ನಿನ್ನಾಧೀನ ನಿನ್ನಾಧೀನ

ವಿಜಯದಾಸರ ಕೃತಿ

ನಿನ್ನಾಧೀನ ನಿನ್ನಾಧೀನ -. ಇಲ್ಲಿ ಪರಮಾತ್ಮನ ಸರ್ವೋತ್ಕೃಷ್ಟತೆ ಮತ್ತು ಜೀವರ ಅಸ್ವಾತಂತ್ರವನ್ನೂ ವರ್ಣಿಸಿದ್ದಾರೆ.

ನಿನ್ನಾಧೀನ ದೇಹ ಪ್ರಾಣೇಂದ್ರಿಯ ಕಾರ್ಯಾಚರಣೆ
ನಿನ್ನಾಧೀನ ಜ್ಞಾನ ಇಚ್ಛೆ ಪ್ರಯತ್ನ ಪರಿಪರಿ
ನಿನ್ನಾಧೀನ ಬುದ್ಧಿ ಮತಿ ಧೈರ್ಯ ಕೀರ್ತಿ ಶಕ್ತಿ
ನಿನ್ನಾಧೀನ ಜಪ ತಪೋದಾನ ಧ್ಯಾನನಿದಾನಾ
ನಿನ್ನಾಧೀನ ಭಯ ನಿರೋಗ ಯೋಗ ಭೋಗ
ನಿನ್ನಾಧೀನ ಉಕುತಿ ಯುಕುತಿ ಭಕುತಿ ಮುಕುತಿ
ನಿನ್ನಾಧೀನ ವೈರಾಗ್ಯ ಭಾಗ್ಯ ವಸನ ಭೂಷಣ
ನಿನ್ನಾಧೀನ ದೇಶ ಕೋಶ ಓದು ಮಾಧುರ್ಯ
ನಿನ್ನಾಧೀನ ಬಾಲ್ಯ ಯೌವನ ವಾರ್ಧಿಕ್ಯ
ನಿನ್ನಾಧೀನ ಇಷ್ಟಾನಿಷ್ಟ ಪಾಪ ಪುಣ್ಯ
ನಿನ್ನಾಧೀನ ಪ್ರಕೃತಿ ಕಾಲ ವೇದ ಜೀವರು
ನಿನ್ನಾಧೀನ ಅಮಿಶ್ರ ಮಿಶ್ರಾತತ್ವ ತತ್ಪದಾರ್ಥ
ನಿನ್ನಾಧೀನ ಕಾರ್ಯ ಕಾರಣ ಕಾರ್ಯ ಸಂಗತಿ
ನಿನ್ನಾಧೀನ ನಾನಾ ವ್ಯಾಪಾರ ವ್ಯಕ್ತಾವ್ಯಕ್ತ
ನಿನ್ನಾಧೀನ ಯಾವತ್ತು ಬೊಮ್ಮಾಂಡ
ನಿನ್ನಾಧೀನ ಅನಂತಾನಂತ ಕಲ್ಪ ಕಲ್ಪಾ
ನಿನ್ನಾಧೀನ ನಿನ್ನಾಧೀನ ನಿನ್ನಾಧೀನ
ಒಂದೊಂದು ಎರಡೆ ಏನೆಂದು ಪೇಳಲಿ
ಎನ್ನೊಶವಲ್ಲ ಎಲೊ ದೇವರ ದೇವ
ಪನ್ನಗಶಯನ ವಿಜಯವಿಠ್ಠಲ
ಬಣ್ಣಿಸಲಾರೆನೊ ಭಕುತವತ್ಸಲ ||

ಇಲ್ಲಿ ಭಗವಂತನ ಪಾರಮ್ಯವನ್ನೂ, ಜೀವರ ಅಸ್ವಾತಂತ್ರವನ್ನೂ – ನಿನ್ನಾಧೀನ ಎಂಬ ಪದದಿಂದಲೇ ನಾವು ಕ್ಷಣಕ್ಷಣವೂ ಅನುಸಂಧಾನ ಮಾರ್ಗವನ್ನು ಹೇಳಿದ್ದಾರೆ. “ನಂದೇನದೋ ಸ್ವಾಮಿ ಎಲ್ಲವೂ ನಿಂದಲ್ಲದೆ” ಎಂದು ಬಲಿ ಚಕ್ರವರ್ತಿ ಸಮರ್ಪಿಸಿದಂತೆ ಸಮರ್ಪಣಾ ಮನೋಭಾವದಿಂದ ಚಿಂತಿಸಬೇಕು.

ಸಂಗ್ರಹ – ನರಹರಿ ಸುಮಧ್ವ

Sumadhwa Seva © 2022