ವಿದ್ಯೇಶತೀರ್ಥರ ರಚನೆ

ಎದ್ದು ಬೇಗ ಬಾರೋ ರಂಗ

ರಾಗ – ಮೋಹಿನಕಲ್ಯಾಣಿ. ಆದಿತಾಳ

ರಚನೆ – ಪೂಜ್ಯ ಶ್ರೀ ವಿದ್ಯೇಶತೀರ್ಥರು
(ಭಂಡಾರಕೇರಿ ಮಠ)

ಎದ್ದು ಬೇಗ ಬಾರೋ ರಂಗ
ಮುದ್ದಿಸುವೆ ನಿನ್ನ ಚೆನ್ನ
ಕದ್ದು ಗೋಪಿ ವಸನವನ್ನು
ಸುದ್ದಿ ಸುಗ್ಗಿಗೆ ದಾರಿಮಾಡಿದಿ ! ಪಲ್ಲವಿ!

ಕಾಮವಿಲ್ಲದ ಕೌಮಾರದಲ್ಲಿ
ಶ್ಯಾಮ ನಿನ್ನ ವಸನಾಪಹಾರ
ಭಾಮೆಯ ನಗ್ನ ದೃಷ್ಟಿಕಾಮದಿ
ಕಾಮಚೇಷ್ಟೆವೆನಿಸದಯ್ಯ ! 1 !

ಪಿನದ್ಧವಲ್ಲದ ಕಾಯದಲ್ಲಿ
ನಿಷಿದ್ಧ ಸ್ನಾನದಿ ಕೆಟ್ಟ ವ್ರತವ
ವಿಶುದ್ಧ ಮಾಡಿದೆ ಅವಧೂತಸ್ತ್ರೀಯರ
ನಿಬದ್ದಾಂಜಲಿ ಮಾನ್ಯರಾಗಿ ರಂಗ ! 2 !

ಒದ್ದೆ ಮಾಡದ ವಸನವನ್ನು
ಕದ್ದು ಶುದ್ಧ ಮಾಡಿ ನೀಡಿ
ಶುದ್ಧ ವಸನ ವನಿತೆಯರ
ಕದ್ದೆ ಮಾಯಾ ವಸನವನ್ನು ! 3 !

ಕರ್ಮದ ಈ ದಿವ್ಯ ಮರ್ಮವನು
ಧರ್ಮ ಭಕುತಿ ಶೂನ್ಯನರಿಯ
ಮರ್ಮವರಿತು ಭಜಿಸಲು
ಭವ ಘರ್ಮ ತಾಪ ಕಳೆವನು
ವರ್ಮ ವಿದ್ಯಾ ಗೀತ ವೈಭವ
ಶರ್ಮ ಸಿರಿ *ವಿದ್ಯೇಶ ವಿಠಲ*
ಧರ್ಮ ವೀರ ಪ್ರಾಣದೇವನ
ಶಿಷ್ಯರಿದಕೆ ಸಾಕ್ಷಿ ರೂಪರು ! 4 !

ವೀಡಿಯೋಗಾಗಿ ಕ್ಲಿಕ್ ಮಾಡಿ

https://m.facebook.com/story.php?story_fbid=119345963165032&id=100052688873412

 

Leave a Reply

Your email address will not be published.

Sumadhwa Seva © 2022