ಅಂಧಕನನುಜನ ಕಂದನ

ಅಂಧಕನನುಜನ ಕಂದನ 

 

ಕನಕದಾಸರ ವಿಶಿಷ್ಟ ಶೈಲಿಯೆಂದರೆ ಅವರು ಬಳಸುವ ಪದ ಸಾಹಿತ್ಯದಿಂದ ಹಲವಾರು ಕಥೆ ನೆನಪಿಸುವುದು.

ಮಂಗಲಂ ಜಯ ಮಂಗಲಂ ಮಂಗಲಂ ಜಯ ಮಂಗಲಂ

ಅಂಧಕನನುಜನ ಕಂದನ ತಂದೆಯ ಕೊಂದನ ಶಿರದಲಿ ನಿಂದವನ
ಚೆಂದದಿ ಪಡೆದನ ನಂದನೆಯಳನೊಲವಿಂದದಿ ಧರಿಸಿದ ಮುಕುಂದನಿಗೆ | ೧ |

ರಥವನಡರಿ ಸುರಪಥದಲಿ ತಿರುಗುವ ಸುತನಿಗೆ ಶಾಪವನಿತ್ತವನ
ಖತಿಯನ್ನು ತಡೆದನ ಸತಿಯ ಜನನಿ ಸುತ ಸತಿಯರನಾಳಿದ ಚತುರನಿಗೆ | ೨ |

ಹರಿಯ ಮಗನ ಶಿರ ಹರಿದನ ತಂದೆಯ ಹಿರಿಯ ಮಗನ ತಮ್ಮನ ಪಿತನ
ಭರದಿ ಭಕ್ಶಿಸುವನ ಶಿರದಲಿ ನಟಿಸಿದ ವರಕಾಗಿನೆಲೆಯಾದಿಕೇಶವರಾಯಗೆ |೩ |

ಮಂಗಲಂ ಜಯ ಮಂಗಲಂ ಮಂಗಲಂ ಜಯ ಮಂಗಲಂ !!

————–

ಅಂಧಕನನುಜನ ಕಂದನ ತಂದೆಯ ಕೊಂದನ ಶಿರದಲಿ ನಿಂದವನ
ಚೆಂದದಿ ಪಡೆದನ ನಂದನೆಯಳನೊಲವಿಂದದಿ ಧರಿಸಿದ ಮುಕುಂದನಿಗೆ | ೧ |

ವಿವರಣೆ:.
*ಅಂಧಕನ* – ಧೃತರಾಷ್ಟ್ರನ
*ಅನುಜನ* – ಅನುಜ ಪಾಂಡುವಿನ
*ಕಂದನ* – ಕಂದನಾದ ಯುಧಿಷ್ಠಿರನ
*ತಂದೆಯ* – ಪಿತ ಯಮಧರ್ಮನ
*ಕೊಂದನ* – ಕಾರ್ಯವನ್ನು ತಡೆದ ಶಿವನ (ಮಾರ್ಕಂಡೇಯನ ಎಳೆದೊಯ್ಯಲು ಬಂದ ಯಮನ ವಾಪಸ್ಸು ಕಳುಹಿದ ಶಿವ)
*ಶಿರದಲಿ ನಿಂದವನ* – ತಲೆಯಲ್ಲಿ ಆಶ್ರಿತ ಚಂದ್ರನ
*ಚಂದದಿ ಪಡೆದನ* – ಸಮುದ್ರಮಥನದಿ ಪಡೆದ ಸಮುದ್ರರಾಜನ (ವರುಣನ)
ನಂದನೆಯಳನು – ಪುತ್ರಿ ಲಕ್ಷ್ಮೀ ದೇವಿಯ
ಒಲವಿಂದದಿ – ಒಲವಿನಿಂದ
ಧರಿಸಿದ ಮುಕುಂದನಿಗೆ – ವಿವಾಹವಾದ ಮುಕುಂದ ಶ್ರೀಹರಿಗೆ ಮಂಗಲಂ|

ಇಲ್ಲಿ ನೇರವಾಗಿ ಮುಕುಂದನಿಗೆ ಮಂಗಳವೆನ್ನಬಹುದಿತ್ತು.   ಆದರೆ ಇಲ್ಲಿ ಮಾರ್ಕಂಡೇಯನ ಚಿರಂಜೀವಿತ್ವ ನೀಡಲು ಶಿವನ ಕಾರ್ಯ, ಸಮುದ್ರಮಥನದಿ ಜನಿಸಿದ ಲಕ್ಷ್ಮೀದೇವಿಯ ಸ್ತುತಿ, ವಿವರಿಸಿ ಮುಕುಂದನಿಗೆ ಮಂಗಳವೆಂದಿದ್ದಾರೆ.

ರಥವನಡರಿ ಸುರಪಥದಲಿ ತಿರುಗುವ ಸುತನಿಗೆ ಶಾಪವನಿತ್ತವನ
ಖತಿಯನ್ನು ತಡೆದನ ಸತಿಯ ಜನನಿ ಸುತ ಸತಿಯರನಾಳಿದ ಚತುರನಿಗೆ | ೨ |

*ರಥವನಡರಿ ಸುರಪಥದಿ ತಿರುಗುವ* – ಸುರಮಾರ್ಗದಿ ಮೇರುಪರ್ವತವ ಸುತ್ತುವ ಸೂರ್ಯನ
*ಸುತನಿಗೆ* – ಕರ್ಣನಿಗೆ
*ಶಾಪವನಿತ್ತವನ* – ಪರಶುರಾಮನ
*ಖತಿಯನು ತಡೆದನ* – ದರ್ಪವನ್ನು ತಡೆದ (ಲೋಕದೃಷ್ಟಿಯಿಂದ ದರ್ಪ ತೋರಿದ ಪರಶುರಾಮ) ರಾಮನ
*ಸತಿಯ* – ಸೀತಾದೇವಿಯ
*ಜನನಿ* – ಭೂಮಾತೆಯ
*ಸುತ* – ನರಕಾಸುರನ
*ಸತಿಯರನಾಳಿದ ಚತುರನಿಗೆ* – ಬಳಿಯಿರಿಸಿಕೊಂಡಿದ್ದ  ೧೬೧೦೦ ನಾರಿಯರ ವಿವಾಹವಾದ ಶ್ರೀಕೃಷ್ಣನಿಗೆ |
ಮಂಗಲಂ

ಇಲ್ಲಿ ಪರಶುರಾಮಾವತಾರ, ಕರ್ಣನಿಗೆ ಶಾಪ, ರಾಮಾವತಾರ, ಸೀತಾವತಾರ, ಕೃಷ್ಣನ ೧೬೧೦೦ ಕಲ್ಯಾಣ ಇಷ್ಟೂ ಕಥೆಯನ್ನು ಕೆಲವೇ ಪದಗಳ ಜೋಡಣೆಯಿಂದ ತಿಳಿಸಿದ್ದಾರೆ.

ಹರಿಯ ಮಗನ ಶಿರ ಹರಿದನ ತಂದೆಯ
ಹಿರಿಯ ಮಗನ ತಮ್ಮನ ಪಿತನ
ಭರದಿ ಭಕ್ಷಿಸುವನ ಶಿರದಲಿ ನಟಿಸಿದ
ವರಕಾಗಿನೆಲೆಯಾದಿ ಕೇಶವರಾಯಗೆ
*ಮಂಗಲಂ ಜಯ ಮಂಗಲಂ*

*ವಿವರಣೆ*
*ಹರಿಯ ಮಗನ* – ಹರಿಯ – ಸೂರ್ಯನ ಮಗನ – ಕರ್ಣನ
*ಶಿರ ತರಿದವನ* – ಶಿರವನ್ನು ಬೀಳಿಸಿದ ಅರ್ಜುನನ
*ತಂದೆಯ* – ಪಾಂಡುವಿನ
*ಹಿರಿಯ ಮಗನ* – ಧರ್ಮರಾಜನ
*ತಮ್ಮನ* – ಭೀಮಸೇನದೇವರ
*ಪಿತನ * – ಪಿತ ವಾಯುದೇವರು ನಿಯಾಮಕರಾಗಿರುವ ಗಾಳಿಯನ್ನು
*ಭರದಿ ಭುಂಜಿಸುವನ* – ವಾಯು ಭಕ್ಷಕನಾದ ಸರ್ಪದ ಅರ್ಥಾತ್ ಕಾಲೀಯನ
*ಶಿರದಲ್ಲಿ ನಟಿಸಿದ* – ಶಿರದಲ್ಲಿ ಅದ್ಭುತ ನಾಟ್ಯವನ್ನು (ಕಾಳಿಂಗಮರ್ದನ) ಮಾಡಿದ
*ವರಕಾಗಿನೆಲೆಯಾದಿ ಕೇಶವರಾಯಗೆ*
– ಕನಕದಾಸರ ಆರಾಧ್ಯದೇವ ಆದಿದೇವನಿಗೆ
*ಮಂಗಲಂ ಜಯ ಮಂಗಲಂ*

ಲೇಖನ – ನರಹರಿ ಸುಮಧ್ವ
ಆಧಾರ – ಶ್ರೀ ಚತುರ್ದಶಿ ವೇದವ್ಯಾಸಾಚಾರ್ಯರ ಅರ್ಥ ಚಿಂತನೆ

Sumadhwa Seva © 2022