ಪುರಂದರದಾಸರ ಉಗಾಭೋಗ 2

ಪುರಂದರದಾಸರ ಉಗಾಭೋಗ 2

 

 

ಬಿಡು ಮನುಜಾ ಈ ಜಪವು ಸಿದ್ಧಿಗೆ ಬಾರದು
ತೊಡೆಯ ಕೆಳಗೆ ಕೈ ಹಿಂದೆ ಮುಂದೆ ಕೈ ಚಾಚಿ
ಬಿಡುತ ಮಂತ್ರಾರ್ಥ ನೋಡದೆಲೆ
ಅಡಿಗಡಿಗೆ ಜಪವ ಮಾಡೆ
ದೈತ್ಯರಿಗೆ ಅಹುದಯ್ಯ
ಒಡೆಯ ಪುರಂದರವಿಠಲನನೊಲಿಸಬೇಕಾದರೆ
ಹಿಡಿಯೋ ಈ ಪರಿ ಹೇಳಿದ ವಚನ ತತ್ತ್ವಗಳ

ಬ್ರಹ್ಮಾಡವದೆಲ್ಲ ರೋಮ ಕೂಪದೊಳಿರಲು
ಅಮ್ಮಾ ಅಮ್ಮಾ ಎನುತ ಅಮ್ಮೆಯ ಬೇಡುತಿಹೆ
ಹೆಮ್ಮಕ್ಕಳು ನಗರೆ ಬ್ರಹ್ಮಾದಿಗಳು
ಮೊಮ್ಮಕ್ಕಳು ನಗರೆ ರುದ್ರಾದಿಗಳು
ಮರಿಮಕ್ಕಳು ನಗರೆ ಮಿಕ್ಕ ಸುರರೆಲ್ಲ
ರಮ್ಮೆಯರಸ ಸಿರಿಪುರಂದರವಿಠಲ

ಬೆಟ್ಟದಂಥ ದುರಿತವು ಸುತ್ತಮುತ್ತಲೊಟ್ಟಿರೆ
ಶ್ರೀಕೃಷ್ಣನಾಮ ಕಿಡಿಬಿದ್ದು, ಬೆಂದು ಹೋದದು ಕಂಡೆ
ಎಲೆ ಎಲೆ ದುರಿತವೆ ತಿರುಗಿ ನೋಡದೆ ಹೋಗು
ಎಲೆ ಎಲೆ ದುರಿತವೆ ಮರಳಿ ನೋಡದೆ ಹೋಗು
ನಿನ್ನ ಕಂಡರೆ, ಶಿರವ ಚಂಡಾಡುವನು
ಇನ್ನೊಮ್ಮೆ ಕಂಡರೆ, ಶಿಕ್ಷಿಸದೆ ಬಿಡನು
ಪುಂಡರೀಕಾಕ್ಷ ನಮ್ಮ ಪುರಂದರವಿಠಲ

ಬೆನಕನ ನಾ ನೊಲ್ಲೆನವ್ವ ಕುಲುಕಿ ನಡೆವವನ
ಷಣ್ಮುಖನನೊಲ್ಲೆನವ್ವ ಮೈಯೆಲ್ಲ ಕಣ್ಣಿನವನ
ಚಂದ್ರನ ನಾನೊಲ್ಲೆನವ್ವ ಕಳೆಹೀನನಾದವನ
ರವಿಯ ನಾನೊಲ್ಲೆನವ್ವ ಉಲಿದು ಮೂಡುವನ
ಹರನ ನಾನೊಲ್ಲೆನವ್ವ ಮರುಳುಗೊಂಬುವನ
ಧರೆಗತಿ ಚೆಲುವನು ಜಗಕೆಲ್ಲ ಒಡೆಯನು
ತಂದು ತೋರೆ ನಮ್ಮ ಪುರಂದರವಿಠಲ

ಬೆಲ್ಲದ ಕಟ್ಟೆಯ ಕಟ್ಟಿ, ಬೇವಿನ ಬೀಜವ ಹಾಕಿ
ಹಾಲುಮಳೆಗರೆದರೂ ವಿಷ ಹೋಗಬಲ್ಲದೇ?
ಏನು ಓದಿದರೇನು, ಏನು ಕೇಳಿದರೇನು
ಮನದೊಳು, ಮದ, ಅಹಂಕಾರವು ಮಾಣದ ತನಕ
ಏನು ಓದಿದರೇನು, ಏನು ಕೇಳಿದರೇನು
ಪುರಂದರವಿಠಲನ ದಾಸರ ಒಲಿಸದೆ
ಏನು ಓದಿದರೇನು, ಏನು ಕೇಳಿದರೇನು?

ಬೇಡುವ ಕಷ್ಟಕ್ಕಿಂತ ಸಾವುದೇ ಕಡುಲೇಸು
ಬೇಡುವರಿಗೆ ಒಬ್ಬರೊಡೆಯರುಂಟೆ?
ಗೂಡು ಕಿರಿದು ಮಾಡಿ, ಬಲಿಯ ದಾನವ ಬೇಡಿ
ನಾಡೊಳಗೆ, ಸ್ಥೂಲಸೂಕ್ಷ್ಮವು ನೀನಾದೆ
ಬೇಡುವ ಕಷ್ಟವನು, ನೀನೇ ಬಲ್ಲಿ ಕೃಷ್ಣ
ಬೇಡದಂತೆಲೆಮಾಡೊ ಪುರಂದರವಿಠಲ

ಭಾಗೀರಥಿಯ ನೀಂಟಿದವರುಂಟೆ
ಸಾಗರವಾಪೋಶನಕೊಂಡಪರುಂಟೆ
ನಾಗಾಭರಣವ ಮಾಡಿದವರುಂಟೆ
ಪುರಂದರವಿಠಲನಲ್ಲದೆಲೆ

ಭಾರತಮಲ್ಲ ಭೀಮನೆಂತೆಂಬರು
ಭಾರತಮಲ್ಲ ಕರ್ಣನೆಂತೆಂಬರು
ಭಾರತಮಲ್ಲ ಅರ್ಜುನನೆಂತೆಂಬರು
ಭಾರತಮಲ್ಲ ದುರ್ಯೋಧನನೆಂತೆಂಬರು
ಭಾರತಮಲ್ಲ ಇವರು ಅವರು ಅಲ್ಲ
ಭಾರತಮಲ್ಲ ಗದುಗಿನ ವೀರನಾರಾಯಣ
ಪುರಂದರವಿಠಲನೊಬ್ಬನೇ ಕಾಣಿರೋ

ಮಧ್ಯಾಂಗುಲಿಮ್ಯಾಲೆ ಮಣಿಸರವಿಟ್ಟು
ಬದ್ಧ ಅಂಗುಟವೆಣಿಸಬೇಕು
ತಿದ್ದಿ ಅಂಗುಲಿ ಪಂಚ ಬೊಗ್ಗಿಸಿ ಇರಬೇಕು
ಭದ್ರವಾಗಿ ನಿಲಿಸಿ ನೀರು ಸೋರದೆ, ಗಾಯತ್ರಿ
ಬುದ್ಧಿಪೂರ್ವಕದಿಂದ ಗೈಯುತ್ತಲಿರಬೇಕು
ಮುದ್ದು ಮೂರುತಿ ನಮ್ಮ ಪುರಂದರವಿಠಲನ್ನ
ಎದ್ದೆದ್ದು ನೋಡುವ ಬಗೆ, ಕಾಣಲಿಬೇಕು

ಮನದ ಚಂಚಲದಿ ತಪ ಮಾಡಲು ಅಶಕ್ಯವು
ಘನ ಅಜ್ಞಾನದಿ ಸತ್ಕರ್ಮಗಳು ಹತ್ತವು
ಧನಶುದ್ಧಿ ಇಲ್ಲದೆ ದಾನವು ವ್ಯರ್ಥವು
ಇನಿತಾದ್ದರಿಂದ ಈ ಯುಗದಿ ಪುರಂದರ-
ವಿಠಲನ ನಾಮಸ್ಮರಣೆಯೇ ಲೇಸು ಲೇಸು ಕಾಣ

ಮನದಭಿಮಾನಿ ಮಹಾರುದ್ರನ ಭಜಿಸಲು
ಅನವರತ ಶ್ರೀಹರಿಯ ಆರಾಧಿಸುವುದಕ್ಕೆ
ಮನಶುದ್ಧಿಯನೀವ ಮತಿ ಕೊಡುವ
ಮನುಜೋತ್ತಮರು ಕೇಳಿ ಮನಕೆ ಪ್ರೇರಕನವನು
ವನಜಾಕ್ಷ ಪುರಂದರವಿಠಲನ ಒಲುಮೆಗೆ
ಮನಸು ಕಾರಣವಲ್ಲದೆ ಮಿಗಿಲಾವುದು

ಮನೆಯಲ್ಲಿ ವಿಪ್ರಪಾದೋದಕದ ಹೆಸರಿಲ್ಲದಿದ್ದರೆ
ಮನೆಯಲ್ಲಿ ವೇದ ಶಾಸ್ತ್ರಧ್ವನಿ ಗರ್ಜಿಸದಿದ್ದರೆ ಮತ್ತೆ
ಮನೆಯಲ್ಲಿ ಸ್ವಾಹಾಕಾರ ಸ್ವಧಾಕಾರ ಮಾಡುವದಿಲ್ಲದಿದ್ದರೆ
ಆ ಮನೆ ಸ್ಮಶಾನಕೆ ಸಮವೆಂಬ ಪುರಂದರವಿಠಲ

 

ಜಗವು ನಿನ್ನೊಳಗೆ ನೀನು ಎನ್ನೊಳಗೆ
ಜಗಕೆ ಬಲ್ಲಿದ ನೀನು ನಿನಗೆ ಬಲ್ಲಿದ ನಾನು
ಜಗವ ಸುತ್ತಿಹುದೆಲ್ಲ ಮಾಯೆಯಯ್ಯ
ನಿನ್ನ ಸುತ್ತಿಹುದೆಲ್ಲ ಎನ್ನ ಮಾಯೆಯಯ್ಯ
ಕರಿಯು ಕನ್ನಡಿಯೊಳು ಅಡಗಿಹತೆರನಂತೆ
ನೀ ಎನ್ನೊಳು ಆದಗಿರೋ ಪುರಂದರವಿಠಲ

ಜಯ ಜಯಾ ಹರಿಯೆಂಬುದೆ ಸುದಿನೌ
ಜಯ ಹರಿಯೆಂಬುದೇ ತಾರಾಬಲವು
ಜಯ ಹರಿಯೆಂಬುದೆ ಚಂದ್ರಬಲವು
ಜಯ ಹರಿಯೆಂಬುದೆ ವಿದ್ಯಾಬಲವ್ಬು
ಜಯ ಹರಿಯೆಂಬುದೆ ದೈವಬಲವು
ಜಯ ಹರಿ ಪುರಂದರವಿಠಲನ ಬಲವೈಯ್ಯ ಸುಜನರಿಗೆ

ಜೀವ ಜೀವಕೆ ಭೇದ, ಜಡಜಡಕೆ ಭೇದ
ಜೀವ ಜಡ ಪರಮಾತ್ಮನಿಗೆ ಭೇದ
ಜೀವ ಜೀವ ಮುಕ್ತಾಮುಕ್ತರ ಭೇದ
ಸಂಸಾರದೊಳು ಭೇದ, ಮುಕ್ತರೊಡೆಯ
ಹರಿಭಕ್ತಾರಾಧೀನ ಜಗತ್ಕರ್ತ
ನೀ ಸಲಹಯ್ಯ ಪುರಂದರವಿಠಲ

ತನ್ನ ತಾನರಿಯದಾ ಜ್ಞಾನವೇನೋ
ಚೆನ್ನ ಶ್ರೀ ಪುರಂದರವಿಠಲನ ನೆನೆಯದವನು
ಸನ್ಯಾಸಿಯಾದರೇನು
ಷಂಡನಾದರೆ ಏನು?

ತಪ್ಪು ರಾಶಿಗಳ ಒಪ್ಪಿ ಕಾಯೊ ಕೃಪಾಳು
ಮುಪ್ಪುರವನಳಿದಂಥ ಮುನೀಂದ್ರವಂದ್ಯ
ಅಪ್ರಮೇಯನೇ ನಿನ್ನ ಅದ್ಭುತಮಹಿಮೆಗಳ
ಅಪ್ಪುನಿಧಿಯಲ್ಲಿ ಪುಟ್ಟಿದವಳು ಬಲ್ಲಳೆ?
ಕಪ್ಪು ಮೇಘಕಾಂತಿಯೊಪ್ಪುವ ತಿಮ್ಮಪ್ಪ
ಅಪ್ರಾಕೃತ ರೂಪ ಪುರಂದರವಿಠಲ

ತಂದೆ ನೀ ತಂದೆ, ನಾ ಬಂದೆ
ಕಾಮದಲಿ ತಂದೆ, ಕ್ರೋಧದಲಿ ನೀ ತಂದೆ
ತಾಮಸ ಕಡು ಯೋನಿಯಲಿ ನೀ ತಂದೆ, ನಾ ಬಂದೆ
ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕಲ್ಲ
ಎಂಭತ್ತ ನಾಲ್ಕು ಲಕ್ಷ ಯೋನಿಯಲ್ಲಿ
ನೀ ತಂದೆ, ನಾ ಬಂದೆ
ಹಿಂದಿನ ಜನ್ಮ ಹೇಗಾದರಾಗಲಿ
ಮುಂದೆನ್ನ ಸಲಹೋ ಪುರಂದರವಿಠಲ

ತಂಬೂರಿ ಮೀಟಿದವ, ಭವಾಬ್ಧಿ ದಾಟಿದವ
ಗೆಜ್ಜೆಯ ಕಟ್ಟಿದವ, ಖಳರೆದೆಯ ಮೆಟ್ಟಿದವ
ತಾಳವ ತಟ್ಟಿದವ, ಸುರರೊಳು ಸೇರಿದವ
ಗಾಯನ ಪಾಡಿದವ, ವೈಕುಂಠಕೆ ಓಡಿದವ
ಪುರಂದರವಿಠಲನ್ನ ಧ್ಯಾನವ ಮಾಡಿದವ
ಹರಿ ಮೂರ್ತಿ ನೋಡಿದವ

ತಾಯಿ ಗೋಪಿಯಂತೆ ನಿನ್ನ ಒರಳನೆಳಸಲಿಲ್ಲ
ವಾಲಿಯಂತೆ ಎದುರು ವಾದಿಸುತಿರಲಿಲ್ಲ
ಭೃಗುಮುನಿಯಂತೆ ನಿನ್ನ ಎದೆಯ ತುಳಿಯಲಿಲ್ಲ
ಭೀಷ್ಮನಂತೆ ನಿನ್ನ ಹಣೆ ಒಡೆಯಲಿಲ್ಲ
ಕೊಂಕಣದ ಎಮ್ಮೆಗೇ ಕೊಡತಿಯೇ ಮದ್ದೆಂದು
ಅವರೇ ಮದ್ದು ನಿನಗೆ ಪುರಂದರವಿಠಲ

ತಿಂಬಲು ಅನ್ನ ಹುಟ್ಟಲಿಬೇಡ
ಅನ್ನ ಹುಟ್ಟಿದರೆ ಬಟ್ಟೆ ದೊರಕಲಿಬೇಡ
ಬಟ್ಟೆ ದೊರಕಿದರೆ ಇಂಬು ತೋರಲಿಬೇಡ
ಇಂಬು ನಿನ್ನ ಪಾದಾರವಿಂದದಲಿ
ಸಂತೋಷ ತೋರಿಸಯ್ಯ
ಇಂದಿರಾರಾಧ್ಯ ಶ್ರೀ ಪುರಂದರವಿಠಲ

ತುಳಸಿಯ ಸ್ವರ್ಣಪುಷ್ಪ ತೊಡಿಗೆ ನವರತ್ನದ
ಬಿಲ್ವಪತ್ರಿಯ ಮುತ್ತು ಬೆಡಗಿನಾಭರಣ
ತಲೆ ಬಾಗಿ ಅಡಿಗಡಿಗಡಿಗೆ ಶೃಂಗರಿಸಿ
ವಿಲಸಿತ ಪುರಂದರವಿಠಲಗರ್ಪಿಸಬೇಕು

ತ್ರಿವಿಧ ಜೀವರಿಹರು ಜಗದೊಳಗೆ
ಭವ ವಿಮೋಕ್ಷ ಅವರವರ ಗತಿಗಳು
ಜೀವ ಜೀವರಿಗೆ ಭೇದ, ಜೀವ ಜಡರಿಗೆ ಭೇದ
ಜಡಜಡಕೆ ಭೇದ, ಜಡಪರಮಾತ್ಮಂಗೆ ಭೇದ
ಇಂತು ಜ್ಞಾನವು ನಿತ್ಯವಾಗಲೆಂದು
ಸಂತತವರದ, ಶ್ರೀಪತಿ ಪುರಂದರವಿಠಲರೇಯ
ಇಂತು ಜ್ಞಾನವು ನಿತ್ಯವಾಗಲಿ ಎನಗೆ

ದರಿದ್ರರೆನಬಹುದೇ ಹರಿದಾಸರ
ಸಿರಿವಂತರೆನಬಹುದೇ ಹರಿದ್ರೋಹಿಗಳ
ಹರಿದಾಸರ ಮೇಲಿದ್ದ ಕರುಣವು
ಸಿರಿದೇವಿಯ ಮೇಲಿಲ್ಲವು
ಪುರಂದರವಿಟ್ಟಲನಾಳ್ಗಳ್ಗೆ
ಎಲ್ಲಿಹುದೈ ಮಾನ, ಅಭಿಮಾನ ಜಗದಿ

ದಾಸನಾಗುವುದಕ್ಕೆ ಏಸೇಸು ಜನ್ಮದ ಸುಕೃತ
ರವಿಕೋಟಿ ಭಾಸುರ, ಶ್ರೀಶ ಸುಗುಣವಂತ
ನಾಶರಹಿತ ನಿನ್ನ ದಾಸರ ದಾಸ್ಯವ
ಲೇಸಾಗಿ ಕೊಡುಕಂಡ್ಯ ಪುರಂದರವಿಠಲ

ದಾಸನಾದವನಿಗೆ, ವೈಕುಂಠಲೋಕದಿ ವಾಸ
ದಾಸನಾಗದವನೆಲ್ಲಿ ಪೋದರಾಭಾಸ
ದಾಸನೆಂದೆನಿಸಿದ ಭಾರತಿಯ ಗಂಡ
ಸತ್ಯಲೋಕವನಾಳ್ವ ಶೌಂಡ
ದಾಸರ ಹೃದಯದಿ ಮಿನುಗುವ ಶ್ರೀಶವಾಸ್ವಾದಿವಂದ್ಯ
ದ್ವಿಸಾಶಿರಂಬಕ ಶರಣ್ಯ
ದಾಸರಿಗೊಲಿವ ಶ್ರೀಪುರಂದರವಿಠಲ

ದಿನದಿನದಿ ನೆನೆದು ನೆನೆದು, ತೋದು ತೋದು
ಜನ್ಮ ವ್ಯರ್ಥವಾಯಿತು, ಒಂದೇ ಹರಿಗೋಲು ವೈಕುಂಠಕೆ
ನಿನ್ನವಧಾನವು ಕಂಡಿಲ್ಲ ಹರಿ
ಆದಿ ಮೂರುತಿ ಶ್ರೀಪುರಂದರವಿಠಲ
ನಿನ್ನವಧಾನವು ಕಂಡಿಲ್ಲ
ನಿನ್ನ ಪಾದತೀರಥದಲಿ ನಡೆಯಲಿ ಎನ್ನ ಮನ

ನಕ್ಷತ್ರಸೂಸಿ ಕಂಡ ನರಗೆ, ಉತ್ತಮ ಸಂಧ್ಯಾ
ನಕ್ಷತ್ರ ಒಂದರೆ ಕಂಡನರಗೆ, ಮಧ್ಯಮ ಸಂಧ್ಯಾ
ನಕ್ಷತ್ರ ದೂರ ಕಾಣದ ನರಗೆ, ಅಧಮ ಸಂಧ್ಯಾ
ನಕ್ಷತ್ರ ಬಿಟ್ಟರೆ, ನಾರಾಯಣ ಪುರಂದರವಿಠಲ ಬಿಡುವ

ನರವೃಂದವೆಂಬೋ ಕಾನನದಲ್ಲಿ ಶ್ರೀ-
ಹರಿ ನಾಮವೆಂಬಂಥಾ ಕಲ್ಪವೃಕ್ಷ ಹುಟ್ಟಿತಯ್ಯ
ನೆರಳು ಸೇರಲುಂಟು ಫಲವು ಮೆಲ್ಲಲುಂಟು
ಒರೆವ ನಾಲಗೆಯಲಿ ನಾಮತ್ರಯಂಗಳುಂಟು
ಇದೇ ಮುನಿಜನರ ಮನೆಯ ಕೊನೆಯ ಠಾವೊ
ಇದೇ ಬ್ರಹ್ಮಾದಿಗಳ ಸದಮಲ ಹೃದಯ ಪೀಠ
ಇದೇ ದ್ವಾರಾವತಿ ಇದೇ ಕ್ಷೀರಾಂಬುಧಿ
ಇದೇ ಪುರಂದರವಿಠಲನ ವೈಕುಂಠ ಮಂದಿರ

ನವರತ್ನಗಳು ಕಂಡಾ ಕಂಡ ಠಾವಿನಲ್ಲಿ ಉಂಟೆ?
ನವವಿಧಭಕುತಿ, ಕಂಡ ಕಂಡವರಿಗುಂಟೆ?
ದೇವ ನಿನ್ನ ಭಕುತಿ ಸುಖಾನುಭವ ಸೂರೆ
ಕಂಡರೆ ಬಾರದು, ಕಲಿತರೆ ಬಾರದು
ಪುರಂದರವಿಠಲ ನಿನ್ನ ದಯವಾಗದನಕ

ನಾರದಮುನಿ ನಿಮ್ಮ ನೆನೆವನಲ್ಲದೆ
ನಾಡುಗಳೆಷ್ಟು ಕೊಟ್ಟನು ಹೇಳಯ್ಯ?
ಪ್ರಹ್ಲಾದನು ನಿನಗೆ ಏನು ಕೊಟ್ಟನು ಸ್ವಾಮಿ?
ನಾನೇನು ಕೊಡದೆ ಹೋದೆನು ಹೇಳಯ್ಯ?
ಅಂದಿನವರಿಗೆ ನೀನು ಏನಾದರೂ ಕೊಟ್ಟದ್ದಿದ್ದು
ಇಂದೇನು ದೊರಕದೆ ಹೋಯಿತೆ?
ಅಂದು ನೀ ಸಿರಿವಂತನೆ – ಇಂದು ನೀ ಬಡಾವನೇ?
ಇದು ಏನು ವಿಚಿತ್ರ ಪುರಂದರವಿಠಲ

ನಿನ್ನ ಕಾಲ ಹೆಜ್ಜೆಯ ಪಿಡಿದು ನಾನಿಲುವೆ
ನಿನ್ನ ಪಂಜು ಹಿಡಿದು ಒಡ್ಡಿ ಬೊಬ್ಬಿಡುವೆ
ನಿನ್ನ ಛತ್ರಚಾಮರ ಪಿಡಿದೇಳುವೆ
ನೀರ ನೀವಳಿಸಿಕೊಂಡು ಕೊಬ್ಬುವೆನು
ಬಿಡೆನು ಬಿಡೆನು ನಿನ್ನ ಚರಣಕಮಲವ
ಪುರಂದರವಿಠಲ ನಿನ್ನ ಪಾದವ ಬಿಡೆನು

ನಿನ್ನ ದಾಸನು ಆಗಿ, ನಿನ್ನ ಎಂಜಲನುಂಡು
ಅನ್ಯ ದಾಸನಾದರೆ, ಲೋಕ ನಗರೆ?
ನಿನ್ನ ಚರಣ ಯುಗ್ಮವ ಪಿಡಿಸಿ
ಎನ್ನ ಕಾಯೋ ಪುರಂದರವಿಠಲ

 

ನಿನ್ನ ನಾಮದ ಭಂಡಾರ ಕದ್ದ ಕಳ್ಳ ನಾನು
ನಿನ್ನ ಭಕ್ತಿಯೆಂಬೊ ಸಂಕಲೆಯ ಹಾಕಿ
ನಿನ್ನ ದಾಸರ ಕೈಯ್ಯ ಎನ್ನ ಒಪ್ಪಿಸಿಕೊಟ್ಟು
ನಿನ್ನ ಮುದ್ರಿಕೆಯಿಂದ ಘಾಸಿ ಮಾಡಿಸೋ ಕೃಷ್ಣ
ನಿನ್ನ ವೈಕುಂಠದುರ್ಗದಲ್ಲಿ, ಎನ್ನ ಸೆರೆಯಿಟ್ಟು
ಚೆನ್ನಾಗಿ ಸಲಹೋ ಶ್ರೀಪುರಂದರವಿಠಲ

ನಿನ್ನ ನುಡಿದೆ ನಾನು, ನಿನ್ನ ಪಾಡಿದೆ ನಾನು,
ನಿನ್ನ ಕಾಡಿದೆ ನಾನು, ನಿನ್ನ ಮುಂದೆ ಎನ್ನ ಬಡತನ ಪೇಳಿಕೊಂಡು
ಅನಂತ ಬಗೆಯಿಂದ ಕೊಂಡಾಡುವೆನು ವಿಠಲ
ಎನ್ನ ಭಾರ ನಿನ್ನದು, ಅನಂತಕ್ಷಣಕೆ
ಮುನ್ನಿ ಪೇಳುವದೆಲ್ಲ, ಉಪಚಾರವೋ ಸ್ವಾಮಿ
ಘನ್ನ ಪಂಡಾರಿರಾಯಾ, ರನ್ನ ಪ್ರಸನ್ನ
ಸಂಪನ್ನಮತಿಯ ಕೊಡು ಪುರಂದರವಿಠಲ

ನಿನ್ನಾಳೆಂದಳೆ ಹರಿಯೆ ಇನ್ನೇನಿನ್ನೇನು
ಎನ್ನೊಳಿದ್ದವ ನೀನಾದೆ
ನಿನ್ನ ದಾಸ ನಾನಾದೆ
ಇನ್ನು ಸಾಕದಿರಲು ನಗರೇ ನಿನ್ನ ದಾಸರು
ಘನ್ನ ಮಹಿಮ ಪುರಂದರವಿಠಲರೇಯ

ನಿನ್ನನೆ ಪಾಡುವೆ ನಿನ್ನನೆ ಪೊಗಳುವೆ
ನಿನ್ನನೆ ಬೇಡಿ ಬೇಸರಿಸುವೆನಯ್ಯ
ನಿನ್ನ ಕಾಲನು ಪಿಡಿವೆ, ನಿನ್ನ ಹಾರಯಿಸುವೆ
ನಿನ್ನ ತೊಂಡರಿಗೆ ಕೈಗೊಡುವೆ
ನಿನ್ನಂತೆ ಸಾಕಬಲ್ಲವನು ಇನ್ನುಂಟೆ
ಘನ್ನ ಪುರಂದರವಿಠಲ ದೇವರ ದೇವ

ನಿನ್ನ ಬೊಮ್ಮ ಮೂರುತಿಗೆ ನಮೋ ನಮೋ
ನಿನ್ನ ರುದ್ರ ಮೂರುತಿಗೆ ನಮೋ ನಮೋ
ನಿನ್ನ ಇಂದ್ರ ಮೂರುತಿಗೆ ನಮೋ ನಮೋ
ನಿನ್ನ ಚಂದ್ರ ಮೂರುತಿಗೆ ನಮೋ ನಮೋ
ನಿನ್ನ ಸ್ಥಾವರ ಮೂರುತಿಗೆ ನಮೋ ನಮೋ
ನಿನ್ನ ಜಂಗಮ ಮೂರುತಿಗೆ ನಮೋ ನಮೋ
ನಿನ್ನ ಶ್ರೀ ಮೂರುತಿಗೆ ನಮೋ ಪುರಂದರವಿಠಲ

ನಿನ್ನ ಭಕ್ತರೆಂದೆನಿಸಿದ ಜನರು ಭಂಗಪಡಲುಬೇಕು
ದಿನಂಪ್ರತಿ ಅನ್ನ ಉದಕ ವಸ್ತುಗಳು ಕಾಣದೆ ಇರಬೇಕು
ಬೆನ್ಹತ್ತಿ ರೋಗಗಳು ಹತ್ತಿ ಇರಲು ಬೇಕು
ತನ್ನವರ ಕೈಯಿಂದ ಛೀ ಎನಿಸಿಕೊಳ್ಳಬೇಕು
ಪನ್ನಗಶಯನ ಶ್ರೀ ಪುರಂದರವಿಠಲ

ನಿನ್ನ ಮೆಲ್ಲಡಿ, ಈರಡಿ ಮಾಡಿತು
ನಿನ್ನ ಉಂಗುಟವು, ಬ್ರಹ್ಮಾಂಡ ನುಂಗಿತು
ನಿನ್ನ ನಖ, ಸುರನಧಿಯ ತಂದಿತು
ನಿನ್ನ ಕರ, ಮಧುಕೈಟಭರನೊರಸಿತು
ನಿನ್ನ ಸರಿತೋಳು, ಶ್ರೀ ಲಕುಮಿಯನಪ್ಪಿತು
ನಿನ್ನ ಪಾದದ ನೆನಹೆ,
ಸಕಲ ಸಂಪದ ಪುರಂದರವಿಠಲ

ನಿನ್ನಂಥ ತಂದೆ, ಎನಗುಂಟು ನಿನಗಿಲ್ಲ
ನಿನ್ನಂಥ ಸ್ವಾಮಿ, ಎನಗುಂಟು ನಿನಗಿಲ್ಲ
ನಿನ್ನಂಥ ದೊರೆ, ಎನಗುಂಟು ನಿನಗಿಲ್ಲ
ನೀನೇ ಪರದೇಶಿ, ನಾನೇ ಸ್ವದೇಶಿ
ನಿನ್ನ ಅರಸಿ ಲಕ್ಷ್ಮೀ, ಎನಗೆ ತಾಯಿಯುಂಟು
ಎನಗಿದ್ದ ತಾಯಿ ತಂದೆ ನಿನಗ್ಯಾರು
ತೋರೋ ಪುರಂದರವಿಠಲ

ನಿತ್ಯ ಪತಿಭಾವ ಶ್ರೀ ಲಕುಮುದೇವಿಗಯ್ಯ
ನಿತ್ಯ ಪುತ್ರಭಾವ ಬೊಮ್ಮಪ್ರಾಣರಿಗೆ
ನಿತ್ಯ ಪೌತ್ರಭಾವ ಗರುಡ ಶೇಷ ರುದ್ರರಿಗೆ
ನಿತ್ಯ ಭೃತ್ಯಭಾವ ಇಂದ್ರ ಕಾಮ ಆತ್ಮ ಜೀವರಿಗೆ
ಇಂತೆಂದ ಪುರಂದರವಿಠಲ

ನಿನಗೆ ನೀನೇ ಮೋಹ
ನಿನಗೆ ನೀನೇ ಪ್ರೀತಿ
ನಿನಗೆ ನೀನೇ ಭಕ್ತ
ನಿನಗೆ ನೀನೇ ದ್ವೇಷಿ
ನಿನಗೆ ನೀನೇ ಜ್ಞಾನಿ
ನಿನಗೆ ನೀನೇ ಮಾಳ್ಪೆ ಪುರಂದರವಿಠಲ

ನೀನೇ ಕರ್ತನು, ಅಕರ್ತರು ಅಜಭವೇಂದ್ರಾದ್ಯಮರರು
ನೀನೇ ಸ್ವತಂತ್ರ, ಅಸ್ವತಂತ್ರರವರು
ನೀನೇ ಸಾರಾತ್ಮಕನಾಗಿ ಸ್ವೀಕರಿಸುವವ
ಜ್ಞಾನ ನಿನ್ನಧೀನ ಕರ್ಮ ನಿನ್ನಧೀನ
ಅನಾದಿಕಾಲದಿ ಇರುವ ಜೀವರಿಗೆ
ನೀನೇ ಸುಖವನೀವ, ನೀನೇ ದು:ಖವನೀವ
ಜೀವ, ಕರ್ಮ, ಜ್ಞಾನ ಅನಾದಿಗಳು ನಿನ್ನಧೀನವಯ್ಯ
ಅನಾದಿಕರ್ಮ ನೀನೇ ಪುರಂದರವಿಠಲ
ನೀನೇ ಸಲಹೋ ನಿನ್ನಡಿ ಪೊಂದಿದವರ

ನೀರಡಿಸಿ ಜಾಹ್ನವಿಯ ತೀರದಲಿ ಬಂದು
ಭಾವಿಯ ನೀರ ಕುಡಿಯುವ ಮಾನವರುಂಟೆ?
ಹರಿಯ ಸಿರಿಚರಣವಿರಲು
ಬರಡು ದೈವಗಳನ್ನೇಕೆ ಭಜಿಸುವೆ ಮನವೇ?
ಸಿರಿರಮಣ ಬೇಲೂರ ಚೆನ್ನಿಗರಾಯ
ಪುರಂದರವಿಠಲನಿರಲು ಬರಡು ದೈವಗಳನ್ನೇಕೆ ಭಜಿಸುವೆ

ನೀರಮೇಲಣ ಗುಳ್ಳೆಯಂತೆ ಈ ದೇಹ
ನಿಮಿಷವೋ ನಿಮಿಷಾರ್ಧವೋ ಕಾಣಬಾರದು
ಹಾರಲೇಕೆ ಪರಧನಕೆ ಪರಸತಿಗೆ?
ಹಾರುವನ ಕಟ್ಟಬೇಕು ಹಾರುವನ ಕುಟ್ಟಬೇಕು
ಹಾರುವನ ಕಂಡರೆ ಕೆನ್ನೆಯ ಮೇಲೆ ಹಾಕಬೇಕು
ಹಾರಲೇಕೆ ಪರಧನಕೆ ಪರಸತಿಗೆ
ಊರೊಳಗೆ ಐದು ಮಂದಿ ಹಾರುವರೈದಾರೆ
ನೀನೇ ವಿಚಾರಿಸಿಕೋ ಪುರಂದರವಿಠಲ

ನುಡಿವೆ, ಲಿಂಗ ಶೌಚಕ್ಕೊಮ್ಮೆ ಗುದಕ್ಕೆ ಮೂರು
ನೆಲ್ಲಿಕಾಯಿಯಷ್ಟು ಮಣ್ಣು ನಿಲಿಸಿ ನೀರೊಳು
ತೊಳೆದು ಬಲಗೈಗೆ ಐದು ಮಣ್ಣು
ಎಡಗೈಗೆ ಏಳುಮಣ್ಣು
ಜೋಡುಪಾದಕ್ಕೆ ಐದೈದು ಮಣ್ಣು
ಐದುಕಡೆಯೊಳಿಟ್ಟು ಪುರಂದರವಿಠಲ ಎನ್ನು

ನೆನಿಯೆ ಮನವನಿತ್ತೆ ಪೊಗಳೆ ನಾಲಿಗೆ ಇತ್ತೆ
ಬೆಲೆಯಿಲ್ಲದನಂತ ನಾಮಗಳಿತ್ತೆ ನೋಡುವ ಕಂಗಳನಿತ್ತೆ
ಕೇಳೆ ಕಿವಿಗಳನಿತ್ತೆ ಪರಿಚರಿಯವ ಮಾಡಲು ತನುವನಿತ್ತೆ
ವೃದ್ಧಿ ಯೌವನವಿತ್ತೆ ಹರಿದಿನವನಿತ್ತೆ
ಇನ್ನು ನಿನ್ನ ಕರುಣಕೆ ಸರಿಯುಂಟೆ ಪುರಂದರವಿಠಲ

ನೋಡಿದರೆನ್ನೊಡೆಯನ ನೋಡುವೆ
ಪಾಡೆದರೆನ್ನೊಡೆಯನ ಪಾಡುವೆ
ಬೇಡಿದರೆನ್ನೊಡೆಯನ ಬೇಡುವೆ
ಕಾಡಿದರೆನ್ನೊಡೆಯನ ಕಾಡುವೆ
ಒಡೆಯಗೆ ಒಡಲನು ತೋರುವೆ
ಎನ್ನ ಬಡತನವ ಬಿನ್ನಹ ಮಾಡುವೆ
ಒಡೆಯ ಶ್ರೀ ಪುರಂದರ ವಿಠಲನ
ಅಡಿಗಳ ಸಾರಿ ಬದುಕುವೆ ಸೇರಿ ಬದುಕುವೆ.

ಪರರನ್ನ ಉಂಡ ಬ್ರಾಹ್ಮಣರಿಗೆ
ಇರದು ಮಾಡಿದ ಶುಭಕರ್ಮ
ಎರಡು ಮೂರು ಭಾಗ ಅನ್ನವಿತ್ತವನಿಗಯ್ಯ
ಉದರದಲಿ ಉಂಡ ಅನ್ನದೊಂದು ಭಾಗವುಳಿವುದು
ಪೊಡವಿಯಲಿ ಪುರಂದರವಿಠಲನು ಬಲ್ಲ

ಪರರ ಮನೆಯ ಬಾಗಿಲ ಕಾಯ್ದು ಪರಿತಪಿಸುವುದಕ್ಕಿಂತ
ಮರಣವೇ ಲೇಸು ಸಿರಿದೇವಿರಮಣ
ಪರರ ಮನಸು ಹಿಡಿದು ತಿರಿತಿಂಬುವುದಕ್ಕಿಂತ
ಮುರಹರನ ದಾಸರ ಮನೆಯ ಭೋಜನವೇ ಲೇಸು
ಪುರಂದರವಿಠಲ, ನಿನ್ನ ಊಳಿಗದವನ ಸುಖ ಲೇಸು

ಪಾತಕರೊಳಗೆಲ್ಲ ನಾನು ವೆಗ್ಗಳನಯ್ಯ
ಪ್ರಾಯಶ್ಚಿತ್ತದಲಿ ನಿನ್ನ ನಾಮ ವೆಗ್ಗಳವಯ್ಯ
ಪಾತಕವ ನಾ ಮಾಡಿದೆನು ಪ್ರಾಯಶ್ಚಿತ್ತವ ನೀಡು
ಇನ್ನೇತರ ಭಯವಯ್ಯ ಪುರಂದರವಿಠಲ

.ಪಾಂಡುತನಯನಂತೆ ಕರೆದು ನಿನ್ನ
ಅಟ್ಟು ಮಾಣಿಗೆ ಮಣೆಯ ಹಾಕಿಕ್ಕಬೇಕು
ಅರ್ಜುನನಂತೆ ನಿನ್ನ ಬಂಡಿಯ ಬೋವನ
ಮಾಡಿ ಕುದುರೆ ಲಗಾಮು ಹಿಡಿಸಲಿಬೇಕು
ಅಹಾ ಅನುದಿನ ಅರ್ಚಿಸಿ ಪೂಜಿಸಿ
ಮೋಸ ಹೋದೆ ಸ್ವಾಮಿ ಪುರಂದರವಿಠಲ

ಪುಟ್ಟುವ ಭೀತಿ ಪೊಂದುವ ಭೀತಿ
ವಿಠಲನಂಘ್ರಿಯ ನೆನೆಯದವರಿಗೆ
ಪಾಪದ ಭೀತಿ, ನಿರಯದಭೀತಿ ಶ್ರೀ
ಗೋಪಾಲನ ದಾಸನಾಗದವರಿಗೆ
ಕಾಲನ ಭೀತಿ ಕರ್ಮದ ಭೀತಿ ಶ್ರೀ-
ಲೋಲನ ಒಮ್ಮೆ ನೆನೆಯದವಗೆ
ಅತಳದಲ್ಲಿರಿಸೋ, ಸುತಳದಲ್ಲಿರಿಸೋ
ತಳಾತಳ ಪಾತಾಳದಲ್ಲಿರಿಸೋ
ಮತ್ತಾವಯೋನಿಯಲ್ಲಿರಿಸೋ
ಎಲ್ಲಿರಿಸಿದರೂ ನಾ ಹೋಹೆನಯ್ಯ
ಎಂತೆಂತು ನಡೆದು ನಡೆಸಿಕೊಂಬುವೆ
ಅಂತಂತು ನಡೆಯುವೆ ಶ್ರೀ ಪುರಂದರವಿಠಲ

ಪೊಕ್ಕಳಲಿ ಗಂಡು ಪಡೆದವರುಂಟೆ?
ಅಂಗುಟದಲ್ಲಿ ಪೆಣ್ಣ ಪೆತ್ತವರುಂಟೆ?
ಮಿಕ್ಕಾದ ದೇವರಿಗೆ ಈ ಸೊಬಗು ಉಂಟೆ?
ಮೊರೆ ಹೊಕ್ಕೆ, ಮೊರೆ ಹೊಕ್ಕೆ ಕಾಯಯ್ಯ ಪುರಂದರವಿಠಲ

ಪ್ರಪನ್ನ ರಕ್ಷಕ, ನೀನು ಪಾಲಿಸೊ, ನಿನ್ನವನು ನಾನು
ಉಪಸಾಧನವರಿಯೆನು, ಒಮ್ಮೆ ನಿನ್ನ ನೆನೆವೆನು
ಅಪರಾಧಿಗಾದಡೇನು, ಅಭಯಪ್ರದನು ನೀದು
ವಿಪರೀತ ಮಾಡದೆನ್ನನು, ಪುರಂದರವಿಠಲ ನಂಬಿದೆನೊ

ಬಲಿಯ ಮನೆಗೆ ವಾಮನ ಬಂದಂತೆ
ಭಗೀರಥಗೆ ಶ್ರೀ ಗಂಗೆ ಬಂದಂತೆ
ಮುಚುಕುಂದಗೆ ಶ್ರೀ ಮುಕುಂದ ಬಂದಂತೆ
ವಿದುರನ ಮನೆಗೆ ಶ್ರೀಕೃಷ್ಣ ಬಂದಂತೆ
ವಿಭೀಷಣನ ಮನೆಗೆ ಶ್ರೀರಾಮ ಬಂದಂತೆ
ನಿನ್ನ ನಾಮವು ಎನ್ನ ನಾಲಿಗೆಯಲಿ ಬಂದು
ನಿಂದಿರಲಿ ಶ್ರೀಪುರಂದರವಿಠಲ

ಬಲಿಯಂತೆ ಮುಕುಟವ ಕದ್ದು ಕೊಂಡೋಡಬೇಕು
ವಾಲಿಯಂತೆ ನಿನ್ನ ಮೂದಲಿಸಬೇಕು
ಸುಗ್ರೀವನಂತೆ ನಿನ್ನ ಲೆಕ್ಕಿಸದಿರಬೇಕು
ಪುರಂದರವಿಠಲ ನಿನ್ನ ನಂಬಿರಬೇಕು

ಬಾರಿಬಾರಿಗೆ ನಿನ್ನ ಚರಣಕ್ಕೆ ಶರಣೆಂಬೆ
ಭಾರತೀರಮಣನೇ ಬಾರೋ ಮನೆಗಿಂದು
ಶ್ರೀಪುರಂದರವಿಠಲರಾಯನೆ
ಎಂದೆಂದಿಗೂ ನೀನೇ ಜಗಕೆ ಬಂಧು

 

 

 

 

 

Leave a Reply

Your email address will not be published.

Sumadhwa Seva © 2022