ಸ್ವರ್ಣಗೌರಿ ವ್ರತ

ಸ್ವರ್ಣಗೌರಿ ವ್ರತ

ಶ್ರೀಮದಾಚಾರ್ಯರು ಅನುವ್ಯಾಖ್ಯಾನ ಗ್ರಂಥದಲ್ಲಿ ಪಾರ್ವತಿ ಪರಮೇಶ್ವರರ ಚಿಂತನ ಕ್ರಮ :
ಉಮಾ ವೈ ವಾಕ್ ಸಮುದ್ದಿಷ್ಟಾ ಮನೋ ರುದ್ರ ಉದಾಹೃತ: |
ತದೇತನ್ಮಿಥುನಂ ಜ್ಞಾತ್ವಾ ನ ದಾಂಪತ್ಯಾದ್ ವಿಹೀಯತೇ ||

ವಾಕ್ ಎಂಬ ಉಮೆ ಮತ್ತು ಮನಸ್ ಎಂಬ ರುದ್ರ ಇವರೀರ್ವರ ಜೊತೆಯಾಗಿರುವುದನ್ನು ಚಿಂತನೆ ಮಾಡುವುದರಿಂದ ದಾಂಪತ್ಯದಿಂದ ಎಂದೂ ವಿಯೋಗವಾಗುವುದಿಲ್ಲ

 

 1. ಸ್ವರ್ಣ ಗೌರಿ ಯಾರು ?
  ಉತ್ತರ : ಪಾರ್ವತಿ ದೇವಿ.
 2. ಸ್ವರ್ಣಗೌರಿ ವ್ರತವನ್ನು ಎಂದು ಆಚರಿಸಬೇಕು ?
  ಉತ್ತರ : ಭಾದ್ರಪದ ಶುಕ್ಲ ತೃತೀಯ
 3. ಭಾದ್ರಪದ ಶುಕ್ಲ ತೃತೀಯ ಗೌರಿಯ ಜನ್ಮದಿನವಾ ಅಥವಾ ಏನು ವಿಶೇಷ?
  ಉತ್ತರ: ಘೋರ ತಪವಾಚರಿಸಿ ಶಿವನ ವರಿಸಿ ಕೈಲಾಸವಾಸಿಯಾದ ಪಾರ್ವತಿಗೆ ಒಮ್ಮೆ ತನ್ನ ತವರುಮನೆಗೆ ಬರುವ ಬಯಕೆಯಾಯಿತು. ಹಿಮವಂತನ ಮಗಳಾಗಿ ಜನಿಸಿ ಹಿಮಾಲಯವನ್ನೇ ತನ್ನ ತವರಾಗಿ ಪಡೆದಿದ್ದಳು. ರುದ್ರದೇವರ ಅನುಮತಿ ಪಡೆದು ಭೂಲೋಕಕ್ಕೆ ಬಂದ ದಿನವೇ *ಭಾದ್ರಪದ ಶುಕ್ಲ ತೃತೀಯ*
 4.  ಹಿರಿಯರು ಏಕೆ ಸ್ವರ್ಣ ಗೌರಿ ಎಂದಿದ್ದಾರೆ?                           ಉತ್ತರ: ಸ್ವರ್ಣಗೌರಿ ವ್ರತ ಹೆಸರೇ ಸೂಚಿಸುವಂತೆ ಸ್ವರ್ಣ ಬಣ್ಣದಲ್ಲಿ ಹೊಳೆಯುವ ಗೌರಿಯ ಪೂಜಿಸುವುದು ಎಂದರ್ಥ.
 5. *ಪಾರ್ವತಿಗೆ ಈ ಹೆಸರು ಬಂದಿದ್ದು ಹೇಗೆ* ?                 ಉತ್ತರ :  ಮತ್ಸ್ಯ ಪುರಾಣದಲ್ಲಿ ಪಾರ್ವತಿ ದೇವಿಗೆ ಗೌರಿ ಹೆಸರು ಬಂದ ಕಥೆಯಿದೆ. ಪಾರ್ವತಿ ಮೂಲತಃ ಕಪ್ಪು ಬಣ್ಣದವಳಾಗಿರುತ್ತಾಳೆ. ಒಮ್ಮೆ ರುದ್ರದೇವರು ಪಾರ್ವತಿಯನ್ನು “ಕಾಳಿ” ಎಂದು ಸಂಬೋಧಿಸುತ್ತಾರೆ. ಕಾಳಿ ಎಂಬ ಪದ ಕತ್ತಲು ಮತ್ತು ಕಪ್ಪು ಬಣ್ಣವನ್ನು ಹೇಳುತ್ತದೆ. ಪಾರ್ವತಿ *ಕಾಳಿ* ಎಂದು ಕರೆಯಲ್ಪಟ್ಪದ್ದನ್ನು ಅವಹೇಳನ ಎಂದು ಭಾವಿಸಿ ಬ್ರಹ್ಮನ ಕುರಿತು ತಪಸ್ಸು ಮಾಡಿ ತನ್ನ ಬಣ್ಣವನ್ನು ಬದಲಿಸುವಂತೆ ಕೋರಿದಳು. ಅವಳ ತಪಸ್ಸಿಗೆ ಮೆಚ್ಚಿದ ಚತುರ್ಮುಖನು ಹಾಗೆಯೇ ಅವಳ ವರ್ಣವನ್ನು ಬದಲಿಸಿದನು. ಹೀಗೆ ಬದಲಾದ ಬಣ್ಣದಿಂದ ಬಂದ ಹೆಸರು ಗೌರಿ ಅರ್ಥಾತ್ ಬಿಳಿ ಬಣ್ಣ ಅಥವಾ ಸುಂದರ.
 6.  ಗೌರಿ ಪೂಜೆಗೆ ಕೇವಲ ಗೌರಿಯ ಮುಖವನ್ನೇ ಏಕೆ ರಚಿಸಿರುತ್ತಾರೆ?
  ಉತ್ತರ : ಶಿವನಿಗೆ ಲಿಂಗದಲ್ಲಿ ಮಾತ್ರ ಪೂಜಿಸುವಂತೆ ಗೌರಿಯನ್ನು ಮುಖದಲ್ಲಿ ಮಾತ್ರ ಪೂಜಿಸುವ ಸಂಪ್ರದಾಯವಿದೆ.

 7.  ಈ ದಿನ ಮರದ ಬಾಗಿನ ಕೊಡುವ ಕಾರಣವೇನು ?
  ಉತ್ತರ : ಗೌರಿ (ಪಾರ್ವತಿ) ಕೈಲಾಸವಾಸಿ. ಈ ದಿನ ಕೈಲಾಸದಿಂದ ತನ್ನ ತವರಾದ ಹಿಮಾಲಯಕ್ಕೆ ಬರುತ್ತಾಳೆ. ತನ್ನ ತವರಿಗೆ ಬಂದ ಗೌರಿ ಮುತ್ತೈದೆಯರ ರೂಪದಲ್ಲಿ ನಮ್ಮ ಮನೆಗೆ ಬಂದಿರುವಳು ಎಂದು ಭಾವಿಸಿ ಮರದ ಬಾಗಿನ ಕೊಡುವ ಸಂಪ್ರದಾಯವಿದೆ.

 8. ಗೌರಿ ಪೂಜೆಗೆ ಮುನ್ನ ಅವಳ ಮಗ ಗಣೇಶನ ಪೂಜೆ ಕೂಡ ಮಾಡಬೇಕಾ ?
  ಉತ್ತರ: ಖಂಡಿತ. ಯಾವುದೇ ಪೂಜೆಯ ವಿಘ್ನನಿವಾರಣೆಗಾಗಿ ಗಣೇಶನ ಪೂಜಿಸಬೇಕು.

 9. ಗೌರಿಯ ಕುರಿತಾದ ಇತರ ವ್ರತಗಳಾವುವು ?
  ಸ್ವರ್ಣಗೌರಿ ವ್ರತ – ಭಾದ್ರಪದ ಶುಕ್ಲ ತೃತೀಯ ;                    ಮಂಗಳಗೌರಿ ವ್ರತ – ಶ್ರಾವಣ ಮಾಸದ ಪ್ರತಿ ಮಂಗಳವಾರ ;  ಉಮಾ ಮಹೇಶ್ವರ ವ್ರತ – ಭಾದ್ರಪದ ಶುದ್ಧ ಹುಣ್ಣಿಮೆ ರಾತ್ರಿ ಪೂಜಾ ;                                                  ಷೋಡಶಗೌರಿ ವ್ರತ – ಶ್ರಾವಣ ಶುಕ್ಲ ತೃತೀಯ ಮತ್ತು ಭಾದ್ರಪದ ಶುಕ್ಲ ತೃತೀಯ ;                                   ಗಜಗೌರಿ ವ್ರತ 
 10. ಪಾರ್ವತಿದೇವಿಯ ಕೆಲವು ಪ್ರಸಿದ್ಧ ನಾಮಗಳು :
  ಅಂಬಿಕಾ ; ಭ್ರಮರಾಂಬಿಕಾ ; ಗೌರಿ ; ದುರ್ಗಾ ; ಶಂಕರೀ; ಭದ್ರಾ; ಮಂಗಳ; ದೇವಿ ; ವಿಶಾಲಾಕ್ಷಿ ; ಸತಿದೇವಿ ; ದಾಕ್ಷಾಯಣಿ; ಉಮಾ ; ಗಿರಿಜಾ ; ಹೈಮವತಿ ; ಮೇನಕಾತ್ಮಜ ; ಅರ್ಪಣಾ ; ಮಾಹೇಶ್ವರಿ; ಭವಾನಿ ; ಶಿವಾನಿ ; ರುದ್ರಾಣಿ ; ಮೃಡಾಣಿ; ಕಾತ್ಯಾಯಿನಿ ; ಅನ್ನಪೂರ್ಣ
 11. ಮರದ ಬಾಗಿನದಲ್ಲಿ ಹಾಕಬೇಕಾದ ಪದಾರ್ಥಗಳು :

ಉತ್ತರ: ಜೊತೆ ಮೊರ – ಮೊರಕ್ಕೆ ಅರಿಶಿನ , ಕುಂಕುಮ ಹಚ್ಚಬೇಕು.

ಧಾನ್ಯಗಳು – ಅಕ್ಕಿ, ಕಡಲೆಬೇಳೆ, ತೊಗರಿಬೇಳೆ, ಹೆಸರುಬೇಳೆ, ಉದ್ದಿನಬೇಳೆ, ರವೆ, ಬೆಲ್ಲದ ಅಚ್ಚು, ಉಪ್ಪು, ತೆಂಗಿನಕಾಯಿ, ಹಣ್ಣು, ಬಳೆ, ಬಿಚ್ಚೋಲೆ, ಕನ್ನಡಿ, ಕಪ್ಪು, ಬಾಚಣಿಗೆ, ವೀಳ್ಯದ ಎಲೆ , ಅಡಿಕೆ, ದಕ್ಷಿಣೆ, ಅರಿಶಿನ , ಕುಂಕುಮ, ರವಿಕೆ ಬಟ್ಟೆ

ದೇವಿಗೆ ಕೊಡುವ ಬಾಗಿನದಲ್ಲಿ ಮೇಲೆ ಹೇಳಿರುವ ಸಾಮಾನುಗಳ ಜೊತೆಗೆ ಪೂಜಾ ಸಾಮಗ್ರಿಗಳನ್ನು – ಗೆಜ್ಜೆವಸ್ತ್ರ, ಶ್ರೀಗಂಧ,  ಇತ್ಯಾದಿ ಇಡುತ್ತಾರೆ.

ಮರದ ಬಾಗಿನದಲ್ಲಿ ಉಪಯೋಗಿಸುವ ಎಲ್ಲಾ ಪದಾರ್ಥಗಳಲ್ಲೂ ವಿಶೇಷ ದೇವತಾ ಸಾನ್ನಿಧ್ಯವಿರುತ್ತದೆ.

12. ಮರದ ಬಾಗಿನ ಪದಾರ್ಥದಲ್ಲಿ ಇರುವ ದೇವತಾ ಸಾನ್ನಿಧ್ಯ:

ಮರದ ಬಾಗಿನದ ೧೬ ಪದಾರ್ಥಗಳಲ್ಲಿ ಸನ್ನಿಹಿತವಿರುವ ರೂಪಗಳು ಇಂತಿವೆ.

ಅರಿಶಿನದಲ್ಲಿ ಗೌರಿ, ಕುಂಕುಮದಲ್ಲಿ ಪದ್ಮ, ಸಿಂಧೂರದಲ್ಲಿ ಶಚಿ, ಕನ್ನಡಿಯಲ್ಲಿ ಮೇಧಾ; ಬಾಚಣಿಗೆ -, ಸಾವಿತ್ರಿ, ಕಾಡಿಗೆಯಲ್ಲಿ – ವಿಜಯಾ, ಅಕ್ಕಿಯಲ್ಲಿ ಜಯಾ, ತೊಗರೀಬೇಳೆ – ದೇವಸೇನಾ, ಉದ್ದಿನಬೇಳೆ – ಸ್ವಾಹಾ, ತೆಂಗಿನಕಾಯಿ – ಸ್ವಧಾ ; ವಿಳ್ಳದೆಲೆ – ಲೋಕಮಾತಾ, ಅಡಿಕೆ – ಶಾಂತಿ; ಫಲ – ಫುಷ್ಠಿ, ಬೆಲ್ಲ – ಧೃತೀ, ವಸ್ತ್ರ -ತುಷ್ಟೀ, ಹೆಸರುಬೇಳೆ – ಪಾರ್ವತಿ.

 

13. ಮೊರದ ಬಾಗಿನ ಕೊಡುವಾಗ ಈ ಕೆಳಕಂಡ ಮಂತ್ರವನ್ನು ಶ್ರದ್ಧಾಪೂರ್ವಕವಾಗಿ ಹೇಳಿ ಬಾಗಿನ ಕೊಟ್ಟರೆ, ಬ್ರಹ್ಮಾಂಡ ದಾನ ಮಾಡಿದ ಪುಣ್ಯ ಲಭಿಸುವುದೆಂದು ಹಿರಿಯರು ಹೇಳುತ್ತಾರೆ.

 

ಕೊಡುವವರು ಹೀಗೆ ಹೇಳಬೇಕು :

ರಾಮ ಪತ್ನಿ ಮಹಾಭಾಗೇ ಪುಣ್ಯ ಮೂರ್ತೇ ನಿರಾಮಯೆ l

ಮಯಾದತ್ತೌ ಹೀ ತೇ ಶೂರ್ಪೌ ಜಾನಕಿ ಸ್ವೀಕೃತೌ ತ್ವಯಾ‌

 

ತೆಗೆದುಕೊಳ್ಳುವವರು :

ರಾಮ ಪತ್ನಿ ಮಹಾಭಾಗೇ ಪುಣ್ಯ ಮೂರ್ತೇ ನಿರಾಮಯೆ l

ಮಯಾದತ್ತೌ ಹೀ ತೇ ಶೂರ್ಪೌ ಜಾನಕಿ ಸ್ವೀಕೃತೌ ಮಯಾ

ಅಂತ ಹೇಳಿ ತೆಗೆದುಕೊಳ್ಳಬೇಕು…

 

14. ಮರದ ಬಾಗಿನ ಕೊಡುವವರು ಯಾರಿಗೆ ಕೊಡಬೇಕು ?

ಉತ್ತರ: ಧರ್ಮನಿಷ್ಠೆಯಲ್ಲಿರುವ , ಏಕಾದಶಿ ಆಚರಣೆ ಮಾಡುವ, ಮುಟ್ಟು ಮೈಲಿಗೆ ಆಚರಿಸುವ,  ದೇವತಾ ಪೂಜೆ ಪುನಸ್ಕಾರ ಮಾಡುವವರಿಗೆ ಕೊಟ್ಟಾಗ ಅವರ ಆಶೀರ್ವಾದ ಫಲಕಾರಿಯಾಗುತ್ತದೆ.

Sumadhwa Seva © 2022