ಒಂದು ಕೈಯಲ್ಲಿ ಖಡ್ಗ – ಉಗಾಭೋಗ

 

ಒಂದು ಕೈಯಲಿ ಖಡ್ಗ,            ಒಂದು ಕೈಯಲಿ ಹಲಿಗೆ
ಅಂದವಾಗಿ ಪಿಡಿದು ದಿವಾರಾತ್ರಿಯಲಿ
ಬಂದು ಬದಿಯಲಿ ನಿತ್ಯ ಬಾರಾಸನನಾಗಿ
ಹಿಂದು ಮುಂದುಪದ್ರವಾಗದಂತೆ
ಇಂದಿರೇರಮಣ ಕಾಯುತ್ತಲಿರೆ, ಎನಗಾವ
ಬಂಧಕಗಳಿಲ್ಲ ಧನ್ಯ ಧನ್ಯ
ಕಂದರ್ಪನಯ್ಯ ಸಿರಿವಿಜಯವಿಠಲರೇಯ
ಎಂದೆಂದಿಗಾಪತ್ತು ಬರಲೀಯನೋ ||

ಉಡುಪಿಗೆ ಹೋಗುವ ಹಾದಿಯಲ್ಲಿ ಮಂಡಗಡ್ಡಿ ಭೀಮನೆಂಬ ಕಳ್ಳನು ಜನರನ್ನು ಸುಲಿಗೆ ಮಾಡಿ ಉಪದ್ರವ ಕೊಡುತ್ತಿದ್ದನು. ಶ್ರೀ ಗೋಪಾಲದಾಸರು ಉಡುಪಿಗೆ ಹೊರಟಿದ್ದನ್ನು ತಿಳಿದ ಶ್ರೀ ವಿಜಯದಾಸರು ದೇವರನ್ನು ಪ್ರಾರ್ಥಿಸಿ ಈ ಕೃತಿಯನ್ನು ರಚಿಸಿದರು.    ಗೋಪಾಲದಾಸರಿಗೆ ಹಾದಿಯಲ್ಲಿ ಮಂಡಗಡ್ಡೆ ಗ್ರಾಮದ ಬಳಿ ಆ ಭೀಮನು ಬಂದು ದಾಸರನ್ನು ದೋಚಲು ಬಂದಾಗ ಅವರ ಸುತ್ತಲೂ ಖಡ್ಗ ಹಿಡಿದು ರಕ್ಷಕರು ಇದ್ದುದನ್ನು ನೋಡಿದನು.  ಇನ್ನೂ ಮುಂದೆ ಹೋಗಿ ಆ ಭೀಮನು ದಾಸರನ್ನು ಸುಲಿಯಲು ಮುಂದೊಂದು ದೇವಸ್ಥಾನದ ಬಳಿ ಮತ್ತೆ ಬಂದನು. ಆಗಲೂ ಗೋಪಾಲದಾಸರ ಬಳಿ ಖಡ್ಗ ಹಿಡಿದು ರಕ್ಷಕರು ಇದ್ದರು.  ಆಗ ಮುಂದೆ ಹೋಗಿ ಮತ್ತೊಮ್ಮೆ ಬಂದಾಗಲೂ ಖಡ್ಗಧಾರಿಗಳು ಗೋಪಾಲದಾಸರ ಬಳಿ ಇದ್ದರು. ಕಡೆಗೆ ಮಂಡಗಡ್ಡೆ ಭೀಮನು ಶರಣಾಗಿ ಉದ್ಧರಿಸಿರೆಂದು ಕೋರಿದ.   ಇದಕ್ಕೆ ಕಾರಣ ವಿಜಯದಾಸರು ಮುಂದಾಲೋಚನೆ ಮಾಡಿ ರಚಿಸಿದ್ದ ಕೃತಿ – ಒಂದು ಕೈಯಲ್ಲಿ ಖಡ್ಗ” ವನ್ನು ಗೋಪಾಲದಾಸರು ಹೇಳಿಕೊಳ್ಳುತ್ತಿದ್ದರು.

ಶ್ರೀಹರಿಯೇ ಗೋಪಾಲದಾಸರನ್ನು ರಕ್ಷಿಸುತ್ತಿದ್ದರು.  ಇದು ವಿಜಯದಾಸರ ಕೃತಿಯ ಚಮತ್ಕಾರ.

 

ಈ ಸ್ತುತಿಯಲ್ಲಿ ಶ್ರೀವಿಜಯದಾಸರು, ನಿತ್ಯದಲ್ಲಿ ಯಾವುದೇ ಸಂಕಷ್ಟಗಳು ಬಂದಾಗ, ದುಃಖ ಉಂಟಾದಾಗ, ದುಃಸ್ವಪ್ನಗಳು ಆಗುತ್ತಿರುವಾಗ ಪಠಿಸುತ್ತಾ ಇದ್ದರೆ, ಎಲ್ಲ ತಾಪಗಳು ಶೀಘ್ರದಲ್ಲಿ ಪರಿಹಾರವಾಗುತ್ತವೆ. ಕೇವಲ ಕನ್ನಡ ಪದ ಎಂದು ಅನ್ಯಥಾ ತಿಳಿಯಕೂಡದು, ಪ್ರಾಕೃತ ಭಾಷಾ ಸ್ತುತಿಯಾಗಿದ್ದರೂ ಸಹ ಇದು ಮಂತ್ರತುಲ್ಯ ಮತ್ತು ಅಮೋಘ ಫಲಕಾರಿಯಾಗಿರುತ್ತದೆ. ಪಾರಾಯಣದಿಂದ ಯಾರೂ ಇದರ ಅನುಭವವನ್ನು ಪಡೆಯಬಹುದು. ಬಹಳ ಭಯಪಡುವವರಿಗೆ, ಮೇಲಿಂದ ಮೇಲೆ ದುಃಸ್ವಪ್ನಗಳು ಆಗುತ್ತಿರುವವರಿಗೆ ಈ ಪ್ರಾರ್ಥನೆ ವಿಶೇಷ ಫಲಕಾರಿ.

 

Sumadhwa Seva © 2022