವನು ಅವತರಿಸುತ್ತಲೇ ಕಿರೀಟ ಧಾರಿಯಾಗಿ, ಕುಂಡಲ ಹಾರಗಳನ್ನು ಧರಿಸಿ, ಶ್ರೇಷ್ಠ ಖಡ್ಗ ಹಿಡಿದು, ರಥಾರೂಢನಾಗಿ ಬಂದನು.

ನಂತರ ಬಂದವಳೇ ಸಾಕ್ಷಾತ್ ಭಾರತೀದೇವಿ.   ಯಜ್ಞದ ಅಗ್ನಿಯಲ್ಲಿ ಅವತರಿಸಿ ಗರ್ಭವಾಸಾದಿ ರಹಿತಳಾಗಿ ಅತ್ಯಂತ ಪವಿತ್ರವಾಗಿ ಅಪ್ರತಿಮ ಸುಂದರಿಯಾಗಿ ಪ್ರಾದುರ್ಭವಿಸಿದಳು. ಅವಳು ಜನಿಸುತ್ತಲೇ ಸರ್ವಜ್ಞಳೂ, ಸರ್ವಾಭರಣಭೂಷಿತೆಯೂ, ತ್ರಿಲೋಕಸುಂದರಿಯೂ, ಯೌವನಸ್ಥೆಯೂ,  ಸರ್ವಲಕ್ಷಣಸಂಪನ್ನೆಯೂ ಆಗಿ ಜನಿಸಿದಳು. ಅವಳಲ್ಲಿ ವಿಶೇಷವಾಗಿ ಉಮೆಯ ಆವೇಶವಿದ್ದಿತು.  ಆಗಲೇ ಜನಿಸಿದರೂ,  ಅರ್ಜುನನ ವಯಸ್ಸಿಗೆ ತಕ್ಕಂತಹ ಯೌವ್ವನ ಅವಳಲ್ಲಿದ್ದಿತು.  ಅವಳಲ್ಲಿ ಪಾರ್ವತಿಯ ಜೊತೆಗೆ ಶಚಿ, ಶ್ಯಾಮಲಾ, ಉಷಾದೇವಿಯರ ಆವೇಶವಿತ್ತು.

 

ದ್ರೌಪದಿ :    ಯಜ್ಞದಲ್ಲಿ ಜನಿಸಿದ್ದರಿಂದ ಯಾಜ್ಞಸೇನಿ, ದ್ರುಪದ ರಾಜನ ಮಗಳಾದ್ದರಿಂದ “ದ್ರೌಪದಿ”, ಪಾಂಚಾಲಿ ರಾಜಕುವರಿಯಾದ್ದರಿಂದ “ಪಾಂಚಾಲಿ”,   ತಾತ ಪೃಷತನಾದ್ದರಿಂದ ಪಾರ್ವತೀ.  ಇವಳ ಜನ್ಮ ನಾಮ “ಕೃಷ್ಣಾ”,  ಎಂದರೆ ಕೃಷ್ಣವರ್ಣದವಳಾಗಿದ್ದರಿಂದ, ಉತ್ಕೃಷ್ಟ ಳಾದ್ದರಿಂದ,  ಸ್ತ್ರೀ ಜೀವರಲ್ಲಿ ಸರ್ವೋತ್ಕೃಷ್ಟ ಮಾಡಿದ್ದರಿಂದ ಅವಳಿಗೆ “ಕೃಷ್ಣಾ” ನಾಮಧೇಯ ಯುಕ್ತವಾಯಿತು.

ಪಾಂಚಾಲ ದೇಶದ ಚಕ್ರವರ್ತಿ ದ್ರುಪದ.  ತನ್ನ ಪುತ್ರಿ ದ್ರೌಪದಿಯ ಸ್ವಯಂವರ ನಿಶ್ಚಯಿಸುತ್ತಾನೆ .   ಅವನು ಅವಳು ಜನಿಸಿದಾಗಲೇ ಅವಳನ್ನು ಅರ್ಜುನನಿಗೇ ಕೊಟ್ಟು ವಿವಾಹ ಮಾಡಬೇಕೆಂದು ನಿರ್ಣಯಿಸಿರುತ್ತಾನೆ.    ಆದರೆ ಪಾಂಡವರೆಲ್ಲ ಅರಗಿನ ಮನೆಯಲ್ಲಿ ದಹಿಸಿಹೋಗಿರುತ್ತಾರೆಂದು ನಂಬಲರ್ಹ ಮೂಲಗಳಿಂದ ಸುದ್ದಿ ಬಂದರೂ ನಂಬಿರಲಿಲ್ಲ.  ಪಾಂಡವರೆಲ್ಲೋ ಗೌಪ್ಯವಾಗಿ ನೆಲೆಸಿರುವರು ಎಂದು ನಂಬಿ ಶಿವನ ಅನುಗ್ರಹದಿಂದ ಧನಸ್ಸೊಂದನ್ನು ಪಡೆದು ಮತ್ಸ್ಯ ಯಂತ್ರ ಸೇರಿಸಬೇಕೆಂಬ ಶರತ್ತೊಂದಿಗೆ ಸ್ವಯಂವರ ಏರ್ಪಡಿಸಿದ.

ಇದರಲ್ಲಿ ಭಾಗವಹಿಸಲು ನೂರಾರು ರಾಜರು, ಯುವರಾಜರೂ ಆಗಮಿಸಿರುತ್ತಾರೆ.  ಏಕಚಕ್ರನಗರದಲ್ಲಿ  ಬಕಾಸುರನ ಸಂಹರಿಸಿದ ಪಾಂಡವರೂ ಧೌಮ್ಯಾಚಾರ್ಯರೊಂದಿಗೆ ಬ್ರಾಹ್ಮಣ ವೇಷದಲ್ಲಿ ಅಲ್ಲಿಗೆ ಆಗಮಿಸಿದರು.   ಸಹೋದರ ಧೃಷ್ಟದ್ಯುಮ್ನ ದ್ರೌಪದಿಗೆ ನೆರೆದಿದ್ದ ಎಲ್ಲಾ ಸ್ವಯಂವರಾಕಾಂಕ್ಷಿಗಳನ್ನೂ ಪರಿಚಯಿಸುತ್ತಾನೆ.  ದುರ್ಯೋಧನ, ಕರ್ಣ,  ಶಿಶುಪಾಲ, ಶಲ್ಯ, ಜರಾಸಂಧ,  ಮುಂತಾದ ಅತಿರಥ ಮಹಾರಥರ ದಂಡೇ ಅಲ್ಲಿ ನೆರೆದಿತ್ತು.
ಭೀಮಸೇನನಂತೆ ಭಾರತೀದೇವಿಯೂ ಕೂಡ ಭಾಗವತಧರ್ಮದಲ್ಲಿ ಸದಾ ನಿರತಳಾಗಿದ್ದಳು.
ದ್ರೌಪದಿಯು ಧರ್ಮರಾಜ ಜೂಜಿನಲ್ಲಿ ಸೋಲುಂಡ ಸಂದರ್ಭದಲ್ಲಿ ಧೃತರಾಷ್ಟ್ರನಿಂದ ವರ ಪಡೆದು ಪಾಂಡವರನ್ನು ವಿಮುಕ್ತಿಗೊಳಿಸಿದಳಲ್ಲ ಇದೂ ಕೂಡ ಭಾಗವತ ಧರ್ಮವೇ.  ಏಕೆಂದರೆ ಜೂಜಾಟವೇ ಅಧರ್ಮ.  ಆ ಜೂಜೂ ಕೂಡ ಕಪಟದಲ್ಲಿ ಸೋಲಿಸಿದ್ದು.  ವರವನ್ನು ಅವಳು ಕೇಳಲಿಲ್ಲ.  ಧೃತರಾಷ್ಟ್ರನೇ ಕೇಳೆಂದು ಹೇಳಿದ್ದು.  ಆದ್ದರಿಂದ ವರ ಕೇಳಿದ್ದು ಭಾಗವತ ಧರ್ಮಕ್ಕೆ ಚ್ಯುತಿ ಬರಲಿಲ್ಲ.
……. ಮುಂದುವರಿಯುವುದು……..

ಕಷ್ಟಗಳ, ಅವಮಾನಗಳ ಸರಮಾಲೆಯನ್ನು ಎದುರಿಸಿದ, ಪಾಂಡವರ ವನವಾಸಕಾಲದಲ್ಲಿ ಸಹಸ್ರಾರು ಬ್ರಾಹ್ಮಣರಿಗೆ ಭೋಜನ ನೀಡಿದವಳೂ, ಧರ್ಮನ ನೀತಿ,. ಭೀಮನ ಆಡಳಿತ, ಎಲ್ಲದರಲ್ಲೂ ಭಾಗಿಯಾಗಿ ಐದೂ ಜನ ಪತಿಯರಿಗೆ ಮಾರ್ಗದರ್ಶನ ನೀಡಿದ ಮಹಾ ಮಾತೆ ದ್ರೌಪದಿ.

……. ಮುಂದುವರಿಯುವುದು……..

Leave a Reply

Your email address will not be published. Required fields are marked *

Sumadhwa Seva © 2013