gOpaladaasa ugaabhOga

sreegopaladasaru

ಶ್ರೀ ಗೋಪಾಲದಾಸರ “ಉಗಾಭೋಗಗಳು “

ಅನ್ಯರಿಂದಲಿ ಸುಖವಾಯಿತೆಂಬುವುದಕ್ಕಿಂತ
ನಿನ್ನಿಂದಾಯಿತೆಂಬ ಕ್ಲೇಶ ಮೇಲಯ್ಯ
ನಿನ್ನರಿಯದೆ ಅನ್ಯರ ಬಲ್ಲೆನೆಂಬುದಕ್ಕಿಂತ
ಕಣ್ಣಿಲ್ಲದಿರುವ ಕುರುಡ ಮೇಲಯ್ಯ
ಪುಣ್ಯ ಪಾಪವರಿಯದೆ ಬದುಕುವ ಮನು-
ಜನಿಗಿಂತ ನಾಯಿಕುನ್ನಿ ಲೇಸಯ್ಯ ಕುಲ-
ಹೀನನಾದರೂ ಸುಖದು:ಖಗಳು
ನಿನ್ನಿಂದಾಯಿತೆಂಬ ಮತಿ
ಚೆನ್ನಾಗಿ ತಿಳಿಸಯ್ಯ ಗೋಪಾಲವಿಠಲ

——————————

ಎಷ್ಟು ಮಂದಿ ಧರಣಿ ಆಳಿ ಅರಸುಗಳೆನಿಸಿ
ನಷ್ಟವಾಗಿ ಪೋದರಲ್ಲ ನೋಡನೋಡಾ
ಕಟ್ಟುಕೊಂಡೊಯ್ದರೆ ನೋಡನೋಡಾ
ಕಟ್ಟುಕೊಂಡೊಯ್ದರೆ ತೃಣವಾದರೂ ಹಿಂದೆ
ಇಷ್ಟನಿಷ್ಟಕೆ ಪಾತ್ರರಾಗುವರು
ದಿಟ್ಟ ತಾ ಹರಿಗೋಲದಾಟಿಪನೊಂದು
ಹುಟ್ಟಿಲಿ ನೀರು ತಿರುಹಿ ಕಡೆದಾಟಿಸೆ
ಹುಟ್ಟಿದ ಆ ಕೀರ್ತಿ ಹಾಕಿದವನದು ಎಂದು
ಕೊಟ್ಟವರವಗುಂಟು ಬಹುಮಾನವ
ಎಷ್ಟೇ ಉದಕದಿ ಹುಟ್ಟು ಹೊರಳಿ ಆದಿದರದಕೆ
ಎಷ್ಟು ಹೊತ್ತೋದು ಜಲವು ಅಷ್ಟೇ ಅಲ್ಲದೆ
ಇಷ್ಟು ಹರಿಯಾಧೀನ ನಂಬಿದಂಬಿಗನಯ್ಯ
ಇಷ್ಟರೊಳು ಚೆಲುವ ಗೋಪಾಲವಿಠಲ
ಇಷ್ಟನಾಗಿ ಸರ್ವಾಭೀಷ್ಟಗಳನೀವ

—————————-

 

ಎಂತು ಪೋಪದು ಮನದ ಕಿಂತು ಎಂಬೋದು ಎನ್ನ
ಅಂತರಂಗದಲ್ಲಿಪ್ಪನು ಸುಂದರಾಂಗ
ಪಿಂತಿನ ಸಂಸಾರ ಮರೆಗುಪೋಗಿತ್ತು ಈಗ
ಚಿಂತನೆಗೆ ಬಂದು ಬಹುದಣಿಸುವದು
ಎಂತು ವಿಹಿತದಲ್ಲಿ ಬಿಡಿಸುವೆ ಈ ಅರ್ಥಿ
ನಿಂತಲ್ಲಿ ಕುಳಿತಲ್ಲಿ ಹತ್ತಿಹ್ಯದು
ನಿಂತು ಮಾತೆಯಲ್ಲಿ ಪುಟ್ಟಿಸಿದವನಾರು
ಚಿಂತಾಯಕದೇವ ಗೋಪಾಲವಿಠಲ
ನಿಶ್ಚಿಂತನಿಗೆ ವಿಷಯನಾಗಿರು ಸರ್ವದಾ |

—————————–

ಕ್ಷೀರಸಾಗರ ಬಿಟ್ಟು ಲವಣ ಸಾಗರದಲ್ಲಿ
ಮನೆಯ ಕಟ್ಟುವರೇನೋ ?
ಉತ್ತಮ ತ್ರಿಧಾಮವ ಬಿಟ್ಟು ಮರ್ತ್ಯಲೋಕದಲ್ಲಿ
ಬಂದು ಪುಟ್ಟುವರೇನೋ ?
ನಿತ್ಯ ಸರ್ವಜ್ಞ ಪ್ರಕಾಶ ಮತ್ತೆ ಯಾದವರ
ಕೂಡಿ ಆದುವುದೇನೋ ?
ನಿತ್ಯತೃಪ್ತನು ನೀನು ಮುಕ್ತರೊಡೆಯ ರಂಗ
ಮತ್ತೆ ವಿದುರನ ಮನೆಯ ಪಾಲ್ಕುಡಿವರೇನೋ ?
ಸತ್ಯ ಸಂಕಲ್ಪ ಗೋಪಾಲವಿಠಲ ನಿನ್ನ
ಕೃತ್ಯಕೊಂದನಂತಾನಂತ ನಮೋ ನಮೋ ಎಂಬೆ |

————————————————————————–

ತನ್ನನರಿಯದೆ ಅನ್ಯರ ಬಲ್ಲೆನೆಂಬುದಕ್ಕಿಂತ
ಕಣ್ಣು ಇಲ್ಲದ ಈಪರಿ ಮಾನ ಉಳಿಸಯ್ಯಾ
ಅಜ್ಞಾನಿಗಳ ಮುಂದೆನ್ನ ಮಾನಕಳೆಯಯ್ಯಾ
ಸುಜ್ಞಾನಿಗಳ ಮುಂದೆ ನಾನು ಎಂಬದು ಬಿಡಿಸು
ಸಕಲ ಕರ್ತೃತ್ವದೊಳು ನೀನು ಎಂಬೋದು ತಿಳಿಸು
ಅಲ್ಲಲ್ಲಿ ಶ್ವಾನಸೂಕರ ನಾನಾಯೋನಿಗಳು ಬರಲಿ
ಜ್ಞಾನವಿದು ಒಂದೀಯೋ
ದೀನರೊಡೆಯ, ಜ್ಞಾನಮಯ ಗೋಪಾಲವಿಠಲ
ಮೌನಿಗಳರಸ ನಮೋ ಎಂಬೆನೋ |

——————————————

 

ತೀರಿತೆ ನಿನ್ನ ಸೃಷ್ಟಿ ಸ್ಥಿತಿ ಲಯ ವ್ಯಾಪಾರ
ಪೋರನೊಬ್ಬನಗಲಿಸಿ ಸೆಳೆದು ವೈದದರಿಂದ
ಪೂರುತಿ ಆಯಿತೆ ನಿನ್ನ ಸಂಕಲ್ಪಕ್ಕೆ
ಕಾರುಣ್ಯನಿಧಿ ಕಪಟನಾಟಕನೇ
ಧಾರುಣಿಯೊಳಗವನ ಸೃಜಿಸಿ ಇಟ್ಟಿದರಿಂದ
ಕೀರುತಿಯ ತಂದಿತ್ತ ಧರ್ಮದಲಿ
ತೀರಿತೋ ಅವನ ಪುಣ್ಯ ತೋರಿತೋ ಮ್ಯಾಲಾವದೋ
ತೋರದೆನಗೆ ಒಂದೂ ಆರಿಂದಾರೋ
ಭಾರವಾದರೂ ಬಲು ಪೊತ್ತಿದ್ದಿ ಎನ್ನೊಳಗೆ
ಕೀರುತ್ಯಪಕೀರುತಿನಾರದಯ್ಯ
ಭಾರ ಪೊರುತಿಯಾಯಿತೇ ಅವನ ಸಾಧನವೆಂಬೆನೆ
ತೋರುತಿದೆ ಮನಕೆ ಮತ್ತೆಲ್ಲಿ ಜನನ
ಭಾರ ನಿನ್ನದು ಎನ್ನ ಎಲ್ಲಿ ನೀನಿರಿಸಿದರೂ
ಸಾರಿ ಮೊರೆಯಿಡುವೆ ಲಾಲಿಸು ಬಿನ್ನಪ
ಭಾರತೀಶನೊಡೆಯ ಗೋಪಾಲವಿಠಲ
ಈರೀತಿ ಮಾಳ್ಪದನರಿಯಲಿಲ್ಲ |

 

—————————————————————-

 

ನಂಬು ನಂಬು ಎನ್ನ ಎಂದು ಆಡುವ ಸ್ವಾಮಿ
ಬಿಂಬದವನಲ್ಲವೆ ಎನಗೆ ಅಂದು ನೋಡೆ
ಸಂಭ್ರಮ ಪೂರ್ತಿಸದು ಕಾಂಬೋಣಾದರೂ ಮನದ
ಹಂಬಲವು ಬಿಡದೋ, ವಿಷಯದಲ್ಲಿ
ನಂಬಿದರೆ ಅವನ ನಂಬಿದವನೇ ಅಲ್ಲ
ಅಂಬಿಕಾಹೃದಯಸ್ಥನೆನ್ನು ಭೇದವ ತಿಳಿದು
ಸಂಭ್ರಮದ ಜಾಗೃತಿ ಹುಟ್ಟಲಿ ಅವನಲ್ಲಿ
ಬೊಂಬೆಯಾಗಿ ಎದುರು ನಿಂತು ತೋರಿ ಆಡೆ
ನಂಬಿಗೆಯು ಸಾಲದೋ ಅಂಬುಜಾಕ್ಷ
ನಂಬಿ ಇಪ್ಪೆನು ಕಂಡ್ಯ ಈ ಪರಿ ಚೆನ್ನಾಟ
ಸಂಭ್ರಮದಲೆನ್ನ ಮೋಹಿಸಬ್ಯಾಡ
ನಂಬಿಗಿ ಬಲು ಉಂಟು ಆಗಿರಲಿ ನಿನ್ನಲಿ
ನಂಬುವರೋ ಜನ ಅನ್ಯಹಂಬಲಿಸದೆ
ನಂಬಿ ನಿನ್ನನರಿಯೆ ಹಿಂದೆ ಇಂದು ಮುಂಡೆ ಘನ
ನಂಬಿಗೆ ಇತ್ತರೆ ನಿನ್ನ ನಂಬುವೆನಯ್ಯ
ಬಿಂಬಮೂರಿತಿಯೇ ಗೋಪಾಲವಿಠಲ

———————————————

 

ನೀನು ಕೊಡುವದೆನಗೆ ಏನು ಎನಗಿಂದದರ
ಖೂನವಾದರೂ ತೋರು ಎನ್ನ ಕುರಿತು
ನಾನು ಬಲು ಅರಸಿ ನೋಡಿದರೂ ನಿಜಗಾಣೆನು
ಪಾಣಿದ್ವಯ ಮುಗಿದು ಬಿನ್ನೈಪೆ ದೇವ
ನೀನೋ ನಾನೋ ಪೇಳೊ ನಿನ್ನ ತಿಳಕೊಂಬಲ್ಲಿ
ಜ್ಞಾನಿಗಳೇ ಇದಕೆ ಮಧ್ಯಸ್ಥರಯ್ಯಾ
ಏನು ನೀ ಕೊಡುವದು ಮುದವೇ ಎಲ್ಲಿಗೆ ಪೋದರೂ
ಕಾಣದೆ ಹುಡುಕುವೆ ಅದು ಏನೇನೆಂದು
ಶ್ರೀನಿವಾಸರಂಗ ಗೋಪಾಲವಿಠಲ
ದಿನ ನಿನ್ನದು ಎಂದೇನಿದ್ದರೂ |

———————————————

ಪರಮಪುರುಷ ಪಾಪನಾಶ ಪತಿತಪಾವನ ಪರತರ

ಪರಮ ಆಪ್ತ ಪರಾತ್ಪರಾತ್ಮಕ
ಪರಂಜ್ಯೋತಿಸ್ವರೂಪ ಪರಮಮಂಗಳ
ಪರಮಕರುಣಿ ಪಾಹಿ ಪಂಢರಿರಾಜ
ಪರಮಪುರುಷ ಶರಣ ಜನಪಾಲಕನೇ ಜಯ ಜಯ
ಶರಧಿ ಬಂಧನ ರಾಮ ಜಯ ಜಯ
ಶರಧಿಶಯನ ಶ್ವೇತವರ್ಣ ಶ್ವೇತವಾಹನ
ಪ್ರಿಯನೇ ಭಾರತೀಶನೊಡೆಯನೇ, ಯೇ
ಭೂಭಾರ ನಿಳಿಹಿದ ಸ್ವಾಮಿ ನಮೋ ನಮೋ
ಚಾರುಶ್ವೇತದ್ವೀಪವಾಸಿ ಗೋಪಾಲವಿಠಲ
ಸಾರ್ವಭೌಮ ಪರಮಪುರುಷ |

 

————————————————–

ಶರಧಿಯ ಉದಕವು ಮೇಘಭಾಯೊಳು ಬಿದ್ದು
ಧರೆಯೊಳಗೆ ಮಧುರವನು ತೋರಿದಂತೆ
ಕರಿಯ ದಂತವು ಜಂಗುಳಿಗುರುಗಳಂದಣವಾಗಿ
ಪರಿಪರಿಯ ಪೂಜೆ ಕೈಕೊಂಡತೆರದಿ
ಇರುತಿಪ್ಪ ನರನಿಗೆ ಹರಿನಿನ್ನ ಅರವಿಂದ-
ಚರಣದಾಶ್ರಯವ ಕೊಟ್ಟು ಪೊರೆಯೋಎನ್ನ
ಕರೆ ಕರೆ ಸಂಸಾರ, ಉರುಗನ ಹೆಡೆ ನೆರಳು
ಹರುಷವೆಂದು ಮಲಗಿಕೊಂಡಾತೆರದಿ
ಕರುಣಾಕರ ರಂಗ ಗೋಪಾಲವಿಠಲ
ಮೊರೆಹೊಕ್ಕರೆ, ಕಾವ ಬಿರಿದುಂಟು ದೇವ |

—————————————————————-

 

ಹಲ್ಲಣವಿಲ್ಲದ ಕುದುರೆ ಹತ್ತಿ ಓಡಿಸಿದಂತೆ
ಬೆಲ್ಲಹಾಕದ ಪರಮಾನ್ನದಂತೆ
ಇಲ್ಲದೆ ಹುಟ್ಟು ಹರಿಗೋಲನೇರಿದಂತೆ
ಸೊಲ್ಲಿಗೆಬುಡದಲ್ಲಿ ಅಳೆದಂತೆ ಸಾಧನ
ಎಲ್ಲ ಒಂದೇ ಎಂಬ ಜ್ಞಾನ ಉಂಟಾದವ
ಎಲ್ಲ ಸಾಧನಗಳ ಮಾಡಲೇನು
ಬೆಲ್ಲವು ಬೇವೇ ಆಗುವುದು ಅವನಿಗಿನ್ನು
ಎಲ್ಲ ಕಡೆಯಲಿ ನೋಡಿ ಮೆದ್ದರನ್ನ
ಮಲ್ಲಮರ್ಧನ ಗೋಪಾಲವಿಠಲನಂಘ್ರಿ-
ಪಲ್ಲವ ಕಾಣೆನೋ ಎಲ್ಲಿ ಪೋದರನ್ನ |

 

——————————————————

 

 

Leave a Reply

Your email address will not be published.

Sumadhwa Seva © 2022