ಸುಮಧ್ವ ವಿಜಯ

ಸುಮಧ್ವ ವಿಜಯ ಸರ್ಗ 1
ನಮ್ಮ ಪರಮಪೂಜ್ಯ ಶತಾಯುಷಿ, ಪ್ರಾತ: ಸ್ಮರಣೀಯ ತಂದೆ, ಮತ್ತು ಗುರುಗಳೂ ಆದ ಶ್ರೀ S.N ರಾಮಚಂದ್ರಾಚಾರ್ಯರ ಆಶೀರ್ವಾದದಿಂದ ನನ್ನ ಯಥಾಶಕ್ತಿ “ಸುಮಧ್ವ ವಿಜಯ” ಅನುವಾದ ಮತ್ತು ಪ್ರಶ್ನೋತ್ತರ ಆರಂಭಿಸಿದ್ದೇನೆ.  ನನಗೆ ಮೊದಲು ಸುಮಧ್ವವಿಜಯ ಪಾಠ ಮಾಡಿದ್ದ ದಿವಂಗತ ಶ್ರೀ ಅಲೆವೂರು ಸುಬ್ರಾಯಾಚಾರ್ಯರ ಸ್ಮರಣೆ  ಮತ್ತು ನನ್ನ ಹೆಚ್ಚಿನ ಶಾಸ್ತ್ರ ಪಾಠ ಮಾಡುತ್ತಿರುವ ಗುರುಗಳು – ಮಧ್ವಶಾಸ್ತ್ರ ಸಂಪನ್ನ ಶ್ರೀ ಹೊಳವನಹಳ್ಳಿ ಶ್ರೀನಿವಾಸಾಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳೊಂದಿಗೆ ಪ್ರಾರಂಭಿಸಿದ್ದೇನೆ.   ನನ್ನ ಈ ಲೇಖನಕ್ಕೆ ಹೆಚ್ಚಿನ ಸಹಾಯ ಪರಮಪೂಜ್ಯ ಶ್ರೀ ವಿಶ್ವನಂದನ ತೀರ್ಥ ಶ್ರೀಪಾದಂಗಳವರ ಗ್ರಂಥ “ಸುಮಧ್ವವಿಜಯ” ಅವರಿಗೆ ಆಭಾರಿಯಾಗಿದ್ದೇನೆ.

 

ಕಾಂತಾಯ ಕಲ್ಯಾಣ-ಗುಣೈಕ-ಧಾಮ್ನೇ
ನವ-ದ್ಯುನಾಥ-ಪ್ರತಿಮ-ಪ್ರಭಾಯ |
ನಾರಾಯಣಾಯಾಖಿಲ-ಕಾರಣಾಯ
ಶ್ರೀ-ಪ್ರಾಣ-ನಾಥಾಯ ನಮಸ್ಕರೋಮಿ || ೧ ||
ಅಹಂ – ನಾನು ; ಕಾಂತಾಯ – ಮನೋಹರನಾದ ; ಕಲ್ಯಾಣ – ಮಂಗಳಕರವಾದ; ಗುಣೈಕ – ಗುಣ + ಏಕ ಗುಣಗಳಿಗೆ ಮುಖ್ಯ ; ಧಾಮ್ನೇ – ಆಶ್ರಯನಾದವನು. ಜ್ಞಾನಾನಂದಾದಿ, ಗುಣಗಳೇ ದೇಹವಾಗಿ ಉಳ್ಳವನು. ಅವನ ಗುಣಗಳಿಗೂ ದೇಹಕ್ಕೂ ಅಭೇದ. ಅರ್ಥಾತ್ ಅಪ್ರಾಕೃತ ಶರೀರಿ. ನವದ್ಯುನಾಥ – ನವ + ದ್ಯುನಾಥ – ಆಗ ತಾನೇ ಉದಯಿಸುತ್ತಿರುವ ಸೂರ್ಯನ ಪ್ರತಿಮ – ಸದೃಶವಾದ ಪ್ರಭಾಯ – ಕಾಂತಿ ಯುಳ್ಳ, ಅಖಿಲ – ಸಮಸ್ತ ಜಗತ್ತಿಗೆ (ಚರಾಚರ ಪ್ರಪಂಚಕ್ಕೆ) ಕಾರಣಾಯ – ನಿಮಿತ್ತ ಕಾರಣನಾದ; ಶ್ರೀ ಪ್ರಾಣನಾಥಾಯ – ಶ್ರೀ ಅಂದರೆ ಲಕ್ಷ್ಮೀ ದೇವಿ ಮತ್ತು ಶ್ರೀ ಪ್ರಾಣ – ಭಾರತೀ ಸಹಿತ ಮುಖ್ಯಪ್ರಾಣ ನಾಥಾಯ – ಸ್ವಾಮಿಯಾದ ನಾರಾಯಣಾಯ – ನಾರಾಯಣನಿಗೆ ನಮಃ ಕರೋಮಿ – ನಮಿಸುತ್ತೇನೆ.

 

ಅನಾಕುಲಂ ಗೋಕುಲಮುಲ್ಲಲಾಸ ಯತ್ಪಾಲಿತಂ ನಿತ್ಯಮನಾವಿಲಾತ್ಮ |
ತಸ್ಮೈ ನಮೋ ನೀರದ ನೀಲ ಭಾಸೇ ಕೃಷ್ಣಾಯ ಕೃಷ್ಣಾ ರಮಣ ಪ್ರಿಯಾಯ |೨!
ಪದಚ್ಛೇದ –
ಅನಾಕುಲಂ ಗೋ ಕುಲಂ ಉಲ್ಲಲಾಸ ಯತ್ಪಾಲಿತಂ ನಿತ್ಯಂ ಅನಾವಿಲ ಆತ್ಮ |
ತಸ್ಮೈ ನಮ: ನೀರದ ನೀಲ ಭಾಸೇ ಕೃಷ್ಣಾಯ ಕೃಷ್ಣಾ ರಮಣ ಪ್ರಿಯಾಯ !!

 

ನಿತ್ಯಂ – ಯಾವಾಗಲೂ, ಅನಾವಿಲ – ನಿರ್ದುಷ್ಟವಾದ, ಆತ್ಮ – ಸ್ವರೂಪವುಳ್ಳ, ಅನಾಕುಲಂ – ವ್ಯಾಕುಲರಹಿತವಾದ, ಗೋ – ಗೋವುಗಳ, ವೇದಗಳ, ಬ್ರಾಹ್ಮಣರ, ಕುಲಂ – ಸಮುದಾಯವು, ಯತ್ – ಯಾರಿಂದ, ಪಾಲಿತಂ – ಪಾಲಿಸಲ್ಪಟ್ಟು, ಉಲ್ಲಲಾಸ – ಶೋಭಿಸಿತೋ, ತಸ್ಯೈ – ಅಂತಹ ನೀರದ – ಮೇಘದಂತೆ, ನೀಲ – ಕಪ್ಪಾದ ಭಾಸೇ – ಕಾಂತಿಯುತವಾದ, ಕೃಷ್ಣಾ – ದ್ರೌಪದಿಗೆ, ರಮಣ – ಪತಿಗಳ, ಪ್ರಿಯಾಯ – ಪ್ರಿಯನಾದ, ಕೃಷ್ಣಾಯ – ಕೃಷ್ಣನಿಗೆ ನಮ: – ನಮಸ್ಕಾರಗಳು.
(ಇದು ಯಾದವ ಕೃಷ್ಣನ ಪರವಾದ ಅರ್ಥ) (ದ್ರೌಪದಾದೇವಿ ಕೂಡ ಕೃಷ್ಣ ವರ್ಣದವಳು, ಆದ್ದರಿಂದ ಅವಳಿಗೆ “ಕೃಷ್ಣಾ” ಎಂದು ಹೆಸರು)
ಅಥವ
ನಿತ್ಯಂ – ಯಾವಾಗಲೂ, ಅನಾವಿಲ – ನಿರ್ದುಷ್ಟವಾದ, ಆತ್ಮ – ಸ್ವರೂಪವುಳ್ಳ, ಅನಾಕುಲಂ – ವ್ಯಾಕುಲರಹಿತವಾದ, ಗೋ – ವೇದಗಳ, ಬ್ರಾಹ್ಮಣರ, ಕುಲಂ – ಸಮುದಾಯವು, ಯತ್ – ಯಾರಿಂದ, ಪಾಲಿತಂ – ಪಾಲಿಸಲ್ಪಟ್ಟು, ಉಲ್ಲಲಾಸ – ಶೋಭಿಸಿತೋ, ತಸ್ಯೈ – ಅಂತಹ ನೀರದ – ಮೇಘದಂತೆ, ನೀಲ – ಕಪ್ಪಾದ ಭಾಸೇ – ಕಾಂತಿಯುತವಾದ, ಕೃಷ್ಣಾ – ದ್ರೌಪದಿಗೆ (ಭಾರತೀದೇವಿಗೆ) (ದ್ರೌಪದಾದೇವಿ ಕೂಡ ಕೃಷ್ಣ ವರ್ಣದವಳು, ಆದ್ದರಿಂದ ಅವಳಿಗೆ “ಕೃಷ್ಣಾ” ಎಂದು ಹೆಸರು) ರಮಣ – ನಿಜಪತಿಯಾದ ಭೀಮಸೇನನ , ಪ್ರಿಯಾಯ – ಪ್ರಿಯನಾದ, ಕೃಷ್ಣಾಯ – ವೇದವ್ಯಾಸರಿಗೆ (ವಾಸಿಷ್ಟ ಕೃಷ್ಣ) ನಮ: – ನಮಸ್ಕಾರಗಳು.
(ಇದು ವಾಸಿಷ್ಟ ಕೃಷ್ಣ – ವೇದವ್ಯಾಸರ ಬಗ್ಗೆ)

 

ಅಪಿ ತ್ರಿಲೋಕ್ಯಾ ಬಹಿರುಲ್ಲಸಂತೀ ತಮೋ ಹರಂತೀ ಮುಹುರಾಂತರಂ ಚ |
ದಿಶ್ಯಾದ್ ದೃಶಂ ನೋ ವಿಶದಾಂ ಜಯಂತೀ ಮಧ್ವಸ್ಯ ಕೀರ್ತಿರ್ದಿನ-ನಾಥ-ದೀಪ್ತಿಂ | ೩!
ಪದಚ್ಛೇದ :
ಅಪಿ ತ್ರಿಲೋಕ್ಯಾ: ಬಹಿ: ಉಲ್ಲಸಂತೀ ತಮ: ಹರಂತೀ ಮುಹು: ಆಂತರಂ ಚ
ದಿಶ್ಯಾತ್ ದೃಶಂ ನ: ವಿಶದಾಂ ಜಯಂತೀ ಮಧ್ವಸ್ಯ ಕೀರ್ತಿ: ದಿನನಾಥ ದೀಪ್ತಿಂ !

 

ಮಧ್ವಸ್ಯ – ಆಚಾರ್ಯ ಮಧ್ವರ ಕೀರ್ತಿ:- ಕೀರ್ತಿಯು ತ್ರಿಲೋಕ್ಯಾ: ಮೂರು ಲೋಕಗಳ (ಸ್ವರ್ಗ ಮರ್ತ್ಯ ಪಾತಾಳ) ಬಹಿ: ಅಪಿ – ಹೊರಗೂ ಕೂಡ ಉಲ್ಲಸಂತೀ – ಪ್ರಜ್ವಲಿಸುತ್ತಿರುವುದು, ಆಂತರಂ ಚ – ಶರೀರದ ಒಳಗೂ (ಮನಸ್ಸಿನ) ಇರುವ ತಮ: – ಅಜ್ಞಾನ ಎಂಬ ಅಂಧಕಾರವನ್ನು ಮುಹು: – ಬಾರಿ ಬಾರಿಗೂ (ಮತ್ತೆ ಮತ್ತೆ) ಹರಂತೀ – ನಾಶಮಾಡುವುದು ದಿನನಾಥ – ಹಗಲಿನ ಒಡೆಯ ಸೂರ್ಯನ ; ದೀಪ್ತಿಂ – ಕಾಂತಿಯನ್ನು ಜಯಂತೀ ಚ – ಜಯಿಸುವುದು (ಸೂರ್ಯನ ಕಾಂತಿಯನ್ನೂ ಮೀರಿಸುಹುದು) ಮತ್ತು ನ: – ನಮಗೆ ವಿಶದಾಂ – ಶುದ್ಧವಾದ ದೃಶಂ – ಜ್ಞಾನವೆಂಬ ದೃಷ್ಟಿ ದಿಶ್ಯಾತ್ – ಕೊಡಲಿ.
ಸೂರ್ಯನ ಪ್ರಕಾಶವು ಮೂರು ಲೋಕಗಳಲ್ಲಿ ಪಸರಿಸುತ್ತದೆ. ಆದರೆ ಈ ಮೂರು ಲೋಕಗಳ ಹೊರಗೆ ಪ್ರಕಾಶಿಸುವುದಿಲ್ಲ. ಮತ್ತು ಮನಸ್ಸಿನ ಒಳಗಿನ ಅಜ್ಞಾನವೆಂಬ ಕತ್ತಲೆಯನ್ನು ಓಡಿಸಲಾಗದು. ಆದರೆ ಆಚಾರ್ಯ ಮಧ್ವರ ಕೀರ್ತಿಯೆಂಬ ಪ್ರಕಾಶವು ಎಲ್ಲಾ ಲೋಕಗಳಲ್ಲೂ, ಪ್ರಕಾಶಿಸುವುದಲ್ಲದೆ ನಮ್ಮ ಹೃದ್ಗತವಾದ ಅಜ್ಞಾನವೆಂಬ ಕತ್ತಲೆಯನ್ನು ಮತ್ತೆ ಮತ್ತೆ ನಾಶಮಾಡುವುದು

 

ತಮೋ-ನುದಾಽಽನಂದಮವಾಪ ಲೋಕ-
ಸ್ತತ್ವ-ಪ್ರದೀಪಾಕೃತಿ-ಗೋ-ಗಣೇನ |
ಯದಾಸ್ಯ-ಶೀತಾಂಶು-ಭುವಾ ಗುರೂಂಸ್ತಾನ್
ತ್ರಿವಿಕ್ರಮಾರ್ಯಾನ್ ಪ್ರಣಮಾಮಿ ವರ್ಯಾನ್ || ೪ ||
ಪದಚ್ಛೇದ :
ತಮ: ನುದಾ ಆನಂದಂ ಅವಾಪ ಲೋಕ: ತತ್ವಪ್ರದೀಪ ಆಕೃತಿ ಗೋ ಗಣೇನ ಯತ್ ಆಸ್ಯ ಶೀತಾಂಶು ಭುವಾ ಗುರೂನ್ ತಾನ್ ತ್ರಿವಿಕ್ರಮಾರ್ಯಾನ್ ಪ್ರಣಮಾಮಿ ವರ್ಯಾನ್ || ೪ ||
ಲೋಕ: – ಜನರು ತಮ: ಅಜ್ಞಾನವೆಂಬ ಕತ್ತಲೆಯ ನುದಾ – ನಾಶಗೊಳಿಸುವ ಯತ್ – ಯಾರ ಆಸ್ಯ – ಮುಖವೆಂಬ ಶೀತಾಂಶು – ಚಂದ್ರನಿಂದ (ಚಂದ್ರನ ಕಾಂತಿಯಿಂದ) ಭುವಾ – ಉತ್ಪನ್ನವಾದ ತತ್ವಪ್ರದೀಪ – ತತ್ವಪ್ರದೀಪ ಎಂಬ ಆಕೃತಿ – ಸ್ವರೂಪವುಳ್ಳ ಗೋ – ಶಾಸ್ತ್ರ ವಾಕ್ಯಗಳು ಗಣೇನ – ಸಮೂಹದಿಂದ ಆನಂದಂ – ಆನಂದವನ್ನು ಅವಾಪ – ಹೊಂದಿದರು. ತಾನ್ – ಅಂತಹ ವರ್ಯಾನ್ – ಶ್ರೇಷ್ಠರಾದ ಗುರೂನ್ -ಗುರುಗಳೂ, ತಂದೆಯೂ ಆದ ತ್ರಿವಿಕ್ರಮಾರ್ಯನ್- ಪೂಜ್ಯರೂ ಆದ ತ್ರಿವಿಕ್ರಮ ಪಂಡಿತರನ್ನು ಪ್ರಣಮಾಮಿ – ನಮಿಸುತ್ತೇನೆ.
ಈ ಶ್ಲೋಕದಲ್ಲಿ ತಮ್ಮ ತಂದೆಯೂ ಗುರುಗಳೂ ಆದ ವಾಯುಸ್ತುತಿ ಕರ್ತೃವೂ ಆದ ತ್ರಿವಿಕ್ರಮ ಪಂಡಿತರನ್ನು ಸ್ತುತಿಸಿದ್ದಾರೆ. ಚಂದ್ರನ ಕಿರಣಗಳು ಕತ್ತಲೆ ಯಲ್ಲಿರುವವರಿಗೆ ಪದಾರ್ಥಗಳ ನೋಡಲು ದೀಪದಂತೆ ಆಕೃತಿಯಿಂದ ತಮಸ್ಸೆಂಬ ಕತ್ತಲೆ ಪರಿಹರಿಸುವಂತೆ, ತತ್ವಪ್ರದೀಪ ಕೃತಿಯು ಅಜ್ಞಾನ ಎಂಬ ಅಂಧಕಾರದಲ್ಲಿರುವವರಿಗೆ ಪರಮಾತ್ಮನ ತತ್ವವನ್ನು ತಮ್ಮ ದೀಪ ಸದೃಶ ಗ್ರಂಥದಿಂದ ಪರಿಹರಿಸಿದ್ದಾರೆ
ಮುಕುಂದ-ಭಕ್ತ್ಯೈ ಗುರು-ಭಕ್ತಿ-ಜಾಯೈ
ಸತಾಂ ಪ್ರಸತ್ತ್ಯೈ ಚ ನಿರಂತರಾಯೈ |
ಗರೀಯಸೀಂ ವಿಶ್ವ-ಗುರೋರ್ವಿಶುದ್ಧಾಂ
ವಕ್ಷ್ಯಾಮಿ ವಾಯೋರವತಾರ-ಲೀಲಾಮ್ || ೫ ||
ಪದಚ್ಛೇದ :
ಗುರು ಭಕ್ತಿ ಜಾಯೈ ಮುಕುಂದ ಭಕ್ತೈ ಸತಾಂ ನಿರಂತರಾಯೈ ಪ್ರಸತ್ಯೈ ಚ ವಿಶ್ವ ಗುರೋ: ವಾಯೋ: ಗರೀಯಸೀಂ ವಿಶುದ್ಧಾಂ ಅವತಾರ ಲೀಲಾಂ ವಕ್ಷ್ಯಾಮಿ !!
ಗುರು – ಗುರುಗಳ ಭಕ್ತಿ – ಭಕ್ತಿಯಿಂದ ಜಾಯೈ – ಪ್ರಾಪ್ತವಾದ ಮುಕುಂದ – ಮುಕ್ತಿಪ್ರದ ಶ್ರೀಹರಿಯ ಭಕ್ತೈ – ಭಕ್ತಿಗಾಗಿ ಸತಾಂ – ಸಜ್ಜನರ ನಿರಂತರಾಯೈ – ನಿರಂತರವಾದ ಪ್ರಸತ್ಯೈ  – ಪ್ರಸಾದಕ್ಕೋಸ್ಕರ – ಮತ್ತು ವಿಶ್ವ – ಸಮಸ್ತ ಮುಕ್ತಿಯೋಗ್ಯ ಜನರಿಗೇ, ಗುರೋ: ಜ್ಞಾನ ಪ್ರದ ಗುರುಗಳಾದ ವಾಯೋ: – ಆವತಾರತ್ರಯ ವಾಯುದೇವರ ಲೀಲಾಂ – ಚರಿತೆಯನ್ನು ವಕ್ಷ್ಯಾಮಿ – ಹೇಳುತ್ತೇನೆ
ನಾರಾಯಣ ಪಂಡಿತರು ಈ ಶ್ಲೋಕದ ಮೂಲಕ ಗ್ರಂಥದ ವಿಷಯವನ್ನೂ, ಅದರ ಪ್ರಯೋಜನವನ್ನೂ ಮತ್ತು ಅಧಿಕಾರಿಗಳು ಯಾರು ಎಂದು ವಿವರಿಸಿದ್ದಾರೆ.
ವಿಷಯ – ವಾಯು ಚರಿತ್ರೆ; ಪ್ರಯೋಜನ – ವಾಯುದೇವರ ಅನುಗ್ರಹ ಅದರಿಂದ ಸಂತೋಷ. ಅಧಿಕಾರಿಗಳು – ಹರಿಗುರು ಭಕ್ತಿಯುಳ್ಳವರು

 

ತಾಂ ಮಂತ್ರ ವರ್ಣೈರನುವರ್ಣನೀಯಾಂ
ಶರ್ವೇಂದ್ರ ಪೂರ್ವೈರಪಿ ವಕ್ತು ಕಾಮೇ |
ಸಂಕ್ಷಿಪ್ನು ವಾಕ್ಯೇ ಮಯಿ ಮಂದ ಬುದ್ಧೌ
ಸಂತೋ ಗುಣಾಢ್ಯಾಃ ಕರುಣಾಂ ಕ್ರಿಯಾಸುಃ || ೬ ||

ಶರ್ವೇಂದ್ರ – ಶರ್ವ – ರುದ್ರದೇವರು, ಇಂದ್ರ – ಇಂದ್ರದೇವರು ಪೂರ್ವೈರಪಿ – ಇವರೇ ಮುಂತಾದ ದೇವತೆಗಳೂ ಕೂಡ, ಮಂತ್ರವರ್ಣ್ಯೈ – ವೇದವಾಕ್ಯಗಳಿಂದ, ಅನುವರ್ಣನೀಯಾಂ – ವರ್ಣಿಸಲು ಯೋಗ್ಯವಾದ, ತಾಂ – ಅಂತಹ ವಾಯುದೇವರ ಮಹಿಮೆಯನ್ನು, ವಕ್ತು – ಹೇಳಬೇಕೆಂಬ ಕಾಮೇ – ಅಪೇಕ್ಷೆಯುಳ್ಳ ಮಂದಬುದ್ದೌ – ಅಲ್ಪವಾದ ಬುದ್ದಿಯುಳ್ಳ ಸಂಕ್ಷಿಪ್ನು ವಾಕ್ಯೆ – ಸಂಕ್ಷಿಪ್ತವಾದ ವಾಕ್ಯಗಳುಳ್ಳ, ಮಯಿ – ನನ್ನಲ್ಲಿ ಗುಣಾಢ್ಯಾ: ಗುಣಪೂರ್ಣರಾದ ಸಂತ: ಸಜ್ಜನರು ಕರುಣಾಂ – ಕೃಪೆಯನ್ನು ಕ್ರಿಯಾಸು : ಮಾಡಲಿ.

ಸಮಸ್ತ ಚೇಷ್ಟಾಪ್ರದರಾದ ವಾಯುದೇವರ ಚರಿತೆಯನ್ನು ಸಂಪೂರ್ಣವಾಗಿ ಹೇಳಲು ಅಸಾಧ್ಯವಾದ್ದರಿಂದ ಮನಸ್ಸಿನ ಶುದ್ಧಿಗಾಗಿ ಹೇಳುತ್ತೇನೆ ಎಂದಿದ್ದಾರೆ ಕವಿಗಳು

ಉಚ್ಚಾವಚಾ ಯೇನ ಸಮಸ್ತ-ಚೇಷ್ಟಾಃ
ಕಿಂ ತತ್ರ ಚಿತ್ರಂ ಚರಿತಂ ನಿವೇದ್ಯಮ್ |
ಕಿಂತೂತ್ತಮ-ಶ್ಲೋಕ-ಶಿಖಾ-ಮಣೀನಾಂ
ಮನೋ-ವಿಶುದ್ಧ್ಯೈ ಚರಿತಾನು-ವಾದಃ || ೭ ||
ಯೇನ – ಯಾರಿಂದ (ಯಾವ ವಾಯುದೇವರಿಂದ) ಉಚ್ಚಾವಚಾ:  ಉಚ್ಚ – ದೊಡ್ಡದಾದ, ಆವಚಾ: – ಚಿಕ್ಕದಾದ ಸಮಸ್ತ – ಎಲ್ಲಾ ಚೇಷ್ಟಾ: – ವ್ಯಾಪಾರಗಳು (ಭವಂತಿ – ನಡೆಯುವುದೋ), ತತ್ರ – ಅಂತಹ ವಿಷಯದಲ್ಲಿ ಚಿತ್ರಂ- ಆಶ್ಚರ್ಯವೆಂಬ ಕಿಂ ಚರಿತಂ – ಯಾವ ಚರಿತ್ರೆಯು ನಿವೇದ್ಯಂ – ವರ್ಣಿಸಲು ಶಕ್ಯ. ಕಿಂತು – ಆದರೆ ಉತ್ತಮ ಶ್ಲೋಕ – ಶ್ರೇಷ್ಠ ಕೀರ್ತಿಯುಳ್ಳ ಶಿಖಾಮಣೀನಾಂ – ಶಿರೋರತ್ನದಂತಿರುವ ವಾಯುವಿನ ಚರಿತ – ಚರಿತೆಯನ್ನು ಅನುವಾದ: – ವರ್ಣನೆಯು ಮನ: – ಮನಸ್ಸಿನ ವಿಶುದ್ದ್ಯೈ – ಶುದ್ಧಿಗೋಸ್ಕರ
ವಾಯುದೇವರು ಎಂತಹ ಕಠಿಣವಾದ ಮತ್ತು ಸುಲಭವಾದ ಕೆಲಸವನ್ನೂ ಮಾಡಬಲ್ಲರು. ಅವರ ಎಲ್ಲಾ ಮಹಿಮೆಗಳನ್ನು ಹೇಳಲು ಅಸಾಧ್ಯ. ಆದರೂ ಯಥಾಶಕ್ತಿ ವರ್ಣಿಸಿ ಮನಶುದ್ಧಿ ಹೊಂದಲು, ಮನೋ ವಿಶುದ್ಧತೆಗಾಗಿ ಅವರ ಚರಿತ್ರೆ ವರ್ಣಿಸುವೆನು.
ಮಾಲಾ-ಕೃತಸ್ತಚ್ಚರಿತಾಖ್ಯ-ರತ್ನೈಃ
ಅಸೂಕ್ಷ್ಮ-ದೃಷ್ಟೇಃ ಸ-ಕುತೂಹಲಸ್ಯ |
ಪೂರ್ವಾಪರೀಕಾರಮಥಾಪರಂ ವಾ
ಕ್ಷಾಮ್ಯಂತು ಮೇ ಹಂತ ಮುಹುರ್ಮಹಾಂತಃ || ೮ ||
ತತ್– ಆ ವಾಯುವಿನ ಚರಿತಾಖ್ಯ – ಚರಿತ + ಆಖ್ಯ – ಚರಿತೆಯೆಂಬ ಹೆಸರುಳ್ಳ; ರತ್ನೈ – ರತ್ನಗಳಿಂದ ಮಾಲಾಕೃತ – ಮಾಲೆಯನ್ನು ಮಾಡುವ ಅಸೂಕ್ಷ್ಮದೃಷ್ಟೇ: – ಸೂಕ್ಷ್ಮ ದೃಷ್ಟಿಯಿಲ್ಲದ, ಸಕುತೂಹಲಸ್ಯ – ಕುತೂಹಲಭರಿತ ಮೇ – ನನ್ನ ಪೂರ್ವಾಪರೀಕಾರಂ – ಮೊದಲು ವರ್ಣಿಸಬೇಕಾದ್ದನ್ನು ಅಪರೀಕಾರಂ – ಆಮೇಲೆ ಹೇಳುವುದು ಅಥ ಹಾಗೇ ಅಪರಂ ವಾ – ನಂತರ ವರ್ಣಿಸುವುದು ಮೊದಲು ವರ್ಣಿಸುವುದಾಗಲೀ ಮಹಾಂತ: – ಸಜ್ಜನರು ಮುಹು : ಬಾರಿ ಬಾರಿಗೂ ಹಂತ – ದಯೆಯಿಂದ ಕ್ಷಾಮ್ಯಂತು – ಕ್ಷಮಿಸಲಿ.

 

ಮಧ್ವರ ಚರಿತ್ರೆಯನ್ನು ಮೊದಲು ಹೇಳುವುದನ್ನು ನಂತರ ಹೇಳಿರಬಹುದು ಅಥವಾ ನಂತರ ಹೇಳುವುದನ್ನು ಮುಂಚೆಯೇ ಹೇಳುವುದು ಮುಂತಾದವನ್ನು ಸಜ್ಜನರು ಕ್ಷಮಿಸಿ ಎಂದಿದ್ದಾರೆ.

 

ಶ್ರೀ-ವಲ್ಲಭಾಜ್ಞಾಂ ಸ-ಸುರೇಂದ್ರ-ಯಾಜ್ಞಾಂ
ಸಂಭಾವ್ಯ ಸಂಭಾವ್ಯ-ತಮಾಂ ತ್ರಿಲೋಕ್ಯಾಮ್ |
ಪ್ರಾಣೇಶ್ವರಃ ಪ್ರಾಣಿ-ಗಣ-ಪ್ರಣೇತಾ
ಗುರುಃ ಸತಾಂ ಕೇಸರಿಣೋ ಗೃಹೇಽಭೂತ್ || ೯ ||
ಸತಾಂ – ಸಜ್ಜನರ ಗುರು:– ಗುರುಗಳಾದ ತ್ರಿಲೋಕ್ಯಾಂ – ಮೂರು ಲೋಕಗಳಲ್ಲಿಯೂ, ಪ್ರಾಣಿ ಗಣ ಪ್ರಣೇತಾ – ಸಕಲ ಜೀವರಿಗೆ ಪ್ರೇರಕರಾದ, ‌ಸ್ವಾಮಿಯಾದ ಪ್ರಾಣೇಶ್ವರ: – ಸಕಲ ಇಂದ್ರಿಯಾಭಿಮಾನಿ ದೇವತೆಗಳ ಸ್ವಾಮಿಯಾದ ವಾಯುದೇವರು , ಸಂಭಾವ್ಯತಾಂ – ಪುರಸ್ಕರಿಸಲು ಯೋಗ್ಯರಾದ , ಸ ಸುರೇಂದ್ರ ಯಾಂಚಾಂ – ಶ್ರೇಷ್ಠ ದೇವತೆಗಳ ಪ್ರಾರ್ಥನೆಯಂತೆ, ಶ್ರೀ ವಲ್ಲಭ – ಲಕ್ಷ್ಮೀ ವಲ್ಲಭ ಶ್ರೀಹರಿಯ ಅಜ್ಞಾಂ – ಆಜ್ಞೆಯನ್ನು ಸಂಭಾವ್ಯ – ಪುರಸ್ಕರಿಸಿ ಕೇಸರಿಣ -: ಕೇಸರಿ ಎಂಬ ಕಪಿಯ ಗೃಹೇ – ಪತ್ನಿಯಲ್ಲಿ ಅಭೂತ್ – ಅವತರಿಸಿದರು
ವಾಯುದೇವರು ಸಕಲಜೀವ ಪ್ರೇರಕರು. ಅವರು ಸಕಲ ಪ್ರಾಣಿಗಳಿಗೆ – ಸಕಲ ಜೀವಿಗಳಿಗೆ, ಇಂದ್ರಿಯಾ ಅಭಿಮಾನಿಗಳಿಗಿಂತ ಶ್ರೇಷ್ಠರು. ಪರಮಾತ್ಮನ ಆದೇಶದಂತೆ ವಾಯುದೇವರು ಕೇಸರಿ ಎಂಬ ವಾನರನ ಪತ್ನಿಯಲ್ಲಿ ಅವತರಿಸಿದರು
ಯೇ-ಯೇ ಗುಣಾ ನಾಮ ಜಗತ್-ಪ್ರಸಿದ್ಧಾಃ
ಯಂ ತೇಷು-ತೇಷು ಸ್ಮನಿದರ್ಶಯಂತಿ |
ಸಾಕ್ಷಾನ್ಮಹಾ-ಭಾಗವತ-ಪ್ರಬರ್ಹಂ
ಶ್ರೀಮಂತಮೇನಂ ಹನುಮಂತಮಾಹುಃ || ೧೦ ||
ಯೇ ಯೇ – ಯಾವ ಯಾವ ಗುಣಾ ನಾಮ – ಗುಣವೆಂಬವು, ಜಗತ್ ಪ್ರಸಿದ್ದಾ: – ಜಗತ್ತಿನಲ್ಲಿ ಪ್ರಸಿದ್ಧವಾಗಿವೆಯೋ ತೇಷು ತೇಷು – ಅವುಗಳಲ್ಲಿ ಯಂ – ಯಾರನ್ನು ಸ್ಮ ನಿದರ್ಶಯಂತಿ – ಪ್ರಸಿದ್ಧವಾಗಿ ನಿರ್ದೇಶಿಸುತ್ತಾರೋ, ತಂ – ಅಂತಹ ಸಾಕ್ಷಾತ್ – ಮುಖ್ಯವಾಗಿ, ಮಹಾಭಾಗವತ ಪ್ರಬರ್ಹಂ – ಮಹಾ ಭಗವದ್ಬಕ್ತರಲ್ಲಿ ಶ್ರೇಷ್ಠರಾದ, ಶ್ರೀಮಂತಂ – ವೈರಾಗ್ಯಾದ ಗುಣಭರಿತರಾದ ಏನಂ – ಈ ಮಗುವನ್ನು (ಕೇಸರಿ ಪುತ್ರ) ಹನುಮಂತಂ ಆಹು: ಹನುಮಂತನೆಂದು ಕರೆದರು

 

ಕರ್ಮಾಣಿ ಕುರ್ವನ್ ಪರಮಾದ್ಭುತಾನಿ
ಸಭಾಸು ದೈವೀಷು ಸಭಾಜಿತಾನಿ |
ಸುಗ್ರೀವ-ಮಿತ್ರಂ ಸ ಜಗತ್-ಪವಿತ್ರಂ
ರಮಾ-ಪತಿಂ ರಾಮ-ತನುಂ ದದರ್ಶ || ೧೧ ||

ಸುಗ್ರೀವ ಮಿತ್ರಂ – ಸುಗ್ರೀವನ ಮಿತ್ರನಾದ ಸ: – ಹನುಮಂತನು ದೈವೀಷು – ದೈವಸಂಬಂಧವಾದ, ಸಭಾಸು – ಸಭೆಗಳಲ್ಲಿ ಸಭಾಜಿತಾಸು – ಪುರಸ್ಕರಿಸಲ್ಪಟ್ಟ ಪರಮಾದ್ಭುತಾನಿ – ಶ್ರೇಷ್ಟ ಮತ್ತು ಅಧ್ಭುತವಾದ ಕರ್ಮಾಣಿ – ಕೆಲಸಗಳನ್ನು ಕುರ್ವನ್ ಸನ್ – ಮಾಡುವವರಾಗಿ ಜಗತ್ಪವಿತ್ರಂ – ಜಗತ್ತನ್ನು ಪವಿತ್ರಿಸುವ ರಾಮ  – ರಾಮ ಎಂಬ ತನುಂ– ಶರೀರವುಳ್ಳ ರಮಾಪತಿಂ – ಲಕ್ಷ್ಮೀ ಪತಿ ರಾಮಚಂದ್ರನನ್ನು ದದರ್ಶ – ನೋಡಿದರು

Sumadhwa Seva © 2022