ಉಪಾಕರ್ಮ ಉತ್ಸರ್ಜನ

ಉಪಾಕರ್ಮ

 

*ಉಪಾಕರ್ಮ*  ಅಂದರೆ  *ಆರಂಭ* ಎಂದು ಅರ್ಥ.   ಇದನ್ನು ಜನಿವಾರದ  ಹುಣ್ಣಿಮೆ (ನೂಲು ಹುಣ್ಣಿಮೆ)  ಅಥವಾ ಜನಿವಾರದ ಹಬ್ಬವೆಂದು ಕೂಡ ಕರೆಯುತ್ತಾರೆ. ಉಪಾಕರ್ಮ ಹಬ್ಬವನ್ನು  ಶ್ರಾವಣ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ಸನಿಹದ ಶ್ರವಣ ನಕ್ಷತ್ರ ದಿನ ಋಗ್ವೆದಿಗಳೂ ಮತ್ತು ಹುಣ್ಣಿಮೆಯ ದಿನ ಯಜುರ್ವೇದಿಗಳೂ, ಸಾಮವೇದ ಉಪಾಕರ್ಮ ಭಾದ್ರಪದ ಮಾಸದ ಹಸ್ತಾ ನಕ್ಷತ್ರದ ದಿನವೂ ಆಚರಿಸುವ ಪರಿಪಾಠವಿದೆ.

*ಉಪಾಕರ್ಮ* ಎಂದರೇನು ?

ಉ: “ಉಪಾಕರ್ಮ” ಅಥವಾ ಉಪಕ್ರಮ ಎಂದರೆ ವೇದಾಧ್ಯಯನದ ಪ್ರಾರಂಭ.
.

*ಉತ್ಸರ್ಜನ* ಎಂದರೇನು ? ಅದರ ಕ್ರಿಯಾರ್ಥವೇನು ?

ಉ: ಅಧ್ಯಯನವನ್ನು ಮನನ ಮಾಡಿಕೊಳ್ಳುವದಕ್ಕಾಗಿ ಮಾಡುವ ತಾತ್ಕಾಲಿಕ ವಿರಾಮ.

*ಪ್ರಥಮೋಪಾಕರ್ಮ* ಎಂದರೇನು?

ಉ:- *ಪ್ರಥಮೋಪಾಕರ್ಮ* – ಉಪನಯನ ನಂತರ ಅಧ್ಯಯನ ಮಾಡಲು ಪ್ರಾರಂಭಿಸುವುದಕ್ಕೆ ಮೊದಲು ಅಗ್ನಿಕಾರ್ಯ ಹೋಮ  ಅಗ್ನಿ ಸನ್ನಿಧಿಯಲ್ಲಿ ವೇದಾಧ್ಯಯನಕ್ಕೆ ಆರಂಭಿಸಬೇಕು. ಇದನ್ನೇ *ಪ್ರಥಮೋಪಾಕರ್ಮ*  ಎನ್ನುತ್ತಾರೆ.  ಅದೇ ರೀತಿ ಮದುವೆಯಾದ ಮೊದಲ ವರ್ಷ  ಅವನ ಅತ್ತೆ ಮಾವಂದಿರು ಅಳಿಯನಿಗೆ ವೈಶ್ವದೇವ ಅಧಿಕಾರ ಬಂದ ಕುರುಹಾಗಿ ಮನೆಗೆ ಕರೆದು ಉಡುಗೊರೆ ಕೊಡುವ ಸಂಪ್ರದಾಯವಿದೆ.

 

 

ಯಜ್ಞೋಪವೀತದ ಅಧಿಪತಿ ದೇವತೆಗಳು

ಕೆಲವರು ಜನಿವಾರ ಕಡಿದುಹೋದರೆ ಅಂಗಡಿಗೆ ಹೋಗಿ ಜನಿವಾರ ಕೊಂಡು ಧರಿಸುವರು. ಆದರೆ ಜನಿವಾರಕ್ಕೆ ಸಾನ್ನಿಧ್ಯ ಬರಬೇಕಾದರೆ ಅದರಲ್ಲಿ ಹಲವಾರು ಅಧಿದೇವತೆಗಳ ಸಾನ್ನಿಧ್ಯವನ್ನು ತರಬೇಕು.

ಓಂಕಾರೋಗ್ನಿಶ್ಚ ನಾಗಶ್ಚ |
ಸೋಮಃ ಪಿತೃಪ್ರಜಾಪತೀ ||
ವಾಯುಃ ಸೂರ್ಯೋ ವಿಶ್ವೇದೇವಾ |
ಇತ್ಯೇತಾ ಸ್ತಂತುದೇವತಾಃ ||

1. *ಓಂ*ಕಾರ; 2. ಅಗ್ನಿ; 3. ನಾಗ; 4. ಸೋಮ (ಚಂದ್ರ);       5. ಪಿತೃ ದೇವತೆಗಳು; 6. ಪ್ರಜಾಪತಿ; 7. ವಾಯು;                8. ಸೂರ್ಯ;  9. ವಿಶ್ವೇದೇವತೆಗಳು.

 

ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಮೊದಲನೇ ಎಳೆ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳ ಪ್ರತೀಕವಾದರೆ, ಎರಡನೆಯ ಎಳೆ ದೇವ ಋಣ, ಪಿತೃ ಋಣ, ಋಷಿ ಋಣಿಗಳ ಪ್ರತೀಕವಾಗಿದೆ.
ಮೂರನೆಯ ಎಳೆ ಸತ್ವ ಗುಣ, ರಜೋ ಗುಣ, ತಮೋ ಗುಣಗಳ ಪ್ರತೀಕವಾಗಿದೆ.

ಯಜ್ಞೋಪವೀತ ಸಂಸೃತ ಪದ.  : ಯಜ್ಞ + ಉಪವೀತ.  ಯಜ್ಞೋಪವೀತ ಧಾರಣೆಯು ಬ್ರಾಹ್ಮಣತ್ವ ದೀಕ್ಷೆಯ ಸಂಕೇತ.

 

ಜನಿವಾರ ಧಾರಣೆ ಸಂಖ್ಯೆ :
ಬ್ರಹ್ಮಚಾರಿಗಳು ಒಂದು ಜನಿವಾರವನ್ನು ಮಾತ್ರಾ ಧರಿಸಬೇಕು.
ಗ್ರಹಸ್ಥರು / ವಿವಾಹಿತರು ಕನಿಷ್ಟ ಎರಡು ಜನಿವಾರ ಹಾಕಿಕೊಳ್ಳಬೇಕು; ಒಂದು ತನ್ನದು ಮತ್ತೊಂದು ದ್ವಿಜತ್ವದ ಸೂಚಕ

ಕೆಲವರು ಮೂರು ಜನಿವಾರ ಧರಿಸುತ್ತಾರೆ. ಯಾವುದೇ ಧಾರ್ಮಿಕ ಕ್ರಿಯೆ ಮಾಡುವಾಗ , ಹಿರಿಯರಿಗೆ ವಂದನೆ ಮಾಡುವಾಗ , ಹೆಗಲ ಮೇಲೆ ಉತ್ತರೀಯ(ಶಾಲು) ಇರಬೇಕೆಂಬುದು ಒಂದು ರೂಢಿಯಲ್ಲಿರುವ ಧಾರ್ಮಿಕ ನಿಯಮ; ಆದ್ದರಿಂದ ಉತ್ತರೀಯವಿಲ್ಲದಿದ್ದರೂ, ಅದಕ್ಕೆ ಲೋಪ ಬರದಂತೆ ಉತ್ತರೀಯದ ಬದಲಾಗಿ ಒಂದು ಹೆಚ್ಚನ ಜನಿವಾರ ಧರಿಸುತ್ತಾರೆ. ಆದರೆ ತಂದೆಯಿದ್ದವರು ಅಥವಾ ಜ್ಯೇಷ್ಠ ಭ್ರಾತಾ ಇದ್ದವರು ಮೂರನೇ ಜನಿವಾರ ಧರಿಸುವ ಅವಶ್ಯಕತೆ ಇಲ್ಲ,

ಕೆಲವು ಗೃಹಸ್ತರು ನಾಲ್ಕು ಜನಿವಾರ ಧರಿಸುವುದೂ ಉಂಟು. ಜನಿವಾರ ಹರಿದರೆ ಆದಷ್ಟು ಬೇಗ ಬರುವ ಅಪರಾಹ್ನದೊಳಗೆ ಹೊಸ ಜನಿವಾರ ಹಾಕಿಕೊಳ್ಳಬೇಕು. ಆದ್ದರಿಂದ ನಾಲ್ಕು ಜನಿವಾರ ಧರಿಸಿದರೆ ಒಂದು ಜನಿವಾರ ಅಕಸ್ಮಾತ್ ಹರಿದರೆ ಅದೊಂದು ಜನಿವಾರ ತೆಗೆದರೆ ಲೋಪವಾಗುವುದಿಲ್ಲ; ಬೇಗ ಪುನಃ ಹೊಸ ಜನಿವಾರ ಹಾಕಿಕೊಳ್ಳುವ ಅವಸರ-ಅಗತ್ಯವೂ ಇರುವುದಿಲ್ಲ. ಆದ್ದರಿಂದ ಕೆಲವರು ಮುಂಜಾಗ್ರತಾ ಕ್ರಮವಾಗಿ ನಾಲ್ಕು ಜನಿವಾರ ಹಾಕಿಕೊಳ್ಳುವರು.

ಉಪಾಕರ್ಮದ ದಿನ ಎಲ್ಲರೂ ಯಮ ತರ್ಪಣ ಕೊಡಬೇಕು,  ಮತ್ತು  ತರ್ಪಣಾದಿಕಾರಿಗಳು ದ್ವಾದಶ ಪಿತೃಗಳಿಗೆ ತರ್ಪಣ ಕೊಡತಕ್ಕದ್ದು

ಜನಿವಾರ ಹಳೆಯದಾದರೆ, ಅಥವಾ ಹರಿದರೆ ಅದನ್ನು ವಿಸರ್ಜಿಸಿ ಕೂಡಲೇ ಹೊಸ ಜನಿವಾರವನ್ನು ಧರಿಸಬೇಕು.

ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ | ಆಯುಷ್ಯಮಗ್ರಂ ಪ್ರತಿಮುಂಚ ಶುಭ್ರಂ ಯಜ್ಞೋಪವೀತಂ ಬಲಮಸ್ತು ತೇಜಃ ||

ಅರ್ಥ: ಯಜ್ಞೋಪವೀತ ಪರಮ ಪವಿತ್ರವಾದದ್ದು, ಪ್ರಜಾಪತಿಗೂ ಪೂರ್ವದಲ್ಲೇ ಉತ್ಪನ್ನಗೊಂಡಿದ್ದು, ಆಯುಷ್ಯವನ್ನು ಹೆಚ್ಚಿಸುವಂತದ್ದು, ಮನುಷ್ಯನನ್ನು ಶುಭ್ರ ಮಾಡುವಂತದ್ದು, ನಮ್ಮ ಬಲ ಹಾಗೂ ತೇಜಸ್ಸನ್ನು ಹೆಚ್ಚಿಸುವಂತದ್ದು. ಹಾಗಾಗಿ ಯಜ್ಞೋಪವೀತ ಧಾರಣೆಗೆ ಒತ್ತು ನೀಡಲಾಗಿದೆ.

*ಯಜ್ಞೋಪವೀತದ ನಿಯಮಗಳು* :– ಮಲ, ಮೂತ್ರಗಳನ್ನು ವಿಸರ್ಜಿಸುವಾಗ ಜನಿವಾರವನ್ನು ಬಲಗಿವಿಯ ಮೇಲೆ ಹಾಕಿ ಕೊಳ್ಳ ಬೇಕು. ಕೈ, ಕಾಲುಗಳನ್ನು ತೊಳೆದು ಶುಚಿಯಾದ ಬಳಿಕವಷ್ಟೇ ಅದನ್ನು ಪುನಃ ಸರಿ ಮಾಡಿಕೊಳ್ಳಬೇಕು. ಏಕೆಂದರೆ ಯಜ್ಞೋಪವೀತ ಸೊಂಟದ ಭಾಗಕ್ಕಿಂತ ಮೇಲಿದ್ದರೆ ಅಶುಚಿ ಆಗುವುದಿಲ್ಲ. ಯಜ್ಞೋಪವೀತದ ಎಳೆ ತುಂಡಾದರೆ ತಕ್ಷಣ ಬದಲಿಸಬೇಕು. ತುಂಡಾಗಿರುವ ಜನಿವಾರವನ್ನು ಧರಿಸಬಾರದು. ಯಜ್ಞೋಪವೀತ ಹಳೆಯದಾದರೆ ಆದಷ್ಟು ಬೇಗ ಅದನ್ನು ಬದಲಿಸಬೇಕು. ಜನ್ಮ ಹಾಗೂ ಮರಣದ ಸೂತಕದ ನಂತರ ಯಜ್ಞೋಪವೀತವನ್ನು ಬದಲಿಸಬೇಕು. ಯಜ್ಞೋಪವೀತವನ್ನು ಶರೀರದಿಂದ ಹೊರಗೆ ತೆಗೆಯಬಾರದು. ಯಜ್ಞೋಪವೀತವನ್ನು ಸ್ವಚ್ಛ ಮಾಡ ಬೇಕೆಂದರೆ ಕತ್ತಿನಲ್ಲಿ ಧರಿಸಿ ತೊಳೆಯ ಬಹುದು. ಸಂಸ್ಕೃತಿಯಲ್ಲಿ ವಿಶೇಷ ಮಹತ್ವವನ್ನು ನೀಡಲಾಗಿದೆ

*ಉಪಾಕರ್ಮದ ಸತ್ವದ ಹಿಟ್ಟು*

ಉಪಾಕರ್ಮದ ದಿನ ಸಿದ್ಧಪಡಿಸುವ ವಿಶೇಷವಾದ ಪ್ರಸಾದವೇ ಸತ್ವದ ಹಿಟ್ಟು. ಪೂಜೆಗೆ ಬಂದವರೆಲ್ಲರೂ ತಂದಿದ್ದ ಬಗೆ ಬಗೆಯ ಅಕ್ಕಿ ಹಿಟ್ಟು, ಬೆಲ್ಲ, ಜೇನುತುಪ್ಪಾ, ಹಾಲು, ಮೊಸರು, ತುಪ್ಪಾ ಜೊತೆಗೆ ಕಾಯಿ ತುರಿ ಸೇರಿಸಿ ಹದವಾಗಿ ಬೆರೆಸಿದರೆ ಸತ್ವದ ಹಿಟ್ಟು ಸಿದ್ಧವಾಗುತ್ತದೆ. ಅದನ್ನು “ಓಂ” ಎಂದು ಹೇಳುತ್ತಾ ಹಲ್ಲಿಗೆ ಸ್ಪರ್ಶವಾಗದಂತೆ ನುಂಗಬೇಕು.

ಉಪಾಕರ್ಮ ದಿವಸ ಹಿಂದೆ ಕಲಿತ ವಿದ್ಯೆಯನ್ನು ವೇದವ್ಯಾಸ ದೇವರಿಗೆ ಸಮರ್ಪಿಸಿ, ಮುಂದೆ ವಿಧಿವತ್ತಾಗಿ ವೇದವನ್ನು ಅಧ್ಯಯನ ಮಾಡಲು ಪ್ರಾರಂಭಿಸುವುದು. ಉಪನಯನ ನಂತರದಲ್ಲಿ ಮೊಟ್ಟ ಮೊದಲು ವೇದಾಧ್ಯಯನಕ್ಕೆ ಪ್ರಾರಂಭಿಸುವುದು ಪ್ರಥಮೋಪಾಕರ್ಮ. ಅಧ್ಯಯನ ಮಾಡಲು ಪ್ರಾರಂಭಿಸುವುದಕ್ಕೆ ಮೊದಲು ಹೋಮಮಾಡಿ ಅಗ್ನಿ ಸನ್ನಿಧಿಯಲ್ಲಿ ವೇದಾಧ್ಯಯನಕ್ಕೆ ಆರಂಭಿಸಬೇಕು.

ಶ್ರಾವಣ ಮಾಸದ ಹುಣ್ಣಿಮೆ ದಿನ ಯಜುರ್ವೇದಿಗಳೂ, ಮತ್ತು ಶ್ರಾವಣ ಮಾಸದ ಶ್ರವಣ ನಕ್ಷತ್ರದಲ್ಲಿ ಋಗ್ವೇದಿಗಳೂ ಉಪಾಕರ್ಮ ಮಾಡಿಕೊಳ್ಳುವ ಸಂಪ್ರದಾಯ ಇದೆ

Sumadhwa Seva © 2022