ಹ್ಯಾಂಗೆ ಮಾಡಲಯ್ಯ ಕೃಷ್ಣ

gopal_p

ಗೋಪಾಲದಾಸರ ಒಂದು ಕೃತಿ – ನಮ್ಮ ತಪ್ಪನ್ನು ತೋರಿಸಿ ಎಚ್ಚರಿಸುವ ಕೃತಿ.

ನಮ್ಮ ಆಯುಷ್ಯ ಸೀಮಿತವಾಗಿದೆ.  ಅದನ್ನು ವ್ಯರ್ಥ ಮಾಡಬೇಡಿರೆಂದು ಸಾಧನಮಾಡಿಕೊಳ್ಳಿರೆಂದು ಸ್ವನಿಂದಾಸ್ತುತಿ ಮೂಲಕ ಹೇಳಿದ್ದಾರೆ.

ಹ್ಯಾಂಗೆ ಮಾಡಲಯ್ಯ ಕೃಷ್ಣ ಹೋಗುತಿದೆ ಆಯುಷ್ಯ
ಮಂಗಲಾಂಗ ಭವಭಂಗವ ಬಿಡಿಸಿ ನಿನ್ನ ಡಿಂಗರಿಗನ್ನ ಮಾಡೋ ಅನಂಗ ಜನಕ ||ಪ||

ಯೇಸು ಜನುಮದ ಸುಕೃತದ ಫಲವೊ ತಾನು ಜನಿಸಲಾಗಿ
ಭೂಸುರದೇಹದ ಜನುಮವು ಎನಗೆ ಸಂಭವಿಸಿದೆಯಾಗಿ|
ಮೋದತೀರ್ಥ ಮತ ಚಿನ್ಹಿತನಗದೆ ದೋಷಕೆ ಒಳಗಾಗಿ
ಲೇಶಸಾಧನವ ಕಾಣದೆ ದುಸ್ಸಹವಾಸದಿಂದಲೆ ದಿನ ದಿನ ಕಳೆದೆ ||೧||

ಶಶಿಮುಖ ಕನಕದ ಆಶೆಗೆ ಬೆರೆತು ವಸುಪತಿ ನಿನ್ನಡಿಯ
ಹಸನಾಗಿ ನಿನ್ನ ನೆನೆಯದೆ ಕೃಪೆಯ ಗಳಿಸದೆ ಕೆಟ್ಟೆನಯ್ಯ|
ನಿಶೆ ಹಗಲು ಸ್ಥಿರವೆಂದು ತನುವನು ಪೋಶಿಸಲಾಶಿಸಿ ಜೀಯ
ಉಸುರಿದೆ ನೆಲವೊ ಸರ್ವಕಾಲ ನಿನ್ನೊಡೆತನವೆಂಬುವ ಬಗೆಯನು ಅರಿಯದೆ ||೨||

ನೆರೆನಂಬಿದೆ ಪಾವಟೆಗಳು ಎಲ್ಲ ಸರಿದು ಹೋದವಲ್ಲ
ಮರಳಿ ಈ ಪರಿಯ ಜನುಮವು ಬರುವ ಭರವಸೆಯಂತು ಇಲ್ಲ|
ಪರಿಪರಿ ವಿಷಯದ ಆಶೆಯು ಎನಗೆ ಕಿರಿದು ಆಯಿತಲ್ಲ
ಹರಿಯೆ ಜಗದಿ ನೀನೊಬ್ಬನಲ್ಲದೆ ಪೊರೆವರಿನ್ನಾರು ಇಲ್ಲವಲ್ಲ ||೩||

ಅವನಿ ಒಳಗೆ ಪುಣ್ಯಕ್ಷೇತ್ರ ಚರಿಸುವ ಹವನಿಕೆ ಎನಗಿಲ್ಲ
ಪವನಾತ್ಮಕ ಗುರು ಮಧ್ವ ಶಾಸ್ತ್ರದ ಪ್ರವಚನ ಕೇಳಲಿಲ್ಲ|
ತವಕದಿಂದ ಗುರು ಹಿರಿಯರ ಸೇವಿಸಿ ಅವರ ಒಲಿಸಲಿಲ್ಲ
ರವಿನಂದನ ಕೇಳಿದರುತ್ತರ ಕೊಡೆ ವಿವರ ಸರಕು ಒಂದಾದರಿಲ್ಲ ||೪||

ಭಗವತರೊಡಗೂಡಿ ಉಪವಾಸ ಜಾಗರ ಒಂದಿನ ಮಾಡಲಿಲ್ಲ
ರಾಗದಿ ಶುಕಮುನಿ ಪೇಲ್ದ ಹರಿಕಥೆ ಸಮ್ಯೋಗವೆಂಬೋದಿಲ್ಲ |
ನೀಗುವಂತ ಭವ ಭಯವ ಭಕುತಿ ವೈರಾಗ್ಯವೆಂಬೋದಿಲ್ಲ
ಯೋಗಿವಂದ್ಯ ಗೋಪಾಲವಿಟ್ಠಲ ತಲೆ ಭಾಗಿ ನಿನ್ನನೇ ಬೇಡಿಕೊಂಬೆ ||೫||

ನಾವು ವರ್ಷವರ್ಷ ಹುಟ್ಟಿದ ಹಬ್ಬ ಆಚರಿಸಿಕೊಳ್ಳುತ್ತೇವೆ.  ಆದರೆ ಪ್ರತಿ ಹುಟ್ಟಿದ ಹಬ್ಬ ಆಚರಣೆ ನಮ್ಮ ಆಯುಷ್ಯವನ್ನು ಕಮ್ಮಿ ಮಾಡಿರುತ್ತದೆ.  ಆದ್ದರಿಂದ ಅನಂಗ (ಮನ್ಮಥನು ಕೃಷ್ಣ ರುಕ್ಮಿಣಿಯರ ಮಗನಾಗಿ ಹುಟ್ಟಿರುತ್ತಾನೆ) ಜನಕನಾದ ಕೃಷ್ಣನನ್ನು ಕೋರುತ್ತಾರೆ.

ಮಾನವನಾಗಿ ಹುಟ್ಟುವುದೇ ದುರ್ಲಭ.  ಎಷ್ಟೋ ಜನುಮದ ಪುಣ್ಯ ಫಲ ಮಾನವನಾಗಿ ಹುಟ್ಟಿರುವುದು ಅದರಲ್ಲೂ ಬ್ರಾಹ್ಮಣ ಜನ್ಮ ದೊರಕಿರುವಾಗ, ಆನಂದತೀರ್ಥರ ಮುದ್ರೆ ಇಲ್ಲದೆ ಏನೂ ಸಾಧನ ಮಾಡದೆ ದುಸ್ಸಹವಾಸದಿಂದ ಪ್ರತಿದಿನವನ್ನು ಕಳೆಯುತ್ತಿರುವೆ.  

ಹೆಣ್ಣು, ಹೊನ್ನಿನ ಆಸೆಗೆ ಒಳಗಾಗಿ, ಹಗಲು-ರಾತ್ರಿ ನಮ್ಮ ದೇಹ ಪೋಷಣೆಗೇ ಸೀಮಿತಗೊಳಿಸಿ, ಶ್ರೀಹರಿಯ ನೆನೆಯಲಿಲ್ಲ.

ಯಾವುದೇ ಪುಣ್ಯಕ್ಷೇತ್ರ ದರ್ಶನ ಮಾಡಲಿಲ್ಲ, ಆಚಾರ್ಯ ಮಧ್ವರ ಶಾಸ್ತ್ರದ ಪ್ರವಚನವನ್ನು ಎಂದೂ ಕೇಳಲಿಲ್ಲ, ಎಂದೂ ಗುರು ಹಿರಿಯರನ್ನು ಗೌರವಿಸಲಿಲ್ಲ, ಸೇವಿಸಲಿಲ್ಲ.  ರವಿನಂದನ (ಯಮ) ನಮ್ಮನ್ನು ಏನು ಸಾಧನ ಮಾಡಿದೆಯೆಂದು ಕೇಳಿದರೆ ನಮಗೆ ಉತ್ತರಿಸಲು ಏನೂ ಸರಕಿಲ್ಲ.  ಏಕಾದಶಿ ಉಪವಾಸವಾಗಲೀ, ಜಾಗರಣೆಯಾಗಲಿ, ಎಂದೂ ಮಾಡಲಿಲ್ಲ.  ಶುಕಾಚಾರ್ಯರ ನುಡಿಯಾದ ಭಾಗವತವನ್ನು ಕೇಳಲಿಲ್ಲ.  ವೈರಾಗ್ಯವಂತೂ ದೂರತೋಪಾಸ್ತ, ಬೇರೆ ದಾರಿ ಕಾಣದೆ ನಿನ್ನನ್ನೇ ಬೇಡಿಕೊಳ್ಳುವೆ ನನಗೆ ಜ್ಞಾನ, ಭಕ್ತಿ, ವೈರಾಗ್ಯವಿತ್ತು ಸಲಹಯ್ಯ ಎಂದು ಪ್ರಾರ್ಥಿಸುತ್ತಾರೆ.

by Narahari Sumadhwa

———————————————————————————–

 

Leave a Reply

Your email address will not be published.

Sumadhwa Seva © 2022